ಕಣ್ಣು ತೆರೆಸಿದ ದೇವತೆ.

ಕಲಿಯುವ ಹಕ್ಕು ಎಲ್ಲ ಮಕ್ಕಳ ಅಧಿಕಾರ.ಯಾವ ಮಗುವನ್ನು ಕಡೆಗಣಿಸುವಂತಿಲ್ಲ...ಕವಿತಾಳ ದೃಢವಾದ ಮನಸ್ಸು ಮಾದರಿ....

Originally published in kn
Reactions 0
581
shivaleelahunasgi@gmail.com
shivaleelahunasgi@gmail.com 22 Oct, 2020 | 1 min read


ಲತಾ ಟೀಚರ್ ತರಗತಿಯಲ್ಲಿ ಹಾಜರಿ ಹಾಕುತ್ತಿದ್ದ ಸಂದರ್ಭ.. ರವಿ .. ಹಾಜರ್ ಟೀಚರ್. ಸುಮಾ... ಹಾಜರ್ ಟೀಚರ್. ಕವಿತಾ.. ಎಂದಾಗ ಉತ್ತರವಿಲ್ಲ. ಮತ್ತೊಮ್ಮೆ ಕವಿತಾ ಎಂದು ಕರೆದಾಗ ಪಕ್ಕದಲ್ಲಿದ್ದ ರೀಟಾ ಕವಿತಾಳ ಜಡೆ ಎಳೆದು ಟೀಚರ್ ಹಾಜರಿ ಹಾಕುತ್ತಿದ್ದಾರೆ ಎಂದಾಕ್ಷಣ ಪಾಠಿಚೀಲದೋಳಗಿನ ಪೆಪರ ಮಿಠಾಯಿ ಮುಚ್ಚಿಟ್ಟು ಹಾಜರ್ ಟೀಚರ್ ಎಂದು ಕೈ ಎತ್ತಿದಳು. (ಲತಾ ಟೀಚರ್ ಕವಿತಾಳಿಗೆ) ಕವಿತಾ ಏನ ಮಾಡ್ತಿದ್ದೀಯಾ? ಲಕ್ಷ್ಯ ಎಲ್ಲಿದೆ, ಎಂದು ಗದರಿದರು. ಮತ್ತು ಎದ್ದು ನಿಲ್ಲುವಂತೆ ತಿಳಿಸಿ. ಮುಂದಿನ ಹಾಜರಿ ಹಾಕಿದರು. ಎಲ್ಲರ ಹಾಜರಿ ಮುಗಿದ ಮೇಲೆ. ಈಗ ಹೇಳು ಕವಿತಾ ಏನ್ ಮಾಡತಿದ್ದೆ? ಕವಿತಾ ಹೆದರಿಕೆಯಿಂದ ಏನಿಲ್ಲ ಟೀಚರ್ ಎಂದಳು. ಎಲ್ಲಿ ಸ್ಕೇಲಿಂದ ಹೊಡೆತಾ ಬೀಳತ್ತೊ ಎಂದು ಭಯ ಕಾಡುತ್ತಿತ್ತು.

ಲತಾ ಟೀಚರ್ ಎಂದರೆ ಎಲ್ಲರಿಗೂ ಭಯವೇ, ಅವರಿಗಲ್ಲದಿದ್ದರೂ ಅವರು ಕೊಡುತ್ತಿದ್ದ ಬಿಸಿ ಬಿಸಿ ಕಜ್ಜಾಯ ನೆನೆದರೇನೆ ಹೆದರಿಕೆ. ಎಲ್ಲರೂ ಕನ್ನಡ ಪ್ರಶ್ನೋತ್ತರ ತೋರಿಸಿ ಎಂದು ಮಕ್ಕಳಿಗೆ ಹೇಳಿದರು. ಕವಿತಾ ನಿಂತೇ ಇದ್ದಳು. ಕವಿತಾ ತೊಗೊಂಡು ಬಾ ಅಂತಾ ಹೇಳಿ ಉಳಿದ ಮಕ್ಕಳ ಪಟ್ಟಿ ಚೆಕ್ ಮಾಡತೊಡಗಿದರು. ಹಾಳಾದ್ದು ಕನ್ನಡ ಪಟ್ಟಿನೇ ತಂದಿರಲಿಲ್ಲ… ಅದರಲ್ಲೂ ಪ್ರಶ್ನೋತ್ತರ ಬರೆದಿರಲಿಲ್ಲವೆಂದು ಕವಿತಾಗೆ ಗೊತ್ತಿತ್ತು. ಈಗ ತಾನು ತೋರಿಸಲಿಲ್ಲವೆಂದರೆ ಹೊಡೆತ ಗ್ಯಾರಂಟಿ ಎಂದು.ಸುಮ್ಮನೆ ಪಾಠಿಚೀಲ ಹರಡುವ ನೆಪ ಮಾಡುತ್ತ ಪಟ್ಟಿ ಪುಸ್ತಕ ಹೊರಗಿಡುವುದು ಒಳಗಿಡುವುದು ಮಾಡುತ್ತಿದ್ದಳು. ಲತಾ ಟೀಚರ್ ಯಾರನ್ನು ಬಿಟ್ಟರು ಕವಿತಾಳನ್ನ ಮಾತ್ರ ಬಿಡುತ್ತಿರಲಿಲ್ಲ ಕಾರಣ ತರ್ಲೆ ಹುಡುಗಿ ಕವಿತಾ ಆಗಿದ್ದರಿಂದ ಅವಳಮೇಲೆ ಒಂದು ಕಣ್ಣು ಇಟ್ಟಿರುತ್ತಿದ್ದರು. ಆಗಾಗ ಯಾಕೆ ಕವಿತಾ ಪಟ್ಟಿ ಸಿಗತಿಲ್ವಾ? ಅಥವಾ ಬಿಟ್ಟು ಬಂದಿದಿಯಾ? ಇಲ್ಲಾ ಬರದೇ ಇಲ್ವೊ ಎಂದು ಕೇಳುತ್ತಲೇ ಮಕ್ಕಳ ಪಟ್ಟಿ ನೋಡುತ್ತಿದ್ದರು. ಕವಿತಾಳಂತೆ ಬಹಳಷ್ಟು ಮಕ್ಕಳು ಪ್ರಶ್ನೋತ್ತರ ಬರಿದಿಲ್ಲವೆಂದು ಕವಿತಾಗೆ ಖುಷಿ, ಯಾಕೆಂದರೆ ನಾನೋಬ್ಬಳೇ ಹೊಡಿಸಿಕೊಳ್ಳುವುದಿಲ್ಲ ಉಳಿದವರು ಇದ್ದಾರೆಂದು ನೆಮ್ಮದಿಯಾಗಿದ್ದಳು. ಆದರೆ ಉಳಿದವರು ಚೆಕ್ ಮಾಡಿಸಿಕೊಂಡು ಬಂದ ಸ್ನೇಹಿತರ ಪಟ್ಟಿ ತಗೊಂಡು ಬೇಗ ಬೇಗ ಬರೆದು ಚೆಕ್ ಲೈನಿನಲ್ಲಿ ನಿಲ್ಲುತ್ತಿದ್ದರು. ಕೆಲವೊಬ್ಬರು ಇನ್ನೂ ಬರಿಯೂತಲಿದ್ದರು. ಕವಿತಾ ತಾನು ಬರಿಯಲು ಬೇರೆಯವರ ಪಟ್ಟಿ ಬೇಡುತ್ತಿರಲಿಲ್ಲ... ಕಾರಣವಿತ್ತು ಬರೆಯಲು ಪಡೆದವರ ಪಟ್ಟಿಯನ್ನು ವಾಪಸ್ ಕೊಡದೇ ಕಾಣೇ ಮಾಡಿದ್ದಕ್ಕೆ ಯಾರು ಕವಿತಾಳಿಗೆ ನೋಟ್ ಬುಕ್ ನೀಡುತ್ತಿರಲಿಲ್ಲ. ಇನ್ನೂ ಹೇಗೆ ಬರೆಯುವುದು. ಇನ್ನೂ ಕಜ್ಜಾಯ ಗ್ಯಾರಂಟಿಯೆಂದು ತೀರ್ಮಾನಿಸಿ ಯಾವಕೈ ಮುಂದೆ ಮಾಡಬೇಕೆಂದು ಚಿಂತೆಯಲ್ಲಿದ್ದಳು.

ಕವಿತಾ ಬಾ ಇಲ್ಲಿ? ಬರೆದಿಲ್ಲ ತಾನೆ? ನಿನಗೆ ಎಷ್ಟು ಹೇಳಿದರು ಅಷ್ಟೇ ವಿಧ್ಯೆ ನಿನಗೆ ತಲೆಗೆ ಹತ್ತೋದಿಲ್ಲ. ಹಿಡಿಕೈ ಮುಂದೆ ಎಂದು ಡೆಸ್ಕ್ ಮೇಲೆ ಕೈ ಇರಿಸಿ ಸ್ಕೇಲ್ ನಿಂದ “ರಪ್” ಎಂದು ಬಾರಿಸಿದರು. ಚಿಟ್ಟನೆ ಚೀರಿದ್ದೆ... ಅಮ್ಮಾ... ಹುಡುಗರು, ಹುಡುಗಿಯರು ತುಟಿ ಪಿಟಕ್ ಎನ್ನದೇ ನನ್ನೆ ಹೆದರಿಕೆಯಿಂದ ನೋಡುತ್ತದ್ದರು. ನಾಳೆ ಎಲ್ಲಾ ಪ್ರಶ್ನೋತ್ತರ ತೋರಿಸು ಇಲ್ಲಾ ಅಂದ್ರೆ ನೋಡು ಎಂದು ಗಲ್ಲ, ಹೊಟ್ಟೆ ಚಿವುಟಿ ದಬ್ಬಿದರು. ನೋವು ತಾಳಲಾರದೆ ಅತ್ತು ಲತಾ ಟೀಚರ್ ಕಂಡ್ರೆ ಎಲ್ಲಿಲ್ಲದ ಕೋಪ. ಆಟಕ್ಕೆ ಬಿಟ್ಟಾಗ ಹುಡುಗಿಯರೆಲ್ಲ ಸೇರಿ ಕುಂಟೆಬಿಲ್ಲೆ ಆಡುವಾಗ ನಮ್ಮ ತರಗತಿಯ ದರ್ಶನ ಎಂಬುವವನು ನಡುವೆ ಆಗಾಗ ಬಂದು ಜಡೆ ಎಳೆಯುತ್ತಿದ್ದ. ಯಾಕೆ ಹೀಗೆ ಮಾಡುತ್ತಿ ಎಂದು ಕವಿತಾ ಕೇಳಿದಾಗ ಅವನು, ಒಂದಿನಾನೋ ಪ್ರಶ್ನೋತ್ತರ ಬರಕೊಂಡು ಬರದಿರುವ ಸೋಂಬೇರಿ ನೀನು, ಬರೀ ಹೊಡೆತ ತಿಂತಿ ಅದಕ್ಕೆ ಎಂದು ಹೇಳಿದ್ದ ತಡ ಕವಿತಾಳಿಗೆ ಎಲ್ಲಿಲ್ಲದ ಸಿಟ್ಟು ನೆತ್ತಿಗೇರಿದಂತಾಗಿ ಕಾಲಿಂದ ಒದ್ದು ಅವನನ್ನು ಕೆಳಗೆ ಬೀಳಿಸಿ ಅವನ ಮೇಲೆ ಕೂತು ಗುದ್ದುವಾಗ ಎಲ್ಲರೂ ಕವಿತಾಳ ಕಾಳಿ ಅವತಾರ ನೋಡಿ ಹೆದರಿ ಟೀಚರ್ ಗೆ ಹೇಳಲು ಓಡಿಹೋದರು.ಕೆಲವರು ದರ್ಶನ ಏಳೋ ಏಳೆಂದು ಕೂಗುತ್ತಿದ್ದರು. ಕವಿತಾ, ನಾನು ಬರಿತಿನಿ ಬೀಡ್ತಿನಿ ನಿನಗ್ಯಾಕೊ, ನಂಗೆ ಅಂಗಸ್ತಿಯಾ? ನೋಡು ನಿನ್ನ ಎಂದು ಗುಮ್ಮುತ್ತಿದ್ದಳು. ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು ಓಡಿಬಂದು, ಈ ಮಕ್ಕಳಿಗೆ ಆಟಕ್ಕೆ ಬಿಡೋದೇ ತಪ್ಪು, ಬರೀ ಜಗಳ ಮಾಡಿಕೊಳ್ಳುತ್ತಾವೆ ಎಂದು ಲತಾ ಟೀಚರ್ ದರ್ಶನ ಮೇಲೆ ಕುತ್ತಿದ್ದ ನನ್ನ ಕಿವಿ ಹಿಡಿದು ಎಬ್ಬಿಸಿದಾಗ ದರ್ಶನ ಅಳುತ್ತಾ ಕವಿತಾಳ ಮೇಲೆ ಇಲ್ಲಸಲ್ಲದ ಚಾಡಿ ಹೇಳಿದ... ಆಗ ಕವಿತಾ ಟೀಚರ್ ಸುಮ್ಮಸುಮ್ಮನೆ ಬಂದು ನನಗೆ ಜಡೆ ಎಳೆದು ಹಂಗಿಸಿದ್ರೆ ಸುಮ್ಮನಿರಬೇಕಾ? ಎಂದು ತನ್ನ ಅಂಗಿ ಸರಿಮಾಡಿಕೊಳ್ಳುತ್ತಾ ಕವಿತಾ ಟೀಚರ್ ಗೆ ಹೇಳಿದಾಗ, ಕವಿತಾ ನೀನು ಗುಂಡಾ ಅಂತ ತಿಳಿದಿದೇನೇ, ಗಂಡಬೀರಿ ಹಾಗೆ ವರ್ತನೆ ಮಾಡತಿಯಾ? ಇನ್ನೊಮ್ಮೆ ಈಥರ ಮಾಡತೀಯಾ ಹೇಳು ಎಂದು ಛಡಿ ಏಟು ಮೈತುಂಬಾ ಬೀಳುತ್ತಿತ್ತು. ಆದರೆ ಅಳು ಬರುಲಿಲ್ಲ. ಸಿಟ್ಟು ಬರುತ್ತಿತ್ತು. ತಪ್ಪು ಅವನು ಮಾಡಿದ್ದಾನೆ, ಆದರೆ ಆರೈಕೆ ಮಾಡುತ್ತಿದ್ದಾರೆ ನನಗೆ ಬಡಿಯುತ್ತಿರುವುದು ಅಸಹನೀಯವಾಗಿತ್ತು ಯಾರೆ ತಪ್ಪು ಮಾಡಿದರೂ ಮೊದಲು ಬರುತ್ತಿದ್ದ ಹೆಸರೇ ಕವಿತಾ ಆಗಿತ್ತು. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕವಿತಾಳಿಗೆ ಹಾಡೋದು ಕುಣಿಯೋದು ತುಂಬಾ ಇಷ್ಟ. ಆದ್ರೆ ಯಾವ ನೃತ್ಯಕ್ಕೂ ಕವಿತಾಳನ್ನು ಸೇರಿಸಿಕೊಳ್ಳುತ್ತಿರಲಿಲ್ಲ, ಯಾಕೆಂದರೆ ನೃತ್ಯಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಕೋಡಿಸುವ ತಾಕತ್ತು ಇಲ್ಲವೆಂದು, ಅವಳನ್ನುಸೇರಿಸುತ್ತಿರಲಿಲ್ಲ. ಆದ್ರೆ ಕವಿತಾಳಿಗೆ ಸಿಟ್ಟು. ತಾನು ನೃತ್ಯ ಮಾಡುತ್ತಿದ್ದರು ಸೇರಿಸಿಕೊಳ್ಳದೇ ಇದಕ್ಕೆ ಜಗಳ ಮಾಡಿದ್ದಳು. ಕೆಲವು ಗೆಳತಿಯರು ನೀವು ಬಡವರು. ನಿನ್ನ ಕೈಲಿ ಆಗಲ್ಲ ಸುಮ್ಮನೆ ಇರು ಎಂದು ಹೇಳುವುದನ್ನು ಕೇಳುವುದಕ್ಕೆ ಕವಿತಾಳಿಗೆ ಆಗುತ್ತಿರಲಿಲ್ಲ. ಒಳ್ಳೆಯ ಬಟ್ಟೆಯಿಲ್ಲವೆಂದು ಹಾಡು ಹಾಡಲು ಕೊಡುತ್ತಿರಲಿಲ್ಲ.

ಅಂದು ಶಾಲಾ ವಾರ್ಷಿಕೋತ್ಸವ ಎಲ್ಲರೂ ಬಣ್ಣ ಬಣ್ಣದ ಹೊಸ ಬಟ್ಟೆಗಳನ್ನು ಹಾಕಿಕೊಂಡು ವೃತ್ತಕ್ಕೆ, ಹಾಡಿಗೆ ಅವರವರ ಪಾಲಕರೊಂದಿಗೆ ಖುಷಿ ಖುಷಿಯಾಗಿ ಬರುವುದನ್ನು ಕಂಡು ಕವಿತಾ ಒಳಗೊಳಗೆ ದುಃಖ ಪಡುತ್ತಿದ್ದಳು. ನಮಗೆ ಇಂತಹ ಭಾಗ್ಯವಿಲ್ಲವಲ್ಲ ಒಳಗೊಳಗೆ ದುಃಖ ಪಡುತ್ತಿದ್ದಳು. ನಮಗೆ ಇಂತಹ ಭಾಗ್ಯವಿಲ್ಲವಲ್ಲವೆಂದು. ಕವಿತಾ ಬಡ ಕೂಲಿಕಾರ್ಮಿಕರ (ಸಂಗಪ್ಪ ಗಿರಿಜಾಳ) ಮಗಳು. ಸಂಗಪ್ಪ ದೂಡು ಗಾಡಿ ಇಟ್ಟುಕೊಂಡು ದುಡಿಯುತ್ತಿದ್ದ. ಸಾಮಾನುಗಳನ್ನು ಸಾಗಿಸಿದರೆ ಮಾತ್ರ ಅವನಿಗೆ ಕೂಲಿ. ಒಂದೊಂದು ದಿನ ಕಾದರೂ ಯಾವ ಕೆಲಸವೂ ಒದಗಿ ಬರುತ್ತಿರಲಿಲ್ಲ. ಒಂದೊಂದು ದಿನ ಉಪವಾಸ ಖಾಯಂ ಆಗಿತ್ತು. ಹಬ್ಬ ಹರಿದಿನಗಳಲ್ಲಿ ದೂಡುಗಾಡಿಯ ಬಳಕೆ ಹೆಚ್ಚಾಗುತ್ತಿತ್ತು. ಉಳಿದ ಸಮಯದಲ್ಲಿ ಖಾಲಿ... ಹಾಗಾಗಿ ಗೌಂಡಿಯ ಕೈಕೆಳಗೆ ಆಗಾಗ ದಂಪತಿಗಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಬಂದ ಹಣದಲ್ಲಿ ಅವತ್ತಿನ ಊಟ ನಿಭಾಯಿಸುತ್ತಿದ್ದರು. ಮಗಳ ಬಳಪ, ಪಾಠಿ, ಪುಸ್ತಕಕ್ಕೆ ಮೀಸಲು. ವರ್ಷಕ್ಕೆರಡು ಜೊತೆ ಬಟ್ಟೆ ಮಾತ್ರ ವಾರದ ಎಲ್ಲಾ ದಿನಗಳು ಸಮವಸ್ತ್ರದಲ್ಲೇ ಕವಿತಾ ಕಳೆಯುವುದು. ಹೊಸತೇನು ಆಗಿರಲಿಲ್ಲ. ಹಾಗಂತ ಬಡತನದ ಅರಿವು ಅವಳಿಗಿದಿದ್ದರಿಂದ ಅವಳು ಯಾವತ್ತು ತನಗೆ ಅದು ಬೇಕು ಇದು ಬೇಕು ಎಂದು ಕಾಡಿದವಳಲ್ಲ. ಇದುದರಲ್ಲೇ ಐಶ್ವರ್ಯ ಅನುಭವಿಸುವ ರಾಜಕುಮಾರಿಯಾಗಿದ್ದಳು. ತಂದೆ-ತಾಯಿಗೆ ಮಗಳಿಗೆಲ್ಲ ಸೌಕರ್ಯ ಒದಗಿಸಬೇಕೆಂಬ ಹಂಬಲ ಆದರೆ ಕೂಲಿ ಸಿಗಬೇಕಲ್ಲ. ಹರಕು ಮುರುಕು ಮನೆ ಸರಿಯಾದ ಸೂರಿಲ್ಲ. ಮಳೆಗಾಲದಲ್ಲಿ ಚಿತ್ರಹಿಂಸೆ. ಹೀಗಾಗಿ ಸೂರನ್ನು ಗಟ್ಟಿ ಮಾಡಲು ಬಡ ದಂಪತಿಗಳು ಹಗಲು ರಾತ್ರಿ ದುಡಿಯಲು ಹೋಗುತ್ತಿದ್ದರು. ಬೆಳಿಗ್ಗೆ ರೊಟ್ಟಿ ತಿಂದು ಶಾಲೆಗೆ ಬಂದರಾಯಿತು. ಮಧ್ಯಾಹ್ನದ ಊಟದ ಚಿಂತೆಯಿಲ್ಲ, ರಾತ್ರಿ ಊಟ ರಾಗಿಮುದ್ದೆ ತಿಂದು ಮಲಗುತ್ತಿದ್ದಳು. ಆದರೂ ಕವಿತಾಳಿಗೆ ತಾನು ಬಡವಿಯೆಂಬ ಭಾವನೆ ಎಂದಿಗೂ ಬಂದಿರಲಿಲ್ಲ. ಸ್ವಾಭಿಮಾನ ತುಂಬಿ ತುಳುಕುತ್ತಿತ್ತು. ಸುಮ್ಮನೆ ತನ್ನ ತಂಟೆಗೆ ಬರುವವರ ಗೃಹಚಾರ ಬಿಡುಸುತ್ತಿದ್ದಳು. ಹೀಗಾಗಿ ಇವಳ ಆಸುಪಾಸು ಯಾರು ಜಗಳಕ್ಕೆ ಬರುತ್ತಿರಲಿಲ್ಲ. ತಾನಯ ಸುಂದರವಾಗಿಲ್ಲದಿದ್ದರೂ ಹೊಸ ಬಟ್ಟೆ ಇರದಿದ್ದರೂ, ಹರಿದ ಅಂಗಿಯನ್ನೇ ಹೊಲಿದು ಅಚ್ಚುಕಟ್ಟಾಗಿ ಹಾಕಿಕೊಂಡು ಬಂದಾಗಲೆಲ್ಲ, ಸ್ನೇಹಿತರು ಹರಿದ ಅಂಗಿಯಲ್ಲಿ ಕೈ ಹಾಕಿ ಇನ್ನಷ್ಟು ಹರಿಯಲು ಪ್ರಯತ್ನಿಸಿದ್ದಕ್ಕೆ ಅವರ ಕೈ ಬರೆಯಲು ಬಾರದಂತೆ ತಿರುಚಿದ್ದು ಇದೆ. ಹಗುರವಾಗಿ ಕಾಣುವವರನ್ನು ದುರಗುಟ್ಟಿಸಿ ನೋಡುವ ಗುಣ ಕವಿತಾಳಿಗೆ ಇದುದ್ದರಿಂದ ಇವಳನ್ನು ಕಿತ್ತೂರ ಚೆನ್ನಮ್ಮ ಎಂದು ಕರೆಯುತ್ತಿದ್ದರು. ಇವಿಷ್ಟು ಕವಿತಾ ಹಿನ್ನಲೆ.

ಕವಿತಾಳಿಗೆ ತಾನು ಸ್ಟೇಜ್ ನ ಮೇಲೆ ಹಾಡಬೇಕು ಕುಣಿಯಬೇಕು ಎಂಬ ಹಂಬಲ, ಆದರೇ ಅದು ಈಡೇರುವ ಹಾಗಿರಲಿಲ್ಲ. ಸಮಯಕ್ಕಾಗಿ ಕಾಯುತ್ತಿದ್ದ ಕವಿತಾಳಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡುವೆ ನೃತ್ಯ ಮಾಡುವವರು ತಯಾರಿಯಲ್ಲಿರುವುದರಿಂದ ಬೇರೆ ವಿಧ್ಯಾರ್ಥಿಗಳನ್ನು ಹಾಡಲು ಕರೆಯಲಾಯಿತು. ಅವರು ನಿಧಾನ ಮಾಡಿದ್ದರಿಂದ ಮುಂದೆ ಕುತಿದ್ದ ಕವಿತಾ ಸೀದಾ ವೇದಿಕೆ ಹತ್ತಿ ಮೈಕ್ ಮುಂದೆ ನಿಂತು ತನಗಿಷ್ಟಟವಾದ ಹಾಡುಗಳ ಪಲ್ಲವಿಯನ್ನು ಹಾಡಲು ಶುರುವಿಟ್ಟಳು. ನಿರ್ಭಯವಾಗಿ ಸುಂದರವಾಗಿ ಎಲ್ಲ ಗೀತೆಗಳನ್ನು ಹಾಡುತ್ತಿದ್ದಳು. ಹಾಡು ಮುಗಿಯುವ ಲಕ್ಷಣವೇ ಕಾಣುತ್ತಿರಲಿಲ್ಲ. ಆಗ ತಕ್ಷಣ ಗುರುಗಳೊಬ್ಬರು ಚಾಕಲೇಟನ್ನು ಕೈಯಲಿಟ್ಟು, ತುಂಬಾ ಸುಂದರವಾಗಿ ಹಾಡಿರುವೆ ಬಾ ಪುಟ್ಟ ಎಂದು ಎತ್ತಿಕೊಂಡು ಸ್ಟೇಜ್ ಕೆಳಗೆ ಇಳಿಸಿದರು. ಕವಿತಾಗೆ ಏನೋ ಖುಷಿ ಅಂತೂ ಇಂತೂ ಹಾಡಿದೇನಲ್ಲ ಅಂತ. ಕೆಳಗಿಳಿದು ಬಂದಾಗ ಅನೇಕ ಸ್ನೇಹಿತರು ಕವಿ ಮಸ್ತ್ ಹಾಡದಿ… ಇನ್ನೂ ಹಾಡಬೇಕಿತ್ತು ಅಂದಾಗ ಏನೋ ಸಾಧಿಸಿದೆ ಎಂಬ ಸಂತೋಷ… ಅದೇ ಗುಂಗಿನಲ್ಲಿ ಮನೆಯಲ್ಲಿ ಅಪ್ಪ-ಅಮ್ಮನಿಗೆ ಹೇಳಿದ್ದೆ ತಡ ಅವರು ಖುಷಿಪಟ್ಟಿದರು. ನೀನು ಶಾಣೆಯಾಗಬೇಕೆಂದು ಮುದ್ದಿಸಿದರು.

ಮಾರನೇ ದಿನ ಶಾಲೆಗೆ ಹೋದಾಗ ಕೆಲವರು ಕವಿತಾಳ ಹತ್ತಿರ ನೀನು ನನ್ನ ಫ್ರೆಂಡ್ ಆಗು ಅಂತ ಕೇಳುತ್ತಿದ್ದಾಗ ಕವಿತಾಗೆ ಸಂತಸ ಹೇಳತೀರದು, ತರಗತಿಯಲ್ಲಿ ಬಂದ ಲತಾ ಟೀಚರ್, ಎಲ್ಲಿ ಕವಿತಾ ಎದ್ದು ನಿಲ್ಲು… ನೀನು ಹೀಗೆ ಮಾಡಿದ್ದು ಸರಿಯಾ? ನೀನು ಭಾಗವಹಿಸಿಲ್ಲದ ಮೇಲೆ ವೇದಿಕೆ ಏಕೆ ಹತ್ತಿದೆ? ಯಾರು ನಿನಗೆ ಹೇಳಿದವರು? ಅದು ಅಲ್ಲಿ ಹಾಡಿದ್ದು ಎಲ್ಲ ಸಿನೇಮಾ ಹಾಡುಗಳು. ಅದಕ್ಕೆ ನಿನಗೆ ಭಾಗವಹಿಸುವುದು ಬೇಡವೆಂದು ಹೇಳೀರಲಿಲ್ಲವಾ? ನೀನು ಬಹಳ ಸೊಕ್ಕು ಮಾಡುತ್ತಿದ್ದೀಯಾ.! ಹೇಳದೆ ಕೇಳದೆ ವೇದಿಕೆ ಹತ್ತಿ ಸಾಂಸ್ಕೃತಿಕ ಕಾರ್ಯಕ್ರಮ ಹಾಳು ಮಾಡುವುದಾ? ಹೇಳು? ಎಂದು ಕಿವಿ ಹಿಂಡಿ ಬೆನ್ನಿಗೆ ನಾಲ್ಕು ಏಟು ಕೊಟ್ಟರು. ಆಗ ಕವಿತಾ ಟೀಚರ್ ಅಲ್ಲಿ ಹಾಡಲು, ನೈತ್ಯಕ್ಕೆ ಯಾರೂ ಬಂದಿರಲಿಲ್ಲ, ಗ್ಯಾಪ್ ಇತ್ತು ಅದಕ್ಕೆ ನಾನು ಹಾಡಿದೆ. ತಪ್ಪಾ ಟೀಚರ್? ಎಂದು ಮುಗ್ಧ ಭಾವದಿ ಕವಿತಾ ಕೇಳಿದಾಗ, ಹೌದು ಹಾಡು ಹೇಳಲು ಮಕ್ಕಳು ಬರುವವರಿದ್ದರು. ಅಷ್ಟರಲ್ಲಿ ನೀನು ಶುರು ಮಾಡಿದ್ದಿ. ಎಷ್ಟು ಹೊತ್ತು ಹಾಡುವುದು. ಎಲ್ಲಿಂದ ಕಲಿತಿರುವೆ ಇದೆಲ್ಲಾ? ಸಮಯ ಹಾಳು ಮಾಡಿರುವಿ. ಓದುವುದರಲ್ಲಿ ಹಿಂದೆ ಇಂತಹುದರಲ್ಲಿ ಮುಂದೆ ಎಂದು ತುಂಬಾ ಬೈದರು.

ಕವಿತಾಳಿಗೆ ತಾನು ಮಾಡಿದ್ದು ತಪ್ಪಿರಲಿಲ್ಲವೆಂದು ಆತ್ಮಸಾಕ್ಷಿ ಹೇಳುತ್ತಿತ್ತು. ಆದ್ರೂ ನನ್ನದೇ ತಪ್ಪು ಎಂಬಂತೆ ಬಿಂಬಿಸಿದ್ದಕ್ಕೆ ತುಂಬಾ ನೊಂದುಕೊಂಡು. ಶಾಲೆ ಬಿಡುವ ವಿಚಾರಕ್ಕೆ ಮನಸ್ಸು ಮಾಡಿದಳು. ಕಲಿಯಲು ಹಿಂದಿದ್ದರೇನಂತೆ ಪ್ರೀತಿಯಿಂದ ಕಲಿಸಲಾರದೆ ಬರೀ ಹೊಡೆದು, ನಮ್ಮನ್ನು ಹತ್ತಿರಕ್ಕೂ ಕುಳ್ಳಿರಿಸಿ ಕೈ ಹಿಡಿದು ಅಕ್ಷರ ಕಲಿಸದ ಗುರುಗಳ ಬಗ್ಗೆ ಸಿಟ್ಟು ಉಕ್ಕಿ ಉಕ್ಕಿ ಬರುತ್ತಿತ್ತು. ನಾನೊಬ್ಬಳು ಶಾಲೆಗೆ ಹೋಗದಿದ್ದರೇನಂತೆ. ದಿನಾ ಹೊಡಿಸಿಕೊಳ್ಳುವುದು ತಪ್ಪತ್ತೆ. ಟೀಚರ್ ಕೊಟ್ಟ ಬಾಸುಂಡೆಗಳಿಗೆ ಅಪ್ಪ ಅಮ್ಮ ಎಣ್ಣೆ ಹಚ್ಚಿ ಕಣ್ಣೀರಿಡುತ್ತಿದ್ದರು. ಮಗಳು ಚೆನ್ನಾಗಿ ಕಲಿಯಲಿ ಎಂದು ಟೀಚರ್ ಗೆ ಏನು ಹೇಳುತ್ತಿರಲಿಲ್ಲ. ಟೀಚರ್ ಹೇಳಿದ್ದನ್ನು ಕೇಲಿಸಿಕೊಂಡು ಬರುತ್ತಿದ್ದರು. ಪಾಪ ಅವರಿಗೇನು ಗೊತ್ತು, ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಳೆಂದು ಗೊತ್ತಿರಲಿಲ್ಲ ಹುಂಬ ಜನ.

ಕವಿತಾ ತೀರ್ಮಾನಿಸಿಯಾಗಿತ್ತು, ಇನ್ನೂ ಮುಂದೆ ಶಾಲೆಗೆ ಹೋಗೊದು ಬೇಡ ಅಂತ, ಅಪ್ಪ ಅಮ್ಮರ ಜೊತೆ ಕೂಲಿ ಕೆಲಸಕ್ಕೆ ಹೋಗಲು ತೀರ್ಮಾನಿಸಿದ್ದಳು. ಮುಗ್ಧ ಮನಸ್ಸು ಅನಿವಾರ್ಯಗಳಿಗೆ ತನ್ನನ್ನು ಒಗ್ಗಿಸಿಕೊಂಡಂತೆ ಕಾಣುತ್ತಿತ್ತು. ಹೇಗೆ ಹೇಳುವುದು ಮನೆಯಲ್ಲಿ ಎಂಬ ಚಿಂತೆ. ಏಕೆಂದರೆ ತುಂಬಾ ಇಷ್ಟಪಟ್ಟು ಶಾಲೆಗೆ ಕಷ್ಟಪಟ್ಟು ಸೇರಿಸಿದ್ದರು.

ಸಂಜೆ ಅಡಿಗೆಗೆ ಒಲೆ ಹೊತ್ತಿಸಿ ರೊಟ್ಟಿಗೆ ಹಂಚ ಇಡುವಾಗ ಅಲ್ಲೇ ಅವ್ವನ ಮುಂದೆ ಅಲ್ಲೇ ಕುಳಿತ ಕವಿತಾ, ಅವ್ವ ನಾ ಇನ್ನಮ್ಯಾಲೆ ಶಾಲಿಗೆ ಹೋಗಾಂಗಿಲ್ಲ... ಅಂದಾಗ, ಯಾಕೆ? ಏನಾಯಿತು? ಯಾರರ ಏನಾರ ಅಂದ್ರೇನು? ಇಲ್ಲ ಅವ್ವಾ ಯಾರಾರ ಯಾಕ ಏನಾರ ಅಂತಾರ, ಯಾರು ಏನು ತಪ್ಪು ಮಾಡಿದ್ರು ಟೀಚರ್ ನನಗ ಶಿಕ್ಷೆ ಕೊಡೋದು. ಅದಕ್ಕ ಇನ್ನ ಮ್ಯಾಲೆ ನಾ ಆ ಶ್ಯಾಲಿಗೆ ಹೋಗಾಂಗಿಲ್ಲ. ನಾ ಏನು ಮಾಡಿದರೂ ತಪ್ಪ. ನೀವು ನೋಡಿದರ ಶ್ಯಾಲಿಗೆ ಬಂದು ಟೀಚರ್ ಗೆ ಬಯ್ಯಾಂಗಿಲ್ಲ. ನಮ್ಮ ಕಡೆ ಬೆಂದ ಅಂಗಿ ಇರದಿದ್ದರೇನು? ಬರೀ ಬಡವರು ಅಂತ ದೂರ ನಿಲ್ಲಿಸ್ತಾರ. ಹತ್ತಿರ ಕರಕೋಳಾಂಗಿಲ್ಲ. ಅಂದಮ್ಯಾಲೆ ಯಾಕ ಶ್ಯಾಲಿಗೆ ಹೋಗಬೇಕು? ನಾ ಹೋಗಾಂಗಿಲ್ಲ... ಎಂದು ಒಲಿಮುಂದ ಕುಂತ ಚಿಮಣಿ ಊರಿವಾಗ ಬಡ ಬಡ ಅಂತ ಹೇಳಿ ಮುಗಿಸಿದ್ದಳು.

ಗಿರಿಜಾ ಮಗಳ ಮಾತು ಕೇಳೋದೆ ಹಬ್ಬ... ಅವಳ ತುಂಟಾಟ ತುಂಬಾನೇ ಇಷ್ಟ. ಆದ್ರೂ ಖಡಕ ಯಾರ ಮೂಲಾಜಿಗೂ ಬೀಳದ ಮಗಳೆಂದರೆ ಪಂಚಪ್ರಾಣ. ಮಗಳು ಹಳೇ ಒಂದೊಂದುಮಾತು ಗಿರಿಜಾಳ ಮನಸ್ಸನ್ನು ನೋಯಿಸುತ್ತಿತ್ತು. ಹೊಟ್ಟೆ ತುಂಬಿದರೆ ಸಾಕು ಎನ್ನುವಾಗ ಬೇಕು ಬೇಡಗಳತ್ತ ಗಮನ ಹರಿಸಿರಲಿಲ್ಲ. ಬಡತನ ಶಾಪವಲ್ಲ ಮಗಳೇ ವರ. ಇಂತಹ ಸುಖ ಎಲ್ಲರಿಗೂ ಸಿಗೋದಿಲ್ಲ. ಅನ್ನುವವರು ಅನ್ನಲಿ, ಬೈಲಿ ನೀನು ಮಾತ್ರ ತಲೆ ಕೆಡೆಸಿಕೊಳ್ಳಬೇಡ. ಎಲ್ಲಿಯಾರ ಕುಂತಾದರೂ ಅಡ್ಡಿಯಿಲ್ಲ ಚೆನ್ನಾಗಿ ಓದು. ಬರಿ ದೊಡ್ಡಕ್ಕಿಯಾಗಿ ನೌಕರಿ ಮಾಡಬೇಕು ಗೊತ್ತಾಯ್ತಾ? ಎಂದು ಮುದ್ದಿಸಿ ಶಾಲಿಗೆ ಹೋಗಬೇಕು ನನ್ನ ಬಂಗಾರ ಎಂದು ಕೈತುತ್ತು ತಿನಿಸಿ. ಮಲಗಿಸಿದಳು. ದೇವರೆ ಮಗಳಿಗೆ ಒದೋ ಶಕ್ತಿ ಕೊಡು ಎಂದು ಭಗವಂತನಲ್ಲಿ ಬಿಡುತ್ತ ನಿದ್ದೆ ಹೋಗಿದ್ದೆ ಗೊತ್ತಾಗಲಿಲ್ಲ. ಆದ್ರೆ ಕವಿತಾಳ ಮನಸ್ಸು ಮಾತ್ರ ಶಾಲೆಗೆಹೋಗುವುದನ್ನು ಧಿಕ್ಕರಿಸಿತ್ತು. ಇನ್ನೂ ಮನೆಯಲ್ಲಿದ್ದರೆ ಶಾಲೆಗೆ ಕಳಿಸುವರೆಂದು ತಿಳಿದು. ಒಂದು ಉಪಾಯ ಮಾಡಿದಳು, ಶಾಲೆಗೆ ರೆಡಿಯಾಗಿ ಹೊರಡುವುದು, ಮಾರ್ಗಮಧ್ಯದಲ್ಲಿ ಪಾಳುಬಿದ್ದ ಅಂಗಡಿಗಳು, ಮನೆಗಳು, ಅವುಗಳಲ್ಲಿ ಅಡಗಿ ಕುಳಿತುಕೊಳ್ಳುವುದು. ಶಾಲೆ ಬಿಟ್ವ ಮೇಲೆ ಪುನಃ ಎಂದಿನಂತೆ ಮನೆಗೆ ಹೋಗುವುದೆಂದು ತೀರ್ಮಾನಿಸಿದ್ದಳು. ಹೀಗೆ ಒಂದು ವಾರ ನೆಡೆಯಿತು. ಯಾರಿಗೂ ಕವಿತಾ ಶಾಲೆ ತಪ್ಪಿಸುವ ಸುದ್ದಿ ಗೊತ್ತಿರಲಿಲ್ಲ. ಏಕೆಂದರೆ ಅವಳ ಮನೆಯ ಕಡೆಯಿಂದ ಬರುವ ಮಕ್ಕಳಾರು ಇರಲಿಲ್ಲ. ಅಂತೂ ತನ್ನ ಪ್ಲಾನ್ ಸಕ್ಸೆಸ್ ಆಗಿದ್ದಕ್ಕೆ ಒಳಗೊಳಗೆ ಸಂತಸ ಪಡುತ್ತಿದ್ದಳು ಆದರೆ ಅಮ್ಮನನ್ನು ಕಂಡಾಗ ತಪ್ಪು ಮಾಡುತ್ತಿರುವೆ ಅನ್ನಿಸುತ್ತಿತ್ತು. ಆದ್ರೂ ಪರವಾಗಿಲ್ಲ, ಒಟ್ಟಿನಲ್ಲಿ ಶಾಲೆ ಬಿಡಬೇಕು ಅಷ್ಟೆ. ಅಪ್ಪ ರಾತ್ರಿ ಬಂದವನೇ ಏನಮ್ಮ ಕವಿತಾ. ಏನು ಕಲಿಸಿದ್ರು? ಬರದಿಯಾ? ಏನು ರಗಳೆ ಮಾಡಿದಿ ಶಾಲ್ಯಾಗ. ಹೀಗೆ ಪ್ರಶ್ನೆ ಕೇಳುವಾಗ ಕವಿತಾ ಏನಿಲ್ಲಪ್ಪಾ. ಹೊಂ ವರ್ಕ್ ಮಾಡತಾ ಇದ್ದೀನಿ ಅಂತ ಯಾವುದೋ ಪಾಠ ಬರೆಯುತ್ತ ಕುಳಿತಳು. ಸುಸ್ತಾಗಿದ್ದರಿಂದ ಬೇಗ ಊಟ ಮಾಡಿ ನಿದ್ದೆಗೆ ಜಾರುತ್ತಿದ್ದರು.

ಬೆಳಿಗ್ಗೆ ಯಥಾಪ್ರಕಾರ ಹೊರಡುವಾಗ ಅಮ್ಮ ಮಗಳನ್ನು ತುಂಬಾ ಪ್ರೀತಿಯಿಂದ ಮುದ್ದಿಸಿ ಕೈಯಲ್ಲಿ 1 ರೂಪಾಯಿ ಕೊಟ್ಟು ಚಾಕಲೇಟ್ ತಿನ್ನು ಎಂದು ತಲೆ ನೇವರಿಸಿ ಕಳಿಸಿದಾಗ ಕವಿತಾಳಿಗೆ ಏನೋ ಆತಂಕ ಯಾಕೆ ಇವತ್ತು ಅವನನ್ನ ಕೈಗೆ ಒಂದು ರೂಪಾಯಿ ಕೊಟ್ಟರು, ಅದು ಚಾಕಲೇಟ್ ತಿನ್ನು ಅಂತ ಏಕೆ? ಎಂದು ಚಿಂತಿಸುತ್ತ ಮುಂದೆ ಸಾಗುತ್ತಾ, ದಿನ ರೂಢಿಯಾದ ಸ್ಥಳ ಬಂದೊಡನೆ ಇರ್ಲಿ ಬಿಡು ಯಾಕೋ ಕೋಡೊ ಮನಸ್ಸಾಗಿದೆ ಚಾಕ್ಲೆಟ್ ತಿಂದರಾಯಿತು ಎಂದು ಖುಷಿಯಿಂದ ಪಾಠಿ ಚೀಲ ಅಲ್ಲೇ ಒಂದು ಕಡೆ ತಂತಿಗೆ ಸಿಕ್ಕಿಸಿ ಆಟವಾಡುತ್ತ ಕುಳಿತಳು ಇನ್ನೇನು ಚಾಕಲೇಟ್ ತಿನ್ನಬೇಕು ಅಂತ ಯೋಚಿಸುತ್ತಿರುವಾಗಲೇ ತಲೆಯ ಮೇಲೊಂದು ಹೊಡೆತ ಬಿದ್ದಾಗ ಹೌಹಾರಿ ಬಾಗಿಲು ಮುರಿದು ಬಿತ್ತಾ ತಲೆ ಎತ್ತಿ ನೋಡಿದಾಗ ಅವ್ವ ನಿಂತಿದ್ದು ಕಂಡು ಅವ್ವನ ಕೈಯಲ್ಲಿ ಕೋಲು, ಜಡೆ ಹಿಡಿದು ಮೇಲೆತ್ತಿ ಮೊಣಕಾಲಿಗೆ ನಾಲ್ಕು ಬಾರಿಸಿ ಮನೆಗೆ ಕರೆತಂದಳು. ಅಪ್ಪ ಅವತ್ತು ಕೆಲಸಕ್ಕೆ ಹೋಗಿರಲಿಲ್ಲ ಮನೆಯಲ್ಲೇ ಇದ್ದ. ಆಗ ಅರ್ಥವಾಯಿತು ಇಬ್ಬರು ಪ್ಲಾನ್ ಮಾಡಿ ನನ್ನ ಕೆಲಸ ಕಂಡುಹಿಡಿದಿದ್ದು ಅಂತ.

 ಟೀಚರ್ ತಂದೆಯನ್ನು ಕರೆಸಿ ಮಗಳು ಒಂದುವಾರದಿಂದ ಶಾಲೆಗೆ ಬರುತ್ತಿಲ್ಲವೇಕೆಂದು ಕಾರಣ ಕೇಳಿದಾಗ ತಂದೆಗೆ ಗಾಭರಿ ದಿನ ಶಾಲೆಗೆ ಹೋಗುವ ಮಗಳು ಶಾಲೆಗೆ ಬರುತ್ತಿಲ್ಲ ಎಂದರೆ ಏನು ಅರ್ಥವಾಗದೆ ಏನು ಮಾತನಾಡದೆ ಮನೆಗೆ ಬಂದು ಅವ್ವನಿಗೆ ವಿಷಯ ತಿಳಿಸಿ ಕವಿತಾಳಿಗೆ ಸುಳಿವು ಕೊಡದೆ ಹೀಗೆ ಮಾಡಿದ್ದರು. ಎಲ್ಲಾ ಅರ್ಥವಾಯಿತು. ತಂದೆ ಯಾವತ್ತೂ ಒಂದು ಪೆಟ್ಟು ಹಾಕದೆ, ಹೊತ್ತು ತಿರುಗುತ್ತಿದ್ದ ಅಪ್ಪ ಇಂದು ಧರಧರನೆ ಎಳೆದುಕೊಂಡು ಬಂದು ಶಾಲೆಯ ತರಗತಿಯಲ್ಲಿ ನಿಲ್ಲಿಸಿದ. ಮಗಳು ತಪ್ಪು ಮಾಡಿದರೆ ತಿದ್ದಿ ಬುದ್ಧಿ ಹೇಳಬೇಕು ನನ್ನ ಮಗಳು ಶಾಣ್ಯಾ ಅದಾಳ ಆದರೆ ಸ್ವಲ್ಪ ಒರಟು ಅವಳಿಗೆ ಪ್ರೀತಿಯಿಂದ ತಿಳಿಸಿ ಹೇಳ್ರಿ ಎಂದು ಟೀಚರ್ ಗೆ ಕೈ ಮುಗಿದು ಬಿಟ್ಟುಬಂದ. ಲತಾ ಟೀಚರ್ ಯಾಕೆ ಶಾಲೆ ತಪ್ಪಿಸಿದಿ, ಏನಾಗಿತ್ತು ಅಂತಾದ್ದು… ಅಂದಾಗ ಕವಿತಾ, ನನಗೆ ಶಾಲೆಗೆ ಬರಲು ಇಷ್ಟವಿಲ್ಲ. ಯಾಕೆಂದರೆ ನೀವ್ಯಾರೂ ನನ್ನ ಪ್ರೀತಿಸೋದಿಲ್ಲ, ಕಲಿಸುವುದಿಲ್ಲ ಯಾರ್ ತಪ್ಪು ಮಾಡಿದರೂ ನನಗೆ ಶಿಕ್ಷೆ ಕೊಡತೀರಿ, ಅದಕ್ಕೆ ನಾನು ಶಾಲೆಗೆ ಬರುವುದಿಲ್ಲ ಶಾಲೆ ಬಿಡುತೀನಿ… ಎಂದು ಕವಿತಾ ಧೈರ್ಯಗುಂದದೆ ಪಟಪಟನೆ ನುಡಿಯುವಾಗ, ಟೀಚರ್ ಕೈಯಲ್ಲಿದ್ದ ಸ್ಕೇಲ್ ಪಟ್ಟಿ ಕೆಳಕ್ಕೆ ಬಿತ್ತು. ಅವರು ಕುರ್ಚಿಯಲ್ಲಿ ಸುಮ್ಮನೆ ಕುಳಿತುಬಿಟ್ಟರು. ಕವಿತಾಳಿಗೆ ಹೊಡೆಯಲೂ ಇಲ್ಲ ಬಯ್ಯಲೂ ಇಲ್ಲ, ಕವಿತಾಳಿಗೆ ಹೆದರಿಕೆಯಾಯಿತು. ಲತಾ ಟೀಚರ್ ನನಗೆ ಚೆನ್ನಾಗಿ ಹೊಡೆಯುವರೆಂದು ತಿಳಿದಿದ್ದಳು. ಯಾಕೆಂದರೆ ಒಂದು ವಾರ ಶಾಲೆಗೆ ಬಂದಿರಲಿಲ್ಲ ಅದಕ್ಕೆ. ನಾನು ಮಾತಾಡಿದ್ದು ಸರಿಯೋ ತಪ್ಪೋ ಎಂದು ಅರ್ಥವಾಗದೆ ಕವಿತಾ, ಟೀಚರ್ ಹೊಡಿರಿ ಬೇಜಾರಿಲ್ಲ ಅಭ್ಯಾಸ ಆಗಿದೆ. ನಾನೇನು ಅಳೋದಿಲ್ಲ, ಎಂದು ಕವಿತಾ, ಟೀಚರ್ ಮುಂದೆ ಕೈಯೊಡ್ಡಿ ನಿಂತಳು. ಲತಾ ಟೀಚರ್ಗೆ ತಾನು ಎಷ್ಟು ದೊಡ್ಡ ತಪ್ಪು ಮಾಡಿದೆ ಎಂದು ಅರಿವಾಗಿತ್ತು. ಶಾಲೆಗೆ ಬರುವ ಎಲ್ಲಾ ಮಕ್ಕಳನ್ನೂ ಸಮಾನ ದೃಷ್ಟಿಯಿಂದ ನೋಡಬೇಕು, ಬೆಳೆಸಬೇಕು, ಕಲಿಸಬೇಕು ಎಂಬುದನ್ನು ಕವಿತಾ ಎಚ್ಚರಿಸಿದಂತಿತ್ತು. ಅವರ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಅವರು ಕವಿತಾಳನ್ನು ಹತ್ತಿರ ಕರೆದು ಅಪ್ಪಿಕೊಂಡು ಬೆನ್ನು ಸವರಿಸುವಾಗ ಕವಿತಾ, ಎಲ್ಲಿ ಟೀಚರ್ ಸೀರೆ ಹಾಳಾಗುವುದೋ ಮೊದಲೇ ನಮ್ಮ ಬಟ್ಟೆ ಕೊಳಕು ಎಂದು ದೂರ ಸರಿದಳು. ಲತಾ ಟೀಚರ್, ನನ್ನ ಕಣ್ಣು ತೆರೆಸಿದ ದೇವತೆ ನೀನು ಸಮಾಜಕ್ಕೆ ಮಾದರಿ ಎಂದು ಪ್ರೀತಿಭಾವಗಳಿಂದ ಕಲಿಕೆಯಲ್ಲಿ ಕವಿತಾಳನ್ನು ತೊಡಗಿಸಿದರು. ಶಾಲೆಗೆ ಸೇರುವ ಪ್ರತಿಯೊಂದು ಮಗು ಶಾಲೆಯಲ್ಲಿರುವಂತೆ ಹಾಗೂ ಕಲಿಯುವಂತೆ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಕವಿತಾಳಿಗಂತೂ ಖುಷಿಯೋ ಖುಷಿ. ಕವಿತಾ ಎಂದಿಗೂ ಶಾಲೆ ಬಿಡುವೆನೆಂಬ ಮಾತನ್ನು ಮರೆತು ಕಲಿಯಬೇಕೆನ್ನುವ ಆಶಾಕಿರಣ ಜಾಗೃತವಾಯಿತು.

ಶಿವಲೀಲಾ ಹುಣಸಗಿ ಯಲ್ಲಾಪುರ ಉತ್ತರ ಕನ್ನಡ ಕರ್ನಾಟಕ ೯೪೪೮೫೮೯೫೬೬

0 likes

Published By

shivaleelahunasgi@gmail.com

shivaleelahunasgigmailcom

Comments

Appreciate the author by telling what you feel about the post 💓

  • Deepak Shenoy · 4 years ago last edited 4 years ago

    ಸುಂದರವಾಗಿ ಬರೆದಿದ್ದೀರಿ

Please Login or Create a free account to comment.