ದಿಟ್ಟ ಹೆಜ್ಜೆ

ಬದುಕು ಹೋರಾಟದ ಯಂತ್ರ

Originally published in kn
Reactions 1
535
shivaleelahunasgi@gmail.com
shivaleelahunasgi@gmail.com 02 Sep, 2020 | 1 min read


ಇನ್ನೇನು ಬೀದಿಗೆ ಬಿದ್ದಂತೆ 

ಒಣಹುಲ್ಲಿಗೂ ಆಸರೆಯಿಲ್ಲದೇ

ಕೊನೆಗಳಿಗೆಯ ನಿಟ್ಟುಸಿರಿಗೆ

ನಿತ್ರಾಣದ ನಡುವಿಂದ ನಡುಕ

ಕಣ್ಸನ್ನೆಯಲಿ ನುಡಿದುದೆಲ್ಲ ದಿಟ

ಹೊತ್ತಿಗೆ ಬಾರದ ತುತ್ತ ನೆನೆದು

ಕತ್ತು ಹೊರಳಿದರೂ ನಿಲ್ಲದ ಆಪತ್ತು

ತೂಗುಗತ್ತಿಯ ನೆತ್ತಿಯಲಿ ಹೊತ್ತು

ಸ್ವಪ್ನ ಕಾಣುವ ಭರದಲ್ಲಿಯೇ

ಸೂರಿಲ್ಲದೆ ತಾರೆಗಳಾದರೆಷ್ಟೋ

ಒಣಹುಲ್ಲಿಗೆ ಮಣಲೆಕ್ಕ ಬರೆದು

ಹೊಟ್ಟೆ ಬಗಿದರೂ ಚಿಮ್ಮದಾ ನೆತ್ತರು

ಹಸಿವಿನ ಮುಂದೆ ಎಲ್ಲ ಸೋತವರು

ಶೂನ್ಯದಾಹುತಿಗೆ ಕೊರಳೊಡ್ಡಿಹರು

ಬೀದಿಗೆ ಬಂದ ಬದುಕಿಗೆಲ್ಲಿದೆ ತ್ರಾಣ

ಇರಳೊಂದು ಮಸಿ ಚಲ್ಲಿದಂತೆ

ಗಾಢಂಧಕಾರದಲಿ ಸುಖವೆಲ್ಲ ವ್ಯರ್ಥ

ಎಲುಬಿನ ಎಣಿಕೆಯೋ ಗೋರ ಅನರ್ಥ

ಬಯಲಿಗೆ ಬೆತ್ತಲಾಗುವ ಭಯವಿಲ್ಲ

ನಮಗೋ ಬಯಲಾಗದೇ ಬದುಕಿಲ್ಲ

ಬೀದಿ ಚಂದ್ರಮನೇ ಮೌನವಾಗಿಹನು

ಚಿಗುರೊಡೆಯದೆ ಕಮರಿದ ಬಾಳಿಗೆ.

ಎದೆಸೆಟಿಸಿ ನಡೆದೆನೆಂದರೂ ನಿರಾಶೆ

ಎದೆಬಗಿದು ಕರುಳ ಹೊಸೆಯುತಲಿ

ನೆತ್ತರ ದೀಪ ಹಚ್ಚಿ ನಗುವವರ ನಡುವೆ

ಬೀದಿ ದೀಪಗಳೇ ಹಿತವನಿಸಿ ಬಿಟ್ಟಿದೆ

ದಿಕ್ಕರಿಸಿದವರ ಹುಟ್ಟಡಗಿಸಿ ನಕ್ಕರೆ

ಬದುಕಿಗೆಲ್ಲಿದೆ ಭದ್ರತೆಯ ಹಸ್ತ

ಸೋತ ಮನಕೆ ಆಗಸದ ಅಭಯ

ನೆಚ್ಚಿಕೆಯ ಹಂಗಿಲ್ಲದಾ ಆರ್ಭಟವು

ಸ್ವಾಭಿಮಾನದ ಕಿಡಿಯ ಒಳಕಿಚ್ಚಿಗೆ

ಭಸ್ಮವಾಗಿ ಬೀದಿಗೆ ಬಂದಾಗಿದೆ 

ಅಳಿವು,ಉಳಿವಿನ ಹೊರಾಟಕೆ 

ರಟ್ಟೆಯ ಕಸುವು ಕೊಸರುವ ಮುನ್ನ

ದಿಟ್ಟ ಹೆಜ್ಜೆಯಿಟ್ಟು ಬದುಕಬೇಕಿದೆ.

ಇಲ್ಲವಾದರೆ ಬೀದಿ ಹೆಣವಾದಂತೆ...


ಶಿವಲೀಲಾ ಹುಣಸಗಿ

ಯಲ್ಲಾಪುರ

1 likes

Published By

shivaleelahunasgi@gmail.com

shivaleelahunasgigmailcom

Comments

Appreciate the author by telling what you feel about the post 💓

  • shivaleelahunasgi@gmail.com · 4 years ago last edited 4 years ago

    ನನಗೆ ತುಂಬಾ ಖುಷಿಯಾಗುತ್ತಿದೆ.

Please Login or Create a free account to comment.