ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ

ದುಷ್ಟರ ಸಂಘ ಮಾಡಿ ಹಿರಿಯರಿಂದ ಬಂದ ಆಸ್ತಿಯನ್ನು ಕಳೆದುಕೊಂಡ ವ್ಯಕ್ತಿಯೊಬ್ಬನ ಕಥೆ

Originally published in kn
Reactions 1
2173
Deepak Shenoy
Deepak Shenoy 16 Oct, 2020 | 1 min read
Fairy Tale Short Story

ಒಂದೂರಿನಲ್ಲಿ ಒರ್ವ ಭಿಕ್ಷೆ ಬೇಡುವ ಬಿಕಾರಿ ಇದ್ದನು. ಅವನ ಹೆಸರು ಅಂಜಪ್ಪ. ಅಂಜಪ್ಪನು ಚಿಕ್ಕವನಾಗಿದ್ದಾಗ ಅವನ ತಾಯಿ ಎರಡನೇ ಹೆರಿಗೆಯ ಸಂದರ್ಭದಲ್ಲಿ ಕೂಸು ಅಡ್ಡ ಸಿಲುಕಿ ಮರಣ ಹೊಂದುತ್ತಾಳೆ. ಇನ್ನೊಂದು ಮದುವೆ ಆದರೆ ಮೊದಲ ಹೆಂಡತಿಯ ಮಗನಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಯೋಚಿಸಿ ಅಂಜಪ್ಪನ ತಂದೆ ಬಂಜಪ್ಪನು ಎರಡನೇ ಮದುವೆ ಆಗುವುದಿಲ್ಲ. ಬಂಜಪ್ಪನಿಗೆ ಅವನ ತಂದೆಯಿಂದ ಬಂದ ಅರ್ಧ ಎಕರೆ ಹೊಲ ಇತ್ತು. ಆತ ಹಗಲು-ರಾತ್ರಿ ಕಷ್ಟಪಟ್ಟು ದುಡಿದು ಅಂಜಪ್ಪನ ತಂದೆ ಬಂಜಪ್ಪನು ತಂದೆಯಿಂದ ಬಂದ ಆಸ್ತಿಗೆ ಇನ್ನೂ ಮೂರ್‍ನಾಲ್ಕು ಎಕರೆ ಜಮೀನನ್ನು ಕೊಂಡು ಸಿರಿವಂತ ಎನಿಸಿಕೊಂಡಿದ್ದನು. ತಾಯಿ ಇಲ್ಲದ ತಬ್ಬಲಿ ಮಗನಿಗೆ ಆಸ್ತಿಯನ್ನಾದರೂ ಮಾಡಿ ಇಟ್ಟು ಆತ ಜೀವನವಿಡಿ ಸುಖವಾಗಿ ಬದುಕುವಂತೆ ಆಗಬೇಕು ಎಂದು ಹೊಟ್ಟೆ ಬಟ್ಟೆ ಕಟ್ಟಿ ಬೇಕಾದಷ್ಟು ಹಣವನ್ನು ಸಹಿತ ಇಟ್ಟಿದ್ದನು. ಒಂದು ದಿವಸ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿ ಅಂಜಪ್ಪನ ತಂದೆ ಬಂಜಪ್ಪನು ದುರ್ಮರಣ ಹೊಂದುತ್ತಾನೆ.  

ತಂದೆಯ ಸಾವಿನಿಂದ ಅಂಜಪ್ಪನು ಒಬ್ಬಂಟಿ ಆದರೂ ಸಣ್ಣ ಪ್ರಾಯದಲ್ಲಿಯೇ ಅವನ ಕೈಗೆ ಬಹಳಷ್ಟ್ಟು ಆಸ್ತಿ ಮತ್ತು ದೊಡ್ಡ ಮೊತ್ತ ಒಮ್ಮೆಗೆ ಸಿಗುತ್ತzತ್ತಿಷ್ಟು ಬೇಗ ತನಗೆ ಸಾವು ಬರಬಹುದೆಂಬ ಕಲ್ಪನೆ ಇಲ್ಲದ ಅವನ ತಂದೆ ಬಂಜಪ್ಪನೂ ಸಹ ಹಣ ಮತ್ತು ಆಸ್ತಿಯನ್ನು ಉಳಿಸಿ ಕೊಳ್ಳುವ ಜಾಣ್ಮೆಯನ್ನು ಅವನಿಗೆ ತಿಳಿಸಿರಲಿಲ್ಲ. ತಾಯಿ ಇಲ್ಲದ ತಬ್ಬಲಿ ಎಂದು ಮುದ್ದಿನಿಂದ ಬೆಳೆಸಿದನೇ ವಿನಃ ಅವನಿಗೆ ಜೀವನ ಸಾಗಿಸಲು ಬೇಕಾದ ಯಾವುದೇ ಜಾಣ್ಮೆಯನ್ನೂ ನೀಡಿರಲಿಲ್ಲ. ಆದ್ದರಿಂದ ಆಗ ಅಂಜಪ್ಪನ ಸ್ಥಿತಿ ಮರಳುಗಾಡಿನಲ್ಲಿ ನಿಂತಂತಿತ್ತು. 

ತಂದೆ ಸತ್ತಿರುವ ಇವನ ಕಡೆ ಬಹಳಷ್ಟು ದುಡ್ಡು ಹಾಗೂ ಸಂಪತ್ತಿದೆ ಇದೆ ಎಂದು ಗೊತ್ತಾಗಿ ‘ಬೆಲ್ಲಕ್ಕೆ ಇರುವೆಗಳು ಮುತ್ತಿದಂತೆ ಊರಿನ ಕೆಲ ಕಪಟಿಗಳು ಅಂಜಪ್ಪನನ್ನು ಸಂತೈಸುವ ನೆವದಲ್ಲಿ ಬಂದು ಅವನ ಒಲವನ್ನು ಗಳಿಸಿಕೊಂಡರು. ಅವನ ಗೆಳೆತನಕ್ಕಾಗಿ ತಮ್ಮ ಜೀವವನ್ನೇ ಅರ್ಪಿಸಲು ಸಿದ್ಧರಿದ್ದೇವೆ ಎನ್ನುವಂತೆ ನಟಿಸಿದರು. ಅದರಿಂದ ಅಂಜಪ್ಪನ ವಿಶ್ವಾಸಕ್ಕೂ ಪಾತ್ರರಾದರು. 

ಅಂಜಪ್ಪನಿಗೆ ತಂದೆಯ ಸಾವಿನ ದುಃಖವನ್ನು ಮರೆಯುವಂತೆ ಮಾಡುತ್ತೇವೆ ಎಂದು ಮೊದಲಿಗೆ ಶರಾಬು ಕುಡಿಯುವುದನ್ನು ಕಲಿಸಿದರು. ಶರಾಬು ಕುಡಿಯುವುದು ಅವನಿಗೆ ಚಟವಾಗಿ ಅಂಟಿದ ನಂತರ ಜೂಜು, ಜುಗಾರಿ ಆಡುವುದು ಇತ್ಯಾದಿ ಒಂದೊಂದೇ ಚಟಗಳನ್ನು ಕಲಿಸಿ ಅವನ ದುಡ್ಡಿನಲ್ಲಿ ತಾವು ಮೋಜು, ಮಜಾ ಮಾಡುವುದರೊಂದಿಗೆ ತಮ್ಮ ಅವಶ್ಯಕತೆಗಳಿಗೂ ಅದನ್ನು ಬಳಸಿಕೊಂಡು ಬಂಜಪ್ಪ ಸತ್ತು ಎರಡು ವರ್ಷ ತುಂಬುವುದರೊಳಗೆ ಅಂಜಪ್ಪ ತನ್ನ ದುಡ್ಡು, ಸಂಪತ್ತು, ಮನೆ, ಮಠ, ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬೀಳುವಂತೆ ಮಾಡುತ್ತಾರೆ. 

ತಂದೆ ತುಂಬಾ ಮುದ್ದಿನಿಂದ ಬೆಳೆಸಿದ್ದರಿಂದ ಅಂಜಪ್ಪನಿಗೆ ಯಾವದೇ ಕೆಲಸ ಮಾಡಲು ಗೊತ್ತಿರಲ್ಲಿಲ್ಲ. ಊರಿನಲ್ಲಿ ಎಲ್ಲರೂ ಅವನನ್ನು ನೋಡಿ ಎಷ್ಟು ಒಳ್ಳೆಯ ತಂದೆಗೆ ಅದೆಷ್ಟು ಕೆಟ್ಟ ಮಗನಾಗಿ ಹುಟ್ಟಿದೆಯೋ? ಛೀ...ಥೂ... ಎಂದು ಉಗಿಯುತ್ತಿದ್ದರು. ಅವನ ಸ್ನೇಹಿತರೆಂದು ಬಂದವರು ಏನೇನೊ ಕಾರಣ ಹೇಳಿ ದೂರ ಸರಿದರು. ಒಬ್ಬಂಟಿಯಾದ ಅಂಜಪ್ಪ ಇಲ್ಲಿಯೇ ಇದ್ದರೆ ನಾನು ಹಸಿವೆಯಿಂದ ಸಾಯ ಬೇಕಾಗ ಬಹುದೆಂದು ಹೆದರಿ ಭಿಕ್ಷೆ ಬೇಡಿಯಾದರೂ ಬದುಕೋಣ ಎಂದು ನಗರಕ್ಕೆ ಬಂದು ಹಾದಿ ಬೀದಿಯಲ್ಲಿ ಹೋಗಿ ಬರುವವರನ್ನು ದಮ್ಮಯ್ಯ ಬಿದ್ದು ಮುಂಜಾನೆಯಿಂದ ಸಂಜೆಯ ತನಕ ಭಿಕ್ಷೆ ಬೇಡುತ್ತಿದ್ದ ಹಾಗೂ ಭಿಕ್ಷೆ ಬೇಡಿದ ಹೆಚ್ಚಿನ ಹಣವನ್ನು ಕುಡಿಯುವ ತನ್ನ ಚಟಕ್ಕೆ ಬಳಸತ್ತಿದ್ದ. ಜೀವಮಾನ ಪೂರ್ತಿ ಭಿಕ್ಷುಕನಾಗಿಯೇ ಉಳಿದ.

ಮಕ್ಕಳೇ ಅಂಜಪ್ಪನ ಜೀವನವನ್ನು ಗಮನಿಸಿದಾಗ ನಮಗೆ ದುಃಖವಾಗುತ್ತದೆ. ಆದರೆ ಅವನ ಈ ದುಸ್ಥಿತಿಗೆ ಅವನೇ ಕಾರಣನಲ್ಲವೇ? ಅವನು ಸ್ಥಿತಿವಂತನ ಮನೆಯಲ್ಲಿ ಹುಟ್ಟಿದ್ದರೂ ಕೂಡಾ ಎಲ್ಲವನ್ನೂ ಕಳೆದು ಕೊಂಡು ರಸ್ತೆಯ ಮೇಲೆ ಬಿದ್ದು ಭಿಕ್ಷುಕನಾದನು.. ಅವನ ತಂದೆ ಅವನ ಸುಖ ಜೀವನದ ಸಲುವಾಗಿ ಆಸ್ತಿ-ಸಂಪತ್ತು, ಬೇಕಾದಷ್ಟ್ಪು ಹಣವನ್ನು ಸಹ ಮಾಡಿ ಇಟ್ಟಿದ್ದರು ಅವನು ದುಷ್ಟರ ಸಹವಾಸ ಮಾಡಿ ಕೆಟ್ಟನು. ಅಂಜಪ್ಪನು ಕೆಟ್ಟ ಜನರ ಸಹವಾಸದಿಂದ ತನಗೆ ಬಂದ ಎಲ್ಲ ಸಂಪತ್ತನ್ನು ನಾಶ ಮಾಡಿಕೊಂಡನು. ತಂದೆಯಿಂದ ಅವನ ಕೈಗೆ ಬಹಳಷ್ಟು ಸಂಪತ್ತು ಸಿಕ್ಕರೂ ಸಹ ಅದನ್ನು ಸುಖವಾಗಿ ಅನುಭವಿಸಲು ಅವನಿಂದ ಸಾಧ್ಯವಾಗಲಿಲ್ಲ.  ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋಯಿತು. 

ಬಹಳಷ್ಟು ಜನರ ಜೀವನದಲ್ಲಿ ಇಂತಹದೆ ಘಟನೆಗಳು ಘಟಿಸುತ್ತವೆ. ಆದ್ದರಿಂದಲೇ ಹಿರಿಯರ ಅನುಭವ ನುಡಿಗಳನ್ನು ಕೇಳಬೇಕು ಎಂದು ಹೇಳುತ್ತಾರೆ. ವಿದ್ಯೆ ಕಲಿಯುದರಿಂದಲೂ ಜೀವನವನ್ನು ಸುಂದರಗೊಳಿಸಿ ಕೊಳ್ಳಲು ಸಾಧ್ಯವಿದೆ. ತನ್ನ ತಂದೆ ತೀರಿಕೊಂಡ ಕೂಡಲೇ ಅಂಜಪ್ಪನು ಯಾರಾದರೂ ಸಜ್ಜನರಾದ ಹಿರಿಯರಲ್ಲಿ ಹೋಗಿ ದಾರಿ ಕೇಳಿದರೆ ಅವರು ಖಂಡಿತ ಒಳ್ಳೆಯ ದಾರಿ ತೋರುತ್ತಿದ್ದರು. ಅವನ ಸಂಪತ್ತನ್ನು ಬೆಳೆಸುವ, ಉಳಿಸಿ ಕೊಳ್ಳುವ ಮಾರ್ಗ ತೋರುತ್ತಿದ್ದರು. ಯಾಕೆಂದರೆ ಅವರಲ್ಲಿ ಅನುಭವದಿಂದ ಗಳಿಸಿದ ಜ್ಞಾನವಿರುತ್ತದೆ. ಎಲ್ಲವರಿಗೂ ಎಲ್ಲಾ ರೀತಿಯ ಅನುಭವ ಆಗಲು ಸಾಧ್ಯವಿಲ್ಲ. ಅನುಭವಿಗಳಾದ ಹಿರಿಯರಲ್ಲಿಗೆ ಹೋಗಿ ದಾರಿ ಕೇಳಬೇಕು. ಚಿಕ್ಕವರು ಹಿರಿಯರಿಗೆ ಗೌರವ ನೀಡಿ ಅಂತಹ ಜ್ಞಾನವನ್ನು ಕಲಿತುಕೊಂಡರೆ ಮುಂದೆ ಸುಖದಿಂದ ಬದುಕಲು ಸಾಧ್ಯವಿದೆ. ಅದರ ಬದಲು ತನ್ನಲ್ಲಿ ಸಂಪತ್ತಿದೆ, ಆಸ್ತಿ ಇದೆ ಎಂಬ ಗರ್ವ, ಅಹಂಕಾರ ತೋರಿಸಿದರೆ ಅದರ ಉಪಯೋಗವನ್ನು ದುರ್ಜನರು (ದುಷ್ಟ ಜನರು) ತೆಗೆದುಕೊಂಡು ನಮ್ಮ ಕೈಗೆ ಬಂದಿರುವುದನ್ನು ಬಾಯಿಗೆ ಬಾರದಂತೆ ಮಾಡುತ್ತಾರೆ. ಆದ್ದರಿಂದ ತಾಯಿ-ತಂದೆ, ಗುರು-ಹಿರಿಯರಿಗೆ ಗೌರವ ನೀಡುವ ಗುಣವನ್ನೂ ಇಂದೇ ಬೆಳೆಸಿಕೊಳ್ಳಿ ಮತ್ತು ಜಾಗೃತರಾಗಿರಿ. 

1 likes

Published By

Deepak Shenoy

deepakshenoy

Comments

Appreciate the author by telling what you feel about the post 💓

Please Login or Create a free account to comment.