ನಾನು ಸ್ಕೂಲಿನಿಂದ ಬಂದಾಗ ಸಿರಿ ಸಪ್ಪಗೆ ಮುಖ ಮಾಡಿಕೊಂಡು ಮನೆಯ ಮುಂಬಾಗಿಲ ಮುಂದಿನ ಮೆಟ್ಟಲಿನ ಮೇಲೆ ಕುಳಿತಿದ್ದಳು. "ಹಾಯ್ ಮುದ್ದು, ಏನು ಮಾಡ್ತಾ ಇದ್ದಿ ಇಲ್ಲಿ, ಊಟ ಮಾಡಿದ್ಯಾ?" ಎಂದು ಕೇಳಿದೆ. ನನ್ನನ್ನು ಒಮ್ಮೆ ದೀನವಾಗಿ ನೋಡಿದವಳನ್ನು ನೋಡಿ ಕರುಳು ಚುರುಕ್ ಎಂದಿತು. ಅಲ್ಲೇ ಅವಳ ಪಕ್ಕ ಕುಳಿತೆ. ಅವಳನ್ನು ನನ್ನ ಕೈಗಳಿಂದ ಬಳಸಿ, "ಯಾಕೆ ಮುದ್ದು ಏನಾಯ್ತು, ಯಾರಾದ್ರೂ ಏನಾದ್ರು ಅಂದ್ರ" ಅಂದೆ.
"ಅಮ್ಮ ಕಪ್ಪಾಗಿರುವವರು ಡ್ಯಾನ್ಸ್ ಮಾಡಬಾರ್ದ?" ಮುದ್ದಾಗಿ, ಅಳು ಧ್ವನಿಯಲ್ಲಿ ನನ್ನ ಮುಖವನ್ನೇ ದಿಟ್ಟಿಸುತ್ತ ಕೇಳಿದಳು. "ಯಾರು ಹೇಳಿದರು ಹಾಗಂತ?" ಎಂದೆ. "ಇವತ್ತು ಸ್ಕೂಲ್ನಲ್ಲಿ annual dayಲಿ ಡ್ಯಾನ್ಸ್ ಮಾಡೋಕೆ ಸೆಲೆಕ್ಟ್ ಮಾಡ್ತಿದ್ರು. ನನ್ನನ್ನು ನಮ್ಮ ಡ್ಯಾನ್ಸ್ ಟೀಚರ್ ಸೆಲೆಕ್ಟ್ ಮಾಡಿದಕ್ಕೆ, ಇನ್ನೊಂದು ಟೀಚರ್, ಇವಳು ಬೇಡ ಕಪ್ಪಾಗಿದ್ದಾಳೆ, ಅಂತ ಬರಿ ಬೆಳ್ಳಾಗಿದ್ದವರನ್ನೇ ಸೆಲೆಕ್ಟ್ ಮಾಡಿದ್ರು. ಡ್ಯಾನ್ಸ್ ಟೀಚೆರ್ ಸಿರಿ ಚೆನ್ನಾಗಿ ಡ್ಯಾನ್ಸ್, ಮತ್ತೇ ಇವಳ ಎಕ್ಸಪ್ರೇಷನ್ ಚೆನ್ನಾಗಿದೆ ಅಂದ್ರೂ ಆ ಟೀಚರ್ ನನ್ನ ತಗೊಳ್ಲಿಲ್ಲ ಗೊತ್ತಾ" ಎಂದು ಹೇಳುವಷ್ಟರಲ್ಲಿ ಅವಳ ಕಣ್ಣಿಂದ ಕಣ್ಣೀರು ಹರಿಯತೊಡಗಿತು.
ನನಗೆ ಅವಳನ್ನು ಹೇಗೆ ಸಮಾಧಾನ ಪಡಿಸಬೇಕೆಂದು ತಿಳಿಯಲಿಲ್ಲ. "ನೋಡು ಮುದ್ದು ಅದಕೆಲ್ಲ ಇಷ್ಟು ಅಳುತ್ತರಾ, ಅದು ಒಂದು ಡ್ಯಾನ್ಸ್ ಅಷ್ಟೇ. ಬಾ ಒಳಗೆ ಹೋಗೋಣ. ಅಜ್ಜಿ ಎಲ್ಲಿ?" ಎಂದು ಹೇಳುತ್ತಾ, ಅವಳನ್ನು ಎತ್ತಿಕೊಂಡು ಮನೆಯೊಳಗೆ ಬಂದೆ. "ಸಾಧ್ಯ ಬಂದ್ಯಾ. ನನಗಂತೂ ಮಧ್ಯಹ್ನದಿಂದ ಸಾಕಾಗಿ ಹೋಯ್ತು. ಇವಳು ಅಳೋದು ನೋಡೋಕೆ ಆಗಲ್ಲ. ನಾಳೆ ಹೋಗಿ ಅವಳ ಟೀಚರ್ ಹತ್ತಿರ ಮಾತಾಡು ರೂಪ. ನನಗಂತೂ ಅವಳು ಅಳೋದು ನೋಡಿದ್ರೆ ಹೊಟ್ಟೆ ಉರಿಯುತ್ತೆ ಕಣಮ್ಮ" ಅಂದರು ಅತ್ತೆ ನೋವಿನಿಂದ.
"ಸರಿಮ್ಮ ನಾಳೇ ನೇ ಹೋಗಿ ಮಾತಾಡ್ತಿನಿ" ಎಂದು ಸಿರಿನ ಸೋಫಾದಲ್ಲಿ ಕೂರಿಸಿದೆ. ಅವಳ ಕೆನ್ನೆ ಒದ್ದೆಯಾಗಿತ್ತು. ಕಣ್ಣೀರು ಒರೆಸಿ, ಮುತ್ತು ಕೊಟ್ಟು ತಲೆ ಸವರಿ ಬಟ್ಟೆ ಬದಲಿಸಲು ಹೋದೆ. ನಾನು ಮುಖ ತೊಳೆಯುತ್ತ ನನ್ನ ಮಗಳ ಬಗ್ಗೆ ಯೋಚಿಸಿದೆ. ಐದು ವರ್ಷದ ಹಾಲುಗಲ್ಲದ ಹಸುಳೆ. ಅವಳ ಮುಗ್ದ ಮನಸ್ಸಿನಲ್ಲಿ ಬಣ್ಣದ ವಿಷ ಬಿತ್ತಿದ ಟೀಚರ್ ಮೇಲೆ ಅಸಾಧ್ಯ ಕೋಪ ಬಂತು. ನಾಳೆಯೇ ಹೋಗಿ ಅವರಿಗೆ ಗ್ರಹಚಾರ ಬಿಡಿಸಬೇಕು ಎಂದ ತೀರ್ಮಾನ ಮಾಡಿದೆ.
ಸಿರಿ ನನ್ನ ಮುದ್ದು ಮಗಳು. ಒಂದು ಪ್ರತಿಷ್ಠಿತ ಶಾಲೆಯಲ್ಲಿ ukg ಓದುತ್ತಿದ್ದಾಳೆ. ಓದಿನಲ್ಲಿ ಚುರುಕು. ಪಠ್ಯೇತರ ಚಟುವಟಿಕೆಯಲ್ಲಿ ಎತ್ತಿದ ಕೈ. ಅವಳು ಬಿಡಿಸಿದ ಚಿತ್ರಗಳು ಆ ಸ್ಕೂಲ್ ನೋಟಿಸ್ ಬೋರ್ಡ್ನಲ್ಲಿ ಯಾವಾಗಲೂ ಇರುತ್ತೆ. ಡ್ಯಾನ್ಸ್, ಹಾಡು ಎಲ್ಲದರಲ್ಲೂ ಎತ್ತಿದ ಕೈ. "ಅವಳು ನಮ್ಮ ಸ್ಕೂಲ್ asset. ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟು ಟ್ಯಾಲೆಂಟೆ ಇದೆ. she is a gifted child" ಅಂತ ಅವಳ ಪ್ರಿನ್ಸಿಪಾಲ್ ಹೋದಸಲದ ಮೀಟಿಂಗ್ ನಲ್ಲಿ ಹೊಗಳಿದ್ದರು. ಅಂತಹದರಲ್ಲಿ ಈ ರೀತಿ ಮಾತನಾಡಿದ ಟೀಚರ್ ಯಾರು ಅಂತ ನೋಡಲೇ ಬೇಕು ಎಂದುಕೊಂಡೆ.
ನಾನು ಬರುವಷ್ಟರಲ್ಲಿ ಹಾಗೆಯೇ ಸೋಫಾದಲ್ಲಿ ಮಲಗಿ ಬಿಟ್ಟಿದಳು ಸಿರಿ. ಎತ್ತಿಕೊಂಡು ಹೋಗಿ ರೂಮಿನಲ್ಲಿ ಮಲಗಿಸಿ ಬಂದೆ. ಅತ್ತೆ ಸಪ್ಪಗೆ ಕುಳಿತಿದ್ದರು. "ಬೇಜಾರು ಮಾಡ್ಕೋಬೇಡಿ ಅಮ್ಮ. ನಾಳೆನೆ ಹೋಗಿ ಮಾತಾಡ್ತಿನಿ" ಅಂದೆ. "ಅಲ್ಲ ರೂಪ, ಏನೋ ಮಗು ಬಣ್ಣ ಸ್ವಲ್ಪ ಕಡಿಮೆ ಇದೆ ಅಷ್ಟೇ. ಅದನ್ನು ಹಾಗೆ ಆ ಚಿಕ್ಕಮಗುವಿನ ಮನಸ್ಸಿಗೆ ಘಾಸಿಮಾಡಬಹುದೇ, ಅವರೆಂತ ಶಿಕ್ಷಕಿ?" ಎಂದರು. ವಾಕಿಂಗ್ ಹೊರಟ ಮಾವ, "ನಾನು ಬರ್ತಿನಮ್ಮ ನಾಳೆ. ನಾನು ಆ ಟೀಚರ್ ನೋಡಬೇಕು" ಎಂದು ಹೇಳಿ ಹೊರಟರು.
ನನ್ನ ಮಾವ ಸೈನ್ಯದಲ್ಲಿ ವೈದ್ಯರಾಗಿದ್ದು ನಿವೃತ್ತಿ ಹೊಂದಿದವರು. ನನ್ನ ಪತಿ ರಾಜಶೇಖರ್ ಕೂಡ ಒಬ್ಬ ಮನೋವೈದ್ಯ. ನಾನು ಒಬ್ಬ ಶಿಕ್ಷಕಿ. ನಾವೆಲ್ಲ ನನ್ನ ಮಗಳನ್ನು ವಿಶಾಲ ಮನೋಭಾವದಿಂದ ಬೆಳೆಯುವಂತೆ ಪ್ರೋತ್ಸಾಹಿಸುತ್ತಿದ್ದರೆ, ಈ ಘಟನೆ ಆ ಪುಟ್ಟ ಮಗುವಿನ ಮನಸ್ಸಿನಲ್ಲಿ ಎಷ್ಟು ನೋವು ಕೊಟ್ಟಿದೆ ಎಂದು ತಿಳಿದು ದುಃಖವಾಯ್ತು. ರಾಜು ಬಂದಮೇಲೆ ಅವರ ಜೊತೆ ಮಾತಾಡಿ ಮುಂದುವರಿಯಬೇಕು ಎಂದುಕೊಂಡು, ಕೆಲಸದಲ್ಲಿ ಮುಳುಗಿದೆ.
ರಾತ್ರಿ ಎಲ್ಲರೂ ಊಟಕ್ಕೆ ಕುಳಿತಾಗ ಸಿರಿ, "ಅಮ್ಮ ಇನ್ಮೇಲೆ ನನಗೆ ರಾಗಿಮುದ್ದೆ ಕೊಡಬೇಡಿ. ಚಾಪತಿ ಬೆಳ್ಳಗೆ ಇರೋದು ಕೊಡಿ. ಬ್ರೆಡ್ ಕೊಡಿ. ಬಿಳಿ ಅನ್ನ ಮಾತ್ರ ಕೊಡಿ" ಅಂದಳು. ಆಗಷ್ಟೇ ಮನೆಗೆ ಬಂದಿದ್ದ ರಾಜುಗೆ ಸಿರಿ ಹೇಳಿದ್ದು ಯಾಕೆ ಎಂದು ಅರ್ಥವಾಗಲಿಲ್ಲ. "ಯಾಕೆ ಮುದ್ದು, ಬರಿ ಅನ್ನದಲ್ಲಿ ಏನು ಇರಲ್ಲ. ಬ್ರೆಡ್ ಒಳ್ಳೆಯದಲ್ಲ" ಅಂದ್ರು.
"ಇಲ್ಲ ಅಪ್ಪ ನಮ್ಮ ಕ್ಲಾಸ್ಸಲ್ಲಿ ಜಾನು ಇದ್ದಾಳೆ. ಅವಳು ಎಷ್ಟು ಬೆಳ್ಳಾಗಿದ್ದಾಳೆ ಗೊತ್ತಾ. ಅವಳು ಬರಿ ಬ್ರೆಡ್ಡು ತರ್ತಾಳೆ. ಅದಕ್ಕೆ ಸಿಂಚು ಹೇಳಿದ್ಲು ನಾವು ಇನ್ಮೇಲೆ ಬೆಳ್ಳಾಗಿರುವ ತಿಂಡಿ ಮಾತ್ರ ತಿನ್ನೋಣ ಅಂತ. ಆಗ ನಾವು ಬೆಳ್ಳಗಾಗ್ತಿವಂತೆ. ಹಾಲಿಗೆ ಚಾಕ್ಲೆಟ್ ಹಾರ್ಲಿಕ್ಸ್ ಹಾಕಬೇಡಿ. ನಾನು ಇವತ್ತಿನಿಂದ ಚಾಕ್ಲೆಟ್ ತಿನ್ನಲ್ಲ" ಎಂದು ಖಡಾಖಂಡಿತವಾಗಿ ಹೇಳಿದಳು.
"ಸರಿ ಈಗ ಊಟ ಮುಗಿಸು ಆಮೇಲೆ ಮಾತಾಡೋಣ" ಎಂದು ನಮ್ಮತ್ತೆ ಅವಳಿಗೆ ತಿನ್ನಿಸ ತೊಡಗಿದರು. ಪತಿ ನನ್ನ ಮುಖ ನೋಡಿದರು. ಆಮೇಲೆ ಹೇಳ್ತೀನಿ ಅಂತ ಕಣ್ಸನ್ನೆ ಮಾಡಿದೆ. ಎಲ್ಲರೂ ಊಟಮುಗಿಸಿದ ಮೇಲೆ, ಮನೆ ಮುಂದಿನ ಅಂಗಳದಲ್ಲಿ ಕುಳಿತೆವು.
ನಮ್ಮತ್ತೆ ಸಿರಿನ ಮಲಗಿಸಲು ಹೋದರು. ಅವಳಿಗೆ ಅಜ್ಜಿಯ ಕಥೆ ಕೇಳದೆ ನಿದ್ದೆ ಬರದು. ಪತಿಗೆ ಎಲ್ಲವನ್ನು ಹೇಳಿದೆ. "ಸರಿ ನಾಳೆ ನಾನು, ನೀನು ಸ್ಕೂಲ್ಗೆ ಹೋಗೋಣ. ಇದನ್ನು ಇಲ್ಲೇ ಚಿವುಟಬೇಕು ಇಲ್ಲವಾದರೆ ಹೆಮ್ಮರವಾಗಿ ಸಿಸ್ಟಮ್ಅನ್ನು ಹಾಳು ಮಾಡುತ್ತೆ" ಎಂದರು. "ನಾನು ಬರ್ತಿನಿ ರಾಜು. ನಾನು ಆ ಟೀಚರ್ ನೋಡ್ಬೇಕು" ಅಂದ್ರು ಮಾವ. "ಸರಿಪ್ಪ, ಹೋಗೋಣ" ಎಂದು ಎದ್ದು ಮಲಗಲು ಹೊರಟರು.
ಮಾರನೆಯ ದಿನ ಸಿರಿಗೆ ರಾಗಿ ಮುದ್ದೆ ತಿನ್ನಿಸಲು ನಮ್ಮತ್ತೆ ಸಾಹಸ ಪಟ್ಟರು. ನಮ್ಮೆಯಲ್ಲಿ ಬೆಳಗ್ಗೆಯೇ ಮುದ್ದೆ ಊಟ. ಮಧ್ಯಹ್ನ ಅನ್ನ ಸಾರು. ರಾತ್ರಿ ಉಪಹಾರ. ಬೇಕರಿ ತಿನಿಸು ಮನೆಯೊಳಗೂ ಬಾರದು. ಮನೆಯಲ್ಲೇ ರುಚಿಯಾಗಿ ಮಾಡಿದ ತಿಂಡಿಗಳಿಗೆ ಪ್ರಾಶಸ್ತ್ಯ. ಹಣ್ಣು ತರಕಾರಿ ಏತೇಚ್ಛವಾಗಿ ಉಪಯೋಗಿಸುತ್ತೇವೆ. ಸಿರಿ ಇಷ್ಟು ವರ್ಷದಲ್ಲಿ ಯಾವತ್ತೂ ತಿನ್ನಲು ಹಠ ಮಾಡಿಲ್ಲ. ಆದರೆ ಒಂದು ಚಿಕ್ಕ ಮಾತು ಎಷ್ಟು ಬದಲಾಯಿಸಿತು ಆ ಮಗುವನ್ನು!
ನಾನು ನನ್ನ ಸ್ಕೂಲ್ಗೆ ಫೋನ್ ಮಾಡಿ ಇವತ್ತು ರಜೆ ಬೇಕು ಅಂತ ಹೇಳಿದೆ. ಸಿರಿಯನ್ನು ಸ್ಕೂಲ್ ಬಸ್ ಹತ್ತಿಸಿ ಮನೆಗೆ ಬಂದ ಮಾವ, "ಮಗುಗೆ ನಾವು ಸ್ಕೂಲ್ ಹತ್ತಿರ ಹೋಗಿದ್ದು ತಿಳಿಯಬಾರದು" ಅಂದರು. ಸರಿ ಎಂದು ಎಲ್ಲರೂ ತಲೆಯಾಡಿಸದೆವು. ಹತ್ತು ಗಂಟೆಯ ಹೊತ್ತಿಗೆ ನಾನು, ರಾಜು, ಮಾವ ಊಟಮುಗಿಸಿ ಸ್ಕೂಲ್ ಕಡೆಗೆ ಹೊರಟೆವು. ದಾರಿಯಲ್ಲಿ ಯಾರೂ ಏನೂ ಮಾತಾಡಲಿಲ್ಲ.
ಸ್ಕೂಲ್ನಲ್ಲಿ ವಿಸಿಟಿಂಗ್ ಪಾಸಿಗೆ ನೆನ್ನೆಯೇ ಫೋನ್ ಮಾಡಿ ಬರೆಸಿದ್ದೆ. ಹೀಗಾಗಿ ಪ್ರಿನ್ಸಿಪಾಲ್ ಕೊನೆಗೆ ಹೋಗಲು ಟೈಂ ನಿಗದಿಯಾಗಿತ್ತು. ಪ್ರಿನ್ಸಿಪಾಲ್ ಗೆ ನಮ್ಮಜೊತೆ ಮಾವನವರು ಬಂದಿದ್ದು ನೋಡಿ ಆಶ್ಚರ್ಯ ಪಟ್ಟರು. "ಏನು ಸಮಾಚಾರ ಸರ್" ಎಂದರು. ನಿನ್ನೆಯ ಘಟನೆಯನ್ನು ರಾಜು ವಿವರಿಸಿದರು. ಪ್ರಿನ್ಸಿಪಾಲ್ ಮುಖ ಗಂಭೀರವಾಯ್ತು. ಬೆಲ್ ಮಾಡಿ ಡ್ಯಾನ್ಸ್ ಟೀಚರ್ ಕರೆಸಲು ಹೇಳಿದರು.
ನಮ್ಮ ಮಾವನವರು, "ನೋಡಿ ವರ್ಣಭೇದ ಇರಬಾರದು ಅಂತ ತಿಳುವಳಿಕೆ ಇಲ್ಲದವರು ಯಾಕೆ ಶಿಕ್ಷಕ ವೃತ್ತಿಗೆ ಬರಬೇಕು? ಯಾಕೆಂದ್ರೆ ಸಾವಿರಾರು ಮಕ್ಕಳಲ್ಲಿ ಎಲ್ಲರ ಬಣ್ಣವೂ ಬೇರೆ ಬೇರೆ. ಅಂತಹುದರಲ್ಲಿ ಇಂತಹ ಘಟನೆ ಮುಗ್ದ ಮನಸ್ಸಿಗೆ ಎಷ್ಟು ಘಾಸಿ ಮಾಡುತ್ತದೆ ಎನ್ನುವ ಅಳತೆ ಇದೆಯೇ ನಿಮಗೆ?" ಎಂದು ಪ್ರಶ್ನಿಸಿದರು. ಅಷ್ಟರಲ್ಲಿ ಡ್ಯಾನ್ಸ್ ಟೀಚರ್ ಬಂದರು.
"ನೆನ್ನೆ ukg ಲಿ annual day ಗೆ ಮಕ್ಕಳನ್ನು ಸೆಲೆಕ್ಟ್ ಮಾಡಲು ನಿಮ್ಮ ಜೊತೆ ಯಾರಿದ್ದರು?" ಎಂದು ಪ್ರಿನ್ಸಿಪಾಲ್ ಕೇಳಿದರು. "ಜ್ಯೋತಿ ಮೇಡಂ ಇದ್ರು ಮೇಡಂ" ಅಂದ್ರು. ಇಂಟರ್ಕಾಂ ಲ್ಲಿ "ಜ್ಯೋತಿ ಕಳಿಸಿ" ಅಂದ್ರು. ಡ್ಯಾನ್ಸ್ ಟೀಚರ್ ನನ್ನನ್ನು ನೋಡಿದ್ದರಿಂದ, ಅವರಿಗೆ ಯಾವ ವಿಷಯ ಎಂದು ಅರಿವಾಯ್ತು. ನಾನು ಅವರತ್ತ ಮುಗುಳ್ನಗೆ ಬೀರಿದೆ. ಪ್ರತಿಯಾಗಿ ಅವರು ಮುಗುಳ್ನಕ್ಕರು. ಅಷ್ಟರಲ್ಲಿ ಜ್ಯೋತಿ ಮೇಡಂ ಬಂದ್ರು. ಎಲ್ಲರೂ ಅವರನ್ನು ನೋಡಿದರು.
ಪ್ರಿನ್ಸಿಪಾಲ್ ನಿನ್ನೆಯ ಘಟನೆಗೆ ವಿವರಣೆ ಕೇಳಿದರು. ಆಗ ಜ್ಯೋತಿ "ಸಿರಿ ಬಣ್ಣ ಸ್ವಲ್ಪ ಕಡಿಮೆ. ಅದಕ್ಕೆ ಹಾಗೆ ಹೇಳಿದೆ" ಅಂದ್ರು. ರಾಜು "ಹಾಗಾದ್ರೆ ಆಫ್ರಿಕಾದ ಶಾಲೆಗಳಲ್ಲಿ annual day ನಡೆಯೋದೆ ಇಲ್ಲವೇ ಮೇಡಂ?" ಎಂದು ಪ್ರಶ್ನಿಸಿದರು. ಅವರು ನಮ್ಮ ಕಡೆ ನೋಡಿದರು. "ನೋಡಿ ಮೇಡಂ, ನೀವು ಮಾಡುವ ಈ ತಾರತಮ್ಯ ಮುಗ್ದ ಮನಸ್ಸಿನಲ್ಲಿ ಎಷ್ಟು ವಿಷವನ್ನು ಬಿತ್ತುತ್ತದೆ ಗೊತ್ತೇ? ಎಷ್ಟು ಜನ ಈ ಬಿಳಿ ಬಣ್ಣದ ಹುಚ್ಚಿನಲ್ಲಿ ನಮ್ಮ ಆಸ್ಪತ್ರೆಗೆ ಬರ್ತಾರೆ ಗೊತ್ತಾ? ಎಲ್ಲರೂ 25ವರ್ಷ ಒಳಗಿನವರೇ. ನಾನೊಬ್ಬ ಮನೋವೈದ್ಯ, ನಾನು ದಿನ ಇಂತಹ ಎಷ್ಟು ಮಕ್ಕಳನ್ನು ನೋಡ್ತಿನಿ ಗೊತ್ತಾ. ದಯವಿಟ್ಟು ಇನ್ಮೇಲೆ ಹೀಗೆಲ್ಲ ಭೇದ-ಭಾವ ಮಾಡಬೇಡಿ" ಎಂದು ರಾಜು ಹೇಳಿದರು.
ನಮ್ಮ ಮಾವ, ಕೃಷ್ಣ ವರ್ಣದವರಾದ ಜ್ಯೋತಿ ಅವರನ್ನು ನೋಡುತ್ತಾ "ನಿಮ್ಮ ವರ್ಣದಿಂದ ನಿಮ್ಮನ್ನು ಕೆಲಸಕ್ಕೆ ಸೇರಿಸಿಕೊಂಡಿಲ್ಲ ತಾಯಿ. ನಿಮ್ಮ ವಿದ್ಯೆ, ಬುದ್ಧಿವಂತಿಕೆ, ಜ್ಞಾನದಿಂದ ಇಲ್ಲಿದ್ದೀರ. ಅಂತಹುದರಲ್ಲಿ ಯಕಮ್ಮಾ ನಿಮಗೆ ಈ ತಾರತಮ್ಯ ಬುದ್ದಿ" ಎಂದರು. ಜ್ಯೋತಿ ಮೇಡಂ ತಲೆ ತಗ್ಗಿಸಿಕೊಂಡು "ಕ್ಷಮಿಸಿ ಸರ್. ತಪ್ಪು ಮಾಡಿಬಿಟ್ಟೆ. ಇನ್ಮೇಲೆ ಹೀಗೆಲ್ಲ ಮಾಡಲ್ಲ. ಸಾರಿ ಮೇಡಂ." ಅಂದ್ರು.
ಪ್ರಿನ್ಸಿಪಾಲ್ ಅವರನ್ನು ಕಳಿಸಿದರು. ನಮ್ಮತ್ತ ತಿರುಗಿ, "ದಯವಿಟ್ಟು ಕ್ಷಮಿಸಿ. ಇನ್ಮೇಲೆ ಹೀಗೆಲ್ಲ ಆಗಲ್ಲ. ನಾನು ಭರವಸೆ ಕೊಡ್ತಿನಿ. ಸಿರಿ ಒಳ್ಳೆಯ ಮಗು ಯಾಕೆ ಅಂತ ನಿಮ್ಮನ್ನು ನೋಡಿದರೆ ತಿಳಿಯುತ್ತೆ. ಬೇರೆಯವರಾಗಿದ್ರೆ ಇಷ್ಟು ಹೊತ್ತಿಗೆ ದೊಡ್ಡ ಗಲಾಟೆಯೇ ನಡೆದು ಹೋಗಿರುತ್ತಿತ್ತು. ನಿಮ್ಮಂತಹ ಸಂಸ್ಕಾರವಂತ ಪೋಷಕರ ಸಹಕಾರ, ಸಹಾಯ ನನ್ನ ಶಾಲೆಗೆ ಬೇಕು. ಮಗುವಿಗೂ ತಿಳಿಸದೆ ಎಷ್ಯು ನಾಜೂಕಾಗಿ ವಿಷಯವನ್ನು ಸರಿ ಪಡಿಸಿದಿರಿ. ನಿಮ್ಮ ಸಮಯ ಹಾಳು ಮಾಡಿದ್ದಕ್ಕೆ ಕ್ಷಮೆಯಿರಲಿ" ಎಂದರು.
"ಇಲ್ಲಮ್ಮ ಇಂತಹ ವಿಷಯಗಳು ತುಂಬಾ ಸೂಕ್ಷ್ಮ. ಮಕ್ಕಳ ಮನಸ್ಸು ಹಾಳಾಗದಂತೆ ನಾವು ತಾನೇ ನೋಡಿಕೊಳ್ಳಬೇಕು. ಇನ್ಯಾವತ್ತು ಇಂತಹ ವಿಷಯಕ್ಕೆ ನಾವು ಬರುವುದು ಬೇಡ. ಒಳ್ಳೆಯದಕ್ಕೆ ನಮ್ಮ ಸಹಕಾರ ಯಾವಾಗಲೂ ಇರುತ್ತದೆ" ಎಂದು ಮಾವ ನುಡಿದರು. ಪ್ರಿನ್ಸಿಪಾಲ್ ಒಪ್ಪಿಕೊಂಡು ನಮಗೆ ಕಾಫಿ ಕೊಟ್ಟು, ಬಾಗಿಲವರೆಗೆ ಬಂದು ಬೀಳ್ಕೊಟ್ಟರು. ರಾಜುಗೆ ಈ ವಿಷಯದಲ್ಲಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಒಂದು ಕೌಂಸಿಲಿಂಗ್ ಸೆಷನ್ ಮಾಡಿಕೊಡಿ ಅಂತ ವಿನಂತಿಸಿಕೊಂಡರು. ರಾಜು ಬರುವ ಶನಿವಾರ ಬರುವುದಾಗಿ ಒಪ್ಪಿಕೊಂಡರು.
ಮನೆಯಲ್ಲಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅತ್ತೆಗೆ ಎಲ್ಲ ಹೇಳಿದೆ. ಅವರು, "ಸದ್ಯ, ಇವತ್ತು ಅವಳಿಗೆ ಕೃಷ್ಣ, ದ್ರೌಪದಿ, ಯಮ, ಶನಿ, ರಾಮನ ಕತೆಗಳನ್ನು ಹೇಳಿ ದೈರ್ಯ ತುಂಬಬೇಕು" ಎಂದರು. ರಾಜು ಹಾಸ್ಪಿಟಲ್ ಹೊರಟರೆ, ಮಾವ ಕ್ಲಿನಿಕ್ ಗೆ ಹೊರಟರು. ನಾನು ಬೇರೆ ಬೇರೆ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಕೃಷ್ಣವರ್ಣದ ಸಾಧಕರ ಬಗ್ಗೆ ಫೋಟೊ, ಮಾಹಿತಿ ಕಲೆ ಹಾಕಲು ಲ್ಯಾಪ್ ಟಾಪ್ ತೆಗೆದು ಕುಳಿತೆ.
🌺🌺🌺🌺🌺🌺🌺🌺
Comments
Appreciate the author by telling what you feel about the post 💓
ಸುಂದರವಾದ ಕಥೆ
Bahala chennagide..
ಧನ್ಯವಾದಗಳು
Please Login or Create a free account to comment.