ಆ... ಇರುಳ ಏಕಾಂತದಲಿ
ಮನದಲ್ಲೇ ನಿನ್ನೊಂದಿಗೆ ಮಾತನಾಡಿ ಕನಸಲ್ಲಿ ಅರಳಿದ ಅಕ್ಕರೆಯ ಹಂಚುವೆ ನಿನ್ನೊಲವಿನ ಆ ಇರುಳ ಏಕಾಂತದಲಿ ನೆನಪುಗಳ ಸವಿಯೊಂದಿಗೆ ಆನಂದಿಸುವೆ!! ಅಲೆಯುತ್ತಾ ನಾ ಬಂದು ಅತ್ತ ಇತ್ತ ದಾರಿಯ ಮರೆತು ನನ್ನ ಹೃದಯದಿ ಬಂದು ನೆಲೆಸಿರುವೆ ನಾನೆಲ್ಲೇ ನಿಂತರು ನಡೆದುಕೊಂಡು ಹೋದರು ನಿನ್ನ ಮುದ್ದಾದ ಪಿಸುದನಿಯ ಕೇಳುತಿರುವೆ!! ಸದ್ದಿಲ್ಲದೇ ಮನಸಲ್ಲೇ ಮನೆ ಮಾಡಿದ ನಿನ್ನ ನನ್ನೆದೆಗೂಡಲಿಟ್ಟು ಜೋಪಾನ ಮಾಡುವೆ ಮೌನವಾಗಿ ಹುಟ್ಟಿದ ನನ್ನ ಪ್ರೇಮ ಕಾವ್ಯವ ನಿನಗೆಂದೇ ನಾ ಹಾಡಲು ಕಾದು ಕುಳಿತಿರುವೆ!! ಮೈಮನಗಳಲ್ಲಿ ತುಂಬಿ ಆವರಿಸಿರುವ ನಿನಗೆ ಪ್ರೀತಿಯ ಆಹ್ವಾನ ಕಳುಹಿಸುವ ಕಾತರ ನನಗೆ ನಿನ್ನ ಪ್ರತಿ ಉಸಿರಲ್ಲೂ ಉಸಿರಾಗಿ ನಾನಿರುವೆ ಹೃದಯ ಬಡಿತದ ಸುಮವಾಗಿ ನಾ ಅರಳುವೆ!! ✍️ ಪುಷ್ಪ ಪ್ರಸಾದ್ ಉಡುಪಿ
ಬಣ್ಣದ ಬದುಕು
ಮುಸುಕಿದ ವಾತಾವರಣ ಆವರಿಸಿಕೊಂಡಿದೆ. ಒಮ್ಮೆಯಾದರೂ ನೀನು ಬಂದು ನಿನ್ನುಸಿರಿನ ಬಿಸಿಯನ್ನು ನೀಡಿ ನೀರಂತೆ ಕರಗಿಸಿ ಹರಿಯಲು ಬಿಡಬಾರದೇ? ನಿನ್ನ ನೆನಪಿನ ಕಣ್ಣೀರನ್ನು ನನ್ನೆದೆಯ ಮೇಲೆ ಇಳಿಸಿ ಬಿಟ್ಟಿದ್ದೇನೆ ನೋಡು....ಆದರೂ ನೀನು 'ಪ್ರೀತಿಸಿ ಹೊತ್ತಿ ಉರಿಸಿ ಹೋದ ಆ ಕಾವು' ಇನ್ನೂ ಕೂಡ ಆರಲಿಲ್ಲ ಕಣೋ! ನಿತ್ಯ ಕರೆಯುತ್ತಿರುವೆನು ನಾನು ಓ ನೆನಪೇ ನನ್ನನ್ನು ಮಲಗಿ ನಿದ್ರಿಸಲು ಬಿಡು..... ಆ ಕನಸಲ್ಲಾದರೂ ನಾನೊಮ್ಮೆ ನಿನ್ನನ್ನು ನೋಡ ಬೇಕು. 'ಕನಸು' ಕಾಣಲು ತಿಳಿಸಿಕೊಟ್ಟ ನಿನ್ನನ್ನೇ ಇಂದು ಕಳೆದುಕೊಂಡು ಕಂಗಲಾಗಿರುವೆ.... ಹೃದಯವನ್ನು ಅಡವಿಟ್ಟ ಹಣಕ್ಕೆ ಪ್ರೀತಿಯನ್ನು ಖರೀದಿಸಲು ಹೊರಟಿದ್ದೆ. ಆದರೆ..! ಈಗ ನೀನು ಹೇಳುತ್ತಿರುವೆಯಲ್ಲೋ ಹೃದಯ ಇಲ್ಲದವರಿಗೆ ಪ್ರೀತಿ ಮಾರಾಟಕಿಲ್ಲವೆಂದು..! ಇದನ್ನು ಹೇಗೆ ಅರಗಿಸಿಕೊಳ್ಳಲಿ ಹೇಳು? ಬಚ್ಚಿಟ್ಟ ಭಾವನೆಯಲಿ.....ಸುತ್ತಿಟ್ಟ ಕನಸಿನಲಿ, 'ಮೈ ಮರೆತು' ಯೋಚಿಸುತ್ತಿರುವಾಗ ಮಿಂಚಂತೆ ಬಂದು ಹೋಗುತ್ತಿರುವ ನೆನಪಾಗುವ ಆ ಪ್ರೀತಿಯನ್ನು ಮರೆಯಲಿ ಹೇಗೆ ? ಹೃದಯದಲಿ ನೀನಿದ್ದರೆ ಮರೆಯಬಹುದಿತ್ತೇನೋ..ಆದರೆ..! 'ಹೃದಯವೇ' ನೀನಾದರೆ ಹೇಗೆ ತಾನೆ ಮರೆಯಲಿ…? ಮಂಜು ಆವರಿಸಿದ ಗಾಜಿನ ಮೇಲೆ ಹಾಗೆ ಸುಮ್ಮನೆ ಗೀಚಿದ ಹೆಸರಂತೆ......ಆಮೇಲೆ ಸುರಿದ ಮಳೆಗೋ, ಬೀಸಿದ ಗಾಳಿಗೋ, ಸುಡು ಬಿಸಿಲಿಗೋ ಆ ಹೆಸರನ್ನ ಮಾಯಿಸಲು ಸಾಧ್ಯವಾಗಲಿಲ್ಲ.! ಕಾಲ ಕಾಲಕ್ಕೂ ಅದನ್ನು ಮಾಯಿಸಲು ಸಾಧ್ಯವಾಗದೆ ಆ ಹೆಸರನ್ನು ಅಚ್ಚಾಗಿಸಿ ಕೊಂಡದ್ದು ನನ್ನೀ ಹೃದಯದಲ್ಲಾಗಿತ್ತು…..ಅಪರಿಚಿತಳಾಗಿ ನಿನ್ನ ಬಳಿ ಬಂದಿದ್ದೆ.....ಸ್ನೇಹವಾಗಿ ನಿನ್ನಲ್ಲಿ ಬೆರೆತೆ, ಮುಂದೆ 'ಪ್ರೀತಿಯಾಗಿ' ನಿನ್ನ ಅರಿತೆ.. ಕೊನೆಗೆ ಅದು ಮೌನವಾಗುತ್ತಾ ನಿನ್ನನ್ನೇ ಕಳೆದುಕೊಂಡೆ. ಆದರೂ.... ಅದು ಮಾಸದಿರುವ ನೆನಪುಗಳಾಗಿ ಮತ್ತೆ ಮತ್ತೆ ಕಾಡುತ್ತಿರುವುದು! ಅರ್ಧದಲ್ಲಿ ಮುರಿದು ಬಿದ್ದಿರುವ 'ಹಗಲುಗನಸಿನಂತೆ' ನಾನಿಂದು ಎಲ್ಲಾ ಕಳೆದುಕೊಂಡು ನಿನ್ನನ್ನು ಅಗಲಿರಲು 'ಇರುಳು ತುಂಬಿದ' ಜೀವನವೆಂಬ ಕವಲು ದಾರಿಯಲ್ಲಿ ನಿಂತು ಒದ್ದಾಡುತ್ತಿರುವೆ. ನಿನ್ನ ಆ ಒಂದೊಂದು ಮಾತನ್ನು ನೆನೆಸಿಕೊಂಡು ಪರಿತಪಿಸುತ್ತಿರುವೆ. ಇನ್ನೆಲ್ಲಿ ನೀ ಬರುವೆ? ವಿಧಿ ನನ್ನನ್ನು ನಿನ್ನಿಂದ ದೂರ ಮಾಡಿಯಾಗಿದೆ, ನಿನ್ನ ನೆನಪನ್ನು ಮಾಯಿಸಿ ಹಾಕಿದೆ ......ಆದರೆ…! ನನ್ನ 'ಪ್ರೀತಿ' ಆ 'ವಿಧಿಯ' ಮುಂದೆ ಸೋಲುವುದಾದರೆ ಆ ವಿಧಿ ನನ್ನ 'ಮರಣ' ಮಾತ್ರವಾಗಿರುತ್ತದೆ.... ಮತ್ತೆ ನೆನಪಾಗುತ್ತಿದೆ ನೀನಿಲ್ಲದ ಸಂಜೆ! ಸಂಜೆಯಾಯಿತೆಂದರೆ ಸಾಕು…! ರಾತ್ರಿ ಕನವರಿಸಿದ ನಿನ್ನ ಸಿಹಿಯಾದ ನೆನಪುಗಳು ಗರಿಗೆದರಿ ಮತ್ತೆ ಕುಣಿಯಲು ಶುರುಮಾಡುತ್ತವೆ. ನಿನ್ನ ಬಂಗಾರದ ಬೆರಳ ಕಚಗುಳಿಯಿಟ್ಟಂತಾಗಿ ಮೈತುಂಬಾ ಒಂದು ತೆರನಾದ 'ಜೀವಂತಿಕೆಯ ಹೂವು' ಅರಳಿ ನಿಂತತಾಗುತ್ತಿದೆ. ಬಿರಿದ ಆ ಹೂವಿಗೂ ನಿನ್ನದೇ 'ಘಮಲು' ತುಂಬಿ ತುಳುಕುತ್ತಿದೆ. ಮೊದಲು ನಿನ್ನ ನಿಶ್ವಾಸವನ್ನು ನನ್ನ ಬೊಗಸೆಯಲ್ಲಿ ತುಂಬಿ ನನ್ನ ಕಣ್ಣಿಗಿಟ್ಟುಕೊಳ್ಳುತ್ತೇನೆ. ನಂತರ ಒಂದು ಚೂರು ಅಂತರವಿಲ್ಲದಂತೆ ಬರಸೆಳೆದು ಮುಖಕ್ಕೆ ಮುಖವಿಟ್ಟು ನಿನ್ನ 'ನಿಶ್ವಾಸವನ್ನು' 'ಉಚ್ವಾಸವಾಗಿ' ನನ್ನೊಳಗೆ ತುಂಬಿಕೊಳ್ಳುತ್ತಿದ್ದೇನೆ. ಆ ಕ್ಷಣ ಆಹ್ಲಾದತೆಯ ಉನ್ಮಾದದ ಅಲೆಗಳೊಂದಿಗೆ ತೇಲುತ್ತಿದ್ದೇನೆ, ನಿನ್ನೆದೆಯೊಳಗಿನ ಬಿಸಿಯುಸಿರು ಉಂಡಿರುವ ನನ್ನಲ್ಲಿ, ನಿನ್ನದೇ ಎದೆ ಬಡಿತದ ನಿನಾದ…! ನಿನ್ನ ಪ್ರೀತಿಯ ವಿಷವನ್ನು ಮೊಗೆದು ಕುಡಿದು ನಿನ್ನೇ ಧರಿಸಿಕೊಂಡಿರುವ ನಾನು ನನಗೇ ತಿಳಿಯದಂತೆ ಅಪರಿಚಿತಳಾಗುತ್ತಿದ್ದೇನೆ.... ನಿನ್ನದಲ್ಲದ ನಲಿವು ನನಗೆ ಬೇಡ…ನಿನ್ನದಲ್ಲದ ನೋವು ಕೂಡ.. ನನಗೆ ಬೇಡವಾಗಿದೆ, ಒಡೆದು ಹೋಗಿರುವ ಹೃದಯದಲಿ, ಬಿಚ್ಚಿಟ್ಟ ಭಾವನೆಯಲಿ ಕಾಯುತ್ತ ಕುಳಿತಿದ್ದೆ ನಾನು, ನೀನು ಮತ್ತೆ ನಿರಾಶೆ ಮಾಡಿ ಹೊರಟು ಹೋದೆ. ಹೊಸ ಹಾದಿಯ ಹೆಜ್ಜೆಯೊಂದಿಗೆ ಸಾಗುತ್ತಿದೆ ನನ್ನಾತ್ಮ! ಹೌದು! ನನ್ನೊಳಗಿನ ಮನಸು ತಿಳಿಯಾಗಿ ಹೊಸ ದೃಷ್ಟಿ, ದಿಕ್ಕು, ಹೊಸ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತಿದೆ. ಅರಳಿರುವ 'ಹೂವನ್ನು' ಪ್ರೀತಿಯಿಂದ ಎದೆಗೊತ್ತಿ, ನಿನ್ನೆದೆಯ ಬಡಿತದ ಸ್ವಾದದಿಂದ ಅನುಷ್ಠಾನಗೊಳಿಸಿ ಬದುಕಿಗೊಂದು 'ಹೊಸ ಅರ್ಥ, ಸೌಂದರ್ಯ, ಚೈತನ್ಯ ಮತ್ತು ಬೆಳಕನ್ನು' ನೀಡಿ ಹೊಸ ದಾರಿಯನ್ನು ಕಾಣುತ್ತಿದ್ದೇನೆ.... ನನ್ನೊಳಗೆ ಪ್ರತಿಷ್ಟಾಪಿಸಿದ ನಿನ್ನಾತ್ಮದ ಪ್ರಕಾಶದಿಂದ, ನಿನ್ನ ಆ ಸುಗಂಧವರ್ಧಕ ಕಂಪಿನೊಂದಿಗೆ ಜೀವ-ಜೀವ ಸೇರಿ ಬೆಸೆಯುವ ಆ ಅಮೂರ್ತ ಬಂಧನದ ತೆಕ್ಕೆಯಲ್ಲಿ ನಾನು ಮತ್ತಷ್ಟು ನೆನೆದು ನೆನೆದು ಅದೇ ನೆನಪುಗಳೊಂದಿಗೆ ಹೊಸ ಹೆಜ್ಜೆಯಿರಿಸಿ ಜೀವಿಸುತ್ತಿದ್ದೇನೆ. ✍️ ಪುಷ್ಪ ಪ್ರಸಾದ್