ಗುದ್ದಾಟ - ಕಥೆ
ಈ ಅವಿನಾಶ ನನ್ನ ಬಾಲ್ಯದ ಗೆಳೆಯ.ಆಗಾಗ ಸಿಗ್ತಾ ಇರ್ತಾನೆ. ಜಬರ್ದಸ್ತ್ ಜೂಜುಕೋರ.ಆ ಇಸ್ಪೀಟು ಆಟಕ್ಕೆ ಅಧ್ಯಾತ್ಮಿಕ ಚಿಂತನೆಯ ಟಚ್ ಕೊಡೋ ಮಾತುಗಾರ ಕೂಡಾ.
ಇತ್ತೀಚೆಗೆ ಒಂದು ದಿನ ಅವನು ಸಿಕ್ಕಾಗ ಎಲ್ಲರಂತೆಯೇ ನಮ್ಮ ಮಾತು ಕೂಡಾ ಪಾಕಿಸ್ತಾನದ ಜೊತೆಗಿನ ಯುದ್ಧದ ಸಾಧ್ಯತೆಯ ಕುರಿತೇ ಸಾಗಿತ್ತು.
ಅಚಾನಕ್ಕಾಗಿ ಅವಿನಾಶ ' ಏ ಮಾರಾಯಾ...ಆ ಪಾಕಿಸ್ತಾನದ ಜೊತೆ ಯುದ್ಧ ಮಾಡೋದು ಒಂದೇ, ಈ ನಮ್ಮೂರ ಮರ್ಲನ ಕೂಡೆ ಇಸ್ಪೀಟು ಆಡೋದೂ ಒಂದೇ' ಎಂದ್ಬಿಟ್ಟ.
'ಯಾಕೋ ಹಾಂಗೆ ಹೇಳ್ತೀಯಾ?' ಕೇಳಿದೆ. ಅವನ ಹೇಳತೊಡಗಿದ...
ಯುಗಾದಿ ಹಬ್ಬದ ಮರುದಿನ ನಮ್ಮಲ್ಲಿ ಅಂದರ್ ಬಾಹರ್ ಅಂತ ಇಸ್ಪೀಟಾಟ ಆಡೋದು ಕಾಮನ್, ನಿಂಗೆ ಗೊತ್ತುಂಟಲ್ಲಾ. ನಾನೂ ಊರಲ್ಲಿ ಆಡದೇ ಬಾಳದಿನ ಆಯ್ತು, ಆಡಾಣ ಅಂತ ಒಂದ್ಹತ್ತು ಸಾವಿರ ಮಡಿಕ್ಕಂಡು ಹೋಗಿದ್ದೆ.
ಊರಲ್ಲಿ ಈ ಬಾರಿ ಹಬ್ಬದ ಆಟಕ್ಕೆ ನಾನು ಬರ್ತೀನಿ ಅನ್ನೋದು ಫುಲ್ ಹವಾ ಆಗ್ಬುಟ್ಟಿತ್ತು. ಜನ ಸೇರ್ತಾ ಇದ್ರು.
ಅಷ್ಟೊತ್ತಿಗೆ ಚೂರು ಹೆಂಡ ಹಾಕ್ಕೊಂಡು ಎದುರಿಗೇ ಬಂದು ಒಡಾಯ್ದ ನೋಡು ಆ ಮರ್ಲ.ಎಣ್ಣೆ ಪವರ್ನಾಗೆ ನಂಗೇ ಚಾಲೆಂಜು.ಮಡಚಿ ಸುಕ್ಕಾದ ಹತ್ತು ರೂಪಾಯಿ ಅವನ ಕೈಯಲ್ಲಿ. ತೊಂಬತ್ರೂಪಾಯಿಗೆ ಒಂದು ಕ್ವಾಟ್ರು ಏರಿಸಿ ಹತ್ರೂಪಾಯಿ ಹಿಡ್ಕಂಡು ಬಂದಿದ್ದ ಅನ್ಸುತ್ತೆ.ಜನ ಬೇರೆ, ಆ ಮರ್ಲಂದೊದು ಚಟ ಮುಗ್ಸಿ ಕಳ್ಸು ಅವಿನಾಶಣ್ಣ ಅನ್ನೋ ಉಮೇದು ಜೊತೆಗೆ ಮರ್ಯಾದೆ ಪ್ರಶ್ನೆ. ಎಂತಾ ಸಾವುದು?
ಹೂಂ ಬಾರೋ ಅಂತ ಕರೆದೆ.ಒಂದೇ ಆಟಕ್ಕೆ ಪಿನಿಸ್ ಮಾಡೋ ಇರಾದೆ.
ಟಾಸ್ ಗೆದ್ದ ಮರ್ಲನೇ ಕೈ ಹೊಡೂಲೆ ಶುರು ಮಾಡದ. ಹೇಳಿ ಕೇಳಿ ಅಂದರ್ ಬಾಹರ್ ಅದು. ಅಷ್ಟೂ ಒಳಗೆ ಬೀಳೂಕೆ ಶುರು ಆತು. ಅವನ ಹತ್ರ ಇದ್ದ ಹತ್ರೂಪಾಯಿ ಐದ್ಸಾವ್ರ ಆತು. ನನ್ನತ್ರ ಇದ್ದ ಹತ್ತು ಐದಾಯ್ತು.
ಜನ ಪೂರಾ ಸೇರಿಕೊಂಡಿದ್ರು.ಎಷ್ಟೋ ಜನರಿಗೆ ಇವಂಗೆ ಸರಿ ಆತ್ತು, ಬಹಳ ಹಾರಾಡ್ತಿದ್ದ ಅನ್ಸಿರ್ಬೋದು.ಕೊನೆ ಆಟ ಹೋದ್ರೆ ಪೂರಾ ಹತ್ತು. ಬಂದ್ರೆ ನನ್ನ ದುಡ್ಡು ನಂಗೆ.ಎಂತಾ ಮಷ್ಕಿರಿ ನೋಡು.
ಅಂತೂ ಯೋಗ ಖುಲಾಯ್ಸ್ತು.ಆ ಕೊನೇ ಆಟ ' ಹೊರಗೆ' ಬಿತ್ತು.ಸಾಕೋ ಸಾಕು ಮಾರಾಯ. ಹಾರ್ಟು ಬಾಯಿಗೆ ಬಂದಂಗೆ ಆಗಿತ್ತು.
ಬೇಕಿತ್ತಾ ನಂಗದು?
ಇನ್ನೇನು ಹೊರ್ಡ್ಬೇಕು ಮರ್ಲ ಕಾಲಿಗೆ ಬಿದ್ದ. ಅಣ್ಣಾ ನಶೆ ಪೂರಾ ಇಳ್ದೋತು. ತತ್ತಾರಣ್ಣೋ ನೂರ್ರೂಪಾಯಿ ಅಂತ ಗೋಗೆರದ.ಅಲ್ಲಿಗೆ ಹತ್ತರ ಬದಲು ನೂರಾಯ್ತು ಅವಂಗೆ.ಸೆರೆ ಅಂಗ್ಡಿಗೆ ಓಡಿದ ಮತ್ತೆ.ಅವನ ಅತ್ತ ಹೋಗುತ್ತಿದ್ದಂತೆ ಬಂದ ಮಂಜ - ಅಣ್ಣಾ ದೊಡ್ಡ ವಿನ್ ಆಗಿದೆ. ಹತ್ತು ಪರ್ಸೆಂಟ್ ಬೇಸ್ತು ಅಂದ.ನಿಯಮ ಗೊತ್ತಿದ್ದರೂ ನಾನು ಬೇಸ್ತು ಬಿದ್ದೆ..!
ಕತೆ ಮುಗಿಸಿದ ಅವಿನಾಶ ಹಾಗೆ ಈ ಪಾಕಿಗಳು ಅಂತ ಬೇರೆ ಹೇಳದೇ, ಮತ್ಯಾವುದೋ ವೇದಾಂತದ ಮಾತು ಎತ್ತಿದ. ' ಯುದ್ಧ, ಕಾನೂನು ಸಮರ ಮತ್ತು ಜೂಜಿನಲ್ಲಿ ಗೆದ್ದಂವ ಸೋತ, ಸೋತವ ಸತ್ತ' ಎನ್ನುತ್ತಾ ಮುಂದೆ ಸಾಗಿದ.
*****
- ಡಾ.ಅಜಿತ್ ಹರೀಶಿ
Comments
Appreciate the author by telling what you feel about the post 💓
ಅರ್ಥಪೂರ್ಣವಾಗಿದೆ !!
Please Login or Create a free account to comment.