"ನಿಧಿ"

ನಿಧಿ... ಒಳ್ಳೆಯ ಮನಸ್ಸಿನ ಹೆಣ್ಣು ಮಗಳ ಕಥೆ.

Originally published in kn
Reactions 2
298
Ramya Shree Rajarajeshwari
Ramya Shree Rajarajeshwari 18 Aug, 2020 | 1 min read

"ನಿನಗೆ ಗೊತ್ತಿಲ್ಲ ನಿಧಿ.. ಅವತ್ತು ನೀನು ನನ್ನ ಜೀವನದಲ್ಲಿ ಬರದಿದ್ದರೆ, ನಾನಿವತ್ತು ನಿನ್ನ ಜೀವನದಲ್ಲಿ ಇರುತ್ತಲೇ ಇರಲಿಲ್ಲ.. ನಿನ್ನಿಂದಲೇ ನಾನು ನಿನ್ನ ಬಳಿ ಇರುವುದು.." ಹರೀಶ್ ಹೇಳುತ್ತಿದ್ದರೆ, ಅಲ್ಲೇ ಮಲಗಿದ್ದ ಸಾಕ್ಷಿ ಕಣ್ಣುಗಳು ಒದ್ದೆಯಾದವು..

"ಸಾಕ್ಷಿ ನೀನೀಗ ಹಸಿ ಬಾಣಂತಿ ಕಣೆ. ನೀನು ಅತ್ತರೆ, ಶೀತ ಆಗಿ ನಿನಗೆ, ಮಗುವಿಗೆ ಇಬ್ಬರಿಗೂ ತೊಂದರೆ" ಎಂದು ಅಲ್ಲೇ ನಿಂತಿದ್ದ ಸರೋಜ ಸಾಕ್ಷಿಯ ಕಣ್ಣುಗಳನ್ನು ಒರೆಸಿದರು.. ಹರೀಶ್ ಸಾಕ್ಷಿ ಕಡೆ ನೋಡಿದ.. ಕೈಯಲ್ಲಿದ್ದ ನಿಧಿ ತನ್ನ ಪುಟ್ಟ ಪಾದಗಳಿಂದ ಹರೀಶ್ ನನ್ನು ಒದ್ದಳು..

"ಹರಿ ಏನಪ್ಪಾ ಇದು. ಆ ಪುಟ್ಟ ಕಂದನಿಗೆ ಏನು ಅರ್ಥ ಆಗುತ್ತೆ ಅಂತ, ಒಂದು ತಿಂಗಳಿನಿಂದ ದಿನಾ ಅದನ್ನೇ ಹೇಳುತ್ತಿದ್ದೀಯ.. ನಡಿ. ಅಪ್ಪನ ಜೊತೆ ತಿಂಡಿ ತಿಂದು, ನೀನು ಆಫೀಸ್ ಗೆ ಹೋಗಬೇಕಲ್ವಾ. ಸಾಕ್ಷಿ ನೀನು ಮಗುಗೆ ಹಾಲು ಕುಡಿಸಿ ಮಲಗಿಸು..," ಎಂದು ಹೇಳುತ್ತಾ, ಹರೀಶ್ ನ ಕೈಯಲ್ಲಿದ್ದ ಮಗುವನ್ನು ಸಾಕ್ಷಿ ಕೈಯಲ್ಲಿ ಕೊಟ್ಟರು ಸರೋಜ..

ತಿಂಡಿ ಮುಗಿಸಿ ತನ್ನ ಕೆಲಸಕ್ಕೆ ಹೊರಟ ಹರೀಶ್. ಆಫೀಸ್ ಸೇರಿದ, ಹರೀಶ್ ಮನಸ್ಸು ಹತ್ತು ವರ್ಷ ಹಿಂದಕ್ಕೆ ಓಡಿತು..

"ಹೇ ಬುದ್ದಿ ಇದ್ಯಾ ನಿನಗೆ?? ಸಾಯೋದು ಅಷ್ಟು ಸುಲಭ ಅಂದುಕೊಂಡಿದ್ದೀಯಾ?? ಅದೃಷ್ಟ ಚೆನ್ನಾಗಿತ್ತು.., ನಿನ್ನ ಆತ್ಮಹತ್ಯೆ ಪ್ರಯತ್ನದಲ್ಲಿ ಏನಾದರೂ ನಿನ್ನ ಶರೀರ ಯಾವುದೇ ಅಂಗದ ಊನವಾಗಿದ್ದರೆ, ನೀನು ಜೀವನ ಇಡೀ ಸಾಯಿಸುತ್ತಾ ಬದುಕಬೇಕಿತ್ತು.. ಬೇರೆಯವರ ಮೇಲೆ ಅವಲಂಬಿತವಾಗಿ ದಿನಾ ಬದುಕಿ, ಸಾಯಬೇಕಾಗಿತ್ತು. ಇನ್ನು ಚಿಕ್ಕ ವಯಸ್ಸು, ಅಂತಹುದರಲ್ಲಿ ಇಂತ ನಿರ್ಧಾರ ಯಾಕಪ್ಪಾ?" ಬೈಗುಳದಲ್ಲಿದ್ದ ಕಾಳಜಿ ಗೆ ಹರೀಶ್ ಮನ ನೊಂದಿತು..

"ಯಾರಿಗಾಗಿ ಬದುಕಬೇಕು ನಾನು?? ನನ್ನವರು ಅಂತ ಯಾರೂ ಇಲ್ಲ. ಇದ್ದವರೆಲ್ಲಾ ಎಂದೋ ನನ್ನನ್ನು ಅನಾಥಾಶ್ರಮದಲ್ಲಿ ಬಿಟ್ಟಿದ್ದರು. ಪರೀಕ್ಷೆಯಲ್ಲೂ ಫೇಲಾದೆ.. ಇನ್ನು ಅಲ್ಲಿಂದ ಬಾಗಿಲು ಮುಚ್ಚಿತು.. ಇನ್ನೇನು ಮಾಡಲಿ?" ನೋವಿನಿಂದ ಹೇಳಿದವನ ಮುಖ ದಿಟ್ಟಿಸಿದಳು ನಿಧಿ.. 

"ಯಾರು ಇಲ್ಲದಿದ್ದರೆ ಏನಂತೆ. ನೀನು ಇದೀಯ ಅಲ್ವಾ.. ನಿನಗಾಗಿ ಬದುಕಬೇಕು ಹುಚ್ಚಪ್ಪ.. ನಿನ್ನೊಳಗಿರುವ ಆತ್ಮಕ್ಕೆ ನೀನು ಬೇಕು.. ದೇವರು ಕೊಟ್ಟ ಜೀವವನ್ನು, ಅವನು ತೆಗೆದುಕೊಳ್ಳುವವರೆಗೆ ನಾವು ಕಾಯಬೇಕು ತಿಳಿತಾ??" ಎಂದು ಹೇಳಿದವಳು, ಆ ಕ್ಷಣಕ್ಕೆ ವಿಚಿತ್ರವಾಗಿ ಕಂಡಳು ಹರೀಶ್ ಕಣ್ಣಿಗೆ.. 

ಎರಡನೆ ಪಿ ಯು ಸಿ ಯಲ್ಲಿ ಫೇಲಾದ ಹರೀಶ್ ಆತ್ಮಹತ್ಯೆಗೆ ಪ್ರಯತ್ನಿಸಿ, ವಿಫಲನಾದಾಗ, ಯಾರೋ ದಾರಿಹೋಕರು ಅವನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು...

ನಿಧಿ ಅಲ್ಲಿನ ನರ್ಸ್. ಇಪ್ಪತ್ತೆರಡು ವರ್ಷದ ಯುವತಿ.. ಮೂರು ದಿನದ ನಂತರ ಎಚ್ಚರಗೊಂಡವನನ್ನು, ಎಡೆಬಿಡದೆ ನೋಡಿಕೊಂಡು ಬದುಕಿಸಿದ ದೇವತೆ.. ಅವಳನ್ನು ನೋಡಿ ಹರೀಶ್ ಕಣ್ಣುಗಳು ತುಂಬಿದವು..

"ಅಳಬೇಡ. ಇನ್ನು ನಿನಗೆ ಯಾರೂ ಇಲ್ಲ ಅಂದುಕೊಳ್ಳಬೇಡ. ನಾನಿದ್ದೀನಿ. ನಿನ್ನ ಅಕ್ಕನಾಗಿ, ಗೆಳತಿಯಾಗಿ.. ಇನ್ನು ಮೇಲೆ ನೀನು ನನ್ನ ಜೊತೆ ಇರುತ್ತೀಯಾ" ಎಂದು ಹೇಳಿ ಧೈರ್ಯ ತುಂಬಿದಳು..

ಹದಿನೈದು ದಿನ ಆಸ್ಪತ್ರೆ ವಾಸ ಮುಗಿಸಿದ ಹರೀಶ್ ನನ್ನು ತನ್ನ ಮನೆಗೆ ಕರೆದೊಯ್ದ ನಿಧಿ, ತನ್ನ ತಂದೆ ತಾಯಿಗೆ ಪರಿಚಯಿಸಿದಳು.. "ಅಮ್ಮ ಇನ್ನು ಮೇಲೆ ನಿಮಗೊಬ್ಬ ಮಗ ಸಿಕ್ಕಿದ.." ಎಂದು ಹೇಳಿದಾಗ, ಹರೀಶ್ ಅವರ ಪ್ರತಿಕ್ರಿಯೆಗೆ ಅಚ್ಚರಿಗೊಂಡ..

ಸರೋಜ, ಶಾಂತರಾಮ್ ದಂಪತಿಯ ಮಗಳೇ ನಿಧಿ.. ಮಗಳ ಮಾತಿಗೆ ಅವರ ಒಪ್ಪಿಗೆ ಇತ್ತು. ಹರೀಶ್ ಗೆ ಪಾಠ ಹೇಳಿಕೊಟ್ಟು, ಮತ್ತೆ ಪರೀಕ್ಷೆ ಬರೆಯುವಂತೆ ಮಾಡಿದಳು ನಿಧಿ. ಅವನು ಪಾಸಾದಾಗ, ಅವಳೇ ಹೆಚ್ಚು ಖುಷಿ ಪಟ್ಟಳು.

ಹರೀಶ್ ನನ್ನು ಮುಂದೆ ಓದಿಸಲು ಒಳ್ಳೆಯ ಪದವಿ ಕಾಲೇಜಿನಲ್ಲಿ ಭರ್ತಿ ಮಾಡಿಸಿದಳು. ಹರೀಶ್ ಮನೆಯವರ ನಿರೀಕ್ಷೆಯಂತೆ ಚೆನ್ನಾಗಿ ಓದಿ, ಉತ್ತೀರ್ಣನೂ ಆದ.. ಮುಂದೆ ಹರೀಶ್ ಐ ಎ ಎಸ್ ಮಾಡಲು ನಿಧಿ ಅವನನ್ನು ದೆಹಲಿಯಲ್ಲಿ ಒಂದು ಅಕಾಡೆಮಿಗೆ ಸೇರಿಸಿದಳು..

ಹರೀಶ್ ಮೊದಲ ಪ್ರಯತ್ನದಲ್ಲೇ ಪರೀಕ್ಷೆ ಪಾಸ್ ಮಾಡಿ, ಡೆಹ್ರಾಡೂನ್ ನಲ್ಲಿ ತರಬೇತಿಗೆ ಹೋದ.. ಎರಡು ವರ್ಷದ ತರಬೇತಿ ಸಮಯದಲ್ಲಿ ಅವನು ಒಮ್ಮೆಯೂ ಊರಿಗೆ ಬರುವುದನ್ನು ನಿಧಿ ಒಪ್ಪಲಿಲ್ಲ.. 

"ನೋಡು, ಎರಡು ವರ್ಷ ಅಲ್ಲೇ ಇದ್ದು ಚೆನ್ನಾಗಿ ಕಲಿತು, ಡಿ ಸಿ ಆಗಿ ಬಾ. ನಾನು ಆಮೇಲೆ ನಿನ್ನ ನೋಡೋದು, ನಿನ್ನ ಜೊತೆ ಮಾತನಾಡೋದು.. ಅಲ್ಲಿಯವರೆಗೆ ನಾನು ತಿಂಗಳಿಗೊಂದು ಪತ್ರ ಬರೀತಿನಿ ಅಷ್ಟೇ" ಎಂದು ಖಡಾಖಂಡಿತವಾಗಿ ಮಾತು ತೆಗೆದುಕೊಂಡೇ, ಅವನನ್ನು ಟ್ರೈನ್ ಹತ್ತಿಸಿದ್ದಳು..

ಎರಡು ವರ್ಷದ ತರಬೇತಿ ಮುಗಿಸಿದ ಹರೀಶ್ ಗೆ, ಮೊದಲ ಪೋಸ್ಟಿಂಗ್ ತೆಲಂಗಾಣದ ವಾರಂಗಲ್ ನಲ್ಲಿ ಸಿಕ್ಕಿತು.. ಇನ್ನು ಅಕ್ಕನನ್ನು ಕೆಲಸ ಬಿಡಿಸಿ, ಒಳ್ಳೆಯ ಕಡೆ ಮದುವೆ ಮಾಡಿಕೊಡಬೇಕು ಎಂದು ಸಂತೋಷದಿಂದ ಮನೆಗೆ ಬಂದವನಿಗೆ, ದೊಡ್ಡ ಆಘಾತ ಕಾದಿತ್ತು.. 

ನಿಧಿ ಸತ್ತು ಒಂದು ವರ್ಷದ ಮೇಲಾಗಿತ್ತು.. ಹರೀಶ್ ಗೆ ಆಘಾತ ತಾಳಲಾಗಲಿಲ್ಲ.. ಪ್ರಜ್ಞೆ ತಪ್ಪಿದವನನ್ನು ಸರೋಜ, ಶಾಂತರಾಮ್ ದಂಪತಿಗಳು ಆರೈಕೆ ಮಾಡಿದರು.. ಹರೀಶ್ ಎಚ್ಚರಗೊಂಡ ಮೇಲೆ ತಿಳಿದ ಸತ್ಯ, ಅವನ ಎದೆಯನ್ನೇ ನಡುಗಿಸಿತು..

ನಿಧಿಗೆ ನಾಲ್ಕು ವರ್ಷದಿಂದ ಕ್ಯಾನ್ಸರ್ ಕಾಯಿಲೆ ಇತ್ತು.. ಆದರೆ ಅವಳು ಅದನ್ನು ತನ್ನ ತಂದೆ, ತಾಯಿಗೂ ಹೇಳಿರಲಿಲ್ಲ..ತಾನೇ ನರ್ಸ್ ಆಗಿದ್ದರಿಂದ, ಅಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಳು.. ಕಷ್ಟದಲ್ಲಿದ್ದವರಿಗೆ ಸ್ಪಂದಿಸುತ್ತಿದ್ದ ನಿಧಿಯನ್ನು ಕಂಡರೆ, ಅವಳ ಅಸ್ಪತ್ರೆಯಲ್ಲಿನ ಡಾಕ್ಟರ್ ಗಳಿಗೆ ತುಂಬಾ ಅಭಿಮಾನ, ಗೌರವ.. ಹೀಗಾಗಿ ಅವಳ ಚಿಕಿತ್ಸೆಯ ವೆಚ್ಚವನ್ನು ಅವರೇ ಭರಿಸುತ್ತಿದ್ದರು..

ನಿಧಿ ಸಾಯುವುದು ಖಚಿತ ಎಂದು ತಿಳಿದ ಮೇಲೆಯೇ ಹರೀಶ್ ನನ್ನು ದೂರಕ್ಕೆ ಕಳುಹಿಸಿದ್ದು, ಅವನಿಂದ ಮಾತು ತೆಗೆದುಕೊಂಡಿದ್ದು.. ತನ್ನ ಕಾಯಿಲೆ ಬಗ್ಗೆ ತಿಳಿದರೆ, ತನ್ನ ಓದನ್ನು ಅರ್ಧಲ್ಲೇ ಬಿಟ್ಟು ಬಿಡಬಹುದು ಎನ್ನುವ ಭಯದಿಂದ ಹಾಗೆ ಮಾತು ತೆಗೆದುಕೊಂಡಿದ್ದಳು..

ತಂದೆ, ತಾಯಿಯನ್ನು ಅದಕ್ಕೆ ಒಪ್ಪಿಸಿಯೂ ಇದ್ದಳು.. ಸುಮಾರು ಇಪ್ಪತ್ತು ಪತ್ರಗಳನ್ನು ಸಾವಿಗೆ ಮೊದಲೇ ಬರೆದಿಟ್ಟಿದ್ದಳು. ಪ್ರತಿ ತಿಂಗಳು ತಪ್ಪದೆ ಒಂದೊಂದು ಪತ್ರವನ್ನು ಹರೀಶ್ ಗೆ ಪೋಸ್ಟ್ ಮಾಡುವಂತೆ ಹೇಳಿದ್ದಳು.. ಇದ್ಯಾವುದೂ ಅರಿಯದ ಹರೀಶ್, ನಿಧಿಯ ಇಚ್ಛೆಯಂತೆ ಅವಳ ಗುರಿ ತಲುಪಿ ಬಂದಿದ್ದ..

ನಿಧಿ ಫೋಟೋ ಮುಂದೆ ನಿಂತು ಕಣ್ಣೀರು ಸುರಿಸಿದ ಹರೀಶ್, ತನ್ನ ಜೀವ ಕೊಟ್ಟು ಅವನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ ಜೀವವನ್ನು ನೋಡಿ, "ಅಕ್ಕ. ನೀನೇ ನನ್ನ ಪ್ರೇರಣೆ.. ನಿನ್ನಿಂದ ಉಳಿದ ಜೀವ ಇದು. ಇನ್ನು ನಿನ್ನಂತೆಯೇ, ಕಷ್ಟದಲ್ಲಿ ಇರುವವರಿಗೆ ಸ್ಪಂದಿಸುತ್ತೇನೆ" ಎಂದು ಮಾತು ಕೊಟ್ಟ..

ತನ್ನ ಜೊತೆ ಶಾಂತರಾಮ್, ಸರೋಜರನ್ನು ತೆಲಂಗಾಣದ ವಾರಂಗಲ್ ಗೆ ಕರೆದೊಯ್ದ ಹರೀಶ್.. ಅವರಿಬ್ಬರನ್ನು ಚೆನ್ನಾಗಿ ನೋಡಿಕೊಂಡು, ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ.. 

ವಾರಂಗಲ್ ನಲ್ಲಿ ನಡೆದ ಒಂದು ಸ್ಫೋಟದಲ್ಲಿ, ತನ್ನವರನ್ನೆಲ್ಲ ಕಳೆದುಕೊಂಡು ಅನಾಥವಾಗಿದ್ದ ಸಾಕ್ಷಿಯನ್ನು ಭೇಟಿಯಾದ.. ಸ್ಫೋಟದಲ್ಲಿ ಸಾಕ್ಷಿಯ ಒಂದು ಕಾಲು ಊನವಾಗಿತ್ತು.. ಅವಳನ್ನು ನೋಡಿದ ಹರೀಶ್ ಗೆ ತನ್ನ ಅಕ್ಕನ ನೆನಪಾಯ್ತು.. ಸಾಕ್ಷಿಯ ಜಾಗದಲ್ಲಿ ತನ್ನನ್ನು ಕಲ್ಪಿಸಿಕೊಂಡ..

ಸರೋಜ, ಶಾಂತರಾಮ್ ಒಪ್ಪಿಗೆ ಪಡೆದು, ಸಾಕ್ಷಿಯನ್ನು ಮದುವೆಯಾದ.. ಮದುವೆಯಾಗಿ ಒಂದು ವರ್ಷ ಕಳೆದಿತ್ತು.. ಅವರಿಬ್ಬರ ಪ್ರೀತಿಯ ಕುರುಹು, ಮಗಳಾಗಿ ಚಿಗುರಿತ್ತು.. ಅವಳೇ ನಿಧಿ.. ತನ್ನನ್ನು ಈ ಮಟ್ಟಕ್ಕೆ ಬೆಳೆಯಲು ಪ್ರೇರಣೆಯಾದ ತನ್ನಕ್ಕನ ಹೆಸರನ್ನೇ ಮಗಳಿಗಿಟ್ಟಿದ್ದ..

ಹರೀಶ್ ತನ್ನ ಕಣ್ಣುಗಳನ್ನು ಒರೆಸಿಕೊಂಡ. ತನ್ನ ಟೇಬಲ್ ಮೇಲಿದ್ದ ತನ್ನಕ್ಕನ ಫೋಟೋಗೆ ಗುಲಾಬಿ ಹೂವಿಟ್ಟು, ಕೈ ಮುಗಿದ..


🌹🌹🌹🌹🌹🌹


2 likes

Published By

Ramya Shree Rajarajeshwari

ramyas

Comments

Appreciate the author by telling what you feel about the post 💓

Please Login or Create a free account to comment.