‘ಕರೊನಾ ಮುಂಜಾಗ್ರತೆ ಇರಲಿ; ಆದರೆ ಭಯ ಬೇಡ!

ಕರೋನಾದ ಬಗ್ಗೆ ಜನ ಅನಗತ್ಯವಾಗಿ ಭಯ ಬೀಳುತಿದ್ದಾರೆ. ಅಗತ್ಯ ಮುಂಜಾಗ್ರತೆ, ಸಾಧ್ಯವಾದಷ್ಟು ಪ್ರಕ್ರತಿ ಅನುಸಾರವಾಗಿ ಬದುಕಿದರೆ, ಮಾಸ್ಕ್ ಉಪಯೋಗಿಸಿದರೆ, ಕರೋನಾದ ಬಗ್ಗೆ ಹೆಚ್ಚು ಭಯ ಬೀಳ ಬೇಕಾಗಿಲ್ಲ.

Originally published in kn
Reactions 2
565
Argodu Suresh Shenoy
Argodu Suresh Shenoy 19 Aug, 2020 | 1 min read


 ಸಮದೋಷಃ, ಸಮಾಗ್ನಿಶ್ಚ, ಸಮಧಾತು ಮಲಕ್ರಿಯಃ 

ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ ||

ಉಪವೇದವಾಗಿರುವ ಆಯುರ್ವೇದದ ಪ್ರಕಾರ ಮನುಷ್ಯನು ಸ್ವಸ್ಥನಾಗಿರುವ ಲಕ್ಷಣವೆಂದರೆ ಇಂದ್ರಿಯ, ಆತ್ಮ, ಮನಸ್ಸು ಹಾಗೂ ದೋಷ, ಅಗ್ನಿ ಮತ್ತು ಧಾತು ಈ ಎಲ್ಲವೂ ಸಮ ಪ್ರಮಾಣದಲ್ಲಿರಬೇಕು. ಅದುವೇ ಆರೋಗ್ಯ. ಅದರೊಂದಿಗೆ ’ಧರ್ಮಾರ್ಥ ಕಾಮಮೋಕ್ಷಾಮಾರೋಗ್ಯಂ ಮೂಲಮುತ್ತಮಮ್” ಎಂದು ಚರಕಾಚಾರ್ಯರು ’ಚರಕ ಸಂಹಿತೆ’ ಗ್ರಂಥದ ಪ್ರಥಮ ಅಧ್ಯಾಯದಲ್ಲಿಯೇ ಹೇಳಿದ್ದಾರೆ. ಅಂದರೆ ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಕಾಮ, ಆರ್ಥ ಮೋಕ್ಷ ಎಲ್ಲವುದಕ್ಕೂ ಆರೋಗ್ಯವೇ ಮೂಲ ಕಾರಣವಂತೆ. ಈ ಲಕ್ಷಣಗಳಿಂದ ನೋಡಹೊರಟರೆ ಇಂದು ಜಗತ್ತಿನ ಪ್ರತಿಯೊಬ್ಬರೂ ಅನಾರೋಗ್ಯಕ್ಕೆ ಸಿಲುಕಿದ್ದಾರೆ. ಅದಕ್ಕೆ ಕಾರಣ ‘ಕರೊನಾ ವೈರಾಣುವಿನಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸೋಂಕು ಕಾಯಿಲೆಯಾದ ಕೋವಿಡ್-೧೯ ಇದರ ಭಯ ಎಲ್ಲರ ಮನದೊಳಗೂ ಹೊಕ್ಕು ತನ್ನ ಪ್ರತಾಪವನ್ನು ಪ್ರದರ್ಶಿಸುತ್ತಿದೆ.

ಜಗತ್ತಿನ ಅರ್ಧಕ್ಕಿಂತ ಹೆಚ್ಚಿನ ದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಅಮೆರಿಕ, ಚೀನಾ, ಇಟಲಿ, ಫ್ರಾನ್ಸ್, ಇರಾನ್, ಸ್ಪೇನ್, ಕೆನಡಾ, ಜರ್ಮನಿ, ಬೆಲ್ಜಿಯಂ ಇತ್ಯಾದಿ ತುಂಬಾ ಮುಂದುವರಿದ, ಆಧುನಿಕ ಚಿಕಿತ್ಸಾ ಸೌಲಭ್ಯ, ತಂತ್ರಜ್ಞಾನಗಳಿರುವ ದೇಶಗಳಲ್ಲಿಯೇ ಕರೊನಾ ವೈರಾಣಿವಿನ ಕಬಂಧಬಾಹುಗಳಿಗೆ ಸಿಲುಕಿ ತರಗಲೆಗಳಂತೆ ಜನರು ಸಾಯುವ ವೇಗವನ್ನು ನೋಡಿದರೆ ಖಂಡಿತವಾಗಿಯೂ ಇದೊಂದು ತುಂಬಾ ಗಂಡಾಂತರಕಾರಿಯಾದ, ಜೀವಘಾತಕ ವೈರಾಣು ಎನ್ನುವುದು ಖಾತ್ರಿಯಾಗುತ್ತದೆ. ಇದರೊಂದಿಗೆ ಕರೋನಾ ವೈರಾಣುವಿನಿಂದ ಹರಡುವ ಕೋವಿಡ್ -೧೯ ಕಾಯಿಲೆಗೆ ಈ ತನಕ ಎಲ್ಲಿಯೂ ಸೂಕ್ತ ಔಷಧ ಅಥವಾ ಬಾರದಂತೆ ತಡೆಯುವ ಲಸಿಕೆಯು ಸಹ ಲಭ್ಯವಿಲ್ಲದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಆದರೆ ಕರೋನಾ ಕಾಯಿಲೆಯ ಬಗ್ಗೆ ಅತಿಶಯವಾಗಿ ಭಯ, ಆತಂಕವನ್ನು ಬೆಳೆಸಿಕೊಂಡು ಅನಾರೋಗ್ಯಕ್ಕೆ ಬೀಳಬೇಕೆ? ನಮ್ಮ ಅಸಹಜ ಜೀವನಶೈಲಿಯಿಂದ ನಾವೇ ಆಮಂತ್ರಿಸಿ ಕೊಂಡಿರುವ ರಕ್ತದೊತ್ತಡ, ಸಿಹಿಮೂತ್ರ ರೋಗ, ಬೊಜ್ಜು, ಹೃದಯ ಕಾಯಿಲೆ ಇದ್ದವರಿಗೆ ಈ ಕರೋನಾತಂಕದಿಂದ ಆ ಕಾಯಿಲೆಗಳ ತೀವ್ರತೆ ಮತ್ತಷ್ಟು ಅಧಿಕವಾಗ ಬಹುದು. ಅಲ್ಲದೇ ದೇಶದಲ್ಲಿ ಲಾಕ್‌ಡೌನ್ ಅವಧಿ ಮೇ ೩ರ ತನಕ ಮುಂದುವರಿದಿರುವುದರಿಂದ ವಯೋವೃದ್ಧರಿಗೆ, ಮೊದಲೇ ಕಾಯಿಲೆಯಿಂದ ನರಳುವವರಿಗೆ, ದುರ್ಬಲ ಮನಸ್ಥಿತಿ ಉಳ್ಳವರಿಗೆ ಮತ್ತೊಂದು ರೀತಿಯ ಆಘಾತಕ್ಕೆ ಕಾರಣವಾಗಬಹುದು. ಆದ್ದರಿಂದ ಪ್ರಪ್ರಥಮವಾಗಿ ನಾವೆಲ್ಲರೂ ಕರೋನಾದ ಕುರಿತು ಭಯ, ಆತಂಕಕ್ಕೆ ಬೀಳುವುದನ್ನು ಬಿಡಬೇಕು. ಅದು ನಮ್ಮ ಮನೆಯೊಳಗೆ ಅಡಿ ಇಡದಂತೆ ಮುಂಜಾಗ್ರತೆ ವಹಿಸಿ ಬೇಕು.

ಉಪನಿಷತ್ತಿನಲ್ಲಿ “ಋತು ಸಂಧಿಷು ರೋಗ ವ್ಯಾಧಯ ಜಾಯಂತೇ ಎಂದು ಹೇಳಿದೆ. ಅಂದರೆ ಋತು ಸಂಧಿಗಳಲ್ಲಿ ಸಂಸರ್ಗೀಕ ಅಥವಾ ಸಾಂಕ್ರಾಮಿಕ ಕಾಯಿಲೆಗಳು ವೇಗವಾಗಿ ಹರಡಬಲ್ಲವಂತೆ. ಹಾಗಾದರೆ ಋತುಸಂಧಿ ಎಂದರೇನು? ಒಟ್ಟು ಒಂದು ಹಿಂದೂ ಸಂವತ್ಸರದಲ್ಲಿ (ಚಾಂದ್ರಮಾನ ವರ್ಷದಲ್ಲಿ) ಆರು ಋತುಗಳಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಒಂದು ಋತುಕಾಲ ಗತಿಸಿ ಮತ್ತೊಂದು ಋತು ಆರಂಭವಾಗುವ ಮಧ್ಯದ (ಗತಿಸಿದ ಋತುವಿನ ಏಳು ದಿವಸ ಮತ್ತು ಆಗಮಿಸುವ ಋತುವಿನ ಏಳು ದಿವಸ ಒಟ್ಟೂ) ಹದಿನಾಲ್ಕು ದಿವಸಗಳಿಗೆ ಋತುಸಂಧಿ ಎನ್ನುತ್ತಾರೆ. ಆಗ ಕಾಲಕ್ಕನುಗುಣವಾಗಿ ಪ್ರಕೃತಿಯಲ್ಲಿ ಬದಲಾವಣೆಗಳು ಘಟಿಸುವುದು ಸಹಜ. ಆ ಕಾರಣದಿಂದ ಜನ, ಜೀವಿಗಳಿಗೆ ಸಾಂಕ್ರಾಮಿಕ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಆ ಸಾಂಕ್ರಾಮಿಕ ಕಾಯಿಲೆಗಳನ್ನು ಪ್ರತಿರೋಧಿಸುವ ಸಲುವಾಗಿಯೇ ಕಾಲಕ್ಕನುಗುಣವಾಗಿ ಆಹಾರವನ್ನು ಬದಲಾಯಿಸ ಬೇಕೆನ್ನುವ ನಿಯಮವನ್ನು ನಮ್ಮ ಪೂರ್ವಜರು ಮಾಡಿದ್ದಾರೆ. ನಾವು ಸೇವಿಸ ಬೇಕಾದ ವಸ್ತುಗಳು ಪ್ರಕೃತಿಯಲ್ಲಿಯೂ ಆ ಕಾಲದಲ್ಲಿ ಹೇರಳವಾಗಿ ದೊರಕುತ್ತಿರುತ್ತವೆ.

 ಮಕರ ಸಂಕ್ರಾಂತಿ ಋತುಸಂಧಿಯೊಂದಿಗೆ ಆಯನ ಸಂಧಿ ಸಹ ಆಗಿದೆ. ಇನ್ನು ಹಿಂದೂ ಹೊಸವರ್ಷದ ಯುಗಾದಿಯಂತೂ ಋತುಸಂಧಿಯೊಂದಿಗೆ ವರ್ಷಸಂಧಿಯೂ ಆಗಿದೆ. ಈ ವೇಳೆಯಲ್ಲಿ ಪ್ರಕೃತಿಯಲ್ಲಿ ಕಣ್ಣಿಗೆ ಕಾಣುವಂತೆ ಹಲವಾರು ಬದಲಾವಣೆಗಳು ಘಟಿಸುತ್ತವೆ. ವಾತಾವರಣದಲ್ಲಿ ತಂಪು ಕಡಿಮೆಯಾಗಿ ತಾಪ ಹೆಚ್ಚಾಗ ತೊಡಗುತ್ತದೆ. ನದಿಗಳಲ್ಲಿ ನೀರಿನ ಹರಿವು ಮಂದವಾಗುತ್ತದೆ. ಆತ್ತ ಚಳಿಯೂ ಇಲ್ಲ; ಇತ್ತ ಶೆಖೆಯೂ ಇಲ್ಲ. ಇಂತಹ ವಾತಾವರಣ ವೈರಾಣುಗಳ ಬೆಳವಣಿಗೆಗೆ ಹೇಳಿ ಮಾಡಿಸಿದಂತಿರುತ್ತದೆ, ಈ ವೇಳೆಯಲ್ಲಿ ವೈರಾಣುಗಳು ಕ್ಷಣಮಾತ್ರದೊಳಗೆ ಎರಡು, ನಾಲ್ಕು ಪಟ್ಟು ಹೆಚ್ಚಾಗಿ ಬಿಡುತ್ತವೆ. ಅದರೊಂದಿಗೆ ಈ ಕಾಲದಲ್ಲಿ ಮನುಷ್ಯರೂ ಸೇರಿ ಎಲ್ಲಾ ಜೀವಿಗಳ ರೋಗನಿರೋಧಕ ಶಕ್ತಿಯೂ ಸಹ ಕಡಿಮೆಯಾಗಿರುತ್ತದೆ. ಅಂದಮೇಲೆ ವೈರಾಣುಗಳ ಅಟ್ಟಹಾಸಗೈಯುವುದರಲ್ಲಿ ಆಶ್ಚರ್ಯವಿದೆಯೇ? ಆ ಕಾರಣದಿಂದ ಪ್ರತಿವರ್ಷವೂ ಈ ವೇಳೆಯಲ್ಲಿ ಒಂದಲ್ಲ ಒಂದು ರೀತಿಯ ಸಾಂಕ್ರಾಮಿಕ ಕಾಯಲೆಗಳು ವಿಜೃಂಭಿಸುತ್ತಲೆ ಇರುತ್ತವೆ.

ಈ ಮಾಹಿತಿ ನಮ್ಮ ಪೂರ್ವಜರಿಗೆ ಮೊದಲೇ ಗೊತ್ತಿತ್ತು ಆ ಕಾರಣದಿಂದ ಕಾಲಕ್ಕೆ ಸರಿಯಾದ ಆಹಾರ ವಸ್ತುಗಳನ್ನು ಸೇವಿಸ ಬೇಕೆಂದು ಋತುಸಂಧಿಯಲ್ಲಿಯೇ ಹಲವಾರು ಹಬ್ಬಗಳನ್ನು ಆಚರಿಸಲು ಆರಂಭಿಸಿದರು. ಮಕರ ಸಂಕ್ರಮಣಕ್ಕೆ ಹಾಗೂ ಯುಗಾದಿಗೆ ಮಾಡುವ ಅಡುಗೆಯನ್ನು ಗಮನಿಸಿದರೆ ಇದರ ಮಹತ್ವ ಅರಿವಾಗುತ್ತದೆ. ಹೆಸರು ಈ ಕಾಲದಲ್ಲಿ ಶರೀರಕ್ಕೆ ತುಂಬಾ ಹಿತಕಾರಿ. ಅದಕ್ಕೆ ಬೆಲ್ಲ ಹಾಕಿ ಕಿಚಿಡಿ(ಸಿಹಿ ಪೊಂಗಲ್) ಮಾಡಿರಿ ಅಥವಾ ಕಾಳುಮೆಣಸು, ಶುಂಠಿ ಹಾಕಿ ಖಾರದ ಪೊಂಗಲ್ ಮಾಡಿ. ಎರಡರಿಂದಲೂ ಶರೀರದ ತ್ರಿದೋಷ ನಾಶವಾಗುತ್ತದೆ. ಸಂಕ್ರಮಣದ ವೇಳೆಯಲ್ಲಿ ಪರಸ್ಪರರು ಹಂಚಿಕೊಳ್ಳುವ ಎಳ್ಳಿ-ಬೆಲ್ಲ, ಯುಗಾದಿಯ ವೇಳೆಯಲ್ಲಿ ತಿನ್ನುವ ಬೇವು-ಬೆಲ್ಲಗಳಿಂದಲೂ ಆರೋಗ್ಯ ರಕ್ಷಣೆಗೆ ತುಂಬಾ ಅನುಕೂಲವಾಗುತ್ತದೆ. ಅಮೃತಬಳ್ಳಿಯ ಕಷಾಯ, ಹಾಲಿಗೆ ಅರಸಿಣದ ಪುಡಿ ಅಥವಾ ಶುಂಠಿ ರಸಕ್ಕೆ ಜೇನು ತುಪ್ಪವನ್ನು ಸೇರಿಸಿ ಸೇವಿಸುವುದರಿಂದಲೂ, ನೆಲ್ಲಿ, ಒಂದೆಲಗ, ಮೆಂತೆ, ಕರಿಮೆಣಸು, ಅಶ್ವಗಂಧಿ ಇತ್ಯಾದಿಗಳನ್ನು ಬಳಸುವುದರಿಂದಲೂ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಲು ಸಾಧ್ಯವಿದೆ. ಮನೆಯ ಮುಂದೆ ತುಳಸಿ ವೃಂದಾವನ, ಸುಗಂಧ ಭರಿತ ಹೂ ಗಿಡಗಳನ್ನು ಬೆಳೆಸುವುದರಿಂದಲೂ ಸೂಕ್ಷ್ಮ ಕ್ರೀಮಿಗಳನ್ನು ನಾಶಪಡಿಸಲು ಸಾಧ್ಯವಿದೆ. ಭಾರತೀಯರು ತಮ್ಮ ಅಡುಗೆಯಲ್ಲಿ ಬಳಸುವ ಮಸಾಲೆ ಪದಾರ್ಥಗಳು ಸಹ ಸಾಂಕ್ರಾಮಿಕ ಕಾಯಿಲೆಗಳನ್ನು ನಿಯಂತ್ರಿಸುವುದರಲ್ಲಿ ಸಹಕಾರಿಯಾಗಿವೆ.

 ಅದರೊಂದಿಗೆ ಯೋಗಶಾಸ್ತ್ರವು ಪ್ರತಿಯೊಬ್ಬ ಮನುಷ್ಯನನ್ನೂ ಸದೃಢಗೊಳಿಸುವ ಪರುಷಮಣಿ ಎಂದರೂ ತಪ್ಪಾಗಲಾರದು. ಯೊಗದ ಎಂಟು ಹಂತಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿಗಳಲ್ಲಿ ನಾವೆಲ್ಲ ಆಸನ ಮತ್ತು ಪ್ರಾಣಾಯಾಮಗಳೆಂಬ ಎರಡೇ ಎರಡು ಹಂತಗಳನ್ನು ನಿಯಮಿತವಾಗಿ ಅಭ್ಯಸಿಸುವುದರಿಂದಲೇ ಬಹಳಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಕೇವಲ ನಮ್ಮ ನಮ್ಮ ಶರೀರದ ರೋಗನಿರೊಧಕ ಶಕ್ತಿಯನ್ನು ವೃದ್ಧಿ ಪಡಿಸಿಕೊಳ್ಳುವುದಷ್ಟೇ ಅಲ್ಲ ಇತರ ಹಲವಾರು ಕಾಯಿಲೆಗಳನ್ನು ಹೆಡೆಮುಡಿ ಕಟ್ಟಿ ಒಗೆಯಲು ಸಹ ಯೋಗಾಸನ, ಪ್ರಾಣಾಯಾಮಗಳಿಂದ ಸಾಧ್ಯವಿದೆ ಅನ್ನುವುದನ್ನು ಬಹುಜನರು ಸ್ವತಃ ಅನುಭವಿಸಿದ್ದಾರೆ. ಕರೋನಾತಂಕದಿಂದ ಭಯಗ್ರಸ್ಥರಾಗುವ ಮೊದಲು ನಾವು ಈ ಎಲ್ಲಾ ವಿಷಯಗಳನ್ನು ಮನನ ಮಾಡಿಕೊಳ್ಳುವುದು ಒಳಿತು.

ಹಾಗೆ ನೋಡ ಹೋದರೆ ಚೀನಾ, ಇಟಲಿ, ಫ್ರಾನ್ಸ್, ಅಮೆರಿಕಕ್ಕಿಂತ ಭಾರತದಲ್ಲಿ ಕರೋನಾ ವೈರಾಣುವಿನ ಹಾವಳಿ ಕಡಿಮೆ ಎಂದೇ ಹೇಳಬೇಕು. ೪೨,೫೪೯,೦೦೦ ಚದರ ಕಿ.ಮೀ. ವಿಸ್ತೀರ್ಣದ ಅಮೆರಿಕದಲ್ಲಿ ಪ್ರತಿಯೊಂದು ಚದರ ಕಿಲೋಮೀಟರನಲ್ಲಿ ೨೬ ಜನ ವಾಸಿಸುತ್ತಿದ್ದಾರೆ. ಅಮೇರಿಕನ್ನರ ತಲಾದಾಯ ೨೮೪೨೮ ಡಾಲರ್ ಇದೆ. ಅಲ್ಲಿರುವ ಎಲ್ಲರೂ ವಿದ್ಯಾವಂತರು, ಸ್ಥಿತಿವಂತರು. ಇನ್ನು ಮೂರು ಲಕ್ಷ ಚಿಲ್ಲರೆ ಕೀಲೊಮೀಟರ್ ವಿಸ್ತಿರ್ಣದ ಇಟಲಿಯಲ್ಲಿ ಚದರ ಕಿಲೋಮೀಟರನಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಇನ್ನೂರರಷ್ಟು ಜನ ವಾಸಿಸುತ್ತಾರೆ. ಇಟಲಿಯ ಜನಸಂಖ್ಯೆಯೂ ಆರುವರೆ ಕೋಟಿಯ ಆಸುಪಾಸಿನಲ್ಲಿದೆ. ಇಟಲಿಯನ್ನರ ತಲಾದಾಯ ೪೦,೪೭೦ ಡಾಲರ್! ಅಮೆರಿಕದಲ್ಲಿ ಇಷ್ಟೊಂದು ಆಧುನಿಕ ಚಿಕಿತ್ಸಾ ಸೌಲಭ್ಯಗಳು ಇದ್ದರೂ ಕೋವಿಡ್ -೧೯ ಕಾಯಿಲೆಯಿಂದ ಈ ತನಕ ಇಪ್ಪತ್ತು ಸಾವಿರಕ್ಕಿಂತ ಅಧಿಕ ಜನ ಮರಣ ಹೊಂದಿದ್ದರೆ ಇಟಲಿಯಲ್ಲಿ ಅದಕ್ಕಿಂತ ಕ್ವಚಿತ್ ಕಡಿಮೆ ಸಂಖ್ಯೆಯಲ್ಲಿ ಅಂದರೂ ಆತಂಕದ ಪ್ರಮಾಣದಲ್ಲಿಯೇ ಜನ ಮರಣ ಹೊಂದುತ್ತಿದ್ದಾರೆ. ವಿಶ್ವಾದ್ಯಂತ್ಯ ಇಪ್ಪತ್ತು ಲಕ್ಷದಷ್ಟು ಕೊರೋನಾ ಸೋಂಕಿತರಿದ್ದರೆ ಮರಣ ಹೊಂದಿದವರ ಸಂಖ್ಯೆ ಸುಮಾರು ೧,೨೦,೦೦೦. (ಮರಣ ಪ್ರಮಾಣ ಶೇ. ೬) 

ಆದರೆ ೩,೨೮೭,೨೬೩ ಚದರ ಕಿ.ಮೀ. ವಿಸ್ತೀರ್ಣದ ಅಂದಾಜು ೧೩೦ ಕೋಟಿಗಿಂತ ಅಧಿಕ ಜನಸಂಖ್ಯೆ ಇರುವ ನಮ್ಮ ಭಾರತದಲ್ಲಿ ಚದರ ಕಿಲೋಮೀಟರಿನಲ್ಲಿ ನಾಲ್ಕು ನೂರಕ್ಕಿಂತ ಅಧಿಕ ಜನ ವಾಸಿಸುತ್ತಿದ್ದಾರೆ.(ಚದರ ಕಿ.ಮೀ.ಯಲ್ಲಿ ಅಮೆರಿಕದ ಹದಿನೈದು ಪಟ್ಟು, ಇಟಲಿಯ ಎರಡು ಪಟ್ಟು) ಮುಂಬೈ, ಕಲ್ಕತ್ತಾ, ಚೆನ್ನೈ ಇತ್ಯಾದಿ ಮಹಾನಗರಗಳಲ್ಲಿ ಇದರ ಎರಡು ಪಟ್ಟು ಜನ ವಾಸಿಸುತ್ತಾರೆ. ಭಾರತೀಯರ ತಲಾದಾಯ ಕೇವಲ ೨೩೩೮ ಡಾಲರ್ ಮಾತ್ರ.. ಭಾರತದಲ್ಲಿ ಶಾಲೆಯ ಮೆಟ್ಟಿಲನ್ನೇ ಹತ್ತದ ನಿರಕ್ಷರಿಗಳು ಸಹ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೀಗಿರುವಾಗ ಇಟಲಿ, ಅಮೆರಿಕಾ, ಚೀನಾ, ಫ್ರಾನ್ಸ್, ಬ್ರಿಟನ್ ಇತ್ಯಾದಿ ರಾಷ್ಟ್ರಗಳಂತೆ ಕರೋನಾ ವೈರಾಣುವಿನಿಂದ ಬರುವ ಕೋವಿಡ್ -೧೯ ಸಾಂಕ್ರಾಮಿಕ ಕಾಯಿಲೆಯ ಉಪಟಳ ಭಾರತದಲ್ಲಿಯೂ ಆ ಪರಿಯಲ್ಲಿ ಸಂಭವಿಸಿದ್ದರೆ ಇಷ್ಟರೊಳಗೆ ಲಕ್ಷಗಟ್ಟಲೆ ಜನ ಮರಣ ಹೊಂದುತ್ತಿರಲಿಲ್ಲವೇ? ಈ ತನಕ ಭಾರತದಲ್ಲಿ ಕರೋನಾ ಸೋಂಕಿತರು ಹತ್ತು ಸಾವಿರವಾಗಿದ್ದರೆ ಸತ್ತವರು ಸುಮಾರು ೩೫೦ (ಮರಣ ಪ್ರಮಾಣ ೩.೫%) ಆ ಕಾರಣದಿಂದಲೇ ಹಿಂದೂಸ್ತಾನಕ್ಕೆ ದೇವಭೂಮಿ ಎಂದು ಕರೆಯುವುದಿರಬೇಕು. ಇಲ್ಲಿ ಅವತಾರ ಹೊಂದಿದ ಸಾಧು, ಸಂತರ, ವಿಭೂತಿ ಪುರುಷ ಕೃಪಾವರ್ಷ ಯಾವಾಗಲೂ ಈ ರಾಷ್ಟ್ರವನ್ನು ಕಾಯುವ ಒಂದು ರಕ್ಷಕವಚದಂತೆ ಕಾರ್ಯನಿರ್ವಹಿಸುತ್ತಿರಬಹುದು. ಅಲ್ಲದೆ ಇಲ್ಲಿನ ಜನರ ಜೀವನ ವಿಧಾನ, ಆಹಾರ ಕ್ರಮವು ಸಹ ನಿಸರ್ಗಕ್ಕನುಗುಣವಾಗಿದ್ದು ಯಾವುದೇ ವೈರಾಣುವಿಗೆ ವಿಶೇಷ ಉಪಟಳ ನೀಡಲು ಅವಕಾಶ ನೀಡಲಾರದು. ಆದರೆ ಅಗತ್ಯ ಮುಂಜಾಗ್ರತೆ ವಹಿಸುವುದನ್ನು ಮಾತ್ರ ಮರೆಯ ಬಾರದು. 

ಪ್ರಳಯಾಂತಕನಂತೆ ಜಗತ್ತಿನ ಎಲ್ಲೆಡೆಯೂ ವಿಪರೀತ ಉಪಟಳ ನೀಡುತ್ತಿರುವ ಕರೊನಾ ವೈರಾಣುವಿನ ಉಪಟಳವನ್ನು ಪ್ರಪಂಚ ಇನ್ನೆಷ್ಟು ಕಾಲ ಅನುಭವಿಸ ಬೇಕಾಗುತ್ತದೋ ಗೊತ್ತಿಲ್ಲ. ತಿಂಗಳು, ಎರಡು ತಿಂಗಳು ಮಾತ್ರ ಎನ್ನಲು ಸಾಧ್ಯವಿಲ್ಲ. ಅಲ್ಲಿಲ್ಲಿ ವರ್ಷಾನುಗಟ್ಟಲೆ ಹೋದರು ಹೋಗ ಬಹುದು. ಭಾರತದಿಂದ ಪೂರ್ತಿ ನಶಿಸಿದರೂ ಸಹ ಭೂಮಂಡಲದ ಮತ್ತೊಂದು ಖಂಡದಲ್ಲಿ ಕರೋನಾ ವೈರಾಣು ಜೀವಂತವಿದ್ದರೂ ಅಲ್ಲಿಂದ ಬರುವ ವ್ಯಕ್ತಿಯೊಬ್ಬನಿಂದ ಪುನಃ ಅದು ಇಲ್ಲಿಗೆ ಬಂದು ಪುನಃ ತನ್ನ ರೌದ್ರ ನರ್ತನ ತೋರ ಬಹುದು.

ಇದನ್ನು ಅವಲೋಕಿಸಿದರೆ ಮನುಷ್ಯನು ಪ್ರಕೃತಿಯ ಮೇಲೆ ಮಾಡುತ್ತಿರುವ ದುರ್ವ್ಯವಹಾರಕ್ಕೆ ನಿಸರ್ಗ ಈ ರೀತಿಯಲ್ಲಿ ಮನುಷ್ಯರ ಮೇಲೆ ಪ್ರತಿಕಾರಕ್ಕಿಳಿದಿದೆಯೇ ಎನ್ನುವ ಅನುಮಾನವನ್ನು ಸಹ ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಯಾಕೆಂದರೆ ನಿಸರ್ಗಕ್ಕೂ ತನ್ನಲ್ಲಿರುವ ಪಂಚಭೂತಗಳನ್ನು ಮುಂದಿನ ಪೀಳಿಗೆಯವರಿಗೂ ಕಾದಿಡ ಬೇಕಾದಂತಹ ಜವಾಬ್ದಾರಿ ಇದೆಯಲ್ಲವೇ? ನಮ್ಮ ಮಕ್ಕಳು, ಮೊಮ್ಮಕ್ಕಳಾದಿಯಾಗಿ ಮುಂದಿನ ಪೀಳಿಗೆಯವರಿಗೆ ಸುಸ್ಥಿರ ನಿಸರ್ಗವನ್ನು ಉಳಿಸಿ ಹೋಗಬೇಕೆಂಬ ಕಾಳಜಿ ಇಲ್ಲದೇ ನಾವುಗಳು ನಿಸರ್ಗವನ್ನು ಬೇಕಾಬಿಟ್ಟಿಯಾಗಿ ದುರುಪಯೋಗ ಪಡಿಸಿ ಕೊಂಡು, ಪ್ರಕೃತಿಯನ್ನು ಪ್ರದೂಷಣಗೊಳಿಸುತ್ತಿರುವಾಗ ಬೇರೆ ಮಾರ್ಗವಿಲ್ಲದೇ ಪ್ರಕೃತಿ ಮನುಷ್ಯರ ಮೇಲೆ ಇಂತಹ ಘೋರ ಪ್ರತಿಕಾರಕ್ಕೆ ಇಳಿದಿರ ಬಹುದೆ? ಗಮನವಿಟ್ಟು ಚರ್ಚಿಸ ಬೇಕಾದ ವಿಷಯವಲ್ಲವೆ?

ಈ ಎಲ್ಲಾ ವಿಷಯವನ್ನು ತೆಗೆದು ಒಂದೆಡೆ ಇಡೋಣ. ದೇಶ-ವಿದೇಶದ ತಜ್ಞರು ಅಂದಾಜು ಮಾಡಿದಂತೆ ಕೇಂದ್ರ ಸರಕಾರ ಮಾರ್ಚ್ ೨೩ರಂದು ದೇಶಾದ್ಯಂತ್ಯ ಲಾಕ್‌ಡೌನ್‌ನಂತಹ ಕಠಿಣ ಕ್ರಮ ಕೈಗೊಳ್ಳದಿದ್ದರೆ ಭಾರತದಲ್ಲಿ ಎಪ್ರಿಲ್ ೧೫ರ ಸುಮಾರಿಗೆ ಎಂಟು ಲಕ್ಷಕ್ಕಿಂತ ಅಧಿಕ ಕರೋನಾ ಸೋಂಕಿತರು ಇರುತ್ತಿದ್ದರಂತೆ. ಕರೋನಾ ವೈರಾಣು ಕೃತ ಸ್ಪರ್ಶಜನ್ಯ ಕೋವಿಡ್ ಕಾಯಿಲೆಯಿಂದ ದೇಶದಲ್ಲಿ ಅಪಾರ ಸಾವು-ನೋವು, ಜೀವಹಾನಿಯಾಗ ಬಾರದೆಂದು ಅದರಿಂದ ಜನಸಾಮಾನ್ಯರು, ಅವರ ಸಂಸಾರಗಳು ನಲುಗ ಬಾರದೆಂಬ ಕಾರಣದಿಂದ ಮುನ್ನೆಚ್ಚರಿಕೆ ತೆಗೆದು ಕೊಂಡು ಲಾಕ್‌ಡೌನ್ ಘೋಷಿಸಿ ದೊಡ್ಡ ಪ್ರಮಾಣದಲ್ಲಿ ಪ್ರಜಾ ಜನರ ಪ್ರಾಣ ರಕ್ಷಿಸಿದ, ಸಂಕಷ್ಟದಿಂದ ಪಾರು ಮಾಡಿದ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮುಖ್ಯಸ್ಥರಾದ ಕೇಂದ್ರ ಸರಕಾರ ಹಾಗೂ ಎಲ್ಲಾ ರಾಜ್ಯ ಸರಕಾರಗಳನ್ನು ನಾವೆಲ್ಲರೂ ಮುಕ್ತಕಂಠದಿಂದ ಅಭಿನಂದಿಸ ಬೇಕು. ಆ ಸಲುವಾಗಿ ದೇಶಾದ್ಯಂತ್ಯ ೨೧ ದಿವಸಗಳ ಲಾಕ್‌ಡೌನ್, ಆ ನಂತರವೂ ಎರಡನೆ ಹಂತದಲ್ಲಿ ಅದನ್ನು ಮುಂದುವರಿಸುವ ತೀರ್ಮಾನದಿಂದ ರೈಲು, ಬಸ್, ವಿಮಾನ, ಉದ್ಯಮ, ವಾಣಿಜ್ಯ ಎಲ್ಲವೂ ಮುಚ್ಚಿವೆ. ಇದರಿಂದ ದೇಶಕ್ಕೆ ಲಕ್ಷಾಂತರ ಕೋಟಿ ರೂಪಾಯಿಗಳಷ್ಟು ನಷ್ಟವಾಗುತ್ತಿದೆ ಅದರೊಂದಿಗೆ ಲಾಕ್‌ಡೌನ್ ದೇಶದ ಜಿಡಿಪಿಯ ಮೇಲೂ ಪರಿಣಾಮ ಬೀರಿ ದೇಶದ ಪರಿಸ್ಥಿತಿ ದಶಕಗಳಷ್ಟು ಹಿಂದಕ್ಕೆ ಸರಿಯಲಿದೆ ಎಂದು ಗೊತ್ತಿದ್ದರೂ ಜೆಡಿಪಿಗಿಂತ ದೇಶವಾಸಿಗಳ ಜೀವವೇ ಅಮೂಲ್ಯವೆಂದು ಪರಿಗಣಿಸಿ ಅದರಂತೆ ನಡೆದು ತೋರಿಸಿದ್ದಾರೆ. ಇಂಥಹ ಸಂದರ್ಭದಲ್ಲಿ ಬಡವರು, ಅಸಂಘಟಿತ ವಲಯದ ಕಾರ್ಮಿಕರು ವಿಶೇಷವಾಗಿ ಬಳಲುವದು ಸಾಮಾನ್ಯ. ಅದರೊಂದಿಗೆ ದಿನಬಳಕೆಯ ವಸ್ತುಗಳನ್ನು ಮುಚ್ಚಿಟ್ಟು ಕಾಳಸಂತೆಯಲ್ಲಿ ಮಾರುತ್ತಿದ್ದರು. ಅವುಗಳಿಗೂ ಸಾಧ್ಯವಾದಷ್ಟು ಕಡಿವಾಣ ಹಾಕಿ ಜನರಿಗೆ ಅವಶ್ಯ ವಸ್ತುಗಳು ದೊರಕುವಂತೆ ನೋಡಿ ಕೊಳ್ಳಲಾಗಿದೆ. ಅನಾಥ, ನಿರ್ಗತಿಕರಿಗೆ ಆಹಾರ ದೊರಕುವಂತೆ ಅಗತ್ಯವಾದ ಕ್ರಮವನ್ನು ಕೈಗೊಳ್ಳ ಲಾಗಿದೆ. ಆ ಸಲುವಾಗಿಯೂ ನಾವು ಸರಕಾರಗಳನ್ನು ಅಭಿನಂದಿಸಲೇ ಬೇಕಲ್ಲವೇ?

ಲ್ಯಾಟಿನ್ ಭಾಷೆಯಲ್ಲಿ ವೈರಸ್ ಎಂದರೆ ಟಾಕ್ಸಿನ್ ಎಂದಾಗುತ್ತದೆ. (ಜೀವಾಣುವಿನ ಒಳಗೆ ಉತ್ಪತ್ತಿಯಾಗುವ ವಿಷ) ಜೀವಿಯ ಜೀವಾಣುಗಳೊಳಗೆ ನುಸುಳಿ ಕ್ಷಣಮಾತ್ರದೊಳಗೆ ತನ್ನ ಸಂತತಿಯನ್ನು ರಕ್ಷ ಬೀಜಾಸುರನಂತೆ ಬೆಳೆಸುವ ಜೀವಿಗೆ ವೈರಾಣು ಎನ್ನುತ್ತಾರೆ. ವೈರಾಣು ಅತ್ಯಂತ್ಯ ಚಿಕ್ಕದಾಗಿರುವ ಜೀವಿ. ಎಷ್ಟೋ ಸೂಕ್ಷ್ಮದರ್ಶಕಗಳಲ್ಲಿಯೂ ಸ್ಪಷ್ಟವಾಗಿ ಕಾಣಿಸಲಾರದಷ್ಟು ಸಣ್ಣದಿರುತ್ತದೆ. ಇದು ಮನುಷ್ಯರಿಗೆ, ಪ್ರಾಣಿಗಳಿಗೆ ಮಾತ್ರವಲ್ಲ ಸಸ್ಯ, ಬ್ಯಾಕ್ಟೀರಿಯಾ, ಆರ್ಕೀಯಾ ತನಕ ಎಲ್ಲಾ ವಿಧದ ಜೀವಿಗಳಲ್ಲೂ ಸಾಂಕ್ರಾಮಿಕ ರೋಗ ತರಲು ಶಕ್ತವಾಗಿರುತ್ತದೆ. ಆದರೆ ಎಲ್ಲಾ ವಿಧದ ವೈರಾಣುಗಳು ಕಾಯಿಲೆಯನ್ನು ತರುವುದಿಲ್ಲ. ಅವುಗಳಲ್ಲಿ ಜೀವಿಗಳಿಗೆ ಸಹಾಯ ಮಾಡುವಂತಹ ವೈರಾಣುಗಳು ಸಹ ಇರುತ್ತವೆ. ಮನುಷ್ಯರಲ್ಲಿಯೂ ಸಜ್ಜನ ಹಾಗೂ ದುರ್ಜನ ಎಂದು ಇರುವಂತೆ ವೈರಾಣುಗಳಲ್ಲೂ ಇವೆ. ದುಷ್ಟ ಪರಾವಲಂಬಿ ವೈರಾಣುಗಳು ಜೀವಿಯ ಶರೀರದೊಳಗೆ ನುಸುಳಿ ಜೀವಿಯ ಜೀವಕೋಶದೊಳಗೆ ಸೇರಿಕೊಳ್ಳುತ್ತವೆ. ಅಲ್ಲಿ ಡಿ.ಎನ್.ಎ. ಅಥವಾ ಆರ್.ಎನ್.ಎ.ದಲ್ಲಿ ಪ್ರೋಟಿನ್ ಸಹಾಯದಿಂದ ಬೆಳೆಯುತ್ತವೆ. ಹಾಗೂ ತುಂಬಾ ತ್ವರಿತವಾಗಿ ತಮ್ಮ ಸಂತತಿಯನ್ನು ಬೆಳೆಸ ತೊಡಗುತ್ತವೆ. ವಿಜ್ಞಾನಿಗಳ ಅಂಬೋಣವೆಂದರೆ ವೈರಾಣುವೆಂದರೆ ಸಜೀವಿ ಮತ್ತು ನಿರ್ಜೀವಿಗಳ ಮಧ್ಯದ ಒಂದು ಸೇತುವೆಯಂತೆ. ವೈರಾಣುವಿನ ವ್ಯಾಸ ಹದಿನಾರರಿಂದ ಒಂದು ಸಾವಿರ ನಾನೋಮೀಟರನಷ್ಟು ಇರಬಹುದಂತೆ. 

ಹತ್ತೊಂಬತ್ತನೇ ಶತಮಾನದಲ್ಲಿ ಪ್ರಪ್ರಥಮವಾಗಿ ವೈರಾಣುವಿನ ಬಗ್ಗೆ ವಿಜ್ಞಾನಿಗಳಿಗೆ ತಿಳಿದುಬಂತು. ಇದು ಬ್ಯಾಕ್ಟೀರಿಯಾಕ್ಕಿಂತ ತುಂಬಾ ಚಿಕ್ಕದು ಎಂಬ ವಿಷಯವೂ ತಿಳಿಯಿತು. ವೈರಾಣುವಿನ ಬಗ್ಗೆ ತಿಳಿದುಬಂದ ಮತ್ತೊಂದು ವಿಷಯವೆಂದರೆ ವೈರಾಣುಗಳ ಕುಲಾಭಿವೃದ್ಧಿ ಆಗುವದು ಜೀವಕೋಶದೊಳಗೆ ಮಾತ್ರ ಅನ್ನುವುದು. ಯಾವುದಾದರೂ ಜೀವಿಯ ಜೀವಕೋಶದ ಸಂಪರ್ಕಕ್ಕೆ ಬರುತ್ತಿದ್ದಂತೆ ವೈರಾಣುವಿನ ಸಂಖ್ಯೆ ಎರಡು ಪಟ್ಟು, ಮೂರು ಪಟ್ಟು ಬೆಳೆಯುತ್ತಾ ಹೋಗುತ್ತದೆ. ೧೮೯೨ ಇಸಿವೆಯಲ್ಲಿ ಹೊಗೆಸೊಪ್ಪಿನ ಮೇಲೆ ಮಾಡಿದ ಸಂಶೋಧನೆಯಿಂದ ಡಿಮಿಟ್ರಿ ಇವಾನೋವ್ಸ್ಕಿ ಎನ್ನುವ ವಿಜ್ಞಾನಿ ಇದನ್ನು ಕಂಡುಹಿಡಿದರು. ಪ್ರಯೋಗಾಲಯದಲ್ಲಿ ವೈರಾಣುವನ್ನು ಬೆಳೆಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ೧೯೩೩ ರಲ್ಲಿ ಮತ್ತೊರ್ವ ಜೀವಶಾಸ್ತ್ರಜ್ಞ ವೆಂಡಲ್ ಮೆರಡಿತ್ ಸ್ಟಾನ್ಲಿ ಇವರು ವೈರಾಣು ಕೇವಲ ನಿರ್ಜೀವ ಪದಾರ್ಥ ಎಂದು ಅದರ ನಿಜ ಸ್ವಭಾವವನ್ನು ಕಂಡು ಹಿಡಿದರು. . ಆ ಸಲುವಾಗಿ ೧೯೪೬ರಲ್ಲಿ ಅವರಿಗೆ ನೋಬಲ್ ಬಹುಮಾನ ಸಹ ದೊರಕಿತು.

ಈ ಭೂಮಿಯ ಮೇಲೆ ಸಹಸ್ರಾರು ವಿಧದ ವೈರಾಣುಗಳಿದ್ದರೂ ಅವುಗಳ ಮೂಲತತ್ತ್ವ ಒಂದೇ ರೀತಿಯಲ್ಲಿ ಇರುತ್ತದೆ. ಒಂದು ಜೀವಕೋಶದ ಅಥವಾ ಡಿ.ಎನ್.ಎ./ ಆರ್.ಎನ್.ಎ.ದ ಸಂಪರ್ಕಕ್ಕೆ ಬರುತ್ತಿದ್ದಂತೆ ಒಂದಕ್ಕೆ ಎರಡಾಗಿ, ಎರಡಕ್ಕೆ ನಾಲ್ಕಾಗಿ, ನಾಲ್ಕಕ್ಕೆ ಎಂಟಾಗಿ ವೃದ್ಧಿ ಹೊಂದುತ್ತಾ ಹೋಗುತ್ತವೆ. ಅಂತಿಮವಾಗಿ ಕಾಯಿಲೆಯ ಲಕ್ಷಣಗಳ ರೂಪದಲ್ಲಿ ತನ್ನ ಇರುವಿಕೆಯನ್ನು ತಿಳಿಸುತ್ತದೆ. ಅದರಂತೆ ಕರೋನಾ ವೈರಾಣು ಎನ್ನುವುದು ಆರ್.ಎನ್.ಎ. ಜಾತಿಯ ಒಂದು ವೈರಾಣು. ಸೂಕ್ಷ್ಮದರ್ಶಕದ ಮೂಲಕ ಗಮನಿಸಿದಾಗ ಕಿರೀಟದ ಆಕಾರ ಈ ವೈರಾಣುವಿಗಿದೆ. ಏಳು ವಿಧದ ಕರೋನಾ ವೈರಾಣುಗಳು ಸಾಂಕ್ರಾಮಿಕ ರೋಗಗಳನ್ನು ಹರಡಬಲ್ಲವು. ಪ್ರಮುಖವಾಗಿ ಇವು ಜೀರ್ಣಾಂಗ ವ್ಯೂಹ ಮತ್ತು ಶ್ವಾಸಕೋಶಾದಲ್ಲಿ ದಾಳಿಮಾಡಿ ಕೋವಿದ್-೧೯ ಕಾಯಿಲೊ ಬರುವಂತೆ ಮಾಡುತ್ತವೆ. ಈ ವೈರಾಣು ಸ್ಪರ್ಶ, ದೈಹಿಕ ಸಂಪರ್ಕ, ಸೋಂಕಿತನ ಕೆಮ್ಮು, ಶೀನಿನ ಸಂದರ್ಭದಲ್ಲಿ ಹೊರಬೀಳುವ ವೈರಾಣುಗಳ ಕಾರಣದಿಂದ ಆರೋಗ್ಯವಂತನನ್ನು ಸೋಂಕಿತನನ್ನಾಗಿ ಮಾಡ ಬಲ್ಲವು. ನೂರಾರು ಜನ ಆರೋಗ್ಯವಂತರ ಮಧ್ಯೆ ಒಬ್ಬನೇ ಒಬ್ಬ ಕರೋನಾ ಸೋಂಕಿತನಿದ್ದರೂ ಆತ ಅಲ್ಲಿರುವ ಎಲ್ಲರಿಗೂ ಸೋಂಕನ್ನು ಹರಡಬಲ್ಲ. ಹಾಗೇ ಬಿಟ್ಟರೆ ಆ ನೂರಾರು ಸಹಸ್ರಾರು, ಅಲ್ಲಿಂದ ಲಕ್ಷಗಟ್ಟಲೆ ಜನರಿಗೆ ಸೋಂಕು ಹರಡಲ್ಪಡುತ್ತದೆ. ಆದ್ದರಿಂದ ಸರಕಾರಗಳು ಇದಾಗಲೇ ಸೋಂಕು ಅಂಟಿಸಿ ಕೊಂಡವರಿಂದ ಇತರರಿಗೆ ಸೋಂಕು ಅಂಟ ಬಾರದೆಂದು ಲಾಕ್‌ಡೌನ್ ನಂತಹ ಕಠಿಣ ಕ್ರಮವನ್ನು ಕೈಗೊಂಡಿವೆ. ಮನೆಯಿಂದ ಹೊರ ಹೋಗುವಾಗ ಮುಖಗವಸುಗಳನ್ನು ಹಾಕಿಕೊಂಡು ಹೋಗಲು, ಆಗಾಗ ಕೈಗಳನ್ನು ತೊಳೆದುಕೊಳ್ಳಲು, ಜನರ ಮಧ್ಯೆ ಅಂತರವನ್ನು ಕಾಯ್ದು ಕೊಳ್ಳಲು ಬಾರಿ ಬಾರಿ ಹೇಳಲು ಸಹ ಇದೇ ಕಾರಣ. ಹಸ್ತಲಾಘನ, ಅಪ್ಪಿಕೊಳ್ಳುವುದರಿಂದಲೂ ಸೋಂಕು ಹರಡುವ ಆತಂಕವಿದೆ.

ಸರಕಾರದ ಈ ಕಾಳಜಿಯನ್ನು ಸಾಮಾನ್ಯ ಜನ ಅರಿತುಕೊಳ್ಳ ಬೇಕು. ಲಾಕ್‌ಡೌನ್ ಸಮಯದಲ್ಲಿಯೂ ಬೇಕಾಬಿಟ್ಟಿಯಾಗಿ ಅಡ್ಡಾಡುತ್ತಿರುವುದು, ಮುಖಗವಸುಗಳನ್ನು ಹಾಕಿಕೊಳ್ಳದೇ ಹೊರಗೆ ಬರುವದು, ಪರಸ್ಪರರ ಮಧ್ಯೆ ಅಂತರವನ್ನು ಕಾಯ್ದುಕೊಳ್ಲದೇ ಇರುವುದು ಇದೆಲ್ಲವನ್ನು ನೋಡಿದರೆ ಸರಕಾರಗಳ ಕಾಳಜಿ ಜನರಿಗೆ ಅರ್ಥವಾಗುತ್ತಿಲ್ಲವೇ ಎಂದು ಆಶ್ಚರ್ಯವಾಗುತ್ತದೆ. ಒಣಗಿರುವ ಯಾವುದೇ ವಸ್ತುವಿಗ ಬೆಂಕಿಯ ಕಿಡಿಯೊಂದು ಭಸ್ಮ ಮಾಡಿ ಬಿಡುವಂತೆ ಕರೋನದ ಒಂದು ವೈರಾಣು ಎರಡಾಗಿ, ನೂರಾಗಿ, ಸಹಸ್ರವಾಗಿ, ಲಕ್ಷವಾಗಿ, ಕೋಟಿಯಾಗಿ ಅಸಂಖ್ಯಾತ ಆರೋಗ್ಯವಂತರನ್ನೂ ಸೋಂಕಿತನನ್ನಾಗಿ ಮಾಡಬಹುದು. ಸೋಂಕಿತರು ಎಲ್ಲರೂ ಸಾಯುವುದಿಲ್ಲ ನಿಜ. ಸಾಯುವ ಐದಾರು ಶೇಕಡಾದಷ್ಟು ಜನರಲ್ಲಿ ಉಡಾಪೆಯಿಂದ ಕರೋನಾ ಸೋಂಕನ್ನು ಅಂಟಿಸಿಕೊಂಡ ನಾವೂ ಒಬ್ಬರಾಗ ಬಹುದು. ಅಥವಾ ನಮ್ಮಿಂದ ಸೋಂಕಿತರಾಗುವ ಹೆಂಡತಿ, ಮಕ್ಕಳು, ತಂದೆ-ತಾಯಿ, ಸ್ನೇಹಿತರು ಸಹ ಅಂತಕನ ಅತಿಥಿಯಾಗ ಬೇಕಾಗಬಹುದು. ಯಾಕೆಂದರೆ ವಯಸ್ಸಾದವರಿಗೆ, ರಕ್ತದೊತ್ತಡ, ಸಿಹಿಮೂತ್ರ, ಹೃದಯ, ಉಸಿರಾಟದ ಸಮಸ್ಯೆ ಇದ್ದವರಿಗೆ ಕೋಮೆಡ್ -೧೯ ಪ್ರಾಣಾಂತಿಕ ಕಾಯಿಲೆ ಎಂದು ಹೇಳಲಾಗುತ್ತದೆ. ಆದ್ದರಿಂದ ಯಾವುದೇ ಸಂದರ್ಭದಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಸಂಶಯವಿರುವ ಪ್ರತಿಯೊಬ್ಬರೂ ತಪಾಸಣೆ ಮಾಡಿಕೊಳ್ಳುವ ಅಗತ್ಯವಿದೆ. ಭಯ, ಉಡಾಪೆ, ಮುಜುಗರದಿಂದ ಮುಚ್ಚಿಡಲು ಹೋದರೆ ಎಷ್ಟೊಂದು ದೊಡ್ಡ ಅನರ್ಥ ಘಟಿಸ ಬಹುದೆಂದು ಹೇಳಲು ಸಾಧ್ಯವಿಲ್ಲ. ರೋಗ ಉಲ್ಬಣಿಸಿದ ನಂತರ ಹೋದರೆ ಜೀವಕ್ಕೆರವಾದರೂ ಆಶ್ಚರ್ಯವಿಲ್ಲ.

ಹಾಗೆ ನೋಡಹೋದರೆ ಹೃದಯ ಸಮಸ್ಯೆ, ಬೊಜ್ಜು, ರಕ್ತದೊತ್ತಡ, ಸಿಹಿಮೂತ್ರ, ಅಪಘಾತ ಇತ್ಯಾದಿ ಕಾರಣಗಳಿಂದ ಪ್ರತಿ ವರ್ಷ ಭಾರತದಲ್ಲಿ ಎರಡು ಕೋಟಿಗಿಂತ ಅಧಿಕ ಜನ ಮರಣ ಹೊಂದುತ್ತಾರೆ. ಆದರೆ ಕೋಮೆಡ್ -೧೯ ಅನ್ನುವ ಸಾಂಕ್ರಾಮಿಕ ರೋಗ ಸಾವಿನ ಬುಲ್ಡೋಜರ್ ಆಗಬಲ್ಲದು ಅನ್ನುವುದ್ನು ನಾವು ಮರೆಯುವಂತಿಲ್ಲ. ಒಂದು ದೇಶ ಇನ್ನೊಂದು ದೇಶದೊಂದಿಗೆ ಯುದ್ಧ ಮಾಡುವಾಗ ಪರಿಣಾಮ ಏನಾಗುತ್ತದೋ ಎನ್ನುವ ಆತಂಕ ಪ್ರತಿಯೊಬ್ಬರಿಗೂ ಇರುವಂತೆ ದೇಶಪ್ರೇಮವಿರುವ ಪ್ರತಿಯೊಬ್ಬರೂ ಕರೋನಾದಿಂದ ಆತಂಕಿತರಾಗಿದ್ದಾರೆ. ಅವರ ಜೀವನೋಪಾಯದ ಸಾಧನಗಳೆಲ್ಲ ಕರೋನಾವೆಂಬ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ. ಈ ಪ್ರವಾಹವನ್ನು ಎಷ್ಟು ಬೇಗ ತಡೆಯ ಬಲ್ಲೆವೊ ಅಷ್ಟಾದರೂ ಬದುಕು ಅವರಿಗೆ ಉಳಿಯ ಬಲ್ಲದು. ಬಹುಕಾಲ ಬದುಕನ್ನು ಭಯ, ಆತಂಕ, ದುಃಖದಲ್ಲಿ ಕಳೆದರೆ ಅದರಿಂದ ಮತ್ತೊಂದು ರೀತಿಯ ಅನಾರೋಗ್ಯಕ್ಕೆ ಬೀಳಬೇಕಾಗ ಬಹುದು. ಆ ಕಾರಣದಿಂದ ಮುಂಜಾಗೃತೆಯನ್ನು ವಹಿಸುವುದರೊಂದಿಗೆ ಸರ್ವರೂ ಕರೋನದ ಬಗೆಗಿನ ಭಯವನ್ನು ವರ್ಜಿಸ ಬೇಕು. ಮಾನಸಿಕ ಸ್ಥಿರತೆಗಾಗಿ ಭಾರತೀಯರಿಗೆ ಧ್ಯಾನ, ಇಷ್ಟ ದೇವರ ಸ್ಮರಣೆ, ಹಿಂದಿನಂತೆ ಮನೆಮಂದಿ ಸೇರಿ ಪ್ರತಿ ದಿವಸ ಭಜನೆ ಮಾಡುವದು, ಓದು, ನಾಮಜಪ ಇತ್ಯಾದಿ ಹಲವಾರು ಹವ್ಯಾಸಗಳನ್ನು ನಮ್ಮ ಪೂರ್ವೀಕರು ಮಾಡಿಟ್ಟಿದ್ದಾರೆ. ಇದರಲ್ಲಿ ಒಂದೆರಡನ್ನಾದರೂ ನಾವು ಅಳವಡಿಸಿಕೊಂಡರೆ ಮಾನಸಿಕವಾಗಿ ಅನಾರೋಗ್ಯಕ್ಕೆ ಈಡಾಗುವುದರಿಂದಲೂ ತಪ್ಪಿಸಿ ಕೊಳ್ಳ ಬಹುದು.

ನಮ್ಮ ಹಿರಿಯರು ಎಲ್ಲದರಲ್ಲೂ ಒಳಿತನ್ನೇ ಕಂಡವರು. ಈಗ ನಾವೂ ಸಹ ಅದನ್ನೇ ಮಾಡ ಬೇಕಾಗಿದೆ. ಲಾಕ್‌ಡೌನ್‌ನಿಂದ ಅಪಾರ ನಷ್ಟ ಸಂಭವಿಸಿದರೂ ಇದರಿಂದ ಪರಿಸರ ಪ್ರದೂಷಣವಾಗುವುದು ನಿಂತಿದೆ. ಸುತ್ತಲಿನ ವಾತಾವರಣ ಅಷ್ಟೇ ಅಲ್ಲ ನದಿ, ಸಮುದ್ರಗಳೂ ಶುದ್ಧವಾಗಿವೆ. ಇದನ್ನು ಗಮನಿಸಿದರೆ ಮುಂದೆಯೂ ಸಹ ದೇಶವಾಸಿಗಳೆಲ್ಲರೂ ಅಥವಾ ವಿಶ್ವವಾಸಿಗಳೇ ಅನ್ನಿ ಪ್ರತಿ ತಿಂಗಳಿಗೆ ಒಂದು ದಿನವಾದರೂ ಸ್ವತಃ ಈ ರೀತಿಯ ಲಾಕ್‌ಡೌನ್ (ಜನತಾ ಕರ್ಪ್ತೂ) ಹಾಕಿ ಕೊಂಡರೆ ಬಹುಶಃ ಪರಿಸರ ರಕ್ಷಣೆಗಾಗಿ ಸರಕಾರಗಳು ವ್ಸಯಿಸುವ ಸಹಸ್ರಾರು ಕೋಟಿ ಡಾಲರ್ ಅನ್ನು ಉಳಿಸ ಬಹುದು ಹಾಗೂ ನಿಸರ್ಗ ರಕ್ಷಣೆಗೆ ನಾವೆಲ್ಲರೂ ಬಹುದೊಡ್ಡ ಕೊಡುಗೆ ನೀಡಿದಂತಾಗುವುದರೊಂದಿಗೆ ಮುಂದಿನ ಪೀಳಿಗೆಗೆ ಶುದ್ಧ, ಸುಂದರ, ಸ್ವಚ್ಛವಾದ ಪ್ರಕೃತಿಯನ್ನು ಹಸ್ತಾಂತರಿಸಲು ನಮ್ಮಿಂದ ಸಾಧ್ಯವಾಗ ಬಹುದು.

 - ಆರಗೋಡು ಸುರೇಶ ಶೆಣೈ,


2 likes

Published By

Argodu Suresh Shenoy

argodusureshshenoy

Comments

Appreciate the author by telling what you feel about the post 💓

  • ARAVIND SHANBHAG, Baleri · 4 years ago last edited 4 years ago

    Upanishattu mattu vijnana ellavannu melavisi sundaravagi barediddiri. Olleya lekhana

  • Mithun kumar Muddan · 4 years ago last edited 4 years ago

    thumbha aratha purna edde

  • Raksha Ramesh · 4 years ago last edited 4 years ago

    ಅರ್ಥಪೂರ್ಣ ವಿಚಾರ ಮಂಡನೆ...

Please Login or Create a free account to comment.