ಜೀವನವೂ ನಿಮ್ಮದೇ! ಜವಾಬು ನಿಮ್ಮದೇ!!

`ಇಗೋ'ಗಳಿಂದ ಲಾಭ ಏನೋ ಗೊತ್ತಿಲ್ಲ ಆದರೆ ಸಮಸ್ಯೆಗಳಿಗೆ ಸಿಲುಕ ಬೇಕಾಗುವುದು ಮಾತ್ರ ಶತಃಸಿದ್ದ... ಇಂಥಹ `ಇಗೋ' ನಮಗೆ ಬೇಕೆ? ` `ಇಗೋ'ದಿಂದ ನಾವು ಜೀವನದ ಸುಖವನ್ನು ಹಾಳು ಮಾಡಿಕೊಳ್ಳ ಬೇಕೆ?

Originally published in kn
Reactions 1
526
Argodu Suresh Shenoy
Argodu Suresh Shenoy 30 May, 2021 | 1 min read
Ego

ಡಾ|| ರಮೇಶಚಂದ್ರ ನಗರದಲ್ಲಿಯೇ ಅತ್ಯಂತ ಪ್ರಸಿದ್ಧ ತಜ್ಞ ವೈದ್ಯರು. ವಿದೇಶಕ್ಕೆ ಹೋಗಿ ಮೂರು ವರ್ಷಗಳ ಕಾಲ ಬಿ.ಪಿ.(ಬ್ಲಡ್ ಪ್ರೆಷರ್) ವಿಷಯದ ಮೇಲೆ ಉನ್ನತ ವೈದ್ಯಕೀಯ ಪದವಿ ಪಡೆದುಕೊಂಡು ಬಂದಿರುವ ಅವರು ರಕ್ತದೊತ್ತಡದ ಚಿಕಿತ್ಸೆಯಲ್ಲಿ ಎತ್ತಿದ ಕೈ. ಕೇವಲ ಈ ನಗರದ ರೋಗಿಗಳು ಮಾತ್ರವಲ್ಲ ರಾಜ್ಯ, ಹೊರರಾಜ್ಯಗಳಿಂದಲೂ ಚಿಕಿತ್ಸೆ ಹಾಗೂ ಸಲಹೆಗಾಗಿ ಅವರನ್ನು ಹುಡುಕಿಕೊಂಡು ರೋಗಿಗಳು ಬರುತ್ತಿದ್ದರು. . ಈಗ ಅವರಿಗೆ ಐವತ್ತೈದು ವರ್ಷ ವಯಸ್ಸು. ಆದರೂ ತಮ್ಮನ್ನು ಭೇಟಿಯಾಗಲು ಬರುವ ರೋಗಿಗಳೊಂದಿಗೆ ುತ್ಸಾಹದಿಂದ ತುಂಬಾ ಆತ್ಮೀಯವಾಗಿ ಮಾತನಾಡುತ್ತಾರೆ. ಕಾಳಜಿಪೂರ್ವಕ ಚಿಕಿತ್ಸೆ ಮಾಡುತ್ತಾರೆ. ಅವರ ಕೋಣೆಗೆ ತಪಾಸಣೆಗೆ ಬರುವಾಗ ಬಹಳಷ್ಟು ರೋಗಿಗಳಿಗೆ ಏನೋ ಆತಂಕ, ಭಯ ಇದ್ದಿರುತ್ತಿತ್ತು. ಆದರೆ ರೋಗಿಗಳ ಕುಟುಂಬದವನಂತೆ ಡಾ|| ರಮೇಶಚಂದ್ರವರು ಹಸನ್ಮುಖಿಗಳಾಗಿ ಅವರನ್ನು ಸ್ವಾಗತಿಸಿದಾಗ ರೋಗಿಗಳ ಅರ್ಧ ರೋಗ ಆಗಲೇ ವಾಸಿಯಾಗಿ ಬಿಡುತ್ತಿತ್ತು. ಮೊದಲಿಗೆ ಅವರು ಬಂದ ರೋಗಿಯ ಕುಟುಂಬ ಮನೆತನದ ಬಗ್ಗೆ ವಿಚಾರಿಸುತ್ತಿದ್ದರು. ಬಿ.ಪಿ. ಬರಲು ಅತ್ಯಂತ ಮುಖ್ಯ ಕಾರಣ ಮಾನಸಿಕ ಒತ್ತಡ ಎಂದು ತಿಳಿದಿದ್ದ ಅವರು ರೋಗಿಗಳಿಗಿರುವ ಒತ್ತಡದ ಕಾರಣ, ಸಮಸ್ಯೆಯನ್ನು ತಿಳಿದುಕೊಂಡು ಸೂಕ್ತ ಚಿಕಿತ್ಸೆಯನ್ನು ಆರಂಭಿಸುತ್ತಿದ್ದರು.

ಇಂದು ಶುಕ್ರವಾರ ಆದರೂ ಅವರ ಕ್ಲಿನಿಕ್‌ನಲ್ಲಿ ರೋಗಿಗಳ ಗದ್ದಲ ತುಂಬಾ ಹೆಚ್ಚಾಗಿಯೇ ಇತ್ತು. ಬೆಳಿಗ್ಗೆ ಒಂಬತ್ತು ಗಂಟೆಗೆ ಬಂದು ತಮ್ಮ ಕನ್ಸಲ್ಟಿಂಗ್ ರೂಮನೊಳಗೆ ಸೇರಿಕೊಂಡ ಡಾ|| ರಮೇಶಚಂದ್ರರವರಿಗೆ ಮಧ್ಯಾಹ್ನ ಹನ್ನೆರಡು ಗಂಟೆ ನಲವತ್ತು ನಿಮಿಷಗಳಾದರೂ ಒಂದರೆ ಕ್ಷಣವೂ ವಿರಾಮ ಸಿಕ್ಕಿರಲಿಲ್ಲ. ಆದ್ದರಿಂದ ಇನ್ನೊಂದು ಹದಿನೈದು ನಿಮಿಷ ಯಾರನ್ನೂ ಒಳಗೆ ಕಳುಹಿಸ ಬೇಡ ಎಂದು ನರ್ಸ್‌ಳನ್ನು ಕರೆದು ಹೇಳಬೇಕೆಂದು ಕಾಲಿಂಗ್ ಬೆಲ್‌ಮೇಲೆ ಡಾಕ್ಟರರು ಬೆರಳುಗಳನ್ನು ಅಮುಕ ಬೇಕೆನ್ನುವಷ್ಟರಲ್ಲಿ “ಗುಡ್ ಮಾರ್ನಿಂಗ್ ಡಾಕ್ಟರ್... ಎನ್ನುತ್ತಾ ಒರ್ವ ಆಸಾಮಿ ಒಳಗೆ ಬಂದೇ ಬಿಟ್ಟಿತ್ತು. ಒಳಗೆ ಬಂದವರನ್ನು ಹೊರಗೆ ಹೋಗಿ ಎಂದು ಹೇಳುವದು ಶಿಷ್ಟಾಚಾರವಲ್ಲ ಎಂದು ತೀರ್ಮಾನಿಸಿದ ಡಾಕ್ಟರರು ಆ ಆಸಾಮಿಯನ್ನು ನಗುಮುಖದಿಂದ ಸ್ವಾಗತಿಸಿ ತಮ್ಮೆದುರು ಕುಳ್ಳಿರಿಸಿ ಕೊಂಡರು. 

“ಸಾರ್ ನಾನು ಹನುಮಂತಪ್ಪ ಅಂತಾ, ಶ್ರೀ ಹರಿ ಬ್ರ್ಯಾಂಡ್ ಆಯಿಲ್ ಮಿಲ್ ಪಾರ್ಟನರ್... ನಾನು ನಿಮ್ಮ ಹೆಸರನ್ನು ತುಂಬಾ ಕೇಳಿದ್ದೆ... ನನ್ನ ಸಮಸ್ಯೆ ಅಂದರೆ... ವೈದ್ಯರು ಏನನ್ನೂ ಕೇಳದಿದ್ದರೂ ಹನುಮಂತಪ್ಪ ತಮ್ಮ ಸಮಸ್ಯೆಯನ್ನು ಹೇಳಲು ಆರಂಭಿಸಿಯೇ ಬಿಟ್ಟರು. ಅದನ್ನು ನೋಡಿ ಡಾಕ್ಟರರಿಗೆ ಇವರೋರ್ವ ಧಾವಂತದ, ಗಡಿಬಿಡಿಯ ವ್ಯಕ್ತಿ ಅನ್ನುವುದು ಅರಿವಾಯಿತು. 

ಡಾಕ್ಟರ್ ರಮೇಶಚಂದ್ರರವರು ಸನ್ನೆಯ ಮೂಲಕ ರೋಗಿಯನ್ನು ಸುಮ್ಮನಿರಲು ಸೂಚಿಸಿ ತಾವೇ ಮಾತನಾಡಲು ಆರಂಭಿಸುತ್ತಾರೆ. “ಶ್ರೀ ಹರಿಬ್ರ್ಯಾಂಡ್‌ರವರ ವೆಂಕಟಾದ್ರಿ ಆಯಿಲ್ ತುಂಬಾ ಫೇಮಸ್, ಒಳ್ಳೆಯ ಕ್ವಾಲಿಟಿಯ ಎಣ್ಣೆ, ನಾವು ಮನೆಯಲ್ಲಿ ಅದನ್ನೇ ಉಪಯೋಗಿಸುವುದು. ಅದನ್ನು ಸ್ಥಾಪಿಸಿದ್ದು ನಿಮ್ಮ ತಂದೆಯವರಾದ ಸೋಮಪ್ಪನವರು ಅಲ್ಲವೇ'' ರೋಗಿಯನ್ನು ಮುದಗೊಳಿಸುವ ಸಲುವಾಗಿ ಪ್ರಶ್ನಾರ್ಥಕವಾಗಿ ನೋಡುತ್ತಾ ಅಂದು ಹನುಂತಪ್ಪನವರನ್ನು ಅಭಿನಂದಿಸುವಂತೆ ಎದ್ದುನಿಂತು ಹಸ್ತಲಾಘವ ನೀಡಿದರು.. 

ಇಷ್ಟೊಂದು ದೊಡ್ಡ ವೈದ್ಯರು ತಮ್ಮ ಉತ್ಪನ್ನವನ್ನು ಹೊಗಳುವಾಗ ಹನುಮಂತಪ್ಪನವರಿಗೆ ಸಂತೋಷವಾಗದೇ ಇದ್ದೀತೆ. ಮನಸ್ಸಿನಲ್ಲಿ ಒಂದು ರೀತಿಯ ಹರುಷ ತುಂಬಿ ತಾನು ಹೊತ್ತು ತಂದ ಸಮಸ್ಯೆಯನ್ನೇ ಮರೆತವರಂತೆ ಅವರು ವೈದ್ಯರನ್ನೇ ಪಿಳಿಪಿಳಿ ನೋಡುತ್ತಾ ಕುಳಿತು ಬಿಟ್ಟರು. 

ರೋಗಿ ಆತಂಕದಿಂದ ಹೊರಬಂದಿರುವ ಚಿಹ್ನೆ ಕಾಣಿಸಿಕೊಂಡ ನಂತರ ಡಾ|| ರಮೇಶಚಂದ್ರರವರು ಆತ್ಮೀಯವಾಗಿ ಅವರ ವೃತ್ತಿಯ ಬಗ್ಗೆ, ಕುಟುಂಬದ ಬಗ್ಗೆ ಬಹಳಷ್ಟು ವಿಷಯಗಳನ್ನು ಕೇಳಿ ಅರಿತುಕೊಂಡರು. ಅದರಲ್ಲಿ ತನಗೆ ಅಗತ್ಯವಾದ ವಿಷಯಗಳನ್ನು ರೋಗಿಯ ಡಾಟಾಶೀಟ್‌ನಲ್ಲಿ ಗುರುತು ಹಾಕಿಕೊಂಡರು. ವೈದ್ಯರಿಗೆ ಹನುಮಂತಪ್ಪನವರಿಂದ ತಿಳಿದುಬಂದ ಒಟ್ಟಾರೆ ವಿಷಯವೆಂದರೆ ಹನುಮಂತಪ್ಪನವರ ತಂದೆಯವರ ಆಯಿಲ್‌ಮಿಲ್ ಬಿಜಿನೆಸ್‌ನಲ್ಲಿ ತಂದೆಯವರ ಮರಣಾನಂತರ ಅವರು ಹಾಗೂ ಅವರ ತಮ್ಮ ಬೀಮಪ್ಪ ಇಬ್ಬರು ಪಾಲುದಾರರಾಗಿದ್ದಾರೆ. ಇವರ ಶಿಕ್ಷಣ ಪಿ.ಯು.ಸಿ. ಆದರೆ ಭೀಮಪ್ಪ ಬಿ.ಎ. ಪದಬೀಧರರು ಶೀಘ್ರಕೋಪಿ. ಅನುಭವದ ಕೊರತೆಯಿಂದ ಯಾವುದೇ ಕೆಲಸ ಮಾಡುವಾಗಲೂ ಏನಾದರೂ ತಪ್ಪು ಮಾಡುತ್ತಿದ್ದರು. ಇದರಿಂದ ಅಷ್ನಟು ನಷ್ಟವಾಗುತ್ತದೆ, ಇಷ್ಟು ನಷ್ಟವಾಗುತ್ತದೆ ಎಂಬ ಆತಂಕದಿಂದ ಹನುಮಂತಪ್ಪನವರು ತಮ್ಮನಿಗೆ ಬುದ್ಧಿ ಹೇಳಲು ಹೋದರೆ ಅವನು ಇವರಿಗೆ ಎದಿರು ವಾದಿಸುತ್ತಿದ್ದ. ತನಗೆ ಎಲ್ಲವೂ ಗೊತ್ತಿದೆ ನಿನ್ನ ಉಪದೇಶ ಬೇಡ ಎಂದು ಕೆಲವೊಮ್ಮೆ ಕೈ ಕೈ ಮಿಲಾಯಿಸಲು ಸಹ ಬರುತ್ತಿದ್ದ. ಇದರಿಂದ ಹನುಮಂತಪ್ಪನವರಿಗೆ ತುಂಬಾ ಚಿಂತೆಯಾಗಿತ್ತು. ನೌಕರರ ಮುಂದೆ ಹಲವಾರು ಸಲ ಭೀಮಪ್ಪ ಅಣ್ಣನ ಅವಮಾನವನ್ನೂ ಮಾಡಿದ್ದ. ಆ ಚಿಂತೆ ಅವರನ್ನು ಮಾನಸಿಕವಾಗಿ ಕುಗ್ಗಿಸಿ ಒತ್ತಡಕ್ಕೆ ನೂಕಿತ್ತು. ಐದಾರು ವರ್ಷಗಳಿಂದ ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಇತ್ತೀಚೆಗೆ ಸಕ್ಕರೆ ಕಾಯಿಲೆಯೂ ಅವರಿಗೆ ಗಂಟು ಬಿದ್ದಿತ್ತು. ಬಿ.ಪಿ. ಹಾಗೂ ಒತ್ತಡದ ಕಾರಣದಿಂದ ಅವರು ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದರು. ತಲೆಶೂಲೆಯಂತೂ ನಿತ್ಯದ ಅತಿಥಿಯಂತೆ ಇರುತ್ತಿತ್ತು. ಇಚ್ಛೆ ಇದ್ದ ಆಹಾರವನ್ನು ತಿನ್ನಲು ಸಹ ವೈದ್ಯರು ಮತ್ತು ಮನೆಯವರು ಅವರಿಗೆ ಅಡ್ಡಿಪಡಿಸುತ್ತಿದ್ದರು.

ಹನುಮಂತಪ್ಪನವರ ಎಲ್ಲಾ ಮಾತುಗಳನ್ನು ಸಾವಧಾನವಾಗಿ ಕೇಳಿದ ಡಾಕ್ಟರ ರಮೇಶಚಂದ್ರರವರು ಒಂದೆರಡು ಕ್ಷಣ ಸುಮ್ಮನೆ ಅವರನ್ನೇ ನೋಡುತ್ತಾ ಇದ್ದು ನಂತರ ತಮ್ಮ ಮೇಜಿನ ಡ್ರಾವರ್‌ನಿಂದ ಎರಡು ಸಣ್ಣ ಸಣ್ಣ ಪುಸ್ತಕವನ್ನು ತೆಗೆದು ಹನುಮಂತಪ್ಪನವರಿಗೆ ಕೊಟ್ಟು ಎರಡನ್ನೂ ಪರಸ್ಪರ ಹೊಡೆಯುವಂತೆ ಸೂಚಿಸಿದರು. ಹನುಮಂತಪ್ಪ ಅದೇ ರೀತಿ ಬಡಿದಾಗ ‘ಫಟ್ ಫಟ್.. ಎನ್ನುವ ಸಪ್ಪಳ ಬಂತು. ಹನುಮಂತಪ್ಪನವರು ಐದಾರು ಸಲ ಹೀಗೆ ಮಾಡಿದ ನಂತರ ಅವರ ಒಂದು ಕೈನಲ್ಲಿದ್ದ ಪುಸ್ತಕವನ್ನು ಹಿಂದಕ್ಕೆ ಪಡೆದ ವೈದ್ಯರು ಒಂದೇ ಪುಸ್ತಕದಿಂದ ಅದೇ ರೀತಿಯ ಕ್ರಿಯೆಯನ್ನು ಮುಂದುವರಿಸಲು ಹೇಳಿದರು.

`ಮಾನಸಿಕ ಒತ್ತಡ ಇದ್ದವರಿಗೆ ಇದೊಂದು ರೀತಿಯ ವ್ಯಾಯಾಮ ಇರಬೇಕೆಂದು' ನೆನೆದು ಹನುಮಂತಪ್ಪನವರು ಹಲವಾರಿ ಸಲ ಅದೇ ರೀತಿಯ ಕ್ರಿಯೆ ಪುನರಾವರ್ತಿಸಿ ತೋರಿಸಿದರು. ಆದರೆ ಈಗ ಕೈ ಬೀಸಿದಾಗ ಗಾಳಿಯ ಮಂದ ಶಬ್ಧ ಬಿಟ್ಟು ಬೇರೆ ಯಾವುದೇ ಶಬ್ಧ ಕೇಳಿ ಬರುತ್ತಿರಲಿಲ್ಲ.. 

“ಸಾಕು ಎನ್ನುವಂತೆ ಸನ್ನೆಯ ಮೂಲಕ ಹನುಮಂತಪ್ಪನವರಿಗೆ ತಿಳಿಸಿದ ವೈದ್ಯರು “ನೋಡಿ ಹನುಮಂತಪ್ಪನವರೇ ಇವು ಅಂತಿಂಥ ಪುಸ್ತಕಗಳಲ್ಲ. ಆಧ್ಯಾತ್ಮಿಕ ಪುಸ್ತಕಗಳು. ನಿರ್ಜೀವ ವಸ್ತಗಳೂ ಹೌದು. ಆದರೂ ಎರಡೂ ಪರಸ್ಪರ ಸ್ಫರ್ಶಿಸಿದಾಗ ಹೂಂಕರಿಸುತ್ತವೆ. ಅಂದ ಮೇಲೆ ಮನುಷ್ಯರ ಬಗ್ಗೆ ಹೇಳುವುದೇನು. ನಾವೆಲ್ಲ ಪ್ರತಿಷ್ಠೆಯ ಬೊಂಬೆಗಳು. ನಮ್ಮ ಅಭಿಮಾನಕ್ಕೆ ಒಂದಿಷ್ಟು ದಕ್ಕೆಯಾದರೂ ಸಿಡಿದೆದ್ದು ಬಿಡುತ್ತೇವೆ. ನಿಮಗೆ ತಾನು ಹಿರಿಯ ತಾನು ಹೇಳಿದಂತೆ ಆಗಬೇಕೆನ್ನುವ ಹಠ ಒಂದೆಡೆಯಾದರೆ ತಮ್ಮನಿಗೆ ವ್ಯವಹಾರ ಜ್ಞಾನ ಇಲ್ಲ ಎನ್ನುವ ನಿರ್ಲಕ್ಷ ಭಾವನೆ, ಅದೇ ನಿಮ್ಮ ತಮ್ಮನಿಗೆ ನಾನು ಅಣ್ಣನಿಗಿಂತ ಹೆಚ್ಚು ಓದಿದ್ದೇನೆ. ಈಗೀನ ಜನರ ನಾಡಿಮಿಡಿತ ತನಗೆ ಅಣ್ಣನಿಗಿಂತ ಚೆನ್ನಾಗಿ ಗೊತ್ತಿದೆ, ಇವನು ಹೇಳುವುದನ್ನು ನಾನೇಕೆ ಕೇಳಬೇಕು ಎನ್ನುವ ಗರ್ವ. ನಿಜಕ್ಕೂ ಘರ್ಷಣೆಗೆ ಕಾರಣ ಇದೆ! ಇದರಿಂದ ನಿಮ್ಮ ವ್ಯಾಪಾರದಲ್ಲಿ ಎಷ್ಟು ಲಾಭವಾಗಿದೆಯೋ ಗೊತ್ತಿಲ್ಲ ಆದರೆ ನಿಮ್ಮಿಬ್ಬರಿಗೆ ಆದ ಮಾನಸಿಕ ಕ್ಲೇಶದಿಂದ ನಿಮಗೆ ಐದು ವರ್ಷಗಳ ಹಿಂದೆ ಬಿ.ಪಿ. ಬಂತು, ಮೂರು ವರ್ಷಗಳ ಹಿಂದೆ ಡಯಾಬಿಟೀಸ್ ಬಂತು, ನಿಮ್ಮ ತಮ್ಮನಿಗೆ ಎರಡು ವರ್ಷದಿಂದ ಬಿ.ಪಿ ಇದೆ.... ಮುಂದೆ ಇದು ನಿಮ್ಮ ಹೃದಯಾಘಾತಕ್ಕೂ ಕಾರಣವಾಗಬಹುದು'' ಸಮಸ್ಯೆಯ ಬೇರು ಎಲ್ಲಿದೆ ಎಂದು ತಿಳಿಸಿದ ಡಾ|| ರಮೇಶಚಂದ್ರರು ಪ್ರತಿಕ್ರಿಯೆಗಾಗಿ ಹನುಮಂತಪ್ಪನವರನ್ನು ಗಮನಿಸುತ್ತಾ ಕುಳಿತರು.

ಒಂದೆರಡು ನಿಮಿಷ ತಮ್ಮ ಮನಸ್ಸಿನಲ್ಲಿಯೇ ಮಂಥನ ಮಾಡಿದ ಹನುಮಂತಪ್ಪನವರು ಕೊನೆಗೆ ವೈದ್ಯರ ಮಾತುಗಳನ್ನು ಒಪ್ಪಿಕೊಂಡವರಂತೆ “ನಿಮ್ಮ ಮಾತನ್ನು ನಾನು ನಿರಾಕರಿಸುದಿಲ್ಲ... ನನ್ನಲ್ಲಿರುವ ಗರ್ವ ಅಭಿಮಾನಗಳಿಂದಲೇ ನಮ್ಮಿಬ್ಬರ ಮಧ್ಯೆ ವೈಮನಸ್ಸು, ಘರ್ಷಣೆಗಳು ನಡೆದಿರ ಬಹುದು... ಆದರೆ ಮುಂದೆ ನಾನೇನು ಮಾಡಬೇಕು... '' ಪ್ರಶ್ನಾರ್ಥಕವಾಗಿ ವೈದ್ಯರನ್ನು ನೋಡುತ್ತಾ ಇದರಿಂದ ಹೊರ ಬರುವ ದಾರಿ ತೋರಿ ಎನ್ನುವ ಅಭಿಪ್ರಾಯದಿಂದ ಕೇಳಿದರು. 

ಇನ್ನು ಮುಂದೆ ಒಂಟಿ ಪುಸ್ತಕದಂತೆ ಇದ್ದುಬಿಡಿ, ಯಾವುದೇ ಘಷರ್ಣೆಗೆ ಹೋಗಲೇ ಬೇಡಿ. ಅಗತ್ಯವೆನಿಸಿದರೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಆದರೆ ತೀರ್ಮಾನವನ್ನು ತೆಗೆದುಕೊಳ್ಳುವ ಜಬಾಬ್ದಾರಿಯನ್ನು ನಿಮ್ಮ ತಮ್ಮನಿಗೆ ವಹಿಸಿ ಬಿಡಿರಿ. ತಪ್ಪಾಗಲಿ, ನಷ್ಟವಾಗಲಿ ಪ್ರತಿಕ್ರಿಯಿಸ ಬೇಡಿ. ಅದು ಅವನ ಗಮನಕ್ಕೆ ಹೋಗುವಷ್ಟು ಕಾಲ ಸುಮ್ಮನಿದ್ದು ಬಿಡಿ. ತನ್ನದೇ ತಪ್ಪಿನಿಂದ ನಷ್ಟವಾದಾಗ ಯಾರಾದರೂ ಅದಕ್ಕೆ ವ್ಯಥೆ ಪಟ್ಟ್ಟೇ ಪಡುತ್ತಾರೆ. ಮುಂದೆ ತಾನು ಅಂತಹ ತಪ್ಪುಗಳನ್ನು ಮಾಡಬಾರದೆಂದು ಮತ್ತಷ್ಟು ಜಾಗೃತರಾಗುತ್ತಾರೆ. ಅದೇ ಅಲ್ಲವೇ ಜೀವನಾನುಭವ! ನೀವು ಬೇಕಾದರೆ ಸ್ವಲ್ಪಕಾಲ ಎಲ್ಲಿಗಾದರೂ ಪ್ರವಾಸ ಹೋಗುಬನ್ನಿ... ತೀರ್ಥಯಾತ್ರೆ ಆದರೂ ಆದೀತು. ನಿಮ್ಮ ಮನಸ್ಸಿಗೂ ಸಮಾಧಾನ ಸಿಗುತ್ತದೆ.'' ವೈದ್ಯರು ಹನುಮಂತಪ್ಪನವರಿಗೆ ಒತ್ತಡದಿಂದ ಹೊರಬರುವ ಅತೀ ಸುಲಭದ ಪರಿಹಾರವನ್ನು ತಿಳಸಿ ಕಳುಹಿಸಿ ಕೊಟ್ಟರು. ಒಂದೇ ವಾರದಲ್ಲಿ ಹನುಮಂತಪ್ಪನವರು ವೈದ್ಯರಿಗೆ ಫೋನ್ ಮಾಡಿ “ತಮ್ಮ ಸಲಹೆಯಿಂದ ತುಂಬಾ ಲಾಭವಾಗಿದೆ, ಈಗ ನನ್ನ ಬಿ .ಪಿ. ಮಟ್ಟವೂ ತುಂಬಾ ಕಡಿಮೆಯಾಗಿದೆ, ನಾನು ಮುಂದಿನವಾರ ಉತ್ತರ ಭಾರತದ ಪ್ರವಾಸಕ್ಕೆ ಹೊರಟಿದ್ದೇನೆ.'' ಎಂದಾಗ ಡಾಕ್ಟರ್ ತುಟಿಯಂಚಿನಲ್ಲಿ ಸಮಾಧಾನದ ನಗು ಮೂಡಿತ್ತು.

ನಾವೂ ಹಾಗೆ ನಾನಾ ರೀತಿಯ ‘ಇಗೋಗಳನ್ನು ಬೆಳೆಸಿಕೊಂಡು ಒದ್ದಾಡುತ್ತಿರುತ್ತೇವೆ. ಇನ್ನೊಬ್ಬರೊಂದಿಗೆ ಜಗಳ, ಘರ್ಷಣೆ ಮಾಡಿಕೊಂಡು ಮಾನಸಿಕ ಕ್ಲೇಶಕ್ಕೀಡಾಗಿ ನಾನಾ ರೀತಿಯ ಸಮಸ್ಯೆಗಳನ್ನು ನಾವಾಗಿಯೇ ಆಮಂತ್ರಿಸುತ್ತಿರುತ್ತೇವೆ. ತಂದೆ-ತಾಯಂದಿರಿಗೆ ಮಕ್ಕಳು ನಾವು ಹೇಳಿದಂತೆ ಕೇಳಬೇಕು ಎನ್ನುವ ಇಗೋ ಆದರೆ, ಬಾಸ್‌ಗೆ ತನ್ನ ಕೈಕೆಳಗಿನವರು ನನ್ನ ಮಾತಿಗೆ ಎದುರಾಡ ಬಾರದೆನ್ನುವ ಇಗೋ... ಮಕ್ಕಳು ಈಗೀನ ಕಾಲದವರು, ಕಷ್ಟವೇ ಸೋಕದೇ ಬೆಳೆದವರು... ಅವರಲ್ಲೂ ತಾನು ಮತ್ತೊಬ್ಬರಿಗೆ ಯಾಕೆ ತಲೆಬಾಗ ಬೇಕೆನ್ನುವ ಇಗೋ... ಆದ್ದರಿಂದ ಮನೆ, ಕಛೇರಿಗಳಲ್ಲಿ ಒಂದೇ ಗೂಡಿನ ಹಕ್ಕಿಗಳಲ್ಲಿಯೇ ಸಂಘರ್ಷ... ನೋವು, ದುಃಖ... ಅವಮಾನ... ಅನಾರೋಗ್ಯ...ಆಸ್ಪತ್ರೆಗೆ ವ್ಯರ್ಥ ಖರ್ಚು..

ಇಂತಹ ಇಗೋಗಳಿಂದ ಲಾಭ ಏನೋ ಗೊತ್ತಿಲ್ಲ ಆದರೆ ಸಮಸ್ಯೆಗಳಿಗೆ ಸಿಲುಕ ಬೇಕಾಗುವುದು ಮಾತ್ರ ಶತಃಸಿದ್ದ... ಇಂಥಹ ಇಗೋ ನಮಗೆ ಬೇಕೆ? ಜೀವನವೂ ನಿಮ್ಮದೇ! ಜವಾಬು ನಿಮ್ಮದೇ!


1 likes

Published By

Argodu Suresh Shenoy

argodusureshshenoy

Comments

Appreciate the author by telling what you feel about the post 💓

Please Login or Create a free account to comment.