ನಾನೀನ್ನು ಶಾಲೆಗೆ ಹೋಗುವ ಹುಡುಗ. ಶಾಲೆಗೆ ಹೋಗುವಾಗ ಹಲವಾರು ಜನರನ್ನು ನೋಡುತ್ತೇನೆ. ಬಸ್ಸಿನ ನಿರ್ವಹಕನನ್ನು ನೋಡಿಗಾದ ನಾನೂ ಅವನಂತೆ ಆಗಬೇಕು ಅನಿಸುತ್ತದೆ. ಕೈಯಲ್ಲಿ ಸೀಟಿ ಹಿಡಿದುಕೊಂಡು ‘ಟಿಕೇಟ್.. ಟಿಕೇಟ್... ಎನ್ನುತ್ತಾ ಬಸ್ಸಿನ ತುಂಬಾ ಎಗ್ಗಿಲ್ಲದೇ ಓಡಾಡುವ ಅವನನ್ನು ತಡೆಯುವವರೇ ಇಲ್ಲ. ಅವನು ಸೀಟಿ ಹೊಡೆದಾಗ ಚಾಲಕನು ಬಸ್ಸನ್ನು ಗಕ್ಕನೇ ನಿಲ್ಲಿಸಿ ಬಿಡುತ್ತಾನೆ. ಆ ನಂತರ ಪುನಃ ಅವನು ಸೀಟಿ ಹೊಡೆದ ನಂತರವೇ ಬಿಡಬೇಕು. ಬಸ್ಸಿಗೆ ಅವನೇ ರಾಜನಲ್ಲವೇ? ನಾನೂ ಅವನಂತೆ ಆಗಬೇಕೆಂದು ಪ್ರಾಥಮಿಕ ಶಾಲೆಗೆ ಹೋಗುವಾಗ ಅನಿಸುತ್ತಿತ್ತು. ನಂತರ ನನಗೆನಿಸಿತು ಬಸ್ಸಿನಲ್ಲಿ ನಿರ್ವಹನಿಗಿಂತ ಚಾಲಕನೇ ಪವರ್‌ಫುಲ್... ನಿರ್ವಹಕನು ಸಿಟಿ ಹೊಡೆದಾಗ ಮಾತ್ರವಲ್ಲ ತನಗೆ ಬೇಕೆಂದಾಗಲೆಲ್ಲ ಆತ ಬಸ್ಸನ್ನು ನಿಲ್ಲಿಸಲು ಸ್ವತಂತ್ರ! ಅಂದಾಗ ನಿರ್ವಾಹಕನಿಗಿಂತ ಅವನೇ ಹೆಚ್ಚಿನವನಲ್ಲವೇ? ನಾನು ಅವನಂತಾಗ ಬೇಕು ಅನಿಸಿದ್ದಿದೆ.
ಅವರೆಲ್ಲರಿಗಿಂತ ನಮ್ಮ ಶಿಕ್ಷಕರೇ ಎಲ್ಲರಿಗಿಂತ ದೊಡ್ಡವರು ಅನಿಸಿದ್ದು ಕ್ಲಾಸಿನ ಎಲ್ಲಾ ವಿದ್ಯಾರ್ಥಿಗಳು ಅವರ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದಾಗ, ಉಡಾಳ ಹುಡುಗರೂ ಸಹ ಅವರ ಮುಂದೆ ತುಟಿ ಬಿಚ್ಚದಿದ್ದಾಗ ನನಗೂ ಶಿಕ್ಷಕರಾದರೆ ಉತ್ತಮ ಎಂದೆನಿಸಿದ್ದೀದೆ. ನಮ್ಮ ಶಿಕ್ಷಕ, ಶಿಕ್ಷಕಿಯರು ಶಾಲೆಯ ಮುಖ್ಯಶಿಕ್ಷಕಿಗೆ ನೀಡುವ ಗೌರವವನ್ನು ಕಂಡಾಗ ಆದರೆ ಮುಖ್ಯಶಿಕ್ಷಕರೇ ಆಗ ಬೇಕು ಎಂದೆನಿಸಿತು.. ಹೀಗೆ ಬೇರೆ ಬೇರೆ ಜನರನ್ನು ಕಂಡಾಗ ನಾನೂ ಅವರಂತೆ ಆದರೆ ಒಳ್ಳೆಯದಾಗುತ್ತಿತ್ತು ಎಂದೆನಿಸುತ್ತಿತ್ತು. ಅದರೊಂದಿಗೆ ಅವರಂತೆ ಆದರೆ ನಾನು ಆ ರೀತಿ ಮಾಡುತ್ತೇನೆ ಈ ರೀತಿಯಲ್ಲಿ ಬುದುಕುತ್ತೇನೆ ಎಂದೆಲ್ಲಾ ಮನಸ್ಸಿನಲ್ಲಿಯೇ ಮಂಡಿಗೆಯನ್ನೂ ತಿನ್ನುತ್ತಿದ್ದೆ. ಶಾಲೆಗೆ ಹೋಗುವಾಗ ನಿಂತ ಕಾರಿನ ಹತ್ತಿರ ಹೋಗುವ ಭಿಕ್ಷುಕನೊಬ್ಬ ಹೋಗಿ ಕೈವೊಡ್ಡಿ ಏನನ್ನಾದರೂ ಕೊಡಲು ಪ್ರಾರ್ಥಿಸಿದಾಗ ನಿರ್ಲಕ್ಷದಿಂದ ಬಿಕ್ಷುಕನನ್ನು ನೋಡುತ್ತಾ ಕಾರಿನ ಕರಿ ಗಾಜನ್ನು ಮೇಲೇರಿಸಿದಾಗ ನಾನೂ ಅಂತಹದೇ ಕಾರಿನಲ್ಲಿದ್ದಾಗ ಯಾರಾದರೂ ಭಿಕ್ಷುಕ ಬಂದು ಬೇಡಿದರೆ ಬರಿಗೈಯಲ್ಲಿ ಕಳುಹಿಸುವುದಿಲ್ಲ ಎಂದು ಕೊಳ್ಳುತ್ತೇನೆ.
ಹಳ್ಳ್ಳಿಯಿಂದ ತನ್ನ ಜಮೀನಿನ ಕೆಲಸಗಳಿಗಾಗಿ ನಗರಕ್ಕೆ ಬರುವ ನನ್ನ ದೊಡ್ಡಪ್ಪ ಹಲವಾರು ಸಲ ತಿರುಗಾಡಿದರೂ ನನ್ನ ಕೆಲಸವಾಗಿಲ್ಲ ಚಪ್ಪಲಿ ಸವೆಸಿದ್ದೇ ಬಂತು ಎಂದು ಅಲವತ್ತು ಕೊಂಡಾಗ ಆ ಕಛೇರಿಯ ಅಧಿಕಾರಿ ನಾನಾಗ ಬಾರದಿತ್ತೇ ಕ್ಷಣಮಾತ್ರದಲ್ಲಿ ಅವರ ಕೆಲಸ ಮಾಡಿಕೊಡುತ್ತಿದ್ದೆ ಎಂದೆನಿಸಿತ್ತು. ನನ್ನಪ್ಪ ಭಾಡಿಗೆಯ ಮನೆಯ ಸಹವಾಸ ಸಾಕು ಆರು ವರ್ಷದ ಹಿಂದೆ ಕೊಂಡು ಇಟ್ಟುಕೊಂಡಿದ್ದ ಸ್ವಂತ ನಿವೇಶನದಲ್ಲಿ ಪುಟ್ಟ ಮನೆಯೊಂದನ್ನು ಕಟ್ಟಿಕೊಳ್ಳಲು ಹೊರಟಾಕ ಸಾಲ ಕೊಡದೇ ಬ್ಯಾಂಕಿನ ಮೆನೇಜರು‘ಆ ರೆಕಾರ್ಡ್ ತನ್ನಿ, ಈ ರೆಕಾರ್ಡ್ ತನ್ನಿ ಎಂದು ಎಡತಾಕಿಸಿದಾಗ ನನ್ನ ಅಪ್ಪನಿಗೆ ಅವರು ಹೀಗೆ ಮಾಡುವುದೇ ಎಂಥಹ ಒಳ್ಳೆಯ ಮನುಷ್ಯ ಆತ. ಪ್ರಾಮಾಣಿಕ ಮಾತ್ರವಲ್ಲ ಸ್ವಾಭಿಮಾನಿಯೂ ಹೌದು ನಾನೆಲ್ಲದಾದರೂ ಬ್ಯಾಂಕಿನ ಮೆನೇಜರ ಆದರೆ ಅವರನ್ನು ಕರೆದು ಸಾಲ ಕೊಟ್ಟುಬಿಡುತ್ತಿದ್ದೆ ಎಂದು ಕೊಳ್ಳದೇ ಇರಲಿಲ್ಲ. ಹೀಗೆಯೇ ವಿವಿಧ ಸರಕಾರಿ ಅಧಿಕಾರಿಗಳು, ವೈದ್ಯರು, ರಾಜಕಾರಣಿಗಳು, ಕವಿ-ಸಾಹಿತಿ, ಕಲಾವಿದರನ್ನು ಕಂಡಾಗ ಅವರು ಎರಿದ ಎತ್ತರಕ್ಕೆ ಎರಲು ನನ್ನಿಂದ ಸಾಧ್ಯವಾದೀತೆ ಎಂದು ಎಷ್ಟೋ ಸಲ ಅನಿಸಿದ್ದಿದೆ.
ಹೈಸ್ಕೂಲಿಗೆ ಬಂದ ನಂತರ ಗುರುಗಳು ಎಷ್ಟೋ ಸಲ ಹೇಳಿದ್ದಾರೆ “ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಮೊದಲನೆದಾಗಿ ಒಳ್ಳೆಯ ಗುರಿ ಇಟ್ಟುಕೊಳ್ಳುಎಂದು. ಏನದು ಗುರಿ ಎಂದರೆ. ನಾವು ಹೋಗಿ ತಲುಪ ಬೇಕಾದ ಸ್ಥಳ! ಹೋಗ ಬೇಕೆನ್ನುವ ಆಕಾಂಕ್ಷೆಯೆ ಗುರಿಯ ಮೊಗ್ಗು. ನಾವು ಪ್ರತಿ ದಿನ ಮನೆಯಿಂದ ಹೊರಟು ಶಾಲೆಗೆ ಹೋಗ ಬೇಕು. ಶಾಲಾ ಸಮಯದ ಒಳಗೆ ಹೋದರೆ ಅಟೆಂಡೆನ್ಸ್ ಸಿಗುತ್ತದೆ. ಕೀಟಲೆ, ಪುಂಡತನ ಮಾಡದೇ ಶಾಲೆಯಲ್ಲಿ ಶಿಕ್ಷಕಕ/ಕಿಯರು ಹೇಳಿದ್ದನ್ನು ಮನನ ಮಾಡಿಕೊಂಡು ಮನೆಯಲ್ಲಿ ಚೆನ್ನಾಗಿ ಓದಿದರೆ ಒಳ್ಳೆಯ ಅಂಕ ಸಿಗುತ್ತದೆ. ರ್‍ಯಾಂಕ್ ಬರುತ್ತದೆ. ಮುಂದಿನ ತರಗತಿಗೆ ಪ್ರವೇಶ ದೊರಕುತ್ತದೆ. ಬೇರೆ ಶಾಲೆ, ಕಾಲೇಜಿಗೆ ಹೋಗ ಬೇಕಾದರೂ ಬುದ್ಧಿವಂತ ವಿದ್ಯಾರ್ಥಿ ಎಂದು ಸುಲಭವಾಗಿ ಪ್ರವೇಶ ದೊರಕುತ್ತದೆ. ಅಂದರೆ ಶಾಲೆಗೆ ಹೋಗುವ ವಿದ್ಯಾರ್ಥಿ ಇಟ್ಟುಕೊಳ್ಳ ಬೇಕಾದ ಗುರಿ ಒಳ್ಳೆಯ ಅಂಕ ಗಳಿಸುವುದು ಮತ್ತು ಅದಕ್ಕಾಗಿ ಆತ ಚೆನ್ನಾಗಿ ಅಭ್ಯಾಸ ಮಾಡುವ ಆಕಾಂಕ್ಷೆ ಇಟ್ಟುಕೊಂಡು ಸಾಧನೆ ಮಾಡಬೇಕಲ್ಲವೇ?
ಅದೇ ರೀತಿಯಲ್ಲಿ ಜೀವನದಲ್ಲಿಯೂ ಯಶಸ್ಸನ್ನು ಹೊಂದ ಬೇಕಾದರೆ ಮೊದಲನೇದಾಗಿ ಬೇಕಾಗಿರುವುದು ಗುರಿ. ತಂತ್ರಜ್ಞನಾಗಬೇಕಾದರೆ ಪಿ.ಯು.ಸಿ.ಯಲ್ಲಿ ಒಳ್ಳೆ ಅಂಕ ಗಳಿಸಿ ಉತ್ತಮ ತಾಂತ್ರಿಕ ಕಾಲೇಜಿನಲ್ಲಿ ಬಿ.ಇ. ಕಲಿಯಬೇಕು, ವೈದ್ಯನಾಗ ಬೇಕಾದರೆ ಎಮ್.ಬಿ.ಬಿ.ಎಸ್ ಕಲಿಯಬೇಕು. ಏನಾಗ ಬೇಕು ಎನ್ನುವುದು ನಮ್ಮ ಗುರಿಯಾದರೆ ಆಕಳ ಹಿಂದೆ ಹಾಲು ಕುಡಿಯ ಬೇಕೇಂದು ಹೋಗುವ ಕರುವಿನಂತೆ ನಾವೂ ಗುರಿಯ ಬೆನ್ನೇರಿ ಹೋಗ ಬೇಕು. ಆದರೆ ಗುರಿಯನ್ನು ಇಟ್ಟುಕೊಂಡು ಹೊರಟ ಕೂಡಲೇ ಅದರಲ್ಲಿ ಯಶಸ್ವಿಯಾಗಿಯೇ ಬಿಡುತ್ತೇವೆ ಎನ್ನುವಂತಿಲ್ಲ.
ನಾವು ಒಂದು ಊರಿನಿಂದ ಮತ್ತೊಂದು ಊರಿಗೆ ನಮ್ಮದೇ ಸ್ವಂತ ವಾಹನದಲ್ಲಿ ಹೋಗುತ್ತಿದ್ದರೂ ಮಾರ್ಗಮಧ್ಯೆ ವಾಹನ ಕೈಕೊಡ ಬಹುದು, ನೆರೆ ಬಂದು ರಸ್ತೆ ಬಂದಾಗಿರ ಬಹುದು ಅಥವಾ ಯಾವುದಾದರೂ ಬೇರೆ ವಾಹನ ಅಪಘಾತಕ್ಕೀಡಾಗಿಯೋ, ಮರ ಬಿದ್ದೋ, ಗುಡ್ಡ ಕುಸಿದೋ ನಮಗೆ ಹೋಗ ಬೇಕೆಂದು ಕೊಂಡ ಊರಿಗೆ ವೇಳೆಗೆ ಸರಿಯಾಗಿ ಹೋಗಲು ಸಾಧ್ಯವಾಗದಿರಬಹುದು. ಗುರಿಯನ್ನು ಹೋಗಿ ಸೇರಲು ಸಹ ಇಂಥಹದೆ ಹತ್ತಾರು ತೊಡಕುಗಳು ಉಂಟಾಗಿ ನಾವು ಗುರಿಯಿಂದ ವಿಮುಖರಾಗುವ ಸಂದರ್ಭವೂ ಬರಬಹುದು ಅಥವಾ ನಮ್ಮ ಪ್ರಯತ್ನಕ್ಕೆ ನಿರೀಕ್ಷಿತ ಪ್ರತಿಫಲ ಬಾರದೇ ಇರಬಹುದು. ಹಾಗಂತ ಗುರಿಯನ್ನೇ ಇಟ್ಟುಕೊಳ್ಳದಿರುವುದು ಸರಿಯಲ್ಲ. ಆದರೆ ಗುರಿಯನ್ನು ಗುರುತಿಸಿ ಅದರ ಯಶಸ್ಸಯಗಾಗಿ ಸರಿಯಾದ ಯೋಜನೆಯನ್ನು ಮಾಡಿಕೊಂಡು ಪರಿಶ್ರಮ ಪೂರ್ವಕ ಛಲದಿಂದ ಸಾಧನೆಗಿಳಿದರೆ ಯಶಸ್ಸೆನ್ನುವುದು ಕಟ್ಟಿಟ್ಟ ಬುತ್ತಿ ಎಂದು ಹಿರಿಯರ ಜೀವನಾನುಭವವನ್ನು ಓದಿದಾಗ ನಮಗೆ ತಿಳಿದು ಬರುವ ಸತ್ಯವಾಗಿದೆ.
ಸೋಲಿಗೆ ಅಂಜುವವನು ಹೇಡಿ, ಸೋಲಾದಿತೆಂದು ಭಯದಿಂದ ಸಾಧನೆಯನ್ನೇ ಮಾಡದವನು ಸೋಮಾರಿ ಹೀಗೆಂದು ಒಂದು ಗಾದೆ ಇದೆ. ಸಾಧನೆ ಎನ್ನುವುದನ್ನು ನಾವೊಂದು ನಾಣ್ಯವೆಂದು ಪರಿಗಣಿಸಿದರೆ ಸೋಲು ಮತ್ತು ಗೆಲುವುಗಳೆನ್ನುವುದು ಆ ನಾಣ್ಯದ ಎರಡು ಮಗ್ಗಲುಗಳಿದ್ದಂತೆ. ಸಾಧನೆಯಿಂದ ಗುರಿಯನ್ನು ಮುಟ್ಟಲು ಅಸಮರ್ಥರಾದಿರೆಂದು ಇಟ್ಟುಕೊಳ್ಳಿ. ನಾವು ಅಯಶಸ್ವಿಯಾದವೆಂದು ಅರ್ಥ. ನಮ್ಮ ಸಾಧನೆ ಎಂಬ ನಾಣ್ಯದ ಸೋಲಿನ ಮ್ಗಲು ಮೇಲ್ಮುಖವಾಗಿ ಬಿದ್ದಿದೆ ಎಂದು ಅರ್ಥ. ಆಗ ನೆನಪಿಟ್ಟು ಕೊಳ್ಳ ಬೇಕಾದ ವಿಷಯವೆಂದರೆ ಗೆಲುವು ಸಹ ಅದರೊಂದಿಗೆ ಇದೆ. ಅದರ ಇನ್ನೊಂದು ಮಗ್ಗಲೇ ಗೆಲುವು. ನೀವು ಮತ್ತಷ್ಟು ಅನುಭವ ಗಳಿಸಿಕೊಂಡು ಗೆಲುವನ್ನು ಪಡೆಯಲಿದ್ದೀರಿ. ಅದಕ್ಕಾಗಿ ಸೋಲನ್ನು ಸಹ ನಾವು ಸಿಹಿ ಎಂದೇ ತಿಳಿಯ ಬೇಕು.
ಎಷ್ಟೋ ಸಲ ನಾವು ಒಳ್ಳೆಯ ಗುರಿಯನ್ನು ಇಟ್ಟುಕೊಂಡಿದ್ದರೂ ಸಹ ಪರಿಶ್ರಮ ಪಟ್ಟರೂ ಸಹ ಯಶಸ್ಸು ದೊರಕದೇ ಹೋಗಲು ಹಲವಾರು ಕಾರಣಗಳಿವೆ. ಅದರಲ್ಲಿ ಮೊದಲನೆಯದೆಂದರೆ ನಮ್ಮ ಕೀಳರಿಮೆ ಅಥವಾ ನಮಗೆ ಮನೋಶ್ಥರ್ಯ ಇಲ್ಲದಿರುವುದು. ಅದಕ್ಕೂ ಕಾರಣವೆಂದರೆ ನಾವು ಸಾಧನೆಯ ಹಾದಿಯಲ್ಲಿದ್ದಾಗ ನಕಾರಾತ್ಮಕವಾಗಿ ಯೋಚಿಸುವುದು. ಈ ಕಾರ್ಯ ನನ್ನಿಂದ ಸಾಧ್ಯವಿದೆಯೋ ಇಲ್ಲವೋ? ಅಯಶಸ್ವಿಯಾದರೆ ಅದಕ್ಕಾಗಿ ವೆಚ್ಚ ಮಾಡಿದ ಅಷ್ಟೂ ಹಣ ವ್ಯರ್ಥವಾಗುತ್ತದೆ, ನಾನು ಸೋತೆನೆಂದರೆ ಸ್ನೇಹಿತರು, ಸಂಬಂಧಿಕರು ನಗಬಹುದು, ಅಪ್ಪ, ಅಮ್ಮ ಬಯ್ಯಬಹುದು ಗುರಿ ಹಿಡಿದು ಹೊರಟಾಗ ಎಂದೂ ಇಂತಹ ನಕಾರಾತ್ಮಕ ಭಾವನೆಗಳನ್ನು ಇಟ್ಟುಕೊಳ್ಳ ಬಾರದು. ನಾನು ಸಾಧಿಸಿಯೇ ಸಾಧಿಸುತ್ತೇನೆ ಎನ್ನುವ ಆತ್ಮಸ್ಥೆರ್ಯ ಇರಬೇಕು.
ಯಾವುದೇ ಕೆಲಸವನ್ನು ಕೈಗೆತ್ತಿ ಕೊಂಡಾಗಲೂ ಪರ ಮತ್ತು ವಿರುದ್ಧ ಅಭಿಪ್ರಾಯಗಳು ಬರುವುದು ಸಹಜ. ವಿರುದ್ಧ ಅಭಿಪ್ರಾಯಗಳು ಬಂದವೆಂದ ಕೂಡಲೇ ನಾವು ಕುಗ್ಗಿ ಹೋಗ ಬಾರದು. ಸತ್ಯವಾಗಿ ಹೇಳಬೇಕೆಂದರೆ ಇಂತಹ ವಿರುದ್ಧ ಅಭಿಪ್ರಾಯಗಳು ಬಂದಾಗಲೇ ನಮ್ಮಲ್ಲಿ ಛಲ ಜಾಗೃತಗೊಂಡು ಯಶಸ್ವಿಯಾಗಲೇ ಬೇಕೆಂಬ ಹಠದಿಂದ ನಾವು ನಿರಂತರ ಸಾಧನೆಯಲ್ಲಿ ಮಗ್ನರಾಗುತ್ತೇವೆ.
ಮರದಲ್ಲಿರುವ ಕಣ್ಣಿಗೆ ಕಾಣುವ ಮಾವಿನ ಕಾಯಿಯನ್ನು ಉದುರಿಸಲು ಕೆಲವು ಸಲ ಒಂದೇ ಕಲ್ಲು ಹೊಡೆದರೆ ಸಾಕಾಗುವುದಿಲ್ಲ. ಆ ಕಲ್ಲು ಗುರಿ ತಪ್ಪಲು ಬಹುದು. ಕಲ್ಲು ಮಾವಿನಹಣ್ಣಿಗೆ ತಗಲಿದರೂ ಹಣ್ಣು ಬೀಳದಿರಬಹುದು. ಕಣ್ಣೇದುರಿದ್ದ ಗುರಿಯನ್ನು ತಲುಪುವುದಕ್ಕೆ ಇಷ್ಟು ಕಷ್ಟವಿದೆ ಎಂದಾಗ ಕೇವಲ ಚಿತ್ರಣವನ್ನಷ್ಟೆ ಇಟ್ಟುಕೊಂಡು ಸಾಧಿಸ ಹೊರಟಾಕ ಹಲವಾರು ಸಲ ಸೋಲೇ ಗಂಟು ಬೀಳಬಹುದು. ಆಗ ಮನಸ್ಸು ನಿರಾಶೆಗೊಂಡು ಗುರಿಯಿಂದ ವಿಮುಖಗೊಳ್ಳಲು ಪ್ರೇರೆಪಿಸ ಬಹುದು. ನೆನಪಿಡಿ ಎಂದೂ ಪರಿಣಾಮದ ಚಿಂತೆಯನ್ನು ಇಟ್ಟುಕೊಳ್ಳ ಬೇಡಿ. ಪ್ರತಿಯೊಂದು ಕಾರ್ಯಕ್ಕೂ ಪರಿಣಾಮ ಇದ್ದೇ ಇರುತ್ತದೆ. ನಾವು ಯೋಚಿಸಿದ ಪರಿಣಾಮ ಬಂದಿಲ್ಲ ಎಂದು ಸಾಧನೆಯಿಂದಲೇ ಹಿಂದಕ್ಕೆ ಸರಿದರೆ ಆಗಲೇ ನಮ್ಮ ಗುರಿಯನ್ನು ತಲುಪುವ ಮಾರ್ಗ ಮುಚ್ಚಿದಂತೆ ಸರಿ. ಆ ಕಾರಣದಿಂದ ತನ್ನ ಕಾರ್ಯಕ್ಕೆ ಇಂಥಹ ಫಲ ಬಂದಿತೆಂದು ಕೊರಗದೇ ಸಾಧನೆಯನ್ನು ಮುಂದುವರಿಸಿ. ಹಲವಾರು ಸಲ ಸೋತರೂ ಒಂದಲ್ಲ ಒಂದು ಸಲ ನಮ್ಮ ಸಾಧನೆಗೆ ನಾವು ಎಣಿಸಿದ ಫಲ ಬಂದೇ ಬರುತ್ತದೆ ಎನ್ನುವ ಭರವಸೆ ಇಟ್ಟುಕೊಳ್ಳ ಬೇಕು.
ಇವೆಲ್ಲ ದೌರ್ಬಲ್ಯಗಳನ್ನು ಗೆಲ್ಲಬೇಕೆಂದರೆ ಅದಕ್ಕಿರುವ ಏಕೈಕ ಉಪಾಯವೆಂದರೆ ನಮ್ಮ ಮನಸ್ಸನ್ನು ಹುರಿಗೊಳಿಸುವುದು. ಗುರಿಯ ಬಗ್ಗೆ ನಿರಂತರವಾಗಿ ಮನಸ್ಸಿನಲ್ಲಿ ಜ್ಞಾಪಿಸಿಕೊಳ್ಳುತ್ತಾ ಇರುವುದು. ಅದಕ್ಕೆ ಹೋಗಿ ಸೇರಲು ಇರುವ ವಿವಿಧ ಮಾರ್ಗಗಳನ್ನು ಹುಡುಕುವುದು, ಆ ಕ್ಷೇತ್ರದಲ್ಲಿ ಉನ್ನತ ಸಾಥನಕ್ಕೇರಿದ ವ್ಯಕ್ತಿಗಳನ್ನು ಗುರುತಿಸಿಕೊಂಡು ಅವರು ಯಾವ ರೀತಿಯ ಸಾಧನೆಯಿಂದ ಯಶಸ್ಸನ್ನು ಗಳಿಸಿಕೊಂಡರು ಎಂಬ ಬಗ್ಗೆ ಮಾಹಿತಿ ಪಡೆದು ಕೊಂಡು ಅದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು.
ಗುರಿ ಸಾಧನೆಯ ಪ್ರಸ್ತಾಪ ಬಂದಾಗಲೆಲ್ಲ ಅದಕ್ಕೆ ಉದಾಹರಣೆಯಾಗಿ ‘ಭಗೀರಥನ ಪ್ರಯತ್ನವನ್ನು ಪ್ರಸ್ತಾಪಿಸುತ್ತಾರೆ. ಭಗೀರಥ ಒರ್ವ ಮಹರ್ಷಿ, ಅವರ ಪೂರ್ವಜರು ಕಪಿಲ ಮಹರ್ಷಿಯ ಕೋಪಾಗ್ನಿಗೆ ಸಿಲುಕಿ ಸುಟ್ಟು ಬೂದಿಯಾಗುತ್ತಾರೆ. ಅವರಿಗೆ ಸದ್ಗತಿ ದೊರಕಿಲ್ಲ ಅನ್ನುವುದನ್ನು ತಿಳಿದುಕೊಂಡ ಮಹರ್ಷಿ ಭಗೀರಥ ಶತಪ್ರಯತ್ನಗೈದು ದೇವಗಂಗೆಯನ್ನು ಭೂಲೋಕಕ್ಕೆ ತರುತ್ತಾರೆ. ಇದೊಂದು ಪುರಾಣ ಕತೆಯೆಂದು ನಿರ್ಲಕ್ಷಿಸ ಬೇಕಾಗಿಲ್ಲ ಇಂದೂ ಹಲವಾರು ಸಾಧಕರು ಅನಾನುಕೂಲತೆಗಳ ಮಧ್ಯೆಯೂ ಗುರಿ ಸಾಧನೆಯಿಂದ ಎರಿದ ಎತ್ತರ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ಕಣ್ಣಿಲ್ಲದ ಕುರುಡರಾದರೂ ೨೦೧೭ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ೧೨೪ನೇ ರ್‍ಯಾಂಕ್ ಪಡೆದು ಕೇರಳದಲ್ಲಿ ಉಪಜಿಲ್ಲಾಧಿಕಾರಿಯಾಗಿ ನಿಯುಕ್ತಿಯಾದ ಉಲ್ಲಾಸನಗರದ ಪ್ರಾಂಜಲ್ ಪಾಟೀಲ ಹೇಳುತ್ತಾರೆ “ನಮ್ಮನ್ನು ಯಾರೂ ಸೋಲಿಸಲು ಬಿಡಬಾರದು, ನಾವು ಎಂದೂ ಕೈಚಲ್ಲ ಬಾರದು, ಯಾಕೆಂದರೆ ನಮ್ಮೆಲ್ಲ ಪ್ರಯತ್ನಗಳಿಂದ ನಾವು ಕಾಯುತ್ತಿರುವ ಆ ಒಂದು ಅವಕಾಶ ಖಂಡಿತವಾಗಿಯೂ ಸಿಗುತ್ತದೆ ಈ ಮಾತುಗಳಲ್ಲಿರುವ ಆತ್ಮವಿಶ್ವಾಸವನ್ನು ಗಮನಿಸಿದರೆ ಭವಿಷ್ಯದ ಮೇಲೆ ಅವರು ಇಟ್ಟಿರುವ ಆಕಾಂಕ್ಷೆಯನ್ನು ಯಾರಾದರೂ ಗುರುತಿಸ ಬಹುದು.
ಏಳಿ ಎದ್ದೇಳಿ, ಗುರು ಮುಟ್ಟುವ ತನಕ ನಿಲ್ಲದಿರಿ ಎಂದು ದೇಶದ ಯುವಜನತೆಗೆಗ ಕರೆಕೊಟ್ಟ ವೀರಸನಾಸಿ, ವಿಶ್ವ ವಿಜೇತ ಸ್ವಾಮಿ ವಿವೇಕಾನಂದರು
ಶಕ್ತಿಯೇ ಜೀವನ, ದುರ್ಬಲತೆಯೇ ಮರಣ; ಶಕ್ತಿಯೇ ಪರಮಾನಂದ, ಅಖಂಡಜೀವನ, ಅಮರತ್ವ. ದುರ್ಬಲತೆಯೇ ಅನವರತ ದುಃಖ, ತಳಮಳ, ದುರ್ಬಲತೆಯೇ ಮರಣ. ನೀವು ಯಾವುದೇ ಕೆಲಸವನ್ನು ಮಾಡುವಾಗಲೂ ನಿಮ್ಮ ಮನಸ್ಸು ಹೃದಯ, ನಿಮ್ಮ ಸರ್ವಸ್ವವನ್ನೂ ಆಕೆಲಸಕ್ಕೆ ಕೊಡಿ ಎನ್ನುತ್ತಿದ್ದರು. ಶಿಕ್ಷಣವೆಂದರೆ ಹೊಸದಾಗಿ ಏನನ್ನೂ ಕಲಿಯುವುದಲ್ಲ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು ಎನ್ನುವುದು ಸ್ವಾಮಿ ವಿವೇಕಾನಂದರ ಅಭಿಪ್ರಾಯವಾಗಿತ್ತು. ಕಷ್ಟ, ದುಃಖ ಬಂದಾಗ ಹೆದರದಿರಿ ಅನ್ನುವುದನ್ನು “ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಸಲೆಂದೇ ಇರುವ ವ್ಯಾಯಾಮಶಾಲೆಎಂದು ಯುವಜನರನ್ನು ಹುರಿದುಂಬಿಸುತ್ತಿದ್ದರು.
ಆಕಾಂಕ್ಷೆಗಳೇ ಭವಿಷ್ಯದಲ್ಲಿ ನಾವು ಏನಾಗ ಬೇಕೆಂದು ನಿರ್ಣಯಿಸುತ್ತವೆ. ಕ್ರೀಡೆಯಲ್ಲಿ ಆಕಾಂಕ್ಷೆ ಇದ್ದವನು ಒಳ್ಳೆಯ ಕ್ರೀಡಾಪಟುವಾಗುತ್ತಾನೆ. ಬರೆಯುವುದರಲ್ಲಿ ಆಕಾಂಕ್ಷೆ ಇದ್ದವನು ಒಳ್ಳೆಯ ಬರಹಗಾರನಾಗಬಹುದು. ಮಾತನಾಡಲು ಇಚ್ಛೆ ಪಡುವವನು ಒಳ್ಳೆ ಭಾಷಣಕಾರ, ರಾಜಕಾರಣಿಯೂ ಆಗಬಹುದು. ಯಾರೇ ಆಗಲಿ ಜೀವನದಲ್ಲಿ ಯಶಸ್ವಿಯಾಬೇಕಾದರೆ, ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೇರ ಬೇಕಾದರೆ ಮೊದಲನೆದಾಗಿ ತಾನು ಗೆಲ್ಲ ಬೇಕೆಂಬ ಭಾವನೆ ಅವರಲ್ಲಿಇದ್ದೇ ಇರಬೇಕಾಗುತ್ತದೆ. ಆಕಾಂಕ್ಷೆ ಅಂದರೂ ಅದೇ! ಆಸೆ, ಇಚ್ಛೆ ಇದನ್ನು ತಾನು ಪಡೆಯ ಬೇಕೆಂಬ ಭಾವನೆ. ಆಕಾಂಕ್ಷೆಯೇ ನಮ್ಮ ಭವಿಷ್ಯವನ್ನು ರೂಪಿಸುವ ಮೊದಲ ಮೆಟ್ಟಿಲು. ತಾನು ಏನಾಗ ಬೇಕು ಎಂದು ತಿಳಿದ ನಂತರ ಹೇಗಾಗ ಬೇಕು? ಇದು ಎರಡನೇ ಮೆಟ್ಟಿಲು. ಈ ಮೆಟ್ಟಿಲನ್ನು ಹತ್ತುವಾಗಲೂ ತನ್ನ ಇಚ್ಛೆ ಅಥವಾ ಆಸೆ ಕಮರಿ ಹೋಗದಂತೆ ನೋಡಿಕೊಳ್ಳ ಬೇಕು. ಇನ್ನು ಮೂರನೆಯದು ಏನಾಗ ಬೇಕು, ಹೇಗಾಗ ಬೇಕು ಎಂಬುದನ್ನು ಸಂಯೋಜಿಸಿ ಕಾರ್ಯರೂಪಕ್ಕೆ ಇಳಿಸಲು ಪ್ರಯತ್ನಿಸುವುದು. ಅದೇ ಸಾಧನೆ. ಸಾಧನೆಯಲ್ಲಿ ನಾವು ಬಯಸಿದ ಯಶಸ್ಸು ಸಿಕ್ಕಿತೆಂದರೆ ಅದೇ ಉತ್ತಮ ಭವಿಷ್ಯ!
ನಾನು ಭವಿಷ್ಯದಲ್ಲಿ ಉತ್ತಮ ವೃತ್ತಿಯನ್ನು ಮಾಡಬೇಕೆಂದು ಬಯಸುತ್ತೇನೆ. ನನ್ನ ಮೊದಲಿನ ಆಯ್ಕೆ ನಾನೊಂದು ಸ್ವಂತ ಉದ್ದಿಮೆಯನ್ನು ಮಾಡ ಬೇಕೆಂಬ ಬಯಕೆ. ನಾನೇ ಸ್ವಂತ ಉದ್ದಿಮೆ ಸ್ಥಾಪಿಸಿದರೆ ಇನ್ನೊಬ್ಬರ ಕೈಕೆಳಗೆ ದುಡಿಯ ಬೇಕಾದ ಕಷ್ಟ ಇರುವುದಿಲ್ಲ. ನಾನೇ ಹಲವಾರು ಜನರಿಗೆ ಉದ್ಯೋಗ ನೀಡುವ ಸಾಮರ್ಥ್ಯವಿರುತ್ತದೆ. ನಾನೀಗ ವಿದ್ಯಾರ್ಥಿ. ಮೊದಲಿಗೆ ನನ್ನ ಶಿಕ್ಷಣವನ್ನು ಉತ್ತಮ ದರ್ಜೆ ಪಡೆದುಕೊಂಡು ಪೂರೈಸಿಕೊಳ್ಳ ಬೇಕು. ಅಂಕಗಳು ಭವಿಷ್ಯವನ್ನು ನಿರ್ಣಯಿಸುವುದಿಲ್ಲವಾದರೂ ನನ್ನ ಸಾಮರ್ಥ್ಯವನ್ನು ಪ್ರಕಟಿಸಿ ನನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತವೆ. ಹಾಗೂ ಮುಂದಿನ ಹಂತದಲ್ಲಿ (ಉನ್ನತ ಶಿಕ್ಷಣಕ್ಕೆ) ಸುಲಭವಾಗಿ ಒಳ್ಳೆಯ ಕಾಲೇಜಿಗೆ ಸೇರಲು ರಹದಾರಿ ಒದಗಿಸುತ್ತದೆ. ನನ್ನ ಸ್ವಂತ ಉದ್ಯಮಕ್ಕ ಬೇಕಾದ ಮಾಹಿತಿಯನ್ನು ಉನ್ನತ ಶಿಕ್ಷಣದ ಸಂದರ್ಭದಲ್ಲಿ ನಾನು ಪಡೆಯ ಬಹುದಾಗಿದೆ. ಶಿಕ್ಷಣದೊಂದಿಗೆ ಸ್ವಂತ ಉದ್ಯಮಗಳ ಬಗ್ಗೆ, ಅವುಗಳನ್ನು ಆರಂಭಿಸಿ, ಅಭಿವೃದ್ಧಿ ಪಡಿಸುವ ಬಗ್ಗೆ ತಜ್ಞರು ಬರೆದ ಪುಸ್ತಕಗಳು, ನಿಯತಕಾಲಿಕಗಳ ಲೇಖನಗಳನ್ನು ಹಾಗೂ ಇಂಟರನೆಟ್ಟನಲ್ಲಿರುವ ಮಾಹಿತಿಯನ್ನು ಅರಿತುಕೊಳ್ಳ ಬಹುದಾಗಿದೆ. ಸ್ವಂತ ಉದ್ಯಮದಲ್ಲಿ ಬರುವ ಸಮಸ್ಯೆಗಳ ಕುರಿತು ಆ ವೃತ್ತಿಯಲ್ಲಿದ್ದ ಅನುಭವಸ್ಥರೊಂದಿಗೆ ಚರ್ಚಿಸಬಹುದು. ಇದರಿಂದ ನನ್ನ ಆತ್ಮ ವಿಶ್ವಾಸ ಇನ್ನಷ್ಟು ವೃದ್ಧಿಯಾಗುತ್ತದೆ. ಈ ಎಲ್ಲಾ ಕೆಲಸ ಗಳಿಗೆ ಮುಖ್ಯವಾಗಿ ಬೇಕಾಗಿರುವ ಆಕಾಂಕ್ಷೆ. ಇದನ್ನು ನಾನು ಈಗ ವಿದ್ಯಾರ್ಥಿ ದೆಶೆಯಲ್ಲಿಯೇ ಬೆಳೆಸಿಕೊಳ್ಳ ಬೇಕು. ಮುಂದೆ ಬೆಳೆಸಿ ಕೊಳ್ಳೋಣ ಎಂದು ಹೋದರೆ ನಾನು ಮರುಭೂಮಿಯಲ್ಲಿ ನಿಂತ ಪಯಣಿಗನಾಗುತ್ತೇನೆ.
Comments
Appreciate the author by telling what you feel about the post 💓
Wow. . Tumba adbhutavagi barediddiri. Nimagondu salam..
ಲೇಖನ ಚೆನ್ನಾಗಿದೆ. ಚಿಕ್ಕವನಿದ್ದಾಗ ನನಗೂ ಹೀಗೆ ಅನಿಸುತ್ತಿತ್ತು.
ಚೆನ್ನಾಗಿ ಬರೆದಿದ್ದೀರಿ......... ಓದಿದರೆ ಮನದಲ್ಲಿ ಕ್ರಾಂತಿ ಆಗುತ್ತದೆ......!
ಸುಂದರ ಬರವಣಿಗೆ, ಅನುಭವ ಆಪ್ತವೆನಿಸುತ್ತದೆ
ಅದ್ಭುತವಾಗಿದೆ
Please Login or Create a free account to comment.