ಅತಿಥಿ ದೇವೋಭವ ನಿಜ, ಹಾಗಾದ್ರೆ ಆತಿಥೇಯ?

ನಮ್ಮ ಸಂಸ್ಕ್ರತಿಯು ಸನಾತನ ಹಾಗು ಜಗನ್ಮಂಗಳಕರ. ಈ ಭವ್ಯವಾದ ಸಂಸ್ಕ್ರತಿಯ ಒಂದು ಭಾಗವೇ ಅತಿಥಿ ಸತ್ಕಾರ. ಮನೆಗೆ ಬಂದವರನ್ನು ಊಟೋಪಚಾರಗಳೊಂದಿಗೆ ಆದರಿಸಿ, ಸತ್ಕರಿಸುವ ಪದ್ಧತಿ ನಮ್ಮದು

Originally published in kn
Reactions 0
390
PAKASH DSOUZA
PAKASH DSOUZA 11 Jan, 2022 | 1 min read

ನಮ್ಮ ಸಂಸ್ಕ್ರತಿಯು ಸನಾತನ ಹಾಗು ಜಗನ್ಮಂಗಳಕರ. ಈ ಭವ್ಯವಾದ ಸಂಸ್ಕ್ರತಿಯ ಒಂದು ಭಾಗವೇ ಅತಿಥಿ ಸತ್ಕಾರ. ಮನೆಗೆ ಬಂದವರನ್ನು ಊಟೋಪಚಾರಗಳೊಂದಿಗೆ ಆದರಿಸಿ, ಸತ್ಕರಿಸುವ ಪದ್ಧತಿ ನಮ್ಮದು. ಅದು ಅಪರಿಚಿತರೇ ಇರಲಿ ಒಂದು ಲೋಟ ನೀರು ಕೇಳುವಾಗ ನಿರಾಕರಿಸದೆ ಅವನ ದಾಹವನ್ನು ಇಂಗಿಸುವುದು ನಮ್ಮ ಕರ್ತವ್ಯ. ಇಂತಹ ಒಳ್ಳೆ ಅಭ್ಯಾಸ ಹಿರಿಯರಿಂದ ನಮಗೆ ಬಂದ ಬಳುವಳಿ. ಮಾನವತೆಯ ಇನ್ನೊಂದು ರೂಪವೇ ಅತಿಥಿ ಸತ್ಕಾರ. ಅತಿಥಿಗಳನ್ನು ಆದರಿಸಿ, ಒಳ್ಳೆ ರೀತಿಯಿಂದ ಉಪಚರಿಸಬೇಕು ಅನ್ನುವ ಮಾತನ್ನು ಜೀವನದ ಹಲವು ಘಟ್ಟಗಳಲ್ಲಿ ನಾವು ಕೇಳಿರುತ್ತೆವೆ. ಆದರೆ ಇಲ್ಲಿ ನನ್ನ ಮನಸಿನೊಳಗೆ ಒಂದು ಪ್ರಶ್ನೆ ಮೂಡುತಿದೆ!  

ನಿಜ ನಾವು ಬಹುಶ್ಯ ತುಂಬಾ ವಿರಳವಾಗಿ ಆತಿಥೇಯನ ಬಗ್ಗೆ ಯೋಚಿಸಿರುತೇವೆ. ಯೋಚನೆ ಕೂಡ ಮಾಡೋದಿಲ್ಲ ಅಂತ ಹೇಳಿದ್ರು ತಪ್ಪೆನಿಸದು. ಇದು ವಾಸ್ತವ. ಅತಿಥಿ ದೇವೋಭವನಾದ್ರೆ, ಆತನನ್ನು ಆಧರಿಸಿ ಸತ್ಕರಿಸುವವನು ಕೂಡ ದೇವೋಭವನೇ ಅಲ್ವೇ ?

ಆದರೆ ಎಷ್ಟೋಬಾರಿ ನಮಗೆ ಈ ವಿಚಾರವೇ ಮರೆತು ಹೋಗಿರುತ್ತೆ. ಒಬ್ಬ ಮಿತ್ರ ತನ್ನ ಮಗಳ ಮದುವೆಗೆ ನಮ್ಮನ್ನು ಆಹ್ವಾನಿಸುತ್ತಾನೆ ಅಂತಿಟ್ಟುಕೊಳ್ಳುವ! ಆತ ಆ ಒಂದು ಮದುವೆ ಮಾಡಿ ಮುಗಿಸಲು ಅದೆಷ್ಟು ಶ್ರಮ ಪಡುತಿದ್ದನೋ ನಮಗೆ ಗೊತ್ತಿಲ್ಲ. ನಾವು ಅವನ ಮಿತ್ರರಾಗಿದ್ದಕ್ಕೆ, ನಮ್ಮನ್ನು ಪ್ರೀತಿಯಿಂದ ಆತ ಕರೆದಿರುತ್ತಾನೆ. ಆದರೆ ನಾವು ಏನು ಮಾಡುತೇವೆ ? ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತೇವೆ. ಊಟದ ಸಮಯಕ್ಕೆ ಹೋದರೆ ಸಾಕು ಎನ್ನುವ ತಾತ್ಸಾರ! ಎಲ್ಲ ಕಾರ್ಯ ಮುಗಿದ ಮೇಲೆ ಊಟಕ್ಕೆ ಹಾಜರಾಗುತ್ತೆವೆ. ಇದು ಒಂದು ವಿಧದಲ್ಲಿ ಅತಿಥೇಯನಿಗೆ , ನಮಗೆ ಆಮಂತ್ರಣ ಕೊಟ್ಟವನಿಗೆ ನಾವು ಮಾಡುವ ಅವಮಾನ ತಾನೇ. ಹಿಂದೆಲ್ಲ ಊರಿನ ಒಂದು ಮನೆಯಲ್ಲಿ ಮದುವೆ ಅಂದ್ರೆ ಅದೇನು ಸಂಭ್ರಮ. ಜಾತಿ ಭೇದದ ಲೆಕ್ಕಾಚಾರವಿಲ್ಲದೆ, ಬಹಳ ದಿನಗಳ ಮೊದಲೇ ಕೆಲಸ ಕಾರ್ಯಗಳಲ್ಲಿ ನೆರೆಹೊರೆಯವರು ಕೈ ಜೋಡಿಸುತಿದ್ರು. ಒಂದು ಮನೆಯ ಸಂಭ್ರಮ ಊರಿನ ಸಂಭ್ರಮ ವಾಗಿರುತಿತ್ತು. ಆದರೆ ಈಗಿನ ಯಾಂತ್ರಿಕ ಬದುಕಿನಲ್ಲಿ ಎಲ್ಲರಿಗೂ ಅವಸರ. ಸಂಭ್ರಮ ಅನ್ನುವುದು ಕೇವಲ ಮನೆಯವರಿಗೆ ಸೀಮಿತವಾಗಿದ್ದು , ಉಳಿದವರ ಆಗಮನ ಕೇವಲ ಕಾಟಾಚಾರಕ್ಕೆ ಅನ್ನುವಂತಾಗಿಬಿಟ್ಟಿದೆ.

ಇದು ಮದುವೆ ಮಾತ್ರ ಅಂತ ಅಲ್ಲ. . ಮನೆಯಲ್ಲಿ ಒಂದು ಒಳ್ಳೆ ಕಾರ್ಯ ಇಟ್ಟುಕೊಳ್ಳುತೇವೆ. ನಾವು ನಮ್ಮ ಆತ್ಮೀಯರು ಅಂತ  ಅನಿಸಿಕೊಂಡವರನ್ನು ಕರೆಯುತೇವೆ. ನೋಡಪ್ಪ ಮನೆಯಲ್ಲಿ 7 ಗಂಟೆಗೆ ಇಂತಹ ಕಾರ್ಯ ಇದೆ. ಸಲ್ಪ ಸಮಯಕ್ಕೆ ಮುಂಚೆಯೇ ಬಂದು ಸುಧಾರಿಸಕೊಡಬೇಕು ಅಂತ ಕೇಳಿಕೊಳ್ಳುತೇವೆ. ಮನೆಯಲ್ಲಿ ಒಂದು ಕಾರ್ಯ ಅಂತ ಹೇಳಿದ ಮೇಲೆ ಅದು ದೊಡ್ಡದಿರಲಿ , ಇಲ್ಲವೇ ಚಿಕ್ಕದಿರಲಿ ಅಲ್ಲಿ ಅಪಾರ ಶ್ರಮ ಇರುತ್ತೆ. ಮುಂಜಾನೆ ಎದ್ದು ಅಡುಗೆಯಿಂದ ಹಿಡಿದು ಪ್ರತಿ ಕಾರ್ಯಗಳನ್ನು ಮಾಡಿ ಮುಗಿಸುವಷ್ಟರಲ್ಲಿ ಸಾಕು ಬೇಕಾಗುತ್ತದೆ. ಸಂಜೆ ಹೇಳಿದ ಸಮಯಕ್ಕೆ ಕಾರ್ಯಕ್ರಮ ಶುರುವಾಗಿ , ಸರಿಯಾದ ಹೊತ್ತಿನಲ್ಲಿ ಮುಗಿದರೆ ಮನಸಿಗೆ ಸಮಾಧಾನ. ಆದರೆ ಅತಿಥಿಗಳು ಏನು ಮಾಡುತ್ತಾರೆ ಗೊತ್ತ ? ಆತಿಥೇಯ ಕಾಯುತ್ತ ಕೂತಿರುತ್ತಾನೆ ಅತಿಥಿಗಳಿಗೆ. ಆದರೆ ನಮ್ಮ ಅತಿಥಿಗಳು ಹೇಗೂ ಊಟಕ್ಕೆ ಹೋದರೆ ಸಾಕು ಅಂತ 9 ಗಂಟೆಯ ನಂತರ ಬರುತ್ತಾರೆ.

ಇಲ್ಲಿ ಅತಿಥೇಯನ ಭಾವನೆಗಳಿಗೆ, ಅವನ ಪ್ರೀತಿಗೆ ನಾವು ಗೌರವ ಕೊಡೋದಿಲ್ಲ. ಪ್ರತಿ ಅತಿಥಿಯೂ, ತಾನು ಕೂಡ ಕೆಲವೊಮ್ಮೆ ಆತಿಥೇಯ ನಾಗಬಹುದು ಎನ್ನುವುದನ್ನೇ ಮರೆತುಬಿಟ್ಟವರಂತೆ ವರ್ತಿಸುತ್ತಾರೆ. ಹೇಗೆ ಅತಿಥಿ ದೇವೋಭವನೋ ಹಾಗೆ ಅತಿಥೇಯನೂ ಕೂಡ ದೇವೋಭವ. ನಾವು ಒಬ್ಬರ ಮನೆಗೆ ಹೋದಾಗ, ಆ ಮನೆಯವರ ಭಾವನೆಗಳಿಗೆ , ಸಂಪ್ರದಾಯಕ್ಕೆ ಗೌರವ ಕೊಡಬೇಕು. ಅತಿಥೇಯನ ಮನೆಯ ಬಗ್ಗೆ , ಕುಟುಂಬದ ಬಗ್ಗೆ ಕೊಂಕು ನುಡಿದು, ಅವರನ್ನು ಅವಮಾನಿಸಬಾರದು. ನಮ್ಮ ವರ್ತನೆ ಕೂಡ ಹತೋಟಿಯಲ್ಲಿರಬೇಕು. ಅತಿಥಿಯಾಗಿ ಹೋಗಿ , ನಮ್ಮ ಅದಿಕಾರವನ್ನು ಚಲಾಯಿಸಲು ಪ್ರಯತ್ನ ಪಡಬಾರದು. ಉದಾಹರಣೆಗೆ ಒಬ್ಬ ಗೆಳೆಯನ ಮನೆಗೆ ಹೋಗುತೇವೆ ಅಂದಿಟ್ಟುಕೊಳ್ಳಿ. ನಮ್ಮ ಮತ್ತು ಅವನ ವಯಕ್ತಿಕ ಸ್ನೇಹ ಅದೇನೇ ಇರಲಿ. ಅವನ ಮನೆಯಲ್ಲಿ ಅವನಿಗೊಂದು ಸ್ಥಾನ ಇರುತ್ತದೆ. ಅವನ ಹೆಂಡತಿಯ , ಮಕ್ಕಳ , ತಂದೆ ತಾಯಿಯ ದ್ರಷ್ಟಿಯಲ್ಲಿ ಅವನ ಬಗ್ಗೆ ಒಂದು ಗೌರವ ಹೆಮ್ಮೆ ಇರುತ್ತೆ. ಅವನಲ್ಲಿ ನಾವು ಅತಿಥಿಯಾಗಿ ಹೋಗಿ ಅವನ ಗೌರವಕ್ಕೆ ಕುಂದುಂಟು ಮಾಡುವ ವಿಚಾರಗಳನ್ನು ಹೇಳಿಕೊಳ್ಳುವುದು ಒಳ್ಳೇದಲ್ಲ.

ಅತಿಥಿ ದೇವರಂತೆ ಅಂತ ಹೇಳಿಕೊಂಡು ಬೇಕಾ ಬಿಟ್ಟಿ ವರ್ತಿಸಿದರೆ ಹೇಗೆ ? ಅತಿಥಿಯಾಗಿ ಹೋಗಿದ್ದಾಗ , ಅತಿಥಿಯಂತೆ ನಮ್ಮ ವರ್ತನೆ ಇರಬೇಕು. ಅದು ನಮ್ಮ ಮನೆಯಲ್ಲ ಎನ್ನುವುದು ನಮ್ಮ ಮನಸಿನಲ್ಲಿರಬೇಕು. ಅತಿಥಿಯಂತೆ, ಅತಿಥೇಯನೂ ಕೂಡ ದೇವೋಭವ ಎನ್ನುವುದನ್ನು ನಾವು ಮೆರೆಯಬಾರದು.

 

ಪ್ರಕಾಶ್ ಮಲೆಬೆಟ್ಟು

0 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.