ನಂತರ

ಅರಿಷಡ್ವರ್ಗಗಳ ಕುರಿತು

Originally published in kn
Reactions 1
539
Ajit Harishi
Ajit Harishi 30 Aug, 2020 | 1 min read
Desire, angry and fear

ನಂತರ

ನಯ ನಿರಾಕರಣೆಯ ನಿರ್ಲಕ್ಷ್ಯವನು

ಮಡುಗಟ್ಟಿ ಕಾಪಿಟ್ಟ ಸಂಕಲ್ಪವನು 

ಹಿಂಡಿ ಹಿಪ್ಪೆಯಾಗಿಸಿ ವಿಜೃಂಭಿಸಿದನು

ಕೊನೆಗೆ ಸಡಿಲಾಗಿ ಬಿಟ್ಟ ಅವಳ

ಕೈಗಳು, ಇವನ ಬೆನ್ನ ಮೇಲೆ

ಗೆಲುವಿನ ನಂತರ....?


ಕೈಗೆ ಸಿಕ್ಕಿದ್ದನು ಎತ್ತಿ ಎಸೆಯುತ್ತಿದ್ದನು

ಕ್ರೋಧವಾವರಿಸಿಕೊಂಡ ಕಾರವಾಯಿಯಲ್ಲಿ

ಅರಚಿ, ಪರಚಿಕೊಂಡು, ನೋವುಂಡು

ಚಾದರದ ತೆಕ್ಕೆಯಲಿ ಬಿಕ್ಕುತ್ತಿದ್ದನು

ಕುದಿವ ಕ್ರೋಧವ, ಗಂಗೆಯಲಿ

ಬಿಟ್ಟು ಬಂದ ನಂತರ...?


ಕೂಡಿಟ್ಟ ಬಚ್ಚಿಟ್ಟ ಸಕಲವ

ಹೊತ್ತಿಗೊಂದಾವರ್ತಿ ಹಾಕಿದ್ದ ಚಿಲಕವ

ಆಗಾಗ ಎದ್ದು ನೋಡುತ್ತಿದ್ದನು

ನಿದ್ರೆಯಿಲ್ಲದ ದಿನಗಳಲಿ, ದೃಢ ನಿರ್ಧಾರ

ಅಪರಿಗ್ರಹದ ನಂತರ....?


ಹೊರಸೋಗಿನಲಿ ವಿನಯ

ಒಳಗೇ ಬೇರುಬಿಟ್ಟ ಮದವನರಿಯ

ಸಾಲು ಸಾಲು ಹೊಡೆತಗಳು 

ಅನ್ಯಥಾ ಶರಣಂ ನಾಸ್ತಿ

ಮದವಳಿದ ನಂತರ....?


ಮೋಹ, ಮತ್ಸರದ ಮಧ್ಯೆ ನಿಂದ, 

ಅರ್ಜುನನ ನಿತ್ಯಕರ್ಮ ಯುದ್ಧ

ರೂಢಿ ಮತ್ತು ಇಷ್ಟ, ಬಿಡುವ ಕಷ್ಟ

ಸಮರ ಸುಖವ ಕಳೆದ ನಿಷ್ಠ

ಗೆದ್ದಭಾವ, ಯುದ್ಧವಿಲ್ಲ; ಮುಂದೆ....

ಮತ್ತೂ ಬಯಸಿದ್ದ ಬಿಟ್ಟ ನಂತರ....?

* * * *

( ಅಪರಿಗ್ರಹ = ಸ್ವತ್ತುಗಳನ್ನು ಅಗತ್ಯಕ್ಕೆ ಮಿತಗೊಳಿಸುವುದು.)

* * * 

- ಡಾ. ಅಜಿತ್ ಹರೀಶಿ

1 likes

Published By

Ajit Harishi

ajitharishi

Comments

Appreciate the author by telling what you feel about the post 💓

Please Login or Create a free account to comment.