ಕಾಲ ಮತ್ತು ವಯಸ್ಸು

ಕಾಲ ಮತ್ತು ವಯಸ್ಸು ಇವೆರಡೂ ನಾವು ಬೇಡಬೇಡವೆಂದರೂ ಆಯಾಚಿತವಾಗಿ ಸರಿದುಹೋಗುವ ಸಂಗತಿಗಳು ಎಂದು ಯಾವತ್ತೂ ಅನಿಸಿದ್ದಿದೆ.

Originally published in kn
Reactions 3
639
BALACHANDRA BHAT
BALACHANDRA BHAT 11 Aug, 2020 | 1 min read

#Love_you_Zindagi...

 

ಬಹುಶಃ ಕಾಲ ಮತ್ತು ವಯಸ್ಸು ಇವೆರಡೂ ನಾವು ಬೇಡಬೇಡವೆಂದರೂ ಆಯಾಚಿತವಾಗಿ ಸರಿದುಹೋಗುವ ಸಂಗತಿಗಳು ಎಂದು ಯಾವತ್ತೂ ಅನಿಸಿದ್ದಿದೆ. ಬೇಕೆಂದಾಗ ಸುಖ ನೀಡದೇ, ಬೇಡವಾದಾಗ ನಕ್ಕು, ಅಪಹಾಸ್ಯ ಮಾಡುತ್ತಿರುವುದೇನೋ ಎಂದು ಭಾಸವಾಗುವ ಈ ಬದುಕನ್ನು ಅನಿವಾರ್ಯದ ಬದುಕೆಂದು ಎಷ್ಟೋ ಸಲ ಅಂದುಕೊಂಡಿದ್ದಿದೆ. ಆದರೆ ವಯಸ್ಸು ಮಾಗಿ ಹಳೆತಾದಂತೆ ಇನ್ನೂ ಇಷ್ಟವಾಗುತ್ತ ಹೋಗುವ ಈ ಬದುಕು ಥೇಟ್ ಗೋವಾದ ಫೆನ್ನಿಯೇನೋ ಎನಿಸುವುದುಂಟು. 

 

ಎಷ್ಟು ಕಠೋರ ಶಿಕ್ಷಕ ಈ ಬದುಕು!! ನಮಗೆ ಬೇಕಿರಲಿ, ಬೇಕಾಗದಿರಲಿ, ತಾನು ಹೇಳುವ ಪಾಠವನ್ನು ಹೇಳಿಯೇ ಸಿದ್ಧ ಈ ಶುಂಠ. ಪರೀಕ್ಷೆ ತೆಗೆದುಕೊಂಡು ಪರಿಣಾಮ ಹೇಳುವ ನಮ್ಮ ವಿದ್ಯಾಭ್ಯಾಸ ಪದ್ಧತಿಯನ್ನು ಲೇವಡಿ ಮಾಡಿ ಮೊದಲು ಪರೀಕ್ಷಿಸಿ ಆಮೇಲೆ ಪಾಠ ಕಲಿಸುವ ಬದುಕಿನ ಸೋಜಿಗಕ್ಕೆ ಎಣೆಯಿಲ್ಲವೆಂದು ಎಷ್ಟು ಬಾರಿ ನನಗೆ ನಾನೇ ಹೇಳಿಕೊಳ್ಳಲಿಲ್ಲ. ಯಾವುದಕ್ಕೂ ಆತುಕೊಳ್ಳದೇ ಸಮಯದ ಜೊತೆ ದೋಸ್ತಿ ಮಾಡಿಕೊಂಡು ಅದು ತೋರಿಸಿದ ದಾರಿಯಲ್ಲಿ ವಿಧೇಯ ವಿದ್ಯಾರ್ಥಿಯಂತೆ ನಡೆದು ತನಗೊಂದು ಅರ್ಥ ಕಲ್ಪಿಸಿಕೊಳ್ಳುವ ಬದುಕಿನ ಚಾಲಾಕಿತನಕ್ಕೆ ಎಷ್ಟೋ ಬಾರಿ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದೇನೆ. ಏನೆಲ್ಲಾ ಕಲಿಸುವ ಹುಚ್ಚು ಈ ಬದುಕಿಗೆ. ಎಲ್ಲವನ್ನೂ ಕಲಿಯಲಾಗದ ಅಸಹಾಯಕತೆಯ ನಡುವೆಯೂ ಪ್ರೀತಿಯಿಂದ ಅದು ಹೇಳಿಕೊಟ್ಟ ಪಾಠವನ್ನು ಎಷ್ಟೋ ಆಸಕ್ತಿಯಿಂದ ಕೇಳಿದ್ದೇನೆ, ಅಳವಡಿಸಿಕೊಂಡಿದ್ದೇನೆ.

 

ವಯಸ್ಸಿನ ಈ ಮಗ್ಗುಲಿನಲ್ಲಿ ಎಲ್ಲೋ ಒಂದಿಷ್ಟು ಪ್ರಬುದ್ಧತೆ, ಒಂದಿಷ್ಟು ಮಾನವೀಯತೆ, ಒಂದಿಷ್ಟು ಕರುಣೆಯನ್ನು ಅಳವಡಿಸಿಕೊಳ್ಳಲು ಹೇಳುತ್ತ ಮೊಗೆದರೂ ಮುಗಿಯದಷ್ಟು ಪ್ರೀತಿ, ವಿಶ್ವಾಸಗಳನ್ನು ಕೊಟ್ಟಿದೆ ಈ ಬದುಕು. 

 

ಈಗ ಮನೆಯ ಮುಂದೆ ಕೈಗಾಡಿಯಲ್ಲಿ ತರಕಾರೀ, ಹಣ್ಣುಗಳ ಮಾರುವ ಮೀನಾ ತಾಯಿಯ ಬಳಿ, ಹತ್ತು ರೂಪಾಯಿ ಕಡಿಮೆ ಮಾಡಲು ಇಪ್ಪತ್ತು ನಿಮಿಷ ವಾದ ಮಾಡುತ್ತ ನಿಲ್ಲುವುದಿಲ್ಲ. ಬದಲಾಗಿ ಆರು ತಿಂಗಳ ಹಿಂದೆ ಹುಟ್ಟಿದ ಅವಳ ಮೊಮ್ಮಗಳ ಬಗೆಗೆ ಒಂದೈದು ನಿಮಿಷ ಮಾತನಾಡುತ್ತೇನೆ. ಅವಳ ಮಗ ಒಳ್ಳೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ ವಿಷಯವನ್ನು ನನ್ನ ಬಳಿ ಆಪ್ತಳಾಗಿ ಹಂಚಿಕೊಂಡಾಗ ಎಲ್ಲೋ ಒಳಗೊಳಗೇ ಅರ್ಥವಿಲ್ಲದ ಖುಷಿಯ ಅನುಭವಿಸುತ್ತೇನೆ. ಯಾರದೋ ತಲೆ ಹೊಡೆದು ಹಣಮಾಡುವ ನೀಚರಿಗಿಂತ, ನಿತ್ಯವೂ ತಳ್ಳಿಗಾಡಿಯಲ್ಲಿ ತರಕಾರಿ ಮತ್ತು ಹಣ್ಣುಗಳ ತಂದು, ಮಾರಾಟ ಮಾಡಿ ಬೆವರು ಸುರಿಸುವ ಅವಳ ಬಗ್ಗೆ ಎಲ್ಲೋ ಮನಸ್ಸಿನಲ್ಲಿ ಗೌರವ ಮೂಡುತ್ತದೆ. ಸೊಸೈಟಿಯಲ್ಲಿ ಕೆಲಸ ಮಾಡಲು ಬರುವ ಊರ್ಮಿ ಮತ್ತು ಪಾರಿ ಇವರ ಮೇಕಪ್ ನೋಡಿ ನಗು ಬರುವುದಿಲ್ಲ. ಎಲ್ಲೋ ಆ ವಿಕಾರವಾದ ಮೂರಿಂಚು ದಪ್ಪ ಮೇಕಪ್ಪಿನಲ್ಲೂ ಬದುಕಿನ ಬಣ್ಣಗಳು ಗೋಚರಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. 

 

ಕಂಪನಿಯಲ್ಲೂ ಅಷ್ಟೇ, ಕರ್ಮಚಾರಿಗಳ ರಜೆ ತೆಗೆದುಕೊಳ್ಳುವ ಸುಳ್ಳುನೆಪಗಳಿಗೆ ಮೊದಲಿನಂತೆ ಇರಿಟೇಟ್ ಆಗುವುದಿಲ್ಲ. ಎಲ್ಲೋ ಒಬ್ಬಳು ಅಮ್ಮ ಮನೆಯಲ್ಲಿ ಖಾಯಿಲೆಯಿಂದ ನರಳುತ್ತಿರಬಹುದು, ಬಹಳ ದಿನಗಳ ನಂತರ ಎಲ್ಲೋ ದೂರದಲ್ಲಿರುವ ಅಕ್ಕತಂಗಿ ಮನೆಗೆ ಬಂದಿರಬಹುದು, ಮಕ್ಕಳ ಹುಟ್ಟುಹಬ್ಬವಿರಬಹುದು ಎಂದೆಲ್ಲ ಯೋಚಿಸಿ ಸುಮ್ಮನಾಗಿಬಿಡುತ್ತೇನೆ. ಅವರು ಊಟಕ್ಕೆ ಕರೆದಾಗಲೆಲ್ಲ ಅವರ ಜೊತೆ ಊಟ ಮಾಡಿದರೆ ಎಲ್ಲಿ ಸಲಿಗೆ ತೆಗೆದುಕೊಂಡು ಬಿಡುವರೋ ಎಂದು ನಯವಾಗಿ ಅಲ್ಲಗಳೆಯುತ್ತಿದ್ದವ ಈಗ ಪ್ರೀತಿಯಿಂದ ಅವರ ಡಬ್ಬದಲ್ಲಿ ಮುಂದಾಗಿ ಹೋಗಿ ಕೈಹಾಕಿ ಒಣಗಿದ ಭಾಕರಿಯ ಚೂರುಗಳ ಶೇಂಗಾ ಚಟ್ನಿಯ ಜೊತೆ ಮೆಲ್ಲುತ್ತ ಬಾಯಿ ಸುಡುತ್ತಿದ್ದರೂ "ಖೂಪ್ ಛಾನ್" (ಬಹಳ ಚೆನ್ನಾಗಿದೆ) ಎಂದು ಪ್ರೀತಿಯಿಂದ ನಗುತ್ತ ಹೇಳುತ್ತೇನೆ. ಈಗೀಗ ಮುಕ್ತವಾಗಿ ನನ್ನ ಬಳಿ ತಮ್ಮ ಬದುಕಿನ ನೋವು ನಲಿವುಗಳನ್ನು ಹಂಚಿಕೊಂಡು ತಮ್ಮವರಲ್ಲಿ ಒಬ್ಬನೆಂದು ತಿಳಿದು ನಾನು ಹೇಳದೆಲೇ ರಜಾ ದಿವಸ ಕೆಲಸ ಮಾಡಲೇ ಎಂದು ಕೇಳುತ್ತಾರೆ. ಮೊದಲೆಲ್ಲ ನನ್ನನ್ನು ಸರ್ ಎಂದು ಅಂಜುತ್ತಾ ಒಪ್ಪಿಕೊಳ್ಳುತ್ತಿದ್ದ ಅವರೆಲ್ಲ ಈಗ ಹಿರಿಯಣ್ಣನೆಂದು ತಿಳಿದು ಪ್ರೀತಿಸುತ್ತಿದ್ದರೆ, ಎಲ್ಲೋ ಈ ಪಾಠವ ಕಲಿಸಿದ ಬದುಕಿನ ಘಳಿಗೆಗೊಂದು ಥ್ಯಾಂಕ್ಸ್ ಹೇಳಿಬಿಡುತ್ತೇನೆ...


 


ಮನೆಯಲ್ಲೂ ಅಷ್ಟೇ. ಮಗ ಓದುತ್ತಿಲ್ಲವೆಂದು ಆತಂಕ ಪಟ್ಟುಕೊಳ್ಳುವುದಿಲ್ಲ. ಅವನ ಜವಾಬ್ದಾರಿಯ ಅರಿವು ಅವನಿಗಿದೆ ಎಂಬ ಸಮಾಧಾನದಿಂದ ಅವನನ್ನು ಪ್ರೀತಿಯಿಂದ ಪ್ರೋತ್ಸಾಹಿಸುತ್ತೇನೆ. ಯಾರ ಮಾತುಗಳಲ್ಲೂ ಕೊಂಕು ಕಾಣಿಸುವುದೇ ಇಲ್ಲ. ನನ್ನನ್ನು ತಪ್ಪಾಗಿ ಗ್ರಹಿಸುವವರ ಜೊತೆ, ನನ್ನನ್ನೇ ನಾನು ಸಮರ್ಥಿಸಿಕೊಳ್ಳಲು ವಾದಕ್ಕಿಳಿಯುವುದಿಲ್ಲ. ಎಲ್ಲೋ ತಮ್ಮ ಮನಸ್ಥಿತಿಗೆ ಅನುಸಾರವಾಗಿ ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆಂದು ನಿರ್ಲಕ್ಷಿಸಿ ಬಿಡುತ್ತೇನೆ. ಅವಮಾನ ಮಾಡಿದವರ ಬಗ್ಗೆ ಮುಂಚಿನಂತೆ ಬೆಂಕಿ ಕಾರುವುದಿಲ್ಲ. ಅಲಕ್ಷ್ಯ ಮಾಡುವುದೇ ಸರಿಯೆಂದುಕೊಂಡು ಮೌನದ ಮೊರೆ ಹೋಗಿಬಿಡುತ್ತೇನೆ. ಎಷ್ಟೇ ಕಡೆಗಣಿಸಬೇಕೆಂದರೂ ಕೆಲ ಸನ್ನಿವೇಶಗಳಲ್ಲಿ ಈ ಭಾವುಕ ಮನಸ್ಸು ಎಲ್ಲೋ ನೋವನುಭವಿಸಿ ಮಾತುಗಳ ಕಳೆದುಕೊಂಡು ಕೆಲಕ್ಷಣ ಕುಳಿತುಬಿಡುತ್ತದೆ. 

 

ಈ ಭಾವುಕತೆಯನ್ನು ಮಾತ್ರ ಬಿಡಲಾಗುತ್ತಿಲ್ಲ. ಖುಷಿಯಾದಾಗ ಕುಪ್ಪಳಿಸಿ, ನೋವಾದಾಗ ಕಣ್ಣಂಚ ತುಸು ಒದ್ದೆ ಮಾಡಿಕೊಂಡು, ಇತರರಿಗೆ ಒಳ್ಳೆಯದಾದರೆ ನನಗೇ ನಿಧಿ ಸಿಕ್ಕಿದೆಯೆಂದು ಹರುಷಗೊಂಡು, ಅವರ ದುಃಖವನ್ನು ಅರಿತು ಅವರ ಜೊತೆ ಸಾಂತ್ವನದ ಮಾತಾಡಿ ಮನಸ್ಸು ಭಾರವಾಗುವ ಪ್ರಕ್ರಿಯೆ ಮಾತ್ರ ಯಾವತ್ತಿನಂತೆ ಈಗಲೂ ಹಿತವೆನಿಸುತ್ತದೆ. ನಿನ್ನೆಗಳ ಮರೆತು, ನಾಳೆಗಳ ಗೊಡವೆಯಿರದೇ ಇಂದಿನ ಈ ಕ್ಷಣವ ಜೀವಂತವಾಗಿ ಬದುಕುವ ಈ ಬದುಕು ಯಾಕೋ ಇನ್ನಷ್ಟು ಆಪ್ತವಾಗಿ ಬಿಡುತ್ತದೆ. ಯಾವತ್ತಿನಂತೆ ಈಗಲೂ ಅಂದುಕೊಳ್ಳುತ್ತೇನೆ 

 

"I love you zindagi..😊😊

 

#ಬಾಲಚಂದ್ರ ಭಟ್

 

3 likes

Published By

BALACHANDRA BHAT

balachandrabhat

Comments

Appreciate the author by telling what you feel about the post 💓

  • ಕಿರಣ್ ಮಲ್ನಾಡ್ · 4 years ago last edited 4 years ago

    ಸೂಪರ್ ಸರ್... ವಾಸ್ತವತೆ ಅಂದರೆ ಇದೆ..

  • Ajit Harishi · 4 years ago last edited 4 years ago

    ಚೆನ್ನಾಗಿದೆ ಸರ್

  • Raksha Ramesh · 4 years ago last edited 4 years ago

    ಬಹಳ ಚೆನ್ನಾಗಿ ಬರೆದಿದ್ದೀರಿ

Please Login or Create a free account to comment.