ಕುಂದನ್‌ಲಾಲ್ ಸೈಗಲ್ ಅಥವಾ ಕೆ.ಎಲ್ ಸೈಗಲ್
ಒಂದು ತಲೆಮಾರಿನ ಸಿನಿಪ್ರಿಯರ ಆರಾಧ್ಯದೈವ.ದೇಶದ ಮೊದಲ ಸೂಪರ್ ಸ್ಟಾರ್ ನಟನೀತ ಎಂಬುದು ಅನೇಕ ಸಿನಿಮಾ ಪಂಡಿತರ ಅಂಬೋಣ.ಸಿನಿಮಾಗಳಿಗೆ ಗಾಯನವೂ ಮಾಡುತ್ತಿದ್ದ ಆರಂಭಿಕ ನಾಯಕ ನಟರ ಪೈಕಿ ಈತನೂ ಒಬ್ಬ .ಮೊದಮೊದಲು ಕೇವಲ ಹಾಡು ಹಾಡುತ್ತಿದ್ದ ಸ್ಪುರದ್ರೂಪಿ ಸೈಗಲ್,1932ರ ಹೊತ್ತಿಗೆ ಸಿನಿಮಾದಲ್ಲಿ ನಟನಾಗಿ ಗುರುತಿಸಿಕೊಂಡರು.ಪ್ರಾರಂಭದ ಕೆಲವು ವಿಫಲತೆಗಳ ನಂತರ ನಿಧಾನಕ್ಕೆ ಯಶಸ್ಸಿನ ರುಚಿ ಕಾಣಲಾರಂಭಿಸಿದ ಸೈಗಲ್ 1935ರಲ್ಲಿ ಬಿಡುಗಡೆಯಾದ 'ದೇವದಾಸ್' ಸಿನಿಮಾದ ನಂತರ ಭಾರತೀಯ ಸಿನಿರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾಗಿ ಹೋದರು.ಸಿನಿಮಾಗಳ ಜೊತೆಗೆ ಅವರು ಹಾಡಿದ ಹಾಡುಗಳು ಸಹ ಅಷ್ಟೆ ಅದ್ಭುತ ಯಶಸ್ಸು ಕಂಡವು. ಸರಿಸುಮಾರು ಒಂದು ದಶಕದಷ್ಟು ಕಾಲ ಸಿನಿರಂಗವನ್ನಾಳಿದ ಈ ನಾಯಕನಟನ ಬದುಕನ್ನು ವೃತ್ತಿ ಜೀವನದ ಉತ್ತುಂಗದಲ್ಲಿಯೇ ಹಾಳುಮಾಡಿದ್ದು ಮಾತ್ರ ಮದ್ಯವ್ಯಸನವೆಂಬ ಯಮದೂತ.
ಬದುಕಿನ ಯಶಸ್ಸಿನ ನಶೆಯ ನಡುವೆಯೂ ಅದ್ಯಾವ ಗಳಿಗೆಯಲ್ಲಿ ಮಧುಪಾನದ ಮತ್ತಿನ ಚಟವನ್ನು ರೂಢಿಸಿಕೊಂಡರೋ ಸೈಗಲ್ ಗೊತ್ತಿಲ್ಲ, ಮೊದಮೊದಲು ಹವ್ಯಾಸದಂತಿದ್ದ ಕುಡಿತ ನಿಧಾನಕ್ಕೆ ಅಭ್ಯಾಸವಾಗಿ ಹೋಗಿತ್ತು.ಒಂದು ಹಂತದಲ್ಲಿ ಸೈಗಲ್ ಅದ್ಯಾವ ಪರಿಯ ಕುಡುಕರಾಗಿ ಹೋಗಿದ್ದರೆಂದರೆ ಕುಡಿತವೆನ್ನುವುದು ಇಲ್ಲದೇ ಹೋದರೆ ನಟಿಸುವುದು ಹಾಗಿರಲಿ,ಸರಿಯಾಗಿ ನಡೆಯುವುದು ಸಹ ಅವರಿಂದ ಸಾಧ್ಯವಿಲ್ಲವೆಂಬ ಮಾತೊಂದು ಸಿನಿರಂಗದ ಜನರ ನಡುವೆ ಹರಿದಾಡುತ್ತಿತ್ತು.ಕುಡಿಯದಿದ್ದರೇ ತನಗೆ ಹಾಡುವ ಚೈತನ್ಯವೇ ಇರದು ಎನ್ನುವುದನ್ನು ಸ್ವತಃ ತಾವೇ ಬಲವಾಗಿ ನಂಬಿದ್ದ ಸೈಗಲ್,ಕುಡಿದೇ ಹಾಡುತ್ತಿದ್ದರು.ಇಷ್ಟಾಗಿಯೂ ಅವರು ಸೂಪರ್ ಸ್ಟಾರ್ ಎನ್ನುವ ಕಾರಣಕ್ಕೋ ಏನೋ,ಯಾವೊಬ್ಬ ಸಂಗೀತ ನಿರ್ದೇಶಕನೂ ಸೈಗಲ್‌ರ ನಿಲುವನ್ನು ಪ್ರಶ್ನಿಸುವ ಧೈರ್ಯ ತೋರಲಿಲ್ಲ.
ಆದರೆ ಮೊದಲ ಬಾರಿ ಸೈಗಲ್‌ರ ಈ ವಿಲಕ್ಷಣ ಪದ್ದತಿಯನ್ನು ಪ್ರಶ್ನಿಸಿದವರು ಸಂಗೀತ ನಿರ್ದೆಶಕ ನೌಶಾದ್ ಅಲಿ.1946ರಲ್ಲಿ ಸೈಗಲ್ ರ ಸಿನಿಮಾವೊಂದಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದ ನೌಶಾದ್ ಆಗಿನ್ನೂ ಬಹಳ ದೊಡ್ಡ ಹೆಸರೇನೂ ಅಲ್ಲ. ಅಷ್ಟಾಗಿಯೂ ಸೂಪರ್ ಸ್ಟಾರ್ ನಟನನ್ನು ಪ್ರಶ್ನಿಸುವ ಧೈರ್ಯ ತೋರಿದ ನೌಶಾದ್,ಸೈಗಲ್ ಎದುರು ಒಂದು ಸಣ್ಣ ಸವಾಲನ್ನಿಟ್ಟರು.ಅದರ ಪ್ರಕಾರ ಹಾಡೊಂದನ್ನು ಸೈಗಲ್ ಎರಡು ಸಲ ಹಾಡಬೇಕು.ಒಮ್ಮೆ ಕುಡಿದು ಹಾಡಬೇಕು ಮತ್ತೊಮ್ಮೆ ಸ್ವಲ್ಪವೂ ನಶೆಯ ಸಹವಾಸವಿರದೇ ಹಾಡಬೇಕು.ಕೇಳಿದ ತಕ್ಷಣವೇ ಆಸಕ್ತಿಕರವೆನ್ನಿಸಿದ ಸವಾಲನ್ನು ಸುಲಭಕ್ಕೆ ಸ್ವೀಕರಿಸಿದ ಸೈಗಲ್ ಸಂಗೀತ ನಿರ್ದೇಶಕರ ಮಾತಿನಂತೆ ಮೊದಲು ಎಚ್ಚರದ ಸ್ಥಿತಿಯಲ್ಲಿ ಹಾಡಿದರೇ, ಮತ್ತೊಮ್ಮೆ ತಮ್ಮಿಷ್ಟದ ಕಾಲಿಪಾಂಚ್ ಮದ್ಯವನ್ನು ಕುಡಿದು ಮಂಪರಿನ ಗುಂಗಿನಲ್ಲಿ ಹಾಡಿದ್ದರು.ಸಂಜೆ ಮನೆಗೆ ಮರಳಿದರೇ ಮತ್ತದೇ ಮದಿರೆಯಲ್ಲಿ ಮಧುಮಸ್ತ ಸೈಗಲ್.
ಹಾಗೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸೈಗಲ್‌ರಿಗೆ ಸವಾಲಿನ ನೆನಪೂ ಇಲ್ಲ.ಆದರೆ ಒಂದು ವಾರದ ನಂತರ ತಮ್ಮ ಹಾಡಿನ ನೆನಪಾಗಿ ನೌಶಾದರ ಕಚೇರಿಗೆ ನಡೆದರೇ ರೆಕಾರ್ಡ್ ಕೋಣೆಯಲ್ಲಿ ಸೈಗಲ್‌ರನ್ನು ಕೂರಿಸಿ ಒಂದರ ಹಿಂದೊಂದರಂತೆ ಎರಡೂ ಹಾಡುಗಳನ್ನು ಅವರಿಗೆ ಕೇಳಿಸಿದ್ದರು ನೌಶಾದ್. ಮೊದಲ ಹಾಡು ಕೇಳುವಾಗ ಸೈಗಲ್‌ರ ಮುಖದಲ್ಲೇನೋ ಸಣ್ಣ ಅಸಂತೃಪ್ತಿಯ ಭಾವ.ಹುಬ್ಬು ಗಂಟಿಕ್ಕಿ ಹಾಡು ಕೇಳಿ ಮುಗಿಸಿದವರು ಎರಡನೇ ಹಾಡು ಹಾಕುವಂತೆ ಕೇಳಿಕೊಂಡರು ಸೂಪರ್ ಸ್ಟಾರ್.ಎರಡನೇ ಹಾಡಿನ ಪಲ್ಲವಿ ಮುಗಿಸಿ ಚರಣಕ್ಕಿಳಿಯುವಾಗ ಕಣ್ಮುಚ್ಚಿ ತನ್ಮಯತೆಯಲ್ಲಿ ತಮ್ಮದೇ ಹಾಡಿನಲ್ಲಿ ಮುಳುಗಿದ್ದ ಸೈಗಪ್ ಮುಖದಲ್ಲೊಂದು ಸಣ್ಣ ಮಂದಹಾಸ.ಹಾಡಿನ ನಡುವಿನಲ್ಲೆಲ್ಲೊ ಸಣ್ಣ ಸಂಗತಿಯನ್ನು ಮೆಚ್ಚಿಕೊಂಡು ತಲೆಯಾಡಿಸುತ್ತ,'ಆಹಾಹಾ..!! ಇದು ಗಾಯನವೆಂದರೇ..!! ನಿನಗೇನೆನ್ನಿಸುತ್ತದೆ ಅಲಿ, ನಿಜಕ್ಕೂ ಚಂದ ಹಾಡಿದ್ದೇನೆ ಇದನ್ನು ಅಲ್ಲವಾ...??ಕುಡಿದು ಹಾಡಿದರೆ ಮಾತ್ರ ನಾನು ಹೀಗೆ ಇಷ್ಟು ಚಂದವಾಗಿ ಹಾಡಬಲ್ಲೆ ನೋಡು 'ಎಂದು ಕಣ್ತೆರೆದು ನೌಶಾದ್‌ರತ್ತ ನೋಡಿದರೆ,ಸಣ್ಣಗೆ ಮುಗುಳ್ನಗುತ್ತಿದ್ದರು ನೌಶಾದ್.ನೌಶಾದ್‌ರ ನಗುವನ್ನು ಕಂಡ ಸೈಗಲ್‌ರಿಗೊಂದು ಸಣ್ಣ ಗೊಂದಲ.ಮಾತಿಗೂ ಮುನ್ನವೇ ಸೈಗಲ್‌ರ ಗಲಿಬಿಲಿಯನ್ನು ಅರ್ಥೈಸಿಕೊಂಡ ನೌಶಾದ್,'ಅದ್ಭುತವಾಗಿ ಹಾಡಿದ್ದೀರಿ ಎನ್ನುವುದೇನೋ ನಿಜ.ಆದರೆ ನೀವೀಗ ಕೇಳಿದ ಹಾಡು ನೀವು ನಶೆಯಲ್ಲಿದ್ದಾಗ ಹಾಡಿದ ಹಾಡಲ್ಲ,ಪೂರ್ತಿ ಪ್ರಜ್ಞೆಯಲ್ಲಿದ್ದಾಗ ಹಾಡಿದ ಹಾಡು.ಈಗಲಾದರೂ ಅರ್ಥ ಮಾಡಿಕೊಳ್ಳಿ ಸರ್.ಕುಡಿತ ನಿಮ್ಮ ಹಾಡುವ ಶಕ್ತಿಯನ್ನು ಹೆಚ್ಚಿಸುವುದಿಲ್ಲ,ಬದಲಿಗೆ ಹಾಡಿನ ಭಾವಶಕ್ತಿಯನ್ನು ಕುಂಠಿತಗೊಳಿಸುತ್ತದೆ' ಎಂದು ನುಡಿದು ಸುಮ್ಮನಾದರು.ನೌಶಾದ್‌ರ ಮಾತು ಕೇಳಿದ ಕ್ಷಣಕ್ಕೆ ಸೈಗಲ್‌ರ ಮಾತು ನಿಂತಂತಾಗಿತ್ತು.ತಲೆತಗ್ಗಿಸಿ ಕೂತ ಸೈಗಲ್ ಒಂದರೆಕ್ಷಣದ ನಂತರ ಕೊಂಚ ದೂರದಲ್ಲಿ ನಿಂತಿದ್ದ ನೌಶಾದ್‌ರನ್ನು ಕೈ ಸನ್ನೆಯಿಂದ ಕರೆದರು.ಸಮೀಪ ಬಂದ ನೌಶಾದ್‌ರ ಕೈಗಳನ್ನು ಹಿಡಿದುಕೊಂಡ ಸೈಗಲ್‌ರ ಧ್ವನಿಯಾಗಲೇ ಗದ್ಗದ.'ಇವತ್ತಿನವರೆಗೂ ನನ್ನ ತಪ್ಪನ್ನು ಯಾರೂ ಎತ್ತಿ ತೋರಿಸಿರಲಿಲ್ಲ ನೋಡು ಅಲಿ.ಮುಂಚೆಯಾದರೂ ಸಿಗಬಾರದಿತ್ತೇ ನೀನು ನೌಶಾದ್,ನೀನು ಸಿಕ್ಕಿದಿದ್ದರೇ ನನ್ನ ಕುಡಿತವಾದರೂ ಕಡಿಮೆಯಾಗಿರುತ್ತಿತ್ತೋ ಏನೋ' ಎಂದು ನಕ್ಕ ಸೈಗಲ್‌ರ ಮುಖದ ತುಂಬೆಲ್ಲ ವಿಷಾದ ಭಾವ. ಅವರ ವಿಷಾದದ ಭಾವಕ್ಕೆ ನೌಷಾದ್‌ರ ಮತ್ತೊಂದು ಮುಗುಳ್ನಗುವಷ್ಟೇ ಉತ್ತರವಾಗಿತ್ತು .ಆವತ್ತು ಸೈಗಲ್‌ರು ಕುಡಿತವಿಲ್ಲದೇ ಹಾಡಿದ ಹಾಡು ಆ ತಲೆಮಾರಿನ ಸರ್ವಶ್ರೇಷ್ಠ ವಿಷಾದ ಗೀತೆಯಾಗಿ ಗುರುತಿಸಿಕೊಂಡಿತ್ತು. ನೌಶಾದ್‌ರ ವೃತ್ತಿಜೀವನದಲ್ಲಿಯೂ ಆ ಹಾಡೊಂದು ಮೈಲಿಗಲ್ಲು. ದುರಂತವೆಂದರೇ ಅದೇ ಒಂದು ವರ್ಷಕ್ಕೆ ಅತಿಯಾದ ಕುಡಿತದ ದುಷ್ಪರಿಣಾಮದಿಂದ ಲಿವರ್ ಸಿರೋಸಿಸ್‌ನಿಂದ ಬಳಲುತ್ತಿದ್ದ ದೇಶದ ಮೊದಲ ಸೂಪರ್ ಸ್ಟಾರ್ ಸೆಹ್ಗಲ್ 18 ಜನೆವರಿ 1947ರಂದು ಕೊನೆಯುಸಿರೆಳೆದರು.
1946ರಲ್ಲಿ ಬಿಡುಗಡೆಯಾದ,'ಶೆಹಜಹಾನ್' ಸಿನಿಮಾದ 'ಜಬ್ ದಿಲ್ ಹಿ ಟೂಟ್ ಗಯಾ,ಹಮ್ ಜೀ ಕೆ ಕ್ಯಾ ಕರೆಂಗೆ' ಎಂಬ ಹಾಡಿನ ಕತೆಯಿದು.ಸೈಗಲ್‌ರ ಹಾಡುಗಳ ಪಟ್ಟಿಯಲ್ಲಿನ ಅತ್ಯುತ್ತಮ ಹಾಡುಗಳ ಪೈಕಿ ಈ ಹಾಡು ಸಹ ಒಂದು. ಬಾಲಿವುಡ್‌ನ ಸಾರ್ವಕಾಲಿಕ ಶ್ರೇಷ್ಠ ವಿರಹಗೀತೆಗಳ ಪೈಕಿ ಇವತ್ತಿಗೂ ಈ ಹಾಡಿಗೊಂದು ಸ್ಥಾನವಿದೆ ಎನ್ನುವುದು ಗಮನಾರ್ಹ.
ಪ್ರತಿ ಹಾಡಿನ ಹಿಂದೆಯೂ ಹೀಗೆ ಒಂದೊಂದು ಚಂದದ ಕತೆಯಿದೆ.ಸುಮ್ಮನೇ ಕೇಳಿಸಿಕೊಂಡರೆ ಯಾವ ಹಾಡು ಯಾವ ನಲಿವಿನ,ಯಾವ ನೋವಿನ ಕತೆ ಹೇಳುತ್ತದೋ ಯಾರಿಗೆ ಗೊತ್ತು ಅಲ್ಲವೇ..??
Comments
Appreciate the author by telling what you feel about the post 💓
Mahiti chennagide
Please Login or Create a free account to comment.