ಪ್ರೇಮಸಂಜೆ

ಮುಗಿಯದ ಪ್ರೀತಿ.

Originally published in kn
Reactions 0
318
Susmita hegde
Susmita hegde 15 Dec, 2020 | 1 min read



 2000ನೇ ಇಸವಿ, ಫೆಬ್ರವರಿ 14


 ಒಂದಷ್ಟು ಸರಕಾರಿ ಕೆಲಸದ ನಿಮಿತ್ತ ಸಿಟಿಗೆ ತೆರಳಿದ್ದ ವೈದೇಹಿ ಕೆಲಸ ಮುಗಿಸಿಕೊಂಡು ಒಂದಷ್ಟು ದಿನಸಿ-ತರಕಾರಿ ತೆಗೆದುಕೊಂಡು ಟ್ಯಾಕ್ಸಿ ಮಾಡಿಸಿಕೊಂಡು ಹಿಂದಿರುಗುವ ವೇಳೆ ರಾತ್ರಿಯ ಒಂಬತ್ತು ಗಂಟೆ ದಾಟಿಹೋಗಿತ್ತು...


ಮೊದಲೇ ಜನಸಂಚಾರ ವಿರಳವಾಗಿದ್ದ ರಸ್ತೆಯದು ಅಂದು ಪ್ರೇಮಿಗಳ ದಿನ ಬೇರೆ.. ಅಂಥ ಸಂಭ್ರಮಾಚರಣೆ ಮಾಡುವ ಕಾಲವಲ್ಲದೇ ಇದ್ದರೂ ಪ್ರೇಮಿಗಳು ಎನಿಸಿಕೊಂಡವರು ಪ್ರೀತಿಸಿದವರ ಜೊತೆ ಕಾಲ ಕಳೆಯಲು ಮನೆಯಲ್ಲೊಂದು ಸುಳ್ಳು ನೆಪ ಹೂಡಿ ಹೊರಗೆ ಹೋಗಿದ್ದರೆ, ಪ್ರೇಮಿಗಳಿಲ್ಲದೇ ಇರುವವರು ಬೆಚ್ಚಗೆ ಹೊದ್ದು ಮಲಗಿಬಿಟ್ಟಿದ್ದರು.. ಇವೆರಡು ಒಂದು ಕ್ಯಾಟಗರಿಯಾದರೆ ಪ್ರೀತಿಸಿದವರಿಂದ ತಿರಸ್ಕರಿಸಲ್ಪಟ್ಟವರು ಬೇರೆಯದೇ ಕ್ಯಾಟಗರಿ.. 


ಹಳೆಯದಿನಗಳನ್ನು ನೆನಪಿಸಿಕೊಳ್ಳುತ್ತಾ ಟ್ಯಾಕ್ಸಿಯ ಕಿಟಕಿಯತ್ತ ದೃಷ್ಟಿ ನೆಟ್ಟಿದ್ದ ವೈದೇಹಿ ಹೊರಗಡೆ ಕಂಡ ದೃಶ್ಯದಿಂದ ಬೆಚ್ಚಿಬಿದ್ದಿದ್ದರು... ಡ್ರೈವರ್ಗೆ ಟ್ಯಾಕ್ಸಿ ನಿಲ್ಲಿಸುವಂತೆ ಹೇಳಿ ಹೊರಗಡೆ ಇಳಿದು ಅತ್ತ ಧಾವಿಸುವಷ್ಟರಲ್ಲಿ ಬ್ರಿಡ್ಜ್ ಕಟ್ಟೆಯ ತುದಿಯಲ್ಲಿ ನಿಂತ ಹುಡುಗ ನೀರಿಗೆ ಧುಮುಕಿಯೇಬಿಟ್ಟಿದ್ದ.. 


ಸಮಯಪ್ರಜ್ಞೆ ತೋರಿದ ಡ್ರೈವರ್ ಒಂದಿಬ್ಬರು ದಾರಿಹೋಕರ ಸಹಾಯದಿಂದ ನೀರಿಗೆ ಬಿದ್ದವನನ್ನ ಎತ್ತಿ ತಂದಾಗ ಆ ಹುಡುಗ ಪ್ರಜ್ಞೆತಪ್ಪಿಹೋಗಿದ್ದಷ್ಟೇ ಅಲ್ಲದೇ ಬಹಳಷ್ಟು ನೀರು ಸಹ ಕುಡಿದುಬಿಟ್ಟಿದ್ದ.. 


ಆತನ ಹೊಟ್ಟೆಯಮುಕಿ ನೀರು ಹೊರಕಕ್ಕಿಸಿ ಪ್ರಥಮ ಚಿಕಿತ್ಸೆ ನೀಡಿದರೂ ಆತನಿಗಿನ್ನೂ ಜ್ಞಾನ ಬಂದಿರಲಿಲ್ಲ.. ವೈದೇಹಿ ಮಾನವೀಯತೆ ದೃಷ್ಟಿಯಿಂದ ಆ ಹುಡುಗನನ್ನು ತಾವಿರುವ ಸ್ಥಳಕ್ಕೆ ಕರೆದೊಯ್ದಿದ್ದರು...


"ಆಶ್ರಯ"ದಲ್ಲಿ ಮಲಗಿದ್ದ ಹುಡುಗನನ್ನು ವೈದ್ಯರು ಪರೀಕ್ಷಿಸಿ ಒಂದು ಇಂಜೆಕ್ಷನ್ ಚುಚ್ಚಿ "ಜೀವಕ್ಕೇನು ಅಪಾಯವಿಲ್ಲ ನೀರಿನಲ್ಲಿ ಮುಳುಗಿದ್ದರಿಂದ ಚಳಿ-ಜ್ವರ ಅಂತದ್ದೇನಾದರೂ ಶುರುವಾಗುವ ಸಂಭವವಿದೆ.. ಹಾಗಾದಲ್ಲಿ ನನಗೆ ತಿಳಿಸಿ.. " ಎಂದು ಹೇಳಿ ಹೋಗಿದ್ದರು..


ಮಧ್ಯರಾತ್ರಿ ವೈದೇಹಿ ಅವನ ಬಳಿಯೇ ಕುಳಿತು ನೋಡಿಕೊಂಡಿದ್ದರು.. ನಿದ್ದೆಗಣ್ಣಿನಲ್ಲಿ ಏನೇನೋ ಕನವರಿಸುತ್ತಿದ್ದ.. ಬೆಳಿಗ್ಗೆ ಎದ್ದಾಗ ಅವನಿಗೆ ತಾನೆಲ್ಲಿದ್ದೀನಿ ಅನ್ನುವುದು ಗೊತ್ತಾಗದೇ ಗೊಂದಲವುಂಟಾಗಿ ನಿಧಾನಕ್ಕೆ ಎದ್ದು ಹೊರಗೆ ಹೋದಾಗ ಉದ್ಯಾನವನದಂತ ಅಂಗಳ, ತರಹೇವಾಹಿ ಹೂವುಗಳು ಸುರಿಯುತ್ತಿದ್ದ ಇಬ್ಬನಿ "ಎಷ್ಟು ಚಂದದ ವಾತಾವರಣ..! "ಎನ್ನಿಸಿತ್ತು..ಅಲ್ಲೇ ಹೊರಗಡೆ ದೊಡ್ಡದೊಂದು ಬೋರ್ಡ್ ನೇತಾಡುತ್ತಿತ್ತು... 


"ಆಶ್ರಯ "

 ವೃದ್ಧಾಶ್ರಮ...


ಅಂಗಳದಲ್ಲಿ ಸುಮಾರು ವೃದ್ಧರು ನೆರೆದಿದ್ದರು.. ವಾಕಿಂಗ್ ಮಾಡುವವರು ಒಂದಷ್ಟು ಜನರಾದರೆ, ಗಿಡಗಳಿಗೆ ನೀರು ಹಾಯಿಸುವವರು,ಕಟ್ಟೆಯ ಮೇಲೆ ಕುಳಿತು ಪಟ್ಟಂಗ ಹೊಡೆಯುವವರು ಇನ್ನೊಂದಷ್ಟು ಜನ.. 


ಅವರೆಲ್ಲರ ಮುಖದಲ್ಲಿ ನಗು ಕಂಡರೂ ಅದ್ಯಾವುದೋ ಒಂದು ನೋವಿನ ಗೆರೆ ಇನ್ನೂ ಮಾಸಿರಲಿಲ್ಲ.. 'ಹೆತ್ತು-ಹೊತ್ತು, ರಕ್ತ-ಬೆವರನ್ನೆಲ್ಲ ಬಸಿದು ಕಷ್ಟಪಟ್ಟು ಸಾಕಿದ ಮಕ್ಕಳಿಗೆ ಈ ತಂದೆ ತಾಯಿ ಬೇಡವಾದರೆ..! ಅದೇ ತನಗೇ ಇಂಥ ಅಪ್ಪ-ಇದ್ದಿದ್ದರೆ.." ಸಂಕಟವಾಗಿತ್ತು ಹುಡುಗನಿಗೆ...


ಒಬ್ಬ ವೃದ್ಧ ಮಾತ್ರ ಊರುಗೋಲು ನೆಲಕ್ಕೂರಿ ನಿಂತು ದಿಗಂತದತ್ತ ನೋಟ ನೆಟ್ಟು ಕುಳಿತಿದ್ದನ್ನು ನೋಡಿ ಹುಡುಗ ಚಕಿತನಾಗಿತ್ತ..


"ತಾತ ನೀವ್ಯಾಕೆ ಒಬ್ಬರೇ ಕುಳಿತಿದ್ದೀರಾ ? " ಎಂದು ಪ್ರಶ್ನಿಸಿದವನತ್ತ ತಿರುಗಿಯೂ ನೋಡಿರಲಿಲ್ಲ ಅವರು.. 


ಅಷ್ಟರಲ್ಲಿ ಬಂದ ವೈದೇಹಿ "ಅವರು ಹಾಗೆ ಸ್ವಲ್ಪ ಹೊತ್ತು ಕುಳಿತಿರ್ತಾರೆ... ಈಗ ನೀನು ತಿಂಡಿ ತಿನ್ನು " ಎಂದು ಕರೆದುಕೊಂಡು ಹೋಗಿ ತಿಂಡಿ ತಿನ್ನಿಸಿ ಅವನ ಪೂರ್ವಾಪರ ವಿಚಾರಿಸಿದ್ದರು..


ವೈದೇಹಿ "ನಾನು ಈ ವೃದ್ಧಾಶ್ರಮದ ವಾರ್ಡನ್..ಅದು ಸರಿ ನಿನ್ನ ಹೆಸರೇನು ? ಯಾವ ಊರು ? ಮನೆಯಲ್ಲಿ ಯಾರ್ಯಾರಿರ್ತಾರೆ ?" ಎಂದು ಪ್ರಶ್ನೆಗಳ ಸುರಿಮಳೆ ಸುರಿದಾಗ ಆ ಹುಡುಗ ಮುಜುಗರದಿಂದಲೇ ಉತ್ತರಿಸಿದ್ದ...


"ನನ್ನದೂ ಇದೆ ಊರು.. ಅಪ್ಪ-ಅಮ್ಮ ಇಲ್ಲ.. ಅಜ್ಜಿ ಇರ್ತಾರೆ.. ನನ್ಹೆಸರು ವಿವೇಕ್. " ಅವನ ಹೆಸರು ಕೇಳಿ ವೈದೇಹಿ ಕಣ್ಣರಳಿಸಿದ್ದರು..


"ಅಲ್ಲಪ್ಪ ಸಾಯೋವಂಥದ್ದು ಏನಾಗಿತ್ತು ನಿನಗೆ ? ನೀನು ಅನಾಹುತ ಮಾಡಿಕೊಂಡು ಬಿಟ್ಟಿದ್ರೆ ಅಜ್ಜಿಯ ಪಾಡೇನು ಅಂತ ಸ್ವಲ್ಪನೂ ಯೋಚ್ನೆ ಮಾಡಿಲ್ವಾ ?" 


ವಿವೇಕ್ ತಲೆತಗ್ಗಿಸಿದ್ದ.."ನಾನೊಂದು ಹುಡುಗಿನ ಪ್ರೀತಿಸಿದ್ದೆ.. ನಿನ್ನೆ ವ್ಯಾಲೆಂಟೈನ್ಸ್ ಡೇ.. ಪ್ರೀತಿ ಹೇಳಿಕೊಂಡಾಗ ನಿರಾಕರಿಸಿಬಿಟ್ಲು.. ಅವಳಿಲ್ಲದೇ ಬದುಕೋ ಶಕ್ತಿ ನನಗಿಲ್ಲ ಅದಕ್ಕೆ ಇಂಥ ಕೆಲಸಕ್ಕೆ ಕೈ ಹಾಕಿದ್ದು... ಆತ್ಮಹತ್ಯೆ ಮಾಡಿಕೊಂಡಿದ್ರೆ ಜೀವನವಿಡೀ ನೋವು ಅನುಭವಿಸೋದು ತಪ್ಪಿರೋದು..." ಅಷ್ಟು ಹೇಳುವಷ್ಟರಲ್ಲಿ ವಿವೇಕನ ಕಣ್ಣು ತೇವವಾಗಿತ್ತು..  


"ಒಳ್ಳೆ ಜೀವನ ರೂಪಿಸಿಕೊಳ್ಳಬೇಕಾದ ಹುಡುಗರು ನೀವು.. ನೀನು ಒಳ್ಳೆಯ ರೀತಿಯಲ್ಲಿ ಬದುಕಿ ತೋರಿಸೋ ಪ್ರಯತ್ನ ಪಟ್ರೆ ನಿನ್ನನ್ನ ನಿರಾಕರಿಸಿದ ಹುಡುಗಿ ಅವಳಾಗೆ ಬಂದು ಒಪ್ಪಿಕೊಳ್ತಾಳೆ.. ಜೀವನದ ಮೇಲೆ ಉತ್ಸಾಹ ಕಳೆದುಕೊಳ್ಳಬಾರದು.. "

ವೈದೇಹಿ ಮುಗುಳ್ನಕ್ಕು ಅವನ ಭುಜ ತಟ್ಟಿ "ನನಗೊಂದಷ್ಟು ಕೆಲಸ ಇದೆ ನಿನ್ನನ್ನ ನಿನ್ನ ಮನೆಗೆ ತಲುಪಿಸೋ ವ್ಯವಸ್ಥೆ ನಾನೇ ಮಾಡ್ತೀನಿ " ಎಂದು ಹೇಳಿ ಹೊರಹೋದವರು ಒಂದು ಡೈರಿ ಹಿಡಿದುಬಂದು ಅವನ ಕೈಯಲ್ಲಿಟ್ಟು ಹೋಗಿದ್ದರು.. 


ಬಹಳ ಹಳೆಯ ಡೈರಿ, ಸುಮಾರು 40-50 ವರ್ಷಗಳಂತೂ ದಾಟಿತ್ತೇನೋ.. ಭಾಗಶಃ ಜೀರ್ಣವಾಗಿತ್ತು.. ಮುಟ್ಟಿದರೆ ಪುಟಗಳು ಕಿತ್ತು ಹೋಗುತ್ತದೆಯೇನೋ ಎನಿಸುವಂತಿತ್ತು..ಡೈರಿಯ ಒಕ್ಕಣೆ "ಕೋರಿಕೆ" ಎಂದಿತ್ತು.. 


ನಿಧಾನವಾಗಿ ಡೈರಿ ತೆರೆದಿದ್ದ ಮಾಸಲು ಅಕ್ಷರಗಳು.. ಹಳೆಯ ಕಾಲದ ಶಾಹಿ ಅಲ್ಲಲ್ಲಿ ನೀರು ಬಿದ್ದು ಹರಡಿದ್ದವು... 


ಮೊದಲ ಪುಟ ತೆರೆದಿದ್ದ... ಅದರಲ್ಲೊಂದು ಹುಡುಗನ ಹಳೆಯ ಬ್ಲ್ಯಾಕ್&ವೈಟ್ ಮಸುಕು ಫೋಟೋ..ಚಿಗುರು ಮೀಸೆಯನ್ನೇ ಚಂದ್ರಶೇಖರ್ ಆಜಾದ್ರ ಹಾಗೆ ತಿರುವಿ ಬೆಳೆಸಿದ್ದ...  


1946.

   ವಿವೇಕ್- ನನಗೆ ನನ್ನ ತಂದೆ ರಾಜಶೇಖರ್ ಇಟ್ಟ ಹೆಸರು.. ವಿವೇಕಾನಂದರ ಬಹುದೊಡ್ಡ ಅನುಯಾಯಿ.. ಅವರ ಮಾತುಗಳನ್ನು,ಬೋಧನೆಯನ್ನು ಚಾಚೂತಪ್ಪದೆ ಪಾಲಿಸುತ್ತಾರೆ.. ತನ್ನ ಮಗ ವಿವೇಕಾನಂದರ ಹಾಗೆ ವಿವೇಕಿ,ವಿಚಾರಶ್ರೀಮಂತನಾಗಬೇಕೆಂಬ ಆಸೆಯಿಂದ ಇಟ್ಟ ಹೆಸರಂತೆ.. ಇದನ್ನ ಅವರೇ ಹೇಳ್ತಾರೆ..ನನಗೆ ಅವರೇ ಆದರ್ಶ.. ಅಮ್ಮ ಗೃಹಿಣಿ..

   ಸ್ವಾತಂತ್ರ್ಯ ಹೋರಾಟದ ಕಾಲವಿದು..ದಿನಬೆಳಗಾದರೆ ಒಂದಲ್ಲ ಒಂದು ಪ್ರತಿಭಟನೆ ಸಂಜೆಯಷ್ಟರಲ್ಲಿ ಜೈಲುವಾಸ... ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ಧ...  

   ಮೂಲತಃ ಕನ್ನಡಿಗರೇ.. ಇರುವುದು ಮಾತ್ರ ಪಂಜಾಬ್ ಪ್ರಾಂತ್ಯದಲ್ಲಿ.. 

  ಡೈರಿ ಬರೆಯುವ ಅಭ್ಯಾಸ ಬೆಳೆಸಿಕೊ ಎಂದು ನನ್ನ ತಂದೆ ಯಾವಾಗಲೂ ಹೇಳುತ್ತಾರೆ..ಇದು ಅವರೇ ಕೊಟ್ಟ ಬಹುಮಾನ ನನ್ನ ಇಪ್ಪತ್ತನೇ ಹುಟ್ಟಿದಹಬ್ಬಕ್ಕೆ... 

  ನನ್ನ ಬದುಕಿನ ಪಯಣಕ್ಕೆ ಇಷ್ಟು ಮುನ್ನುಡಿ ಸಾಕೇನೋ..! ನಾಳೆಯಿಂದ ನನ್ನ ಜೀವನವನ್ನು ಈ ಡೈರಿಯ ಒಡಲಲ್ಲಿ ಬಚ್ಚಿಡುತ್ತೇನೆ.. ಕೆಳಗೊಂದು ಸಹಿ..

           

               ****

ಮೊದಲ ಪುಟ ಓದಿದ ವಿವೇಕನಿಗೆ ತನ್ನ ಹೆಸರಿಗೂ ಡೈರಿ ಬರೆದವನ ಹೆಸರಿಗೂ ತಾಳೆಯಾಗುತ್ತಿರುವುದು ಅಚ್ಚರಿಯುಂಟುಮಾಡಿತ್ತು.. ಎರಡನೇ ಪುಟ ತೆರೆದಿದ್ದ..

   

             *****


ಇಂದು ಬ್ರಿಟಿಷ್ ಆಫೀಸರ್ಗಳು ಬರುತ್ತಾರೆಂದು ಪ್ರತಿಭಟನೆ ಮಾಡಲು ಪಕ್ಕದ ಹಳ್ಳಿಗೆ ಹೋಗಿದ್ದೆವು.. ಕಿಚ್ಚಿನಿಂದ ಶುರುವಾದ ಗಲಾಟೆ ವಿಪರೀತಕ್ಕೆ ಹೋಗಿ ಪೊಲೀಸ್ ಪೇದೆಗಳು ಲಾಠಿಯ ರುಚಿ ತೋರಿಸುತ್ತಿದ್ದರು..  

ದೇಹ ನೋವಿನಿಂದ ನರಳುತ್ತಿದ್ದರೆ ಕಣ್ಣು ಖುಷಿಯಿಂದ ಅರಳಿತ್ತು .. ಕಾರಣ..! ಅವಳು.. !


ಅಪ್ಪಟ ಪಂಜಾಬಿ ಹೆಣ್ಣುಮಗಳು...ಎಲ್ಲಾ ಪಂಜಾಬಿ ಹೆಣ್ಣುಮಕ್ಕಳ ಸಂಪ್ರದಾಯಿಕ ಉಡುಗೆಯ ದುಪ್ಪಟ್ಟಾದ ಒಂದು ತುದಿ ಬೆನ್ನು ಸುತ್ತುವರೆದು ಕೆಳಗಿನಿಂದ ಇಳಿದು ಮೇಲೆ ಬಂದು ಮತ್ತೊಂದು ತುದಿಗೆ ಗಂಟು ಬಿಗಿದುಕೊಂಡಿತ್ತು..ತ್ರಿಶೂಲ ಹಿಡಿದ ದುರ್ಗಿಯಂತೆ ಕೈಯಲ್ಲಿ ಲಟ್ಟಣಿಗೆ.. ಮುಖಭಾವವೂ ದುರ್ಗಿಗೆ ಹೊರತಾಗಿರಲಿಲ್ಲ.. ಪೋಲೀಸರೆಂದು ನೋಡದೇ ಲಟ್ಟಣಿಗೆಯಲ್ಲಿ ಪಟಪಟ ಹೊಡೆಯುತ್ತಿದ್ದಳು.. 


ನಾಗರಹಾವಿನಂಥ ಎರಡು ಜಡೆ.. ಸಂಪಿಗೆ ನಾಸಿಕ, ಹಾಲಲ್ಲಿ ಎತ್ತಿ ತೆಗೆದಂಥಹ ಬಣ್ಣ... ಎಲ್ಲದಕ್ಕಿಂತ ಆತ್ಮವಿಶ್ವಾಸಕ್ಕೆ ಕನ್ನಡಿಯಂತಿದ್ದ ಕಣ್ಣುಗಳು.. ಅದರಲ್ಲಿನ ಹೊಳಪು.. 


ಹೆಣ್ಣುಮಕ್ಕಳು ಮನೆಯಿಂದ ಹೊರಬರಲು ಹೆದರುವ ಕಾಲವಿದು.. ಆದರೆ ಇವಳು ಲಟ್ಟಣಿಗೆಯಲ್ಲೇ ಹೊಡೆದು ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೊಂದು 

ಅಳಿಲುಸೇವೆ ಇರಲಿ ಎನ್ನುವಂತ ಆತ್ಮಸ್ಥೈರ್ಯದ ಹುಡುಗಿ... ಅಷ್ಟು ಹೊತ್ತು ನನ್ನ ಜೊತೆಗೆ ಇದ್ದ ಮನಸ್ಸು ಅವಳತ್ತ ವಾಲಿಬಿಟ್ಟಿತ್ತು... 


ನೋಡುನೋಡುತ್ತಿದ್ದ ಹಾಗೆ ಯಾರೋ ಎಸೆದ ಕಲ್ಲೊಂದು ಅವಳ ಹಣೆಗೆ ತಾಕಿಬಿಟ್ಟಿತ್ತು..ಅವಳತ್ತ ಜಾರುತ್ತಿದ್ದ ನನ್ನ ಹೃದಯ ನೋವಿನಿಂದ ಚೀರಿತ್ತು..ಹಣೆಯಿಂದ

ರಕ್ತ ಸುರಿಯುತ್ತಿದ್ದರೂ ಕೈಯಿಂದ ಲಟ್ಟಣಿಗೆ ಜಾರಿರಲಿಲ್ಲ.. 


ಮನಸ್ಸು ಮೊದಲನೋಟದಲ್ಲೇ ನಿನ್ನತ್ತ ಜಾರಿದೆ..

ಎದೆಯತುಂಬಾ ಒಲವಿನ ಮಹಾಪೂರ ಹರಿದಿದೆ..

ಆ ನಿನ್ನ ಕಣ್ಣು ಕತ್ತಲೆ ಓಡಿಸಿ,

ನನ್ನ ಹೃದಯದ ದೀಪ ಬೆಳಗಿದೆ..

ಅನುರಾಗದ ಅಲೆಯಲ್ಲಿ ಮನಸ್ಸು ತೇಲಿದೆ..

ಉಸಿರಿರುವರೆಗೂ ಈ ಜೀವ ನಿನ್ನದಾಗಿದೆ...

             ****


 ಇಂದು ಮತ್ತೆ ಅದೇ ಹಳ್ಳಿಗೆ ಹೋಗಿದ್ದೆ..ಅವಳನ್ನು ಹುಡುಕಲು.. ದೈವ ನನ್ನನ್ನು ಹೆಚ್ಚು ಸತಾಯಿಸದೇ ಅವಳನ್ನು ನನ್ನ ಕಣ್ಣೆದುರಿಗೆ ಬಿಟ್ಟಿದ್ದ.. 


ನೀರಿನ ಕೊಡ ಸೊಂಟದ ಮೇಲಿಟ್ಟುಕೊಂಡುಕೊಂಡು ಹೋಗುತ್ತಿದ್ದವಳನ್ನು ಧೈರ್ಯಮಾಡಿ ಮತನಾಡಿಸಿಯೇ ಬಿಟ್ಟೆ..ಅತೀ ಉತ್ಸಾಹದಿಂದ ಪಂಜಾಬಿ ಹುಡುಗಿಯನ್ನು ಕನ್ನಡದಲ್ಲಿ ಮತನಾಡಿಸುವ ಮೂರ್ಖತನ ಕೂಡ ಮಾಡಿದ್ದೆ..


"ಏ ಹುಡ್ಗಿ.. ನಿಲ್ಲು..ನಿನ್ನ ಹೆಸರೇನು ?"


ಪಾಪ, ಭಾಷೆ ಅರ್ಥವಾಗದೇ ಮಿಕಿಮಿಕಿ ನೋಡಿದ್ದಳು..."ಕೀ ಕೇಹೆ ರಹೇ ಹೋ.. ಆಪ್ಕಾ ಗಲ್ ಸಮಜ್ ಮೇ ನಹೀ ಆ ರಹಾ ಹೈ.."


ಅರ್ಧ ಹಿಂದಿ-ಅರ್ಧ ಪಂಜಾಬಿ ಭಾಷೆ ಸೇರಿಸಿ ಕೇಳಿದಾಗ ನನಗೆ ನನ್ನ ತಪ್ಪು ಅರಿವಾಗಿತ್ತು..


"ತುಮಾರಾ ನಾಮ್ ಕ್ಯಾ ಹೇ ..?"


"ಕ್ಯೂ..! "


ಗಾಯವಾದ ಹಣೆಗೆ ಔಷಧಿ ತಂದಿದ್ದೇನೆ ಎಂದು ಮೊದಲೇ ಅಮ್ಮನಿಗೆ ಗಂಟು ಬಿದ್ದು ತಯಾರಿಸಿಕೊಂಡು ಹೋದ ಮದ್ದು ತೋರಿಸಿದಾಗ ಮೊದಲು ಅನುಮಾನಪಟ್ಟರೂ ನಂತರ ಮೆದುವಾಗಿದ್ದಳು.. 


ನನ್ನ ಕೈಯಲ್ಲಿದ್ದ ಔಷಧಿ ತೆಗೆದುಕೊಂಡು ಬಳುಕುತ್ತಾ ಹೋದವಳು ತಿರುಗಿ "ಮನ್ನತ್.." ಎಂದಿದ್ದಳು.. 


"ಸುನೋ..ಮನ್ನತ್.. ಕಲ್ ತಲಾಬ್(ಕೆರೆ) ಕೆ ಪಾಸ್ ತುಮ್ಹಾರ ಇಂತಜಾರ್ ರಹೇಗಾ.. " (ನಾಳೆ ಕೆರೆಯ ಬಳಿ ಕಾಯುತ್ತಿರುತ್ತೇನೆ..)ಎಂದು ಹೇಳಿ ಪುಕುಪುಕುಗುಡುತ್ತಿದ್ದ ಎದೆ ಹಿಡಿದು ಬಂದುಬಿಟ್ಟಿದ್ದೆ... 


ಬ್ರಿಟಿಷ್ ಪೊಲೀಸರ ಮುಖ-ಮೂತಿ ನೋಡದೇ ಬಾರಿಸುವ ಜೋರಿನ ಹುಡುಗಿ ಯಾರೋ ಏನೋ ಪರಿಚಯ ಇಲ್ಲದವನ ಕರೆಗೆ ಓ ಗೊಟ್ಟು ಬಂದುಬಿಡುವಳೇ..! ಅದ್ಯಾವ ಧೈರ್ಯದ ಮೇಲೆ ನಾಳೆ ಬಾ ಎಂದು ಕರೆದೆ ನಾನವಳನ್ನ.. ! 


"ಮನ್ನತ್" ಎಷ್ಟು ಚಂದದ ಹೆಸರು.. ಕೈ ತಂತಾನೆ ಪುಟ ತಿರುಗಿಸಿ ಡೈರಿಯ ಶೀರ್ಷಿಕೆ "ಕೋರಿಕೆ" ಎಂದು ಬರೆದಿತ್ತು.. ಮೆದುಳು ನಾಳೆ ಅವಳು ಬರುವುದಿಲ್ಲವೆಂದರೆ ಮನಸ್ಸು ಬರುತ್ತಾಳೆ ಎನ್ನುತ್ತಿತ್ತು...

              

             ****


 ಕೆರೆಕಟ್ಟೆಯ ಮೇಲೆ ಕುಳಿತು ನೀರಿಗೆ ಒಂದೊಂದೇ ಕಲ್ಲು ಎಸೆಯುತ್ತಾ ಕುಳಿತಿದ್ದೆ.. ತಂಗಾಳಿಯ ಹಾಗೆ ಬಂದಳು.. ಮುಖದಲ್ಲಿ ಏನೋ ಕಳೆ..


ಸುತ್ತಿ ಬಳಸಿ ಮಾಡದೆ ಸೀದಾ ವಿಷಯಕ್ಕೆ ಬಂದುಬಿಟ್ಟಿದ್ದೆ.. "ಮನ್ನತ್, ಮುಝೆ ತುಮ್ಹಾರೆ ಸಾಥ್ ಜಿಂದಗಿ ಬಿತಾನಿ ಹೈ.. ಇಸ್ಕಾ ಮತ್ಲಭ್ ಸಮಜ್ತಿಹೋ.. " (ಮನ್ನತ್, ನಂಗೆ ನಿನ್ನ ಜೊತೆ ಇಡೀ ಜೀವನ ಕಳೆಯಬೇಕು.. ಇದರ ಅರ್ಥ ಗೊತ್ತಿದೆಯೇ ನಿಂಗೆ..?)


"ಜಿ..!" (ಹೌದು)


'ಅರೆ ಇಸ್ಕಿ..ಪ್ರೀತಿ ಹೇಳುತ್ತಿದ್ದ ಹಾಗೆ ಹಿಗ್ಗಾಮುಗ್ಗಾ ಒದೆಯುತ್ತಾಳೆ ಎಂದುಕೊಂಡ್ರೆ ಇವಳು ಎಲ್ಲಾ ಗೊತ್ತಿದೆ ಎನ್ನುವ ಹಾಗೆ ಮಾತಾಡುತ್ತಿದ್ದಾಳಲ್ಲ..! ಒಪ್ಪಿಗೆಯಂತಲೆ ಇವಳ ಅರ್ಥ..! '


"ಮುಝೆ ಪತಾ ಹೈ... ಅಗರ್ ಆಪ್ ಪ್ಯಾರ್ ಕಾ ಇಝಹಾರ್ ಕರ್ರಹೇ ಹೈ ತೋ ಮುಝೆ ಭಿ ಆಪ್ ಪಸಂದ್ ಹೋ..( ನಂಗೆ ಗೊತ್ತಿದೆ.. ನೀವು ನಿಮ್ಮ ಪ್ರೀತಿ ಹೇಳಿಕೊಳ್ಳುತ್ತಿದ್ದೀರಾದರೆ ನನಗೂ ನೀವು ಅಂದರೆ ಇಷ್ಟ ) 


ಒಂದೇ ಏಟಿಗೆ ಹೊಡೆದುಬಿಟ್ಟಲಲ್ಲ ಹುಡುಗಿ...


               ****


ವಿವೇಕ್ ಒಂದೊಂದೇ ಪುಟ ಅಚ್ಚರಿಯಿಂದ ಓದುತ್ತಿದ್ದ.. ಹೀಗೆ ಶುರುವಾದ ಅವರ ಪ್ರೀತಿ ಯಾರ ಕಣ್ಣಿಗೂ ಬೀಳದೆ ಸುಲಲಿತವಾಗಿ ಸಾಗುತ್ತಿತ್ತು... 

ಮನ್ನತ್ ಕನ್ನಡ ಕಲಿತಿದ್ದಳು..


               ****


ಖಾಯಂ ಜಾಗವಾದ ಕೆರೆಯ ಬಳಿ ಕುಳಿತು ಮನ್ನತ್ಳನ್ನ ಎದುರು ನೋಡುತ್ತಿದ್ದೆ.. ಕನ್ನಡ ಸುಮಾರಾಗಿ ಕಲಿತ ಮೇಲೆ ಅವಳು ಎರಡೇ ವಾಕ್ಯದಲ್ಲಿ 

"ನನ್ನೆಲ್ಲ ಕನಸ್ಸಿಗೆ ರಾಯಭಾರಿಯಾಗಿ ನೀನಿರು.. ಬಾಳಪಯಣದಲ್ಲಿ ನಿನ್ನ ಹೆಜ್ಜೆಗೆ ಹೆಜ್ಜೆ ಬೆಸೆದು ನಾನಿರುವೆ.." ಎಂದು ಅವಳ ಮನಸ್ಸನ್ನು ಮೊದಲ ಬಾರಿಗೆ ತೆರೆದಿಟ್ಟಿದ್ದಳು... 

 

             ******


ಒಂದುವರ್ಷ ಕಳೆದಿತ್ತು... ಮನೆಯಲ್ಲಿ ನಮ್ಮ ಪ್ರೀತಿಯ ಬಗ್ಗೆ ಹೇಳಬೇಕು ಎಂದು ಗುಂಡಿಗೆ ಗಟ್ಟಿ ಮಾಡಿಕೊಳ್ಳುತ್ತಿದ್ದ ಕಾಲವದು.. ಅವಳಿಗೂ ಹದಿನಾರು ಮೆಟ್ಟಿತ್ತು... 


1947

   ಇಡೀ ದೇಶ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರತವಾಗಿತ್ತು..ದೇಶದೆಲ್ಲೆಡೆಯಿಂದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಘೋಷಣೆಗಳು.. ಇಡೀ ಭಾರತವೇ ಒಡಲಲ್ಲಿ ಕೆಂಡವನ್ನಿಟ್ಟುಕೊಂಡ ಒಲೆಯಂತಾಗಿತ್ತು.. 


ನನಗೆ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸುವ ಕಾರ್ಯದಲ್ಲಿ ಅವಳನ್ನ ಭೇಟಿಯಾಗಲು ಸರಿಯಾಗಿ ಸಮಯ ಸಿಗುತ್ತಿರಲಿಲ್ಲ.. 


ಇದೆಲ್ಲದರ ಮಧ್ಯೆ ಮನೆಯಲ್ಲಿ ನಮ್ಮಿಬ್ಬರ ವಿಷಯ ತಿಳಿದುಹೋಗಿತ್ತು.. ಆಶ್ಚರ್ಯವೆಂಬಂತೆ ಒಪ್ಪಿಕೊಂಡುಬಿಟ್ಟಿದ್ದರು..ಮದುವೆ ಇನ್ನೊಂದು ತಿಂಗಳಲ್ಲಿ ನಿಷ್ಕರ್ಷೆಯಾಗಿತ್ತು... ಆದರೆ ವಿಧಿ ಬೇರೆಯದೇ ಸನ್ನಾಹ ಹೂಡಿತ್ತು.. 


ಆಗಸ್ಟ್ 14,1947 

ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ದೊರಕಿತ್ತು.. ಮರುದಿನ ಅಂದರೆ ಆಗಷ್ಟ್ 15, ನಾನು-ಮನ್ನತ್ ಬಾಳಬಂಧನದಲ್ಲಿ ಜೊತೆಯಾಗುವ ದಿನ..


ಭಾರತಮಾತೆಗೆ ಸ್ವಾತಂತ್ರ್ಯ ಸಿಕ್ಕರೂ ಅವಳದ್ದೇ ಒಂದು ಭಾಗವನ್ನು ಮುರಿದು ಬೇರೆ ದೇಶವನ್ನಾಗಿ ಮಾಡಿಕೊಡಬೇಕೆಂಬ ಬೇಡಿಕೆಯ ಮೇರೆಗೆ ಹೊಸದೊಂದು ದೇಶ ಸೃಷ್ಟಿಯಾಗಿತ್ತು... 



ವಿಪರೀತ ಗಲಾಟೆಯ ಸಂದರ್ಭವದು.. ಚಿಕ್ಕದಾಗಿ ದೇವಸ್ಥಾನದಲ್ಲೋ ಎಲ್ಲೋ ಮದುವೆ ಮಾಡಿಸುವ ಚಿಂತನೆಯಾಗಿ ತೀರಾ ಸರಳ ರೀತಿಯಲ್ಲಿ ಮದುವೆಯ ಎಲ್ಲಾ ತಯಾರಿಯೂ ಆಗಿತ್ತು...


ಊರ ಹೊರಗಿನ ದೇವಸ್ಥಾನದಲ್ಲಿ ಕಾಯುತ್ತಿದ್ದ ನನಗೆ ಮನ್ನತ್ ಎಷ್ಟು ಸಮಯ ಕಳೆದರೂ ಬರದೇ ಇದ್ದುದನ್ನು ನೋಡಿ ಗಾಬರಿಯಾಗಿತ್ತು.. 


ಮೊದಲೇ ಪಂಜಾಬ್ ಪ್ರಾಂತ್ಯ..ಜೋರು ಗಲಾಟೆ.. ಪಕ್ಕದ ಹೊಸ ದೇಶಕ್ಕೆ ಸ್ವಲ್ಪ ಸೇರಿತ್ತು...ಈ ಹಳ್ಳಿ ಕೂಡ ಹೊಸ ದೇಶ ಪಾಕಿಸ್ತಾನದ ಪಾಲಿಗೆ ಸೇರಿದ ಪಂಜಾಬನಲ್ಲಿತ್ತು... ತಮ್ಮದೇ ಧರ್ಮದವರು ನೆಲೆಸಬೇಕೆಂದು ಹಿಂದೂ-ಸಿಖ್ ಧರ್ಮದವರಿಗೆ ಹಿಂಸೆ ಮಾಡಿ, ಹೊಡೆದು ಬಡಿದು ಮಾಡಿ ಭಾರತದ ಕಡೆ ಕಳುಹಿಸಿಬಿಡುತ್ತಿದ್ದರು... 


ಈ ಹಿಂಸಾಚಾರ-ಬಡಿದಾಟ ಇಡೀ ಪಂಜಾಬ ಹತ್ತಿ ಉರಿಯುತ್ತಿತ್ತು... 


ನನಗೆ ಇದೆಲ್ಲ ಮುಗಿದ ಮೇಲೆ ಮದುವೆ ಮಾಡಿಕೊಳ್ಳಬೇಕಿತ್ತು ಎಂದು ಅನ್ನಿಸಿದ್ದು ಸುಳ್ಳಲ್ಲ.. 


ಹೇಗೂ ಸಂದಿ-ಗೊಂದಿಯಲ್ಲಿ ನುಗ್ಗಿ ಮನ್ನತ್ ಮನೆ ತಲುಪಿದ ನನಗೆ ಎದೆ ಒಡೆದಿತ್ತು.. ಅವರು ಬಾಳಿ ಬದುಕಿದ ಮನೆಯಾಗಿದ್ದರಿಂದ ಪಾಕಿಸ್ತಾನದ ಬದಿಯಲ್ಲೇ ಉಳಿಯಲು ನಿರ್ಧರಿಸಿದ್ದರು.. ಆ ದೇಶದ ಜನರಿಗೆ ಇಷ್ಟವಿರಲಿಲ್ಲವೋ ಏನೋ ಹಿಂಸೆ ಮಾಡಿದಾಗಲೂ ಇವರು ಬಿಟ್ಟು ಹೋಗದಿದ್ದನ್ನು ನೋಡಿ ಕೊಚ್ಚಿ ಕೊಲೆ ಮಾಡಿಬಿಟ್ಟಿದ್ದರು..ಆದರೆ ಮನ್ನತ್..! 


              ****


ಇಷ್ಟಕ್ಕೆ ಡೈರಿ ಮುಗಿದುಹೋಗಿತ್ತು.. ಮುಂದೆ ಏನಾಯಿತು ತಿಳಿಯದೆ ವಿವೇಕ್ ಚಡಪಡಿಸಿಹೋಗಿದ್ದ.. ಡೈರಿ ಹಿಡಿದುಕೊಂಡು ವೈದೇಹಿಯತ್ತ ಓಡಿದವ ಬೆಳಿಗ್ಗೆ ಆಕಾಶ ನೋಡುತ್ತಾ ನಿಂತ ವೃದ್ಧನಿಗೆ ಢಿಕ್ಕಿ ಹೊಡೆದಿದ್ದ... "ಸಾರಿ.. ತಾತ. ಕ್ಷಮಿಸಿ.. ವೈದೇಹಿ ಅವ್ರನ್ನ ಹುಡಕ್ಕೊಂಡು ಹೋಗ್ತಾ ಇದ್ದೆ.. " ಎಂದು ಅವರನ್ನ ಸರಿಯಾಗಿ ಗಮನಿಸಿದವ ಡೈರಿಯಲ್ಲಿದ್ದ ಫೋಟೋ ತೆಗೆದು ಮತ್ತಷ್ಟು ಸರಿಯಾಗಿ ನೋಡಿದ್ದ.. 


ಹೌದು ..ಇವರೇ ವಿವೇಕ್..ಅದೇ ಮೀಸೆ. ಅದೇ ಗಾಂಭೀರ್ಯ.. 


"ತಾತ.. ಮುಂದೇನಾಯ್ತು.. ಮನ್ನತ್ ಎಲ್ಲಿ.. ?"


"ಗೊತ್ತಿಲ್ಲ.. ಅವಳನ್ನು ಹುಡುಕದೇ ಇರುವ ಜಾಗವಿಲ್ಲ.. ಅವಳು ಇನ್ನೂ ಬದುಕಿದ್ದಾಳೆ ಎಂದು ನನ್ನ ಮನಸ್ಸು ಹೇಳುತ್ತೆ.. 


"ಫೋಟೋ ಇದೆಯಾ..?"


"ಇಲ್ಲ.. ನಾನೇ ಅವಳ ಚಿತ್ರ ಬಿಡಿಸಿದ್ದೇನೆ ನೋಡು.. ಎಂದು ಡ್ರಾಯರ್ ಎಳೆದು ಮನ್ನತ್ಳ ಚಿತ್ರ ತೋರಿಸಿದಾಗ ತಲೆ ಹಿಡಿದುಕೊಂಡು ಕುಳಿತ ಹುಡುಗ ಅರ್ಧ ಗಂಟೆ ಏನನ್ನೋ ಯೋಚಿಸುತ್ತಿದ್ದ.. ಆಮೇಲೆ ಎದ್ದುಹೋಗಿ ವೈದೇಹಿಯ ಬಳಿ ಏನೋ ಮಾತನಾಡಿ ಬಂದವ ಎಲ್ಲಿಗೆ ಎಂದು ಸಹ ಹೇಳದೆ ಒತ್ತಾಯ ಮಾಡಿ ವೃದ್ಧ ವಿವೇಕರನ್ನು ಹೊರಡಿಸಿ ಆಟೋ ಹತ್ತಿಸಿದ್ದ..


ಇಬ್ಬರು ವಿವೇಕರಿಗೂ ಗೊಂದಲ.. ಒಬ್ಬ ಕಳೆದುಹೋದ ಪ್ರೀತಿಯ ಬಗ್ಗೆ ಯೋಚಿಸುತ್ತಿದ್ದರೆ ಇನ್ನೊಬ್ಬ ಪ್ರೀತಿಸಿದವಳು ನಿರಾಕರಿಸಿದಳು ಎಂದು ಸಾಯುವುದಕ್ಕೆ ಹೊರಟಿದ್ನಲ್ಲ..! ಬರೋಬ್ಬರಿ ಐವತ್ತು ವರ್ಷ ಯಾರಾದರೂ ಪ್ರೀತಿಯ ಸಲುವಾಗಿ ಜೀವನ ಸವೆಸುವುದುಂಟೆ ಎಂದುಕೊಳ್ಳುತ್ತಿದ್ದ...


ಯಾವುದೋ ಒಂದು ಮನೆಯ ಎದುರು ಆಟೋ ನಿಲ್ಲಿಸುವಂತೆ ಹೇಳಿ.. "ತಾತ ಇದೆ ಮನೆ.. ನಾನು ಇಲ್ಲೇ ಪಕ್ಕದ ಅಂಗಡಿಗೆ ಹೋಗಿ ಬರ್ತೀನಿ. " ಎಂದಿದ್ದ.. 


ಅನುಮಾನಿಸುತ್ತಲೇ ಹೋದ ವೃದ್ಧ ವಿವೇಕ್ ಬಾಗಿಲು ಬಡಿದಾಗ ಸುಮಾರು 70ರಷ್ಟು ವಯಸ್ಸಿನ ಯಾವುದೋ ಒಂದು ಕೈ ಬಾಗಿಲು ತೆರೆದಿತ್ತು.. ಅವಳ ಕೈಯ ಮಣಿಕಟ್ಟಲ್ಲಿ ಕಂಡ ಸಿಖ್ಖರ ಧರ್ಮ ಚಿನ್ನೆಯ ಕಡಗ ತಾತನ ಎದೆಬಡಿತ ಹೆಚ್ಚಿಸಿತ್ತು...


ಬಾಗಿಲು ತೆರೆದಾಕೆ ಕನ್ನಡಕ ಸರಿಪಡಿಸಿ "ಯಾರು.....!" ಎಂದು ಗುರುತು ಹತ್ತದೆ ಕೇಳಿದಾಗ ಬಂದ "ಮನ್ನತ್" ಎಂಬ ಉದ್ಘಾರ ಆಕೆಯನ್ನು ನೆಲಕ್ಕೆ ಕುಸಿಯುವಂತೆ ಮಾಡಿತ್ತು.. 


ಇಹಪರದ ಪರಿವೆಯಿಲ್ಲದೇ ಇಬ್ಬರೂ ಅತ್ತುಬಿಟ್ಟಿದ್ದರು.. ಸರಿಸುಮಾರು 50 ವರ್ಷಗಳ ನಂತರ ಕಾಣುತ್ತಿರುವ ಪ್ರೀತಿಯ ಮುಖ ಇಬ್ಬರನ್ನೂ ಅನಂದದ ಕಡಲಲ್ಲಿ ತೇಲುವಂತೆ ಮಾಡಿತ್ತು... 


"ಅವತ್ತು ಮದುವೆ ದಿನ ನಿಮ್ಮ ಮನೆಯವರೆಲ್ಲ ಸತ್ತು ಬಿದ್ದಿದ್ದರು.. ನೀನು ಮಾತ್ರ..!"


"ಓಡಿ ಹೋಗಿದ್ದೆ.. ದೇವಸ್ಥಾನದ ಹತ್ತಿರ ಹೋದಾಗ ನೀನು ಇರಲಿಲ್ಲ.. ಆಮೇಲೆ ಯಾರೋ ಬಂದು ದೊಣ್ಣೆಯಿಂದ ಸಾಯುವ ಹಾಗೆ ಹೊಡೆದ್ರು.. ಯಾರೋ ಪುಣ್ಯಾತ್ಮರು ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿದರು.. ನನಗೆ ನಿನ್ನ ನೆನಪಲ್ಲಿ ಅಲ್ಲಿ ಬದುಕೋದು ಕಷ್ಟ ಆಯ್ತು.. ನೀನು ಹೇಳಿಕೊಟ್ಟ ಕನ್ನಡವನ್ನೇ ಮಾತಾಡುತ್ತಾ ಬದುಕೋಣ ಎಂದು ಇಲ್ಲಿಗೆ ಬಂದೆ..ಮನ್ನತ್, ಮಂಗಳ ಆದಳು... ಹೇಗೋ ಜೀವನ ಮಾಡ್ದೆ.."


ಆತನ ಕೈ ನಿಧಾನವಾಗಿ ಅವಳ ಹಣೆಯ ಕಲೆ ಸವರಿತ್ತು..." ಇಂದಿಗೂ ನಿನ್ನ ಕಣ್ಣಲ್ಲಿ ಅದೇ ದಿಟ್ಟತನ...ಮುಖ ಮಾತ್ರ ಸುಕ್ಕಾಗಿದೆ " ಎಂದು ಹೇಳಿ ನಕ್ಕಿದ್ದ...


ಅಂಗಡಿಯಿಂದ ಕೈಯಲ್ಲಿ ಏನೋ ಹಿಡಿದುಬಂದ ವಿವೇಕ "ನನಗೆ ಚಿತ್ರ ನೋಡಿದಾಗ ಮುಖದ ಹೋಲಿಕೆ, ಕಣ್ಮಲ್ಲಿದ್ದ ಮಿಂಚು ನನಗೆ ಅಜ್ಜಿಯನ್ನ ನೆನಪಿಸಿತು.. ಅವರ ಹಣೆಯ ಗಾಯದ ಕಲೆ..ನಮ್ಮಿಬ್ಬರ ಹೆಸರು ವಿವೇಕ್ ಎನ್ನುವುದು ಎಲ್ಲವನ್ನು ಕೂಡಿಸಿ ಲೆಕ್ಕ ಹಾಕಿದೆ ..ಒಂದು ರಿಸ್ಕ್ ತೆಗೆದುಕೊಂಡೆ.. ನಾನು ಊಹಿಸಿದ್ದು ನಿಜವೇ ಆದರೆ ನನ್ನ ಜೀವನಕ್ಕೂ ಒಂದು ಅರ್ಥ ಬರುತ್ತದೆ ಎಂದುಕೊಂಡೆ...ನಾನು ಅನಾಥ.. ಸಾಕಿದ್ದು ಮಂಗಳ ಅಜ್ಜಿ.. ಅಲ್ಲಲ್ಲ ಮನ್ನತ್ ಅಜ್ಜಿ.. "


ವಿವೇಕ್-ಮನ್ನತ್ ಇಬ್ಬರೂ ಆನಂದಬಾಷ್ಪ ಹರಿಸುತ್ತಿದ್ದರು...


 "ನಿಮ್ಮಿಬ್ಬರ ಪ್ರೀತಿಯ ತೀವೃತೆ ನೋಡಿ ಬೇರೆ ಯಾರನ್ನೂ ಮದುವೆಯಾಗಿರಲಾರಿರಿ ಅನ್ನಿಸಿತು..ಹಾಗಾಗಿ ಧೈರ್ಯ ಮಾಡಿ ಇದನ್ನೆಲ್ಲ ತಂದೆ..ಆಗ ಮದುವೆ ನಿಲ್ಲದೇ ಇದ್ದರೆ 50ನೆ ವರ್ಷದ ವಾರ್ಷಿಕೋತ್ಸವ ನಡೆಸಬೇಕಿತ್ತು... ಇರ್ಲಿ ಈಗ ಮದುವೆಯೇ ನಡೆದುಹೋಗಲಿ.. " ಎಂದು ಅವರ ಕೈಯಲ್ಲಿ ಹೂವಿನ ಮಾಲೆ ಕೊಟ್ಟು ಪರಸ್ಪರ ಕೊರಳಿಗೆ ಹಾಕಿಸಿದ್ದ... ಐವತ್ತು ವರ್ಷಗಳಿಂದ ಬರಿದಾದ ಹಣೆ ಈಗ ಪ್ರೀತಿಸಿದವನ ಹೆಸರಿನ ಸಿಂಧೂರದಿಂದ ಅಲಂಕೃತಗೊಂಡಿತ್ತು... ಕತ್ತು ಮೂರುಗಂಟಿನ ಅರಿಶಿಣದಾರದಿಂದ ಸುತ್ತುವರೆದಿತ್ತು... 


ಒಬ್ಬ ವಿವೇಕ್ ಐವತ್ತು ವರ್ಷಗಳ ನಂತರ ಪ್ರೀತಿ ಪಡೆದ ಖುಷಿಯಲ್ಲಿದ್ದರೆ ಇನ್ನೊಬ್ಬ ವಿವೇಕ್ ತನ್ನ ಪ್ರೀತಿ ಸಿಗದೇ ಇದ್ದರೂ ಪ್ರೀತಿಸಿದವರನ್ನು ಒಂದುಗೂಡಿಸಿದ ಸಾರ್ಥಕತೆ ಅನುಭವಿಸುತ್ತಿದ್ದ... 


 ಪರಿಶುದ್ಧ ಮನಸ್ಸಿನ ಪ್ರೇಮ ಎಂದಿಗೂ ವ್ಯರ್ಥವಾಗುವುದಿಲ್ಲ.. ನಿಜವಾದ ಪ್ರೀತಿಗೆ ಸಾವಿಲ್ಲ..


ಹರೆಯದ ಮುಂಜಾವಿನಲ್ಲಿ ಪ್ರೀತಿಸಿದ ಜೀವಗಳು ಬದುಕಿನ ಇಳಿಸಂಜೆಯಲ್ಲಿ ಒಂದಾಗಿದ್ದವು... 

ಮುಕ್ತಾಯ.


0 likes

Published By

Susmita hegde

susmitahegde

Comments

Appreciate the author by telling what you feel about the post 💓

  • indusri · 2 years ago last edited 2 years ago

    ಚಂದದ ಕಥೆ. ಅರ್ಥ ಪೂರ್ಣ ಮುಕ್ತಾಯ

Please Login or Create a free account to comment.