ಒಂದು ಮನೆಯನ್ನು ಭದ್ರ ಪಡಿಸುವುದು ಆ ಮನೆಯ ಪ್ರಧಾನ ಬಾಗಿಲಿಗೆ ಹಾಕುವ ಸಣ್ಣ ಚಿಲಕದ ಕೆಲಸ. ಚಿಲಕದ ಗಾತ್ರ ಚಿಕ್ಕದು, ವಿನ್ಯಾಸ ಸರಳವಾದರೂ ಅದರ ಕೆಲಸ ಮಾತ್ರ ಅಮೋಘ. ಆದರೆ ಅದಕ್ಕೆ ಉಪಯೋಗಿಸಿದ ಒಂದೇ ಒಂದು ಸಣ್ಣ ಗಾತ್ರದ ಸ್ಕ್ರೂ ಸಡಿಲವಾದರೂ ಅಥವಾ ಕಳಚಿ ಬಿದ್ದರೆ ಸಂಪೂರ್ಣ ಮನೆಗೇ ಅಪಾಯ ಕಟ್ಟಿಟ್ಟ ಬುತ್ತಿ. ನಮ್ಮ ಸುತ್ತಲಿರುವ ಪ್ರಕೃತಿಯ ಕತೆಯೂ ಸಹ ಇದೆಯೇ ಆಗಿದೆ.
ನಮಗೆ ಗೊತ್ತಿರುವಂತೆ ಸೂರ್ಯ ಮಂಡಲದಲ್ಲಿ ಜೀವಿಗಳಿರುವ ಏಕೈಕ ಠಾವು ಭೂಮಿ. ಜೀವಿ ಅಂದರೆ ಕೇವಲ ಮನುಷ್ಯನು ಮಾತ್ರವಲ್ಲ. ನೆಲ, ಜಲ, ವಾಯು, ಸೂರ್ಯ ರೇಶ್ಮಿ, ಹಸಿರಾಗಿರುವ ಮರ-ಗಿಡ, ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳೆಲ್ಲವೂ ಸೇರಿ ಜೀವಿಗಳ ನೆಲೆಯಾದ ಭೂಮಂಡಲಕ್ಕೆ ಜೀವಕಳೆ ತಂದಿತ್ತಿವೆ. ಇದೊಂದು ಜೀವಿಗಳ ನಡುವಿನ ಪರಸ್ಪರ ಪೂರಕ ನೇಯ್ಗೆ. ಒಬ್ಬರಿಂದ ಇನ್ನೊಬ್ಬರು, ಒಬ್ಬರಿಗಾಗಿ ಇನ್ನೊಂದು ಜೀವಿ... ಭೂಮಂಡಲದ ಮೇಲಿರುವ ಪ್ರತಿಯೊಂದು ಜೀವಿಯೂ ಜೀವವೈವಿಧ್ಯೆಯ ಒಂದೊಂದು ಕೊಂಡಿಯಂತೆ. ಈ ಕೊಂಡಿಗಳು ಹೆಣೆದು ಪರಸ್ಪರ ಪೂರಕವಾಗಿ ಬದುಕಿದಾಗಲೇ ಪ್ರಕೃತಿಯ ಉಸಿರು ನಿರಂತರವಾಗಿ ಪ್ರವಹಿಸುತ್ತಲೇ ಇರುತ್ತದೆ. ಪ್ರಕೃತಿ ನೇಯ್ದಿರುವ ಈ ವಿನ್ಯಾಸದ ಒಟ್ಟಂದವೇ ಪರಿಸರ. ಇದರಲ್ಲಿ ಒಂದು ಕೊಂಡಿ ಕಳಚಿದರೂ, ಇನ್ನೊಂದು ಕೊಂಡಿಯನ್ನು ನಿರ್ಲಕ್ಷಿಸಿದರೂ ಜಗತ್ತಿನ ಲಯ ತಪ್ಪುತ್ತದೆ ಅನ್ನುವುದು ಘೋರ ಸತ್ಯ. ವೇದಕಾಲದ ಮಂತ್ರಗಳಿಂದ ಇಂದಿನ ಸಂಶೋಧನೆಗಳೂ ಸಹ ಇದನ್ನೇ ಪ್ರತಿಪಾದಿಸುತ್ತಾ ಬಂದಿವೆ.
ಅಥರ್ವ ವೇದದ ಪೃಥ್ವೀ ಸೂಕ್ತ (ಶ್ಲೋಕ ೧೨)ದಲ್ಲಿ ಪ್ರಕೃತಿಯ ಬಗ್ಗೆ ಈ ರೀತಿ ಹೇಳಲಾಗಿದೆ. ಮಾತಾ ಭೂಮಿಃ ಪುತ್ರೋಹಮ್ ಪೃಥಿವ್ಯಾಃ” ಅಂದರೆ ನಾವು ಬದುಕಿರುವ ಭೂಮಿಯೇ ನಮಗೆ ತಾಯಿ. ಈ ಭೂಮಿಯ ಮೇಲಿರುವ ಎಲ್ಲಾ ಸಂಪನ್ಮೂಲಗಳೂ ಸೇರಿ ಪರಿಸರವಾಗಿದೆ ಎನ್ನಬಹುದು, ಇಂಗ್ಲೆಂಡಿನ ಅರ್ಥರ್ ಟಾನ್ಸ್‌ಲೆ ಎಂಬ ಬ್ರಿಟಿಷ್ ಪರಿಸರ ಶಾಸ್ತ್ರಜ್ಞರೊಬ್ಬರು "ಕೇವಲ ಜೀವಿಯ ವೈವಿದ್ಯತೆಯನ್ನಷ್ಟೇ ಅಲ್ಲದೇ, ಪರಿಸರ ಎಂದರೆ ವ್ಯವಸ್ಥೆಯನ್ನು ರೂಪಿಸುವ ಭೌತಿಕ ಅಂಶಗಳ ಸಮಗ್ರ ಸಂಕಿರ್ಣತೆಯನ್ನು ಒಳಗೊಂಡಿರುವ ಒಂದು ಸಮಗ್ರ ವ್ಯವಸ್ಥೆ" ಎಂದು ಪರಿಸರದ ಬಗ್ಗೆ ವಿವರಿಸಿದ್ದಾರೆ. ಭೌತಿಕವಾಗಿ ಕಾಣಿಸುವ ಜೀವಿಗಳ ಶರೀರ, ಗಿಡಮರ, ಕಲ್ಲು-ಮಣ್ಣುಗಳನ್ನಷ್ಟೇ ಪರಿಸರ ಎಂದು ವಿಂಗಡಿಸ ಬೇಕಾಗಿಲ್ಲ. ಕಣ್ಣಿಗೆ ಕಾಣಿಸದ ಗಾಳಿ, ಆಕಾಶ, ಮನಸ್ಸು ಇತ್ಯಾದಿಗಳೂ ಸಹ ಪರಿಸರದ ಭಾಗಗಳೆಂದೇ ಪರಿಗಣಿಸ ಬೇಕು.
ಪರಿಸರದಲ್ಲಿರುವ ಅರಣ್ಯಗಳು, ಪ್ರಾಣಿ-ಪಕ್ಷಿಗಳು, ಮನುಷ್ಯರಂತಹ ಜೀವಿಗಳು ಜೈವಿಕ ಸಂಪನ್ಮೂಲವಾದರೆ, ಚಿನ್ನ, ಕಬ್ಬಿಣ, ತಾಮ್ರ, ಬೆಳ್ಳಿ, ಕಲ್ಲು, ಮಣ್ಣುಗಳು ಅಜೈವಿಕ ಸಂಪನ್ಮೂಲಗಳು. ಇವುಗಳೊಂದಿಗೆ ಕಣ್ಣಿಗೆ ಕಾಣಿಸದ ಹಲವಾರು ವಿಷಯಗಳೂ ಈ ಪರಿಸರದ ಭಾಗಗಳಾಗಿವೆ. ಚಿನ್ನ ಅದಿರಿನಲ್ಲಿರುತ್ತದೆ. ಯಾವಾಗ ಅದಿರನ್ನು ಶುದ್ಧಗೊಳಿಸಿ ಚಿನ್ನವನ್ನು ಪಡೆದಾಗಲೇ ಚಿನ್ನದ ಇರುವಿನ ಅರಿವು ನಮಗಾಗುವಂತೆ ತಮ್ಮ ಸುಖಭೋಗಕ್ಕಾಗಿ ಪರಿಸರ ನಾಶಕ್ಕಿಳಿದಾಗಲೇ ಅದರಿಂದ ಉಂಟಾಗುವ ಅನುಭವಜನ್ಯ ನೂರಾರು ಸಮಸ್ಯೆಗಳಿಂದ ಅಥವಾ ಅವಘಡಗಳಿಂದ ಕಣ್ಣಿಗೆ ಕಾಣಿಸದ ವಿಷಯಗಳೂ ಸಹ ಪರಿಸರದೊಂದಿಗೆ ಬೆರೆತಿವೆ ಎಂಬ ಸತ್ಯದ ಅರಿವು ನಮಗಾಗುತ್ತದೆ.
ಈ ಪರಿಸರದಲ್ಲಿ ಖನಿಜಗಳು, ಮರಗಿಡಗಳು, ಪ್ರಾಣಿಪಕ್ಷಿಗಳಂತಹ ವಾಸ್ತವಿಕ ಸಂಪನ್ಮೂಲಗಳಿರುವಂತೆ ಇಂದು ಕಣ್ಣಿಗೆ ಕಾಣಿಸದಿದ್ದರೂ ಮುಂದೊಂದು ದಿನ ಬಳಸಲು ದೊರಕಬಹುದಾದಂತಹ ಪ್ರಚ್ಛನ್ನ ಸಂಪನ್ಮೂಲಗಳ ದೊಡ್ಡ ಆಗರವೇ ಇರಬಹುದು. ಸಂಶೋಧಿಸುತ್ತಾ ಹೋದಂತೆ ಅವುಗಳು ಸಹ ಸಿಗಬಹುದು. ಸುಮಾರು ಇನ್ನೂರು (೧೮೩೯) ವರ್ಷಗಳ ಹಿಂದೆ ಜನರು ಸೂರ್ಯನನ್ನು ದೇವರೆಂದು ಪೂಜಿಸುತ್ತಿದ್ದರೂ ಸಹ ಸೂರ್ಯನು ಬೆಳಕು ಮತ್ತು ತಾಪದ ಇಷ್ಟೊಂದು ದೊಡ್ಡ ಸಂಪನ್ಮೂಲ ಎಂದು ಗೊತ್ತಿರಲಿಲ್ಲ. ಅದೇ ರೀತಿ ಗಾಳಿ, ನೀರುಗಳು ಶಕ್ತಶಾಲಿಗಳೆಂದು ತಿಳಿದಿದ್ದರೂ ಅವುಗಳನ್ನು ಶಕ್ತಿಯ ರೂಪಗಳಾಗಿ ಬದಲಾಯಿಸಿ ಕೊಂಡಿರುವುದು ಮನುಷ್ಯನ ಹೆಚ್ಚುಗಾರಿಕೆಯಲ್ಲವೇ? ಸೂರ್ಯ, ಗಾಳಿ ಮತ್ತು ನೀರು ಇವು ಎಂದೆಂದೂ ಖಾಲಿಯಾಗದ ಸಂಪನ್ಮೂಲಗಳಾಗಿದ್ದು ಪ್ರಕೃತಿ ಇವುಗಳನ್ನು ಗುಪ್ತವಾಗಿ ಇಟ್ಟಿತ್ತು. ಆ ಕಾರಣದಿಂದ ಮನುಷ್ಯ ಉರವಲಿಗಾಗಿ ಮರಗಿಡಗಳನ್ನು ಕಡಿದ, ಭೂಗರ್ಭವನ್ನು ಬಗೆದು ಪೆಟ್ರೋಲಿಯಮ್ ವಸ್ತುವನ್ನು ಬರಿದು ಮಾಡತೊದಗಿದೆ. ಇದರಿಂದ ಒಂದೆಡೆ ಶಕ್ತಿಯ ಮೂಲಗಳು ಖಾಲಿಯಾಗ ತೊಡಗಿದರೆ ಮತ್ತೊಂದೆಡೆ ಅವುಗಳಿಂದ ಉತ್ಪತ್ತಿಯಾದ ವಿಷ ವಸ್ತುಗಳು ಪರಿಸರವನ್ನೇ ಆಹುತಿ ತೆಗೆದುಕೊಳ್ಳ ತೊಡಗಿವೆ. ಅಂದ ಮೇಲೆ ನಾವು ಒಂದು ವಿಷಯವನ್ನು ಅರಿತುಕೊಳ್ಳ ಬೇಕು “ಪರರ ಸೊತ್ತು ಎಂದೂ ತನ್ನ ಆಪತ್ತಿಗಾಗುವದಿಲ್ಲ ಅಂದರೆ ಗಿಡ- ಮರ, ಪ್ರಕೃತಿಯ ಇತರ ಜೀವಿಗಳು ನಮ್ಮ ಸುಖ ಭೋಗಕ್ಕಾಗಿ ಇದ್ದವುಗಳಲ್ಲ. ಅವು ನಮ್ಮೊಂದಿಗೆ ಈ ಪರಿಸರದ ಸಮತೋಲನವನ್ನು ರಕ್ಷಿಸಿಕೊಳ್ಳಲು ಇರಲೇ ಬೇಕಾದ ಸಹಜೀವಿಗಳು. ಹೇಗೆಂದರೆ ಮನುಷ್ಯ ಬದುಕಿರುವುದೇ ಅವನ ಶ್ವಾಸೋಶ್ವಾಸ ಕ್ರಿಯೆಯಿಂದ. ಶ್ವಾಸೋಶ್ವಾಸ ಸಂದರ್ಭದಲ್ಲಿ ನಮ್ಮ ಶರೀರ ಆಮ್ಲಜನಕವನ್ನು ಹೀರಿ, ಇಂಗಾಲಾಮ್ಲವನ್ನು ಹೊರದೂಡುತ್ತದೆ. ಈ ಭೂಮಿಯ ಮೇಲಿನ ೭೦೦ ರಿಂದ ೮೦೦ ಕೋಟಿ ಜನರ ಶರೀರಗಳಿಂದ ಹೊರದೂಡಲ್ಪಟ್ಟ ಈ ಇಂಗಾಲಾಮ್ಲ ಅನಿಲವೇ ಹೌದಾದರೂ ಹಾರಿ ಎಲ್ಲಿಗೂ ಹೋಗಿ ಬಿಡುವುದಿಲ್ಲ. ಈ ಅನಿಲವನ್ನು ಹೀರಿ ಆಮ್ಲಜನಕವನ್ನು ಬಿಡುಗಡೆ ಮಾಡುವ ಕಾರ್ಯವನ್ನು ಮರಗಿಡಗಳು ಮಾಡುತ್ತವೆ. ಪೆಟ್ರೋಲಿಯಮ್ ಅನ್ನು ದಹಿಸಿ ಹೊರಸೂಸುವ ಇಂಗಲಾಮ್ಲವನ್ನೂ ಸಹ ಆ ಮರಗಿಡಗಳೇ ಹೀರುತ್ತವೆ. ಅಂದರೆ ಮನುಷ್ಯ ಹಾಗೂ ಮರಗಿಡಗಳು ಪರಸ್ಪರ ಪೂರಕವಾಗಿರ ಬೇಕಲ್ಲವೇ? ಆದರೆ ನಾವೇನು ಮಾಡುತ್ತಿದ್ದೆವೆಂದರೆ ‘ಹಸಿರನ್ನು ಕಡಿದು ಉಸಿರನ್ನು ಬತ್ತಿಸಿ ಕೊಳ್ಳುತ್ತಿದ್ದೇವೆ. ನಾವಾಗಿಯೇ ಹಸಿರನ್ನು ನಾಶಗೊಳಿಸಿ ಉಸಿರಗೆ ಪಾಶ ಹಾಕಿ ಕೊಳ್ಳುತ್ತಿದ್ದೇವೆ. ಇದೊಂದು ಉದಾಹರಣೆ ಮಾತ್ರ. ಇಂಥಹದೇ ನೂರಾರು ಉದಾಹರಣೆಗಳನ್ನು ಬೇಕಾದರೂ ಹೇಳ ಬಹುದು. ಆದ್ದರಿಂದ ನಮ್ಮ ಬದುಕಿಗೆ ಪೂರಕವಾಗಿರುವ ಜೀವಿ, ವಸ್ತುಗಳನ್ನು ಉಳಿಸುವುದನ್ನು ನಾವೆಲ್ಲರೂ ಕಲಿತುಕೊಳ್ಳ ಬೇಕಾಗಿದೆ. ಅದರೊಂದಿಗೆ ಸೂರ್ಯ, ನೀರು, ಗಾಳಿಯಂತಹ ಇನ್ನೂ ಹಲವಾರು ರೀತಿಯ ಸಂಪನ್ಮೂಲಗಳು ಪರಿಸರದಲ್ಲಿ ನಿಗೂಢವಾಗಿ ಇದ್ದೇ ಇರುತ್ತವೆ. ಅವುಗಳನ್ನು ಸಂಶೋಧಿಸಿ ಮನುಕುಲದ ಒಳಿತಿಗಾಗಿ ಬಳಸಿಕೊಳ್ಳುವ ಚಾಕಚಕ್ಯತೆಯನ್ನು ನಾವು ಮಾಡಬೇಕಾಗಿದೆ. ಪರಿಸರವನ್ನು ಉಳಿಸಿಕೊಳ್ಳಬೇಕಾಗಿದೆ.
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.