ಒಂದು ದೇಶದಲ್ಲಿ ಮಾಧ್ಯಮದ ಪಾತ್ರವು ಜನರಿಗೆ ಮಾಹಿತಿ ಮತ್ತು ಜ್ಞಾನವನ್ನು ನೀಡಲು ಬಹಳ ಮುಖ್ಯವೆನಿಸುತ್ತದೆ. ಮಾಧ್ಯಮವನ್ನು ಜನಸಾಮಾನ್ಯರಿಗೆ ಮಾಹಿತಿ ನೀಡುವ ಉತ್ತಮ ವೇದಿಕೆ ಅಥವಾ ಸಂವಹನ ಮಾಧ್ಯಮವೆಂದು ಪರಿಗಣಿಸಲಾಗಿದೆ. ಮಾಹಿತಿ ಮತ್ತು ಜ್ಞಾನವನ್ನು ಪ್ರಸಾರ ಮಾಡುವಲ್ಲಿ ಮಾಧ್ಯಮವು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವದರಲ್ಲಿ ಯಾವುದೇ ಸಂದೇಹವಿಲ್ಲ. ಮೂಲತಃ ಮಾಧ್ಯಮವು ನಾಗರಿಕರು ಮತ್ತು ಸರ್ಕಾರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಮಾಧ್ಯಮವು ಸರ್ಕಾರಕ್ಕೆ ಮೂರನೇ ಕಣ್ಣಿನಂತೆ ಕಾರ್ಯನಿರ್ವಹಿಸುತ್ತದೆ, ಇದು ಜನರು ಮತ್ತು ಸರ್ಕಾರದ ನಡುವೆ ಪಾರದರ್ಶಕತೆಯನ್ನು ತರುತ್ತದೆ.
ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವಾಗಿರುವ ಮಾಧ್ಯಮವು ಒಂದು ದೇಶದ ಜನರನ್ನು ತಮ್ಮ ಸುತ್ತಲಿನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಆಯಾಮಗಳನ್ನು ಗಮನದಲ್ಲಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ . ಮಾಧ್ಯಮವು ಕನ್ನಡಿಯನ್ನು ಹೋಲುತ್ತದೆ, ಅದು ಸತ್ಯ ಮತ್ತು ಕ್ರೂರ ವಿಚಾರಗಳನ್ನು ಬಹಿರಂಗಪಡಿಸುತ್ತದೆ. ಸುದ್ದಿ ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವಾಗಿದ್ದರೂ, ಅದು ಮುದ್ರಣ ಮಾಧ್ಯಮ ಅಥವಾ ಟೆಲಿವಿಷನ್ / ರೇಡಿಯೊ ಆಗಿರಲಿ, ಇದರ ಪ್ರಮುಖ ಉದ್ದೇಶವೆಂದರೆ ಯಾವುದೇ ಬದಲಾವಣೆ ಅಥವಾ ನಿಯಂತ್ರಣವಿಲ್ಲದೆ ನಿಷ್ಪಕ್ಷಪಾತ ಸುದ್ದಿಗಳೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಏಕೆಂದರೆ ಜನರು ಮಾಧ್ಯಮ ಹೇಳುವದನ್ನು ನಂಬುತ್ತಾರೆ, ನೋಡುತ್ತಾರೆ ಮತ್ತು ಕೇಳುತ್ತಾರೆ. ಆದ್ದರಿಂದ ಮಾಧ್ಯಮಗಳು ನಿಜವಾದ ಸಂಗತಿ ಮತ್ತು ಅಂಕಿಅಂಶಗಳನ್ನು ಆಧರಿಸಿದ ಸುದ್ದಿ ಮಾಹಿತಿಯನ್ನು ಪ್ರಸಾರ ಮಾಡುವುದು ನಿಜಕ್ಕೂ ಅಗತ್ಯವಾಗುತ್ತದೆ, ಏಕೆಂದರೆ ಇದು ಜನಸಾಮಾನ್ಯರ ಮೇಲೆ ಭಾರಿ ಪ್ರಭಾವ ಬೀರುತ್ತದೆ.
ಮಾಧ್ಯಮವು ಪಕ್ಷಪಾತವಿಲ್ಲದ ಮತ್ತು ಮುಕ್ತವಾಗಿದ್ದರೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತದೆ. ಪ್ರಚಾರ ಚಾನೆಲ್‌ಗಳಂತೆ ನಡೆಯುವ ಟಿ.ವಿ. ಸುದ್ದಿ ಚಾನೆಲ್‌ಗಳು ಹೆಚ್ಚಿನ ಟಿ.ಆರ್.ಪಿ.ಗಳಿಗೆ ಬೇಕಾದಂತೆ ಸುದ್ದಿಯನ್ನುತಿರುಚುವ ಅಥವಾ ಮಸಾಲೆ ಹಚ್ಚುವ ಕೆಲಸ ಮಾಡಿದಾಗ ಸಾಮಾನ್ಯರ ವಿಶ್ವಾಸವನ್ನುಕಳೆದುಕೊಳ್ಳುತ್ತದೆ. ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆಯ ನಡುವೆ ತೆಳುವಾದ ಗೆರೆ ಇದೆ. ಮಾಧ್ಯಮ ಸಂಸ್ಥೆ ಮತ್ತು ವರದಿಗಾರನನ್ನು ಅವರ ವಿಶ್ವಾಸಾರ್ಹತೆಯಿಂದ ತಿಳಿದುಕೊಳ್ಳಬೇಕು. ಮಾಧ್ಯಮ ಸಂಸ್ಥೆಯ ಜಾಹೀರಾತು ಆದಾಯಕ್ಕೆ ಟಿ.ಆರ್.ಪಿ.ಗಳು ಮುಖ್ಯವಾಗಬಹುದು, ಆದರೆ ನ್ಯಾಯಸಮ್ಮತತೆಗೆ, ವಿಶ್ವಾಸಾರ್ಹತೆಯು ಮುಖ್ಯವಾಗಿದೆ. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಮಾಧ್ಯಮಗಳು ಜನಮಾನಸದಲ್ಲಿ ಬಹಳ ಕಾಲದವರೆಗೆ ನೆಲೆ ನಿಲ್ಲುತ್ತವೆ.
ಸರ್ಕಾರಿಸ್ವಾಮ್ಯದ ದೂರದರ್ಶನ ಮತ್ತು ಆಕಾಶವಾಣಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಖಾಸಗಿ ಚಾನೆಲ್ಲುಗಳು ಮತ್ತು ಪತ್ರಿಕೆಗಳು ಯಾವುದಾದರೊಂದು ರಾಜಕೀಯ ಪಕ್ಷದ ಅಥವಾ ಉದ್ಯಮಿಗಳ ಮುಖವಾಣಿಯಂತೆ ಕಾರ್ಯನಿರ್ವಹಿಸುವದನ್ನು ಕಾಣುತ್ತೇವೆ. ಇಂಥ ಮಾಧ್ಯಮಗಳಿಂದ ಜನಸಾಮಾನ್ಯರಿಗೆ ಯಾವದೇ ರೀತಿಯ ಪ್ರಯೋಜನವಿಲ್ಲ. ಧರ್ಮ, ಜಾತಿ, ರಾಜಕೀಯದಿಂದ ಹೊರತಾಗಿರುವ ಮಾಧ್ಯಮಗಳು ವಸ್ತುಸ್ಥಿತಿಯನ್ನು ಸಮರ್ಥವಾಗಿ ಸಮಾಜಕ್ಕೆ ತಲುಪಿಸಲು ಯಶಸ್ವಿಯಾಗುತ್ತದೆ. ಅದನ್ನು ಮರೆತರೆ ಮಾಧ್ಯಮ ಕೇವಲ ಮನರಂಜನೆ ನೀಡುವ ವಸ್ತುವಾಗಿದೆಯೇ ಎನ್ನುವ ಸಂದೇಹ ಎಲ್ಲರಿಗೂ ಕಾಡುತ್ತದೆ.
ದಿನಸ್ಯ ಪೂರ್ವಾರ್ಧ ಪರಾರ್ಧ ಭಿನ್ನ|
ಛಾಯೇವ ಮೈತ್ರಿ ಖಲ ಸಜ್ಜನಾನಾಮ್ ||
ಎಂದಿರುವ ಸಂಸ್ಕೃತ ಸುಭಾಷಿತದಂತೆ ಮುಂಜಾನೆ ನಮ್ಮ ನೆರಳು ದೀರ್ಘವಾಗಿದ್ದು, ಮಧ್ಯಾನ್ಹ ಚಿಕ್ಕದಾಗುತ್ತದೆ. ಹೀಗೆ ದುರ್ಜನರ ಮೈತ್ರಿ ಮುಂಜಾನೆ ನೆರಳಂತೆ ಆರಂಭದಲ್ಲಿ ಗಾಢವಾಗಿರುತ್ತದೆ. ಸಜ್ಜನರ ಮೈತ್ರಿ ಮಧ್ಯಾನ್ಹ ನೆರಳಿನಂತೆ ಆರಂಭದಲ್ಲಿ ಕಡಿಮೆಯಿದ್ದು ಬರಬರುತ್ತ ಹೆಚ್ಚಾಗುತ್ತದೆ. ಆದರೆ ಮಾಧ್ಯಮದ್ದು ಊಹೆ ಮಾಡಲಾಗದು. ಹೊತ್ತೊತ್ತಿಗೂ ವರಸೆ ಬದಲಾಗುತ್ತದೆ. ಲಾಭ ಬಂದರೆ ಸುದ್ದಿಯ ವಾಸನೆಯೇ ಬದಲಾಗುತ್ತದೆ. ಲಾಭವಿಲ್ಲದ ಸುದ್ದಿಗಳನ್ನು ಮೂಸಿಯೂ ನೋಡುವದಿಲ್ಲ.
ಪ್ಲೇಟೋ ನ ಮೆನೋ ದಲ್ಲಿ ಸಾಕ್ರಟೀಸ್ ಮತ್ತು ಆನಿಟಸ್ ನಡುವೆ ಸಂಭಾಷಣೆಯ ಒಂದು ಪ್ರಸಂಗವಿದೆ, ಅವರು ವಿಮರ್ಶಾತ್ಮಕ ದೃಷ್ಟಿಕೋನಗಳಿಗಾಗಿ ಸಾಕ್ರಟೀಸ್‌ನ ಅಭಿಯೋಜಕರಲ್ಲಿ ಒಬ್ಬರಾಗಿದ್ದರು. ಸಾಕ್ರಟೀಸ್ ಆನಿಟಸ್ ಅವರನ್ನು ಕೇಳಿದಾಗ, “ನಿಮಗೆ ಏನಾದರೂ ಅನುಭವವಿಲ್ಲದಿದ್ದಾಗ ಯಾವುದರಲ್ಲಿ ಒಳ್ಳೆಯದು ಅಥವಾ ಕೆಟ್ಟದು ಎಂದು ನೀವು ಹೇಗೆ ತಿಳಿಯಬಹುದು?
ಅದಕ್ಕೆ ಅವರ ಪ್ರತಿಕ್ರಿಯೆ ಹೀಗಿತ್ತು- "ತುಂಬಾ ಸುಲಭವಾಗಿ. ಹೇಗಾದರೂ, ನಾನು ಅನುಭವವನ್ನು ಹೊಂದಿದ್ದೇನೆ ಅಥವಾ ಇಲ್ಲವೇ ಎಂದು ನಾನು ಅವರ ರೀತಿಯನ್ನು ತಿಳಿದಿದ್ದೇನೆ". ಇದು ಬಹುಶಃ ಭಾರತದ ಮಾಧ್ಯಮದ ವಿಷಯದಲ್ಲಿ ಸರಿ ಎನ್ನಿಸುವ ಅಂಶ.
ವಸ್ತುನಿಷ್ಠ ಸತ್ಯದ ವಿರುದ್ಧ ಪ್ರಭುತ್ವದ ಧ್ವನಿಯನ್ನು ಪ್ರತಿನಿಧಿಸುವ ಈ ಬೆತ್ತಲೆತನವು ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಭಾರತೀಯ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ. ಸುದ್ದಿಗಳು ಅದರ ಯೋಗ್ಯತೆಯನ್ನು ಕಳೆದುಕೊಂಡಿವೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಸುದ್ದಿ ನಿರೂಪಕರು ನ್ಯಾಯಾಧೀಶರಾಗಿ ಯಾವುದೇ ನೈತಿಕ ಪರಿಗಣನೆಯಿಲ್ಲದೆ ತಮ್ಮ ತೀರ್ಪನ್ನು ನಾಚಿಕೆಯಿಲ್ಲದೆ ರವಾನಿಸಿದ್ದಾರೆ. ಮಾಧ್ಯಮ ಸಂಸ್ಥೆಗಳು ಸುವಾರ್ತೆಗಳಾಗಿ ನಕಲಿ ಸುದ್ದಿಗಳನ್ನು ಹರಡುವ ಮೂಲಕ ತಪ್ಪು ಇತಿಹಾಸವನ್ನು ಬರೆಯುತ್ತಿವೆ. ಊಹಾಪೋಹಗಳು ಮತ್ತು ನಿರಂತರ ತಪ್ಪು ಮಾಹಿತಿಯು ಭಾರತದ ಹೆಚ್ಚಿನ ಭಾಗವನ್ನು ಉನ್ಮಾದಕ್ಕೆ ತಳ್ಳುತ್ತಿದೆ. ಸುಳ್ಳು ಸತ್ಯಕ್ಕಿಂತ ವೇಗವಾಗಿ ಹರಡುತ್ತದೆ ಮತ್ತು ಸಾಮಾಜಿಕ ಮಾಧ್ಯಮಗಳ ಪಾತ್ರವು ಈ ಮುಖ್ಯವಾಹಿನಿಯ ಮಾಧ್ಯಮಗಳಿಂದ ಬರುವ ಅಸಂಬದ್ಧತೆಗಳನ್ನು ಮರುಬಳಕೆ ಮಾಡುವ ಪ್ರಮುಖ ಮೂಲವಾಗಿದೆ. ಈ ನಿರಂಕುಶ ಸಮನ್ವಯದಲ್ಲಿ, ಸಾಮಾಜಿಕ ಮಾಧ್ಯಮಗಳು ಸುಳ್ಳನ್ನು ಹರಡಲು ಪ್ರಮುಖ ಪಾತ್ರ ವಹಿಸಿವೆ.
ಸುದ್ದಿ ಮತ್ತು ಸತ್ಯದ ನಡುವೆ ವ್ಯತ್ಯಾಸವಿದೆ. ಜನರ ಅಭಿಪ್ರಾಯವನ್ನು ರೂಪಿಸುವಲ್ಲಿ ಇದು ಅವಶ್ಯಕವಾಗಿದೆ. ಈ ಮಾಧ್ಯಮ ಪಕ್ಷಪಾತಗಳು ಒಂದು ದೊಡ್ಡ ಕಾರ್ಯಸೂಚಿಯನ್ನು ಹೊಂದಿವೆ. ನಕಲಿ ಸುದ್ದಿ. ಮುಕ್ತ ಪತ್ರಿಕೆಯ ಹೆಸರಿನಲ್ಲಿ ಸುಳ್ಳುಗಳನ್ನು ಹರಡುವ ಮೂಲಕ ಭಾರತೀಯ ಸಾರ್ವಜನಿಕರನ್ನು ನಿಷ್ಕ್ರಿಯ ಗ್ರಾಹಕರನ್ನಾಗಿ ಪರಿವರ್ತಿಸುವ ನಿರಂತರ ಪ್ರಕ್ರಿಯೆ ಇದೆ. ಜನರು ಪ್ರಶ್ನಿಸದೆ ಸ್ವೀಕರಿಸುತ್ತಾರೆ ಎಂದು ಮಾಧ್ಯಮವು ಭಾವಿಸಿ ತನಗೆ ಬೇಕಾದಂತೆ ವಸ್ತುನಿಷ್ಠತೆಯನ್ನು ಮರೆಮಾಚಿ ಸುಳ್ಳನ್ನು ಸತ್ಯವೆಂದು ನಂಬಿಸುವದು ದೊಡ್ಡ ಪಿಡುಗಾಗಿದೆ. ಪ್ರಶ್ನಾರ್ಥಕ ಚಿನ್ಹೆ ಮತ್ತು ಉದ್ಘಾರವಾಚಕ ಚಿಹ್ನೆಗಳೇ ಫ್ಲ್ಯಾಶ್ ನ್ಯೂಸ್ ಗಳ ಬಂಡವಾಳ ಎನ್ನುವದು ಭಾಷೆ, ಸಾಹಿತ್ಯ ಗೊತ್ತಿಲ್ಲದ ಹಳ್ಳಿ ಗುಗ್ಗಗೂ ತಿಳಿದಿದೆ.
ನಮ್ಮ ಸ್ವಾತಂತ್ರ್ಯವನ್ನು ಚಲಾಯಿಸಲು ಸಾಧ್ಯವಾಗದಿದ್ದರೆ ನಾವು ದಬ್ಬಾಳಿಕೆಯನ್ನು ಆಹ್ವಾನಿಸುತ್ತಿದ್ದೇವೆ ಅಂತಲೇ ಅರ್ಥ. ಆ ದಬ್ಬಾಳಿಕೆಯನ್ನು ನಿಲ್ಲಿಸುವ ಏಕೈಕ ವಿಮರ್ಶಾತ್ಮಕ ಧ್ವನಿ ಸ್ವತಂತ್ರ ಆಲೋಚನೆಗಳು. ಯಾವುದೇ ಸುಳ್ಳನ್ನು ಒಪ್ಪುವ ಮೊದಲು ಜನರು 'ಪುರಾವೆ ಎಲ್ಲಿದೆ?' ಎನ್ನುವ ಪ್ರಶ್ನೆ ಕೇಳಬೇಕಾದ ಅಗತ್ಯವಿರುತ್ತದೆ. ವಿರೂಪಗಳು ಸತ್ಯಗಳಾಗಿರಬಾರದು ಮತ್ತು ಸುಳ್ಳು ಎಷ್ಟೇ ನಂಬಿಕೆಗೆ ಯೋಗ್ಯವಾಗಿದ್ದರೂ ಸತ್ಯವನ್ನು ಬದಲಿಸಲಾಗುವುದಿಲ್ಲ. ಮುಗ್ಧರನ್ನು ತಪ್ಪಿತಸ್ಥರನ್ನಾಗಿ ಮಾಡಲು ಮತ್ತು ತಪ್ಪಿತಸ್ಥರನ್ನು ನಿರಪರಾಧಿಗಳನ್ನಾಗಿ ಮಾಡಲು ಮಾಧ್ಯಮಕ್ಕೆ ಅಧಿಕಾರವಿಲ್ಲ. ಮಾಧ್ಯಮ ಹರಿತವಾದ ಅಲುಗಿನ ಕತ್ತಿಯಿದ್ದಂತೆ. ಅದರ ಸಮರ್ಥ ಬಳಕೆಯಿಂದ ಸಮಾಜದ ಉದ್ಧಾರ ಮತ್ತು ಮಾಧ್ಯಮ ಸಂಸ್ಥೆಯ ಏಳ್ಗೆಯೂ ಸಾಧ್ಯವಿದೆ.
Comments
Appreciate the author by telling what you feel about the post 💓
ಚೆನ್ನಾಗಿದೆ ಅರ್ಥಪೂರ್ಣವಾಗಿದೆ.
Dhanyavadagalu
Please Login or Create a free account to comment.