ಅಂಜನೀಪುತ್ರ

ರಾಮನ ಬಂಟ ಹನುಮಂತನ ಬಗೆಗಿನ ವಿಶೇಷ ಮಾಹಿತಿ

Originally published in kn
Reactions 1
690
Raksha Ramesh
Raksha Ramesh 14 Aug, 2020 | 1 min read

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಆದ ಮೇಲೆ "ಸರ್ವಂ ರಾಮಮಯಂ" ಎಂಬಂತಾಗಿದೆ. ರಾಮನಾಮ ಜಪಿಸುವಾಗ, ರಾಮನ ಬಂಟ ಹನುಮನ ಮರೆಯುವುದು ತರವೇ....?? ಆದ್ದರಿಂದ ಹನುಮನ ಬಗ್ಗೆ ನನಗೆ ತಿಳಿದಿರುವ ಕೌತುಕಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ವಾಯುಪುತ್ರ ….

ಎಲ್ಲರಿಗೂ ಗೊತ್ತಿರುವ ಹಾಗೆ ಹನುಮನನ್ನು 'ಪವನಸುತ', 'ವಾಯುಪುತ್ರ', 'ಮಾರುತಿ' ಎನ್ನುತ್ತಾರೆ. ಅಂಜನಾದೇವಿ ಅವನ ತಾಯಿ. ಕೇಸರಿ ಮಹಾರಾಜನ ಪತ್ನಿ. ಹಾಗಾದರೆ ಹನುಮ 'ವಾಯುಪುತ್ರ' ಹೇಗಾದ? ಕುತೂಹಲಕರ ಸಂಗತಿ ಹೇಳ್ತೀನಿ ಕೇಳಿ. ದಶರಥನು ಪುತ್ರ ಕಾಮೇಷ್ಟಿ ಯಾಗ ಮಾಡುತ್ತಿದ್ದ ಸಮಯದಲ್ಲಿ ಇತ್ತ ಕೇಸರಿ ಮತ್ತು ಅಂಜನಾದೇವಿಯರು ಪುತ್ರಾಪೇಕ್ಷೆಯಿಂದ ಶಿವನನ್ನು ಪ್ರಾರ್ಥಿಸುತ್ತಿದ್ದರಂತೆ. ಅಗ್ನಿದೇವನು ದಶರಥನಿಗೆ ಪಾಯಸವನ್ನು ಪ್ರಸಾದಿಸಿದಾಗ, ಅಲ್ಲಿಗೆ ಬಂದ ಗರುಡ ಪಕ್ಷಿಯೊಂದು ಸ್ವಲ್ಪ ಪಾಯಸವನ್ನು ಅಪಹರಿಸಿ ದೂರ ಹಾರಿ ಹೋಯಿತಂತೆ. ಶಿವನ ಆದೇಶದ ಮೇರೆಗೆ ವಾಯುದೇವನು ತನ್ನ ಶಕ್ತಿಯಿಂದ ಆ ತೊಟ್ಟು ಪಾಯಸವನ್ನು ಅಂಜನಾದೇವಿಯ ಕೈ ಸೇರುವ ಹಾಗೆ ಮಾಡಿದನಂತೆ. ಅದನ್ನು ಸ್ವೀಕರಿಸಿದ ಅಂಜನಾದೇವಿಯ ಗರ್ಭದಲ್ಲಿ ಆಂಜನೇಯನು ಜನಿಸಿದನು ಎಂಬ ಪ್ರತೀತಿಯಿದೆ. ವಾಯುವಿನ ಶಕ್ತಿಯಿಂದ ಜನಿಸಿದನಾದ್ದರಿಂದ ಆಂಜನೇಯನು ವಾಯುಪುತ್ರನೆನಿಸಿದನು.


ಮಕರಧ್ವಜ...

ಇನ್ನೊಂದು ಕುತೂಹಲದ ಸಂಗತಿಯೆಂದರೆ ಹನುಮಂತನಿಗೆ ಮಕರಧ್ವಜನೆಂಬ ಮಗನಿದ್ದಾನೆ ಎಂಬ ವಿಷಯ. ಆಜನ್ಮ ಬ್ರಹ್ಮಚಾರಿಯಾದ ಹನುಮಂತನಿಗೆ ಮಗನೆಲ್ಲಿಂದ ಬಂದ!!!?? ಹೌದು.. ತನ್ನ ಬಾಲದಿಂದ ಲಂಕಾದಹನ ಮಾಡಿದಮೇಲೆ, ಸಮುದ್ರವೊಂದರಲ್ಲಿ ಉರಿಯಾರಿಸಿಕೊಳ್ಳಲು ಬಾಲವನ್ನು ಆಡಿಸುತ್ತಾ ಇದ್ದಾಗ ಅವನ ಬೆವರ ಹನಿಗಳನ್ನು ಸೇವಿಸಿದ ಮೀನಿನಲ್ಲಿ ಮಕರಧ್ವಜ ಜನಿಸಿದನಂತೆ! ಏನು ಸೋಜಿಗವಲ್ಲವೇ.

ಸಿಂಧೂರ ಬಳಿದುಕೊಂಡು ಕೂತ ಹನುಮ… 

ನೀವು ಕೆಲವು ಚಿತ್ರಗಳಲ್ಲಿ ಮೈ ತುಂಬಾ ಸಿಂಧೂರ ಬಳಿದುಕೊಂಡ ಹನುಮನನ್ನು ಗಮನಿಸಿರಬಹುದು, ಇದರ ಹಿಂದಿನ ಗುಟ್ಟೇನು ಗೊತ್ತೇ? ಒಮ್ಮೆ ಸೀತಾದೇವಿಯು ಹಣೆಗೆ ಸಿಂಧೂರವಿಟ್ಟದ್ದನು ಗಮನಿಸಿ, ಹೀಗೇಕೆ ಮಾಡುವೆ ಎಂದು ಹನುಮನು ಕೇಳಿದನಂತೆ. ಆಗ ರಾಮನ ದೀರ್ಘಾಯಸ್ಸಿಗಾಗಿ ಎಂದು ಸೀತೆಯ ಹೇಳಿದ್ದನ್ನು ಕೇಳಿ ಹನುಮ ತನ್ನ ಮೈ ಮೇಲೆಲ್ಲಾ ಸಿಂಧೂರ ಬಳಿದುಕೊಂಡ, ತನ್ನ ಪ್ರಭುವಿನ ದೀರ್ಘಾಯಸ್ಸಿಗಾಗಿ!! ಇಂದಿಗೂ ನಾವು ಹನುಮನ ಗುಡಿಗಳಲ್ಲಿ ಸಿಂಧೂರ ಕೊಡುವುದನ್ನು ಕಾಣಬಹುದು.

ಹನುಮನೆಂಬ ಸೂಪರ್ ಹೀರೋ... 

ಈಗಿನ ಮಕ್ಕಳು ನೋಡುವ ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಐರನ್ ಮ್ಯಾನ್ ಗಳು ಮಾಡುವ ಅಪರಿಮಿತ ಸಾಹಸಗಳನ್ನು ಸಹಸ್ರಾರು ವರುಷಗಳ ಮೊದಲೇ ಮಾಡಿದ್ದ ನಮ್ಮ "ಹನುಮಾನ್". ಅವನು ಮಾಡಿದ ಸಮುದ್ರ ಲಂಘನ, ಲಂಕಾದಹನ, ಸಂಜೀವಿನಿ ಪರ್ವತವನ್ನೇ ಹೊತ್ತು ತಂದ ಸಾಹಸ, ರಾಮ-ಲಕ್ಷ್ಮಣ ರನ್ನು ಹಗಲಲ್ಲಿ ಹೊತ್ತೊಯ್ಯುವ ಪರಾಕ್ರಮದ ಮುಂದೆ ಬೇರೆ "ಮ್ಯಾನ್ " ಗಳು ಹೆಸರಿಲ್ಲದೆ ಹೋಗಬೇಕು. ಕಿಷ್ಕಿಂಧಾ ಕಾಂಡದಿಂದ ಮುಂದೆ ರಾಮಾಯಣದ ತುಂಬಾ ಹನುಮನ ತರಲೆಗಳೇ ತುಂಬಿಕೊಂಡಿವೆ!

ಚಿರಂಜೀವಿ ಹನುಮ… 

ರಾಮನ ಯುಗಾಂತ್ಯವಾಗುವ ಸಮಯದಲ್ಲಿ, ಹನುಮ ನನ್ನನ್ನು ತೆರಳಲು ಬಿಡುವುದಿಲ್ಲ ಎಂಬುದನ್ನರಿತಿದ್ದ ರಾಮ ಬೇಕಂತಲೇ 'ನನ್ನ ಉಂಗುರವೊಂದು ಕಳೆದುಹೋಗಿ ಪಾತಾಳಲೋಕ ಸೇರಿಕೊಂಡಿದೆ, ಹುಡುಕಿ ತಾ' ಎಂದು ಕಳಿಸಿ, ಅವನ ಅವತಾರ ಮುಗಿಸಿದನಂತೆ!! ದ್ವಾಪರದಲ್ಲೂ ಹನುಮನ ಪಾತ್ರವಿದೆ. ಸೌಗಂಧಿಕಾ ಪುಷ್ಪ ಪ್ರಕರಣದಲ್ಲಿ ಭೀಮನನ್ನು ಎದುರಾದ ಕಥೆ ಎಲ್ಲರಿಗೂ ಗೊತ್ತಿರುವುದೇ. ಅಲ್ಲದೇ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ರಥದ ಧ್ವಜದ ಲಾಂಛನವಾಗಿದ್ದು ಅರ್ಜುನನ ಹೆಸರಿಗೆ ತಕ್ಕಂತೆ ವಿಜಯನನ್ನಾಗಿಸಿದ. ಅದಕ್ಕೇ ಪಾರ್ಥನನ್ನು 'ಕಪಿಧ್ವಜ' ಎನ್ನುವುದು. ಚಿರಂಜೀವಿಯಾದ ಹನುಮನೇ ತುಳಸೀದಾಸರಿಗೆ ರಾಮಾಯಣದ ಕಥೆಯನ್ನು ತಿಳಿಸಿ ರಾಮಾಯಣ ಬರೆಯಲು ಪ್ರೇರಣೆ ನೀಡಿರುವುದು ಹೇಳುತ್ತಾರೆ.

ಕನ್ನಡಿಗ ಹನುಮ!! 

ಹೌದು... ರಾಮಾಯಣದಲ್ಲಿ ಉಲ್ಲೇಖವಾಗಿರುವ ಕಿಷ್ಕಿಂಧೆ ಕರ್ನಾಟಕ ರಾಜ್ಯಕ್ಕೆ ಸೇರಿದ್ದು. ಹಂಪೆಯಲ್ಲಿ ನಾವು ಈ ಕುರುಹುಗಳನ್ನು ಇಂದಿಗೂ ಕಾಣಬಹುದು... ಅದರಲ್ಲೂ ಹನುಮಂತ ಹುಟ್ಟಿದ ಅಂಜನಾದ್ರಿ ಪರ್ವತವು ಇಂದಿಗೂ ಪ್ರಸಿದ್ಧಿ, ಅಷ್ಟೇ ಪುನೀತ...

ಅದಕ್ಕೇ ಕವಿವರ್ಯರು ಹಾಡಿರುವುದು "ಜಯತು ಜಯತು ಹೇ ಭಾಗವತೋತ್ತಮ ಕನ್ನಡ ಕುಲಪುಂಗವ ಹನುಮ" ಎಂದು!

ಹನುಮನೆಂಬ ನಿಗರ್ವಿ, ವಿನಮ್ರ...

ಅಪರಿಮಿತ ಸಾಹಸಗಳನ್ನು ಮಾಡಬಲ್ಲವನಾದರೂ ಎಂದಿಗೂ ಹನುಮನಿಗೆ ಅದರ ಬಗ್ಗೆ ಗರ್ವವಿಲ್ಲ, ಅಹಂಕಾರವಿಲ್ಲ... ಇನ್ನೂ ಹೇಳಬೇಕೆಂದರೆ ಅವನದು ಸಂಕೋಚ ಪ್ರವೃತ್ತಿ.. ಸಮುದ್ರ ಲಂಘನ ಮಾಡಲು ಎಲ್ಲ ಕಪಿಗಳು ನಾ ಮುಂದು, ತಾ ಮುಂದು ಎನ್ನುತ್ತಿದ್ದರು ಸಂಪೂರ್ಣ ಬಲವಂತನಾದ ಹನುಮನು ಹಿರಿಯರಾದ ಜಾಂಬವಂತ ಉತ್ತೇಜನ ನೀಡುವ ತನಕ ಅತಿಯಾದ ಉತ್ಸಾಹ ಪ್ರದರ್ಶನ ಮಾಡಲಿಲ್ಲ.. ಇದು ಹಿರಿಯರ ಬಗ್ಗೆ ಕಿರಿಯರ ತೋರಬೇಕಾದ ಗೌರವ. ಅಲ್ಲದೇ ಹನುಮಂತ ವಾಕ್ಚತುರ, ಉತ್ತಮ ಸಂವಹನಕಾರನೂ ಹೌದು. ಸೀತಾನ್ವೇಷಣೆಯ ಸಂದರ್ಭದಲ್ಲಿ ರಾಮ-ಲಕ್ಷಣರೊಡನೆ ಮಾತನಾಡಲು, ಸುಗ್ರೀವ ಕಳಿಸಿದ್ದು ಹನುಮಂತನನ್ನೇ...

ಸಂಗೀತಜ್ಞ ಹನುಮ! 

ಆಶ್ಚರ್ಯದ ವಿಷಯವೆಂದರೆ, ಹನುಮನ ಉತ್ತಮ ಹಾಡುಗಾರನೂ ಹೌದು.. ಅವನ ಇಷ್ಟದ ರಾಗ ತೋಡಿ... ಆದ್ದರಿಂದಲೇ ಅದಕ್ಕೆ ಕಟಪಯಾದಿ ಸೂತ್ರಾನುಸಾರ ಹನುಮತೋಡಿ ಎಂದು ಹೆಸರು!!

ಹನುಮನ ಬಗೆಗಿನ ಕುತೂಹಲಕಾರೀ ಸಂಗತಿಗಳನ್ನು ಇಲ್ಲಿ ಕಲೆ ಹಾಕಿ ನಿಮಗೆ ತಿಳಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ ಅಷ್ಟೇ... ಹನುಮ ಸ್ಮರಣೆ ಮಾಡುತ್ತಾ ಅವರಂತೆ ನಾವೂ ಧೈರ್ಯಶಾಲಿಗಳಾಗುವ ಪ್ರಯತ್ನ ನಾವೆಲ್ಲಾ ಮಾಡುವಂತಾಗಲಿ ಎಂದು ಆಶಿಸುತ್ತಾ ನನ್ನ ಬರಹವನ್ನು ಹನುಮನಿಗೆ ಸಮರ್ಪಿಸುತ್ತಿದ್ದೇನೆ 🙏...

1 likes

Published By

Raksha Ramesh

raksha

Comments

Appreciate the author by telling what you feel about the post 💓

Please Login or Create a free account to comment.