ನನ್ನ ಧ್ವನಿಗೆ ನಿನ್ನ ಧ್ವನಿಯು ಸೇರಿದಾಗ ನಮ್ಮ ಧ್ವನಿಯ ......ಈ ಗೀತೆಯನ್ನು ಕೇಳಿದ ನೆನಪು ಇದೆಯಾ? , ಇದು 80 ರ ದಶಕದಲ್ಲಿ ಸ್ರಷ್ಟಿಸಿದ ಮಾಂತ್ರಿಕತೆ ಇದೆಯಲ್ವ ಅದೊಂದು ಅದ್ಬುತ ಅನುಭವ. ಮೈ ಮನ ರೋಮಾಂಚನಗೊಳಿಸುತಿದ್ದ ಈ ಗೀತೆ ಇಡೀ ಭಾರತೀಯರನ್ನು ಮಂತ್ರ ಮುಗ್ದ ಗೊಳಿಸಿತ್ತು. ಹೌದು ನಾನು ಹೇಳಲು ಹೊರಟಿರುವುದು 1988 ರಲ್ಲಿ ದೂರದರ್ಶನದಲ್ಲಿ ಮೊದಲ ಬಾರಿ ಪ್ರಸಾರಗೊಂಡ, ಅನಧಿಕೃತ ರಾಷ್ಟ್ರ ಗೀತೆ ಎಂದು ಹೆಸರು ಮಾಡಿದ್ದ " ಮಿಲೇ ಸುರ್ ಮೇರಾ ತುಮ್ಹಾರಾ ತೊ ಸುರ್ ಬನೇ” ಹಮಾರಾ ಹಾಡಿನ ಬಗ್ಗೆ. ಅದೊಂದು ಕಾಲವಿತ್ತು! ವಿವಿಧತೆಯಲ್ಲಿ ಏಕತೆಯೇ ನನ್ನ ಭಾರತ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತಿದ್ದ ದಿನಗಳವು. ಪ್ರತಿ ಭಾಷೆ, ಆಚಾರ , ವಿಚಾರ ಪ್ರತಿಯೊಂದು ವಿಭಿನ್ನ ಆದರೆ ಯಾವುದು ಮೇಲಲ್ಲ ಮತ್ತು ಯಾವುದು ಕೀಳಲ್ಲ. ನಾವೆಲ್ಲ ಒಂದೇ ಅನ್ನುವ ದೈವಿಕ ಭಾವ. ಆಗ ಈಗಿನಂತೆ ಹಿಂದಿಯವರನ್ನು ಒಲಿಸಿಕೊಳ್ಳಲು .......ಜೀ ....ಜೀ ಎನ್ನುವ ಪದ್ಧತಿ ಇರಲಿಲ್ಲ. ಸನ್ಮಾನ್ಯ .....ರವರೆ ಎಂದು ಗೌರವ ಕೊಡುತಿದ್ದ ಕಾಲ. . ಹೌದು ಹಿಂದಿಯಷ್ಟೇ ಮುಖ್ಯ ಕನ್ನಡ , ಕನ್ನಡದಷ್ಟೇ ಮುಖ್ಯ ತಮಿಳು ಮತ್ತು ತಮಿಳಿನಷ್ಟೇ ಮುಖ್ಯ ಗುಜರಾತಿ ಭಾಷೆ . ಆ ಬಾವನೆಯ ಪ್ರತಿಬಿಂಬವೇ "ಮಿಲೇ ಸುರ್ ಮೇರಾ ತುಮ್ಹಾರಾ ತೊ ಸುರ್ ಬನೇ ಹಮಾರಾ" ಗೀತೆ.
ಅದು 1988 ನೇ ಇಸವಿ ಆಗಸ್ಟ್ 15 . ಆಗ ದೇಶದಲ್ಲಿ ಇದ್ದದ್ದು ಒಂದೇ ಚಾನೆಲ್ " ದೂರದರ್ಶನ" . ಸ್ವತಂತ್ರ ದಿನದ ಪ್ರಧಾನ ಮಂತ್ರಿಗಳ ಭಾಷಣವನ್ನು ಕೇಳಲು ಜನ ಟಿವಿ ಮುಂದೆ ಕುಳಿತುಕೊಂಡಿದ್ದರು. ಆಗ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮಾನ್ ರಾಜೀವ್ ಗಾಂಧಿಯವರು, ಕೆಂಪು ಕೋಟೆಯಲ್ಲಿ ತಮ್ಮ ಭಾಷಣ ಮುಗಿಸಿದ ತಕ್ಷಣ, ಟಿವಿ ಯಲ್ಲಿ ಒಂದು ಗೀತೆಯ ವಿಡಿಯೋ ಮೂಡಿ ಬರುತ್ತೆ. ಪ್ರತಿಯೊಬ್ಬ ದೇಶಭಕ್ತನ ಮನ ಸೂರೆಗೊಳ್ಳುವ ಆ ಹಾಡು, ರಾಷ್ಟ್ರೀಯ ಏಕೀಕರಣದ ಗೀತೆಯಾಗಿ ಮೂಡಿಬಂದಿತ್ತು.
ಈಗ 34 ವರ್ಷಗಳ ನಂತರವೂ ಈ ಹಾಡು ಇನ್ನು ನಮ್ಮ ಹೃದಯದಲ್ಲಿ ಹಸಿರಾಗಿದೆ. ಕೆಲವೇ ನಿಮಿಷಗಳ ಈ ಹಾಡು ರಾಷ್ಟ್ರೀಯ ಏಕೀಕರಣದ ಭಾವನೆಗಳನ್ನು, ನಮ್ಮ ವೈವಿಧ್ಯಮಯ ಸಂಸ್ಕ್ರತಿಯನ್ನು, ಜನಸಾಮಾನ್ಯನ ಜೀವನ ಶೈಲಿಯನ್ನು , ಜಗತ್ತಿಗೆ ಪರಿಚಯ ಮಾಡಿಕೊಟ್ಟಿತ್ತು. ಕೇರಳದ ಒಬ್ಬ ಸಾಮಾನ್ಯ ದೋಣಿಯವ, ಟ್ರ್ಯಾಕ್ಟರ್ ಚಲಾಯಿಸುತ್ತಿರುವ ಪಂಜಾಬಿ ರೈತರು , ಮೆಟ್ರೋ ನಿಲ್ದಾಣದದಿಂದ ಹೊರ ಬರುತ್ತಿರುವ ಕಲ್ಕತ್ತಾದ ನಿವಾಸಿಗಳು, ತಮಿಳು ನಾಡಿನ ಭಾರತ ನಾಟ್ಯ, ಗೋವಾದ ಮೀನುಗಾರ, ಅಸ್ಸಾಮಿನ ಭೀಮು ನ್ರತ್ಯ , ಹೀಗೆ ರಾಷ್ಟ್ರದ ವೈವಿಧ್ಯತೆಯನ್ನು ಪ್ರತಿನಿಧಿಸುವ ಅನೇಕ ರೂಪಕಗಳು ಮತ್ತು ಚಿಹ್ನೆಗಳನ್ನು ಈ ಹಾಡು ಒಳಗೊಂಡಿತ್ತು. ಈ ಗೀತೆ ಸ್ರಷ್ಟಿಯ ಹಿಂದೆ ಅನೇಕ ಕುತೂಹಲಕಾರಿಯಾದ ವಿಚಾರಗಳಿವೆ. ಭವ್ಯ ಸಧ್ರಡ ಆಧುನಿಕ ಭಾರತದ ಕನಸನ್ನು ಕಂಡಿದ್ದ ಅಂದಿನ ಪ್ರಧಾನಮಂತ್ರಿಗಳಾದ ಭಾರತರತ್ನ ಶ್ರೀಮಾನ್ ರಾಜೀವ್ ಗಾಂಧಿಯವರು ತಮ್ಮ ಸ್ನೇಹಿತ ಜೈದೀಪ್ ಸಮರ್ಥ್ ರವರೊಂದಿಗೆ ಸಂಭಾಷಣೆಯಲ್ಲಿ ನಿರತರಾಗಿರುವಾಗ ಹುಟ್ಟುಕೊಂಡ ಆಲೋಚನೆಯೇ ಈ ಗೀತೆಯ ಯೋಜನೆ.
ಈ ಜೈದೀಪ್ ಸಮರ್ಥ್ ಯಾರು ಅಂದ್ರೆ ಹಿಂದಿ ಚಲನಚಿತ್ರ ಜಗತ್ತಿನ ಪ್ರಸಿದ್ಧ ನಟಿಯರಾದ ನೂತನ್ ಮತ್ತು ತನುಜಾ ರವರ ಅಣ್ಣ ಹಾಗು ಕಾಜೋಲ್ ರವರ ಮಾವ. ಜೈದೀಪ್ ಸಮರ್ಥ್ ರವರು ದೂರದರ್ಶನದ ಪರವಾಗಿ ಈ ಗೀತಾ ರಚನೆಯ ಜವಾಬ್ದಾರಿಯನ್ನು ಓಗಿಲ್ವಿ ಮತ್ತು ಮಾಥೆ ಎನ್ನುವ ಅಮೆರಿಕದಲ್ಲಿ ಪ್ರಧಾನಕಚೇರಿ ಇರುವ ಜಾಹಿರಾತು ಸಂಸ್ಥೆಯ ಭಾರತೀಯ ಮುಖ್ಯಸ್ಥ ಸುರೇಶ್ ಮಲ್ಲಿಕ್ ಮತ್ತು ನಿರ್ಮಾಪಕ ಕೈಲಾಶ್ ಸುರೇಂದ್ರನಾಥ್ ರವರಿಗೆ ವಹಿಸುತ್ತಾರೆ. ಸಂತೋಷದಿಂದ ಜವಾಬ್ದಾರಿ ಸ್ವೀಕರಿಸಿದ ಇವರಿಬ್ಬರು ನಂತರ ಪಂಡಿತ್ ಭೀಮಸೇನ್ ಜೋಶಿ ಅವರನ್ನು ಸಂಪರ್ಕಿಸುತ್ತಾರೆ. ನಮ್ಮ ಈ ಹೊಸ ಯೋಜನೆಗೆ ನಿಮ್ಮ ಅಗತ್ಯ ಇದೆ ಅಂದಾಗ ಪಂಡಿತ್ ಭೀಮಸೇನ್ ಜೋಶಿ ತಕ್ಷಣ ಒಪ್ಪಿಗೆ ಸೂಚಿಸುತ್ತಾರೆ. ಅಂದ ಹಾಗೆ ಪಂಡಿತ್ ಭೀಮಸೇನ್ ಜೋಶಿ ಗೊತ್ತಲ್ವಾ! ಭಾರತ ರತ್ನ , ನಮ್ಮದೇ ಮಣ್ಣಿನ , ಕರ್ನಾಟಕ ಹೆಮ್ಮೆಯೇ ಪುತ್ರ. ದೇಶಕಂಡ ಅದ್ಬುತ ಗಾಯಕರಲ್ಲಿ ಒಬ್ಬರು. ಸುರೇಶ್ ಮಲ್ಲಿಕ್ ಅವರು, ಈ ಗೀತಾ ರಚನೆಯಲ್ಲಿ ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಆಧುನಿಕ ಸಂಗೀತದೊಂದಿಗೆ ಸಂಯೋಜಿಸಲು ನಿರ್ಧರಿಸುತ್ತಾರೆ ಮತ್ತು ಪಂಡಿತ್ ಜೋಶಿಯವರ ಸಲಹೆಯಂತೆ ರಾಗ ಭೈರವಿಯನ್ನು ಈ ಗೀತೆಗೆ ಆಧಾರವಾಗಿ ಆರಿಸಿಕೊಳ್ಳುತ್ತಾರೆ.. ಈ ಗೀತೆಯ ಸಾಹಿತ್ಯವನ್ನು ಪಿಯೂಷ್ ಪಾಂಡೆ ಎನ್ನುವವರು ಬರೆಯುತ್ತಾರೆ. ಆಗ ಅವರಿನ್ನೂ ಯುವಕ . ಇದೆ ಓಗಿಲ್ವಿ ಮತ್ತು ಮಾಥೆ ಸಂಸ್ಥೆಯ ಭಾರತೀಯ ಶಾಖೆಯಲ್ಲಿ ಒಂದು ಸಣ್ಣ ಹುದ್ದೆಯಲಿದ್ದ್ರು. ಅನೇಕ ಪ್ರಸಿದ್ಧ ಗೀತಾ ರಚನಾಕಾರರು ಗೀತೆ ರಚಿಸಿ ಕೊಟ್ಟರೂ ಮಲಿಕ್ ರವರಿಗೆ ಯಾವುದು ಕೂಡ ಇಷ್ಟ ಆಗಲಿಲ್ಲ. ಕಡೆಯದಾಗಿ ಹೀಗೆ ಮಾತನಾಡುವಾಗ ಕಚೇರಿಯಲ್ಲಿ ಅವರು ಪಿಯುಸ್ ಪಾಂಡೆ ಬಳಿ ಕೇಳುತ್ತಾರೆ , ನೀವ್ಯಾಕೆ ಪ್ರಯತ್ನ ಪಡಬಾರದು? ಆಗ ಪಿಯೂಷ್ ಪಾಂಡೆಯವರ ಲೇಖನಿಯಿಂದ ಹೊರಹೊಮ್ಮಿದ್ದೆ ಈ ಅದ್ಬುತ ಗೀತೆ. ಹದಿನೇಳು ಗೀತೆಗಳ ಕರಡನ್ನು ತಿರಸ್ಕರಿಸಿದ ನಂತರ ಮಲಿಕ್ ಅನುಮೋದಿಸಿದ್ದು ಪಾಂಡೆಯವರ ಈ ರಚನೆಯನ್ನು. ಈ ಪಿಯುಸ್ ಪಾಂಡೆ ಕೂಡ ಒಬ್ಬ ಅದ್ಬುತ ವ್ಯಕ್ತಿ. ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ರಾಜಸ್ತಾನವನ್ನು ಪ್ರತಿನಿಧಿಸುತ್ತಿದ್ದ ಇವರು , ಒಂದು ಕಾಲದಲ್ಲಿ ಒಬ್ಬ ಟೀ ಟೆಸ್ಟರ್ ಆಗಿ ಕೂಡ ಕೆಲಸ ಮಾಡಿದ್ದಾರೆ . ಫೆವಿಕಾಲ್, ಕ್ಯಾಡ್ಬರಿ, ವಡಾಪೋನ್ ಮುಂತಾದ ಸಂಸ್ಥೆಗಳ ಆಕರ್ಷಕ ಜಾಹಿರಾತಿನ ಹಿಂದಿರುವ ವ್ಯಕ್ತಿಯೇ ಈ ಪಿಯೂಷ್ ಪಾಂಡೆ. ಪ್ರಸ್ತುತ ಅವರು ಓಗಿಲ್ವಿ ಯಾ ಮುಖ್ಯ ಸೃಜನಾತ್ಮಕ ಜಾಗತಿಕ ಅಧಿಕಾರಿ ಮತ್ತು ಭಾರತ ಶಾಖೆಯ ಪ್ರಧಾನ ಕಾರ್ಯನಿರ್ವಾಹಕ ಹುದ್ದೆಯಲ್ಲಿದ್ದಾರೆ. 2016 ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪುರಸ್ಕಾರದಿಂದ ಸನ್ಮಾನಿಸಿದೆ.
ಮಿಲೇ ಸುರ್ ಮೇರಾ ತುಮರಾ ಗೀತೆ ಯಲ್ಲಿ ಭಾರತದ ಒಟ್ಟು 14 ಭಾಷೆಗಳನ್ನು ಬಳಸಿಕೊಳ್ಳಗಿದೆ. ಅದರಲ್ಲಿ ನಮ್ಮ ಕನ್ನಡ ಕೂಡ ಒಂದು. ಪಂಡಿತ್ ಭೀಮಸೇನ್ ಜೋಶಿಯವರ ಸಂಯೋಜನೆಯಲ್ಲಿ ಈ ಗೀತೆಯನ್ನು ಪಂಡಿತ್ ಭೀಮಸೇನ್ ಜೋಶಿ, ವಿದ್ವಾನ್ ಶ್ರೀ ಎಂ ಬಾಲಮುರಳಿಕೃಷ್ಣ, ಲತಾ ಮಂಗೇಶ್ಕರ್, ಕವಿತಾ ಕೃಷ್ಣಮೂರ್ತಿ, ಶುಭಾಂಗಿ ಬೋಸ್, ಸುಚಿತ್ರಾ ಮಿತ್ರ, ಆರ್ ಎ ರಮಾ ಮಣಿ, ಆನಂದ ಶಂಕರ್ ತಮ್ಮ ಮದುರ ಕಂಠದಿಂದ ಬಲು ಅದ್ಭುತವಾಗಿ ಹಾಡಿದ್ದಾರೆ.
ಈ ಹಾಡಿನ ವಿಡಿಯೋದಲ್ಲಿ ಕವಿಗಳಾದ ನಿರೇಂದ್ರನಾಥ್ ಚಕ್ರವರ್ತಿ, ಸುನಿಲ್ ಗಂಗೋಪಾಧ್ಯಾಯ, ಜಾವೇದ್ ಅಖ್ತರ್, ನಟರಾದ ಅಮಿತಾಬ್ ಬಚ್ಚನ್, ಜೀತೇಂದ್ರ, ಮಿಥುನ್ ಚಕ್ರವರ್ತಿ, ಶರ್ಮಿಳಾ ಟ್ಯಾಗೋರ್, ಹೇಮಾ ಮಾಲಿನಿ, ತನುಜಾ, ಕಮಲ್ ಹಾಸನ್, ಮೀನಾಕ್ಷಿ ಶೇಷಾದ್ರಿ, ರೇವತಿ, ಕೆ.ಆರ್. ವಿಜಯಾ, ವಹೀದಾ ರೆಹಮಾನ್, ಶಬಾನಾ ಅಜ್ಮಿ, ದೀಪಾ ಸಾಹಿ, ಓಂ ಪುರಿ, ಭೀಷಮ್ ಸಾಹ್ನಿ, ಅಮರೀಶ್ ಪುರಿ, ದಿನ ಪಾಠಕ್, ಹರೀಶ್ ಪಟೇಲ್, ವೀರೇಂದ್ರ ಸಕ್ಸೇನಾ, ಸುಹಾಸಿನಿ, ಉತ್ತಮ್ ಮೊಹಾಂತಿ, ಪ್ರತಾಪ್ ಪೋಥೆನ್, ಗೀತಾಂಜಲಿ, ಕ್ರಿಕೆಟ್ ಆಟಗಾರರಾದ ನರೇಂದ್ರ ಹಿರ್ವಾನಿ, ಅರುಣ್ ಲಾಲ್, ಫುಟ್ಬಾಲ್ ಆಟಗಾರರಾದ ಪ್ರದೀಪ್ ಕುಮಾರ್ ಬ್ಯಾನರ್ಜಿ, ಚುನಿ ಗೋಸ್ವಾಮಿ, ಹಾಕಿ ಆಟಗಾರರಾದ ಲೆಸ್ಲಿ ಕ್ಲಾಡಿಯಸ್, ಗುರ್ಬಕ್ಸ್ ಸಿಂಗ್, ಬ್ಯಾಡ್ಮಿಂಟನ್ ಆಟಗಾರರಾದ ಪ್ರಕಾಶ್ ಪಡುಕೋಣೆ , ನ್ರತ್ಯಪಟುಗಳಾದ ಸುಧಾರಾಣಿ ರಘುಪತಿ, ಅಮಲಾ ಶಂಕರ್, ಮಲ್ಲಿಕಾ ಸಾರಾಭಾಯಿ, ವ್ಯಂಗ್ಯಚಿತ್ರಕಾರ ಮಾರಿಯೋ ಮಿರಾಂಡಾ ಮತ್ತು ಸಿನಿಮಾ ನಿರ್ಮಾಪಕರಾದ ಮೃಣಾಲ್ ಸೇನ್ ಕಾಣಿಸಿಕೊಂಡಿದ್ದರು.
ತುಂಬಾ ಅದ್ಭುತವಾಗಿ ಮೂಡಿ ಬಂದಿದ್ದ ಈ ಗೀತೆ ದೇಶಭಕ್ತಿಯ ಕಿಚ್ಚನ್ನು ಹೊತ್ತಿಸುವಲ್ಲಿ ಯಶಸ್ವಿಯಾಗಿತ್ತು. ವಿವಿಧತೆಯಲ್ಲಿ ಏಕತೆಯೇ ನಮ್ಮ ಶಕ್ತಿ ಎನ್ನುವ ಅರಿವು ಮೂಡಿಸಿ ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಬೆಸೆಯುವ ಕಾರ್ಯ ಮಾಡಿತ್ತು ಈ ಗೀತೆ. ಮತೊಮ್ಮೆ ಎ ಆರ್ ರೆಹಮಾನ್ ನೇತೃತ್ವದಲ್ಲಿ , ಘಟಾನುಘಟಿ ತಾರೆಯರ ತಾರಾಗಣದಲ್ಲಿ ಈ ಗೀತೆಯನ್ನು ಹೊಸ ರೂಪದಲ್ಲಿ ಪ್ರಸ್ತುತ ಪಡಿಸಲಾಯಿತಾದರೂ , ಮೂಲ ವಿಡಿಯೋದಷ್ಟು ಪ್ರಸಿದ್ದಿಯನ್ನು ಪಡೆಯಲಾಗಲಿಲ್ಲ. ಯಾಕೋ ಗಣರಾಜೋತ್ಸಹದ ಸಂದರ್ಭದಲ್ಲಿ ಈ ಗೀತೆ ನನಗೆ ನೆನಪಿಗೆ ಬಂತು. ನನಗೆ ಗೊತ್ತು ಈ ಮೊದಲು ಈ ಗೀತೆಯನ್ನು ಕೇಳಿದವರಿಗೆ ಈ ಲೇಖನ ಮನದೊಳಗೆ ಹಳೆಯ ಮದುರ ನೆನಪುಗಳನ್ನು ಹೊತ್ತು ತಂದೆ ತರುತ್ತದೆ ಮತ್ತು ಈ ಮೊದಲು ಕೇಳದವರ ಬಳಿ ಬಳಿ ನನ್ನ ಒಂದೇ ಒಂದು ವಿನಂತಿ , ಯೌಟ್ಯೂಬ್ ನಲ್ಲಿ ಈ ಗೀತೆಯನ್ನು ಒಮ್ಮೆ ನೋಡಿ. ಭಾರತೀಯರು ನಾವು ಎಲ್ಲರು ಒಂದೇ ತಾಯಿಯ ಮಕ್ಕಳು.
ಪ್ರಕಾಶ್ ಮಲೆಬೆಟ್ಟು
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.