ಗೆಳೆಯರೇ ಇಂದಿನ ನಮ್ಮ ಜೀವನ ತುಂಬಾ ಕಠಿಣ , ಜಟಿಲ ಹಾಗು ಕ್ಷೋಭೆಯಿಂದ ಕೂಡಿರುತ್ತೆ. ಆದರೆ ಜೀವನದ ಜಟಿಲತೆಯನ್ನು ಸಡಿಲಮಾಡಲು ನಮಗೆ ಬೇಕಾಗಿರುವುದು ಒಂದು ಚಿಕ್ಕ ಮದ್ದು, "ನಮ್ಮ ನಗು" . ನಗು ನಮ್ಮೆಲ್ಲ ದುಃಖವನ್ನು ತಾತ್ಕಾಲಿಕವಾಗಿಯಾದರೂ ಕಡಿಮೆ ಮಾಡಿಬಿಡುತ್ತೆ. ಆದರೆ ನಗಿಸಬೇಕಾದವ್ರು ಯಾರು ? ಹೇಗೆ ನಗಿಸಬೇಕು ? ಎಂದು ಪ್ರಶ್ನಿಸಿಕೊಂಡರೆ ಅದಕ್ಕೆ ಉತ್ತರ ಕೂಡ ನಾವೇ. ಮೊದಲಿಗೆ ನಾವು ನಗುವುದನ್ನು ಕಲಿಯಬೇಕು. ನಾವು ಮನಪೂರ್ವಕ ನಕ್ಕಾಗ ಮಾತ್ರ ಬೇರೆಯವರನ್ನು ನಗಿಸಲು ನಮ್ಮಿಂದ ಸದ್ಯ. ನಾನು ಗಂಭೀರ ಸ್ವಭಾವದವ/ದವಳು, ನಗಲು /ನಗಿಸಲು ನನಗೆ ಗೊತ್ತಿಲ್ಲ ಅಂತ ನಾವು ಹೇಳಿಕೊಳ್ಳಬಹುದು. ಕೆಲವು ಗುಣಗಳು. ಹುಟ್ಟಿನಿಂದಲೇ ನಮಗೆ ಬಂದಿರುವುದಿಲ್ಲ . ಪ್ರಯತ್ನ ಪಟ್ಟು ನಾವು ನಮ್ಮನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.
ನಗುವಿಗೆ ಒಂದು ಅಮೋಘ ಶಕ್ತಿ ಇದೆ. ಎಲ್ಲ ನೋವನ್ನು ಮರೆಸಿಬಿಡುವ ಸುಲಭ ಔಷಧಿಯೇ" ನಮ್ಮ ನಗು" . ನಗಿಸುವುದು ಕೂಡ ಒಂದು ಕಲೆ ! ಎಲ್ಲರಿಗೆ ಅದು ಸಿದ್ಧಿಸಿರುವುದಿಲ್ಲ.ಆದರೆ ನಗಿಸುವ ಕಲೆ ಗೊತ್ತಿರುವವರು, ಇತರರನ್ನು ಚುಂಬಕ ಶಕ್ತಿಯಂತೆ ತಮ್ಮತ್ತ ಆಕರ್ಷಿಸುತ್ತಾರೆ . ನನಗೊಬ್ಬ ಬಾಲ್ಯ ಮಿತ್ರ ಇದ್ದಾನೆ . ಅವನಿರುವ ಜಾಗದಲ್ಲಿ ನಗುವಿಗೆ ಯಾವತ್ತೂ ಯಾವುದೇ ಕೊರತೆಯಿರುವುದಿಲ್ಲ. ನಗಿಸಲು ಬರದಿದ್ದರೂ ಅವನೊಂದಿಗೆ ಬಾಲ್ಯದ ಪ್ರತಿಕ್ಷಣದಲ್ಲಿಯೂ ನಗುವಿನ ಸವಿಯನ್ನು ಅನುಭವಿಸಿದ್ದೇನೆ. ನಾವು ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ಒಬ್ಬರು ವಿಜ್ಞಾನ ಶಿಕ್ಷಕರಿದ್ರು . ಅರ್ಥವಾಗದ ವಿಜ್ಞಾನವನ್ನು ತಮ್ಮ ನಗುವಿಸುವ ಕಲೆಯಿಂದಾಗಿಯೇ ನಮಗೆ ಸುಲಭವಾಗಿ ಅರ್ಥ ಮಾಡಿಸುತಿದ್ರು. ಅವರ ನಗಿಸುವ ಕಲೆಯಿಂದಾಗಿಯೇ ನಮ್ಮೆಲ್ಲರ ಅಚ್ಚು ಮೆಚ್ಚಿನ ಶಿಕ್ಷಕರಾಗಿಬಿಟ್ಟಿದ್ರು.
ನಗಿಸುವುದು ಸುಲಭವಲ್ಲ ಆದರೆ ಪ್ರಯತ್ನ ಪಟ್ಟರೆ ಖಂಡಿತವಾಗಿಯೂ ನಮಗೆ ನಗಿಸಲು ಸದ್ಯ ಮತ್ತು ನಗಲು ಕೂಡ ಸದ್ಯ .ನಗುಮೊಗದಿಂದ ಮಾತನಾಡುವವರನ್ನು ಎಲ್ಲರೂ ಇಷ್ಟ ಪಡುತ್ತಾರೆ ಅಷ್ಟೇ ಅಲ್ಲ ಯಾವ ಕೆಲಸ ಬೇಕಾದ್ರು ಇತರರರಿಂದ ಸುಲಭವಾಗಿ ಮಾಡಿಸಿಕೊಳ್ಳುವ ಛಾತಿ ಅವರಲ್ಲಿರುತ್ತೆ. ಕಷ್ಟಸಾಧ್ಯವಾದ ಕೆಲಸವನ್ನು ಸುಲಭ ಮಾಡುವ ಶಕ್ತಿ ನಗುವಿನಲ್ಲಿದೆ.
ನಿನ್ನ ನಗುವನ್ನು ನಾನು ಇಷ್ಟಪಡುತೇನೆ! ಆದರೆ ನಿನ್ನ ಮೊಗದಲ್ಲಿ ನಗು ಮೂಡಲು ಕಾರಣ ನಾನಾಗುವುದನ್ನು ಪ್ರೀತಿಸುತ್ತೆನೆ !
ಹೌದು ಬೇರೆಯವರ ನಗುವನ್ನು ಖಂಡಿತವಾಗಲೂ ನಾವು ಇಷ್ಟಪಡುತೇವೆ. ಅಪ್ಪ ಅಮ್ಮನ ಕಣ್ಣಿನಲ್ಲಿ ಕಾಣಿಸುವ ಹೆಮ್ಮೆಯ ನಗು, ಅಣ್ಣ ತಮ್ಮ ಅಕ್ಕ ತಂಗಿಯರ ಮುಖದಮೇಲೆ ಕಾಣಿಸುವ ಪ್ರೀತಿಯ ನಗು, ಸ್ನೇಹಿತರ ಮುಖದ ಮೇಲೆ ಕಾಣಿಸುವ ಸಂತೋಷದ ನಗು, ಅಪರಿಚಿತರ ಸಮಾಧಾನದ ನಗು, ಮಕ್ಕಳ ಮುಗ್ದ ನಗು ಹೀಗೆ ಅನೇಕ ನಗು ನಮಗೆ ಇಷ್ಟವಾಗುತ್ತದೆ. ಆದರೆ ಆ ನಗುವಿಗೆ ಕಾರಣ ನವಾಗಬೇಕು. ಅಮ್ಮ ಅಮ್ಮ ಹೆಮ್ಮೆಯಿಂದ ನಗುವಂತ ಸಾಧನೆ ನಾವು ಮಾಡಬೇಕು. ನಮ್ಮ ಸಹೋದರ ಸಹೋದರಿಯರನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿ , ಅವರ ಮುಖದ ಮೇಲೆ ಪ್ರೀತಿಯ ನಗು ಮೂಡಿಸಬೇಕು . ನಮ್ಮ ಒಳ್ಳೆತನದದಿಂದ ಸ್ನೇಹಿತರ ಮನಗೆದ್ದು (ಕೊಳಕು ತಮಾಷೆಗಳಿಂದ ಖಂಡಿತ ಅಲ್ಲ) ಅವರ ಮೊಗದಲ್ಲೂ ಸಂತೋಷದ ನಗು ತರಿಸಬೇಕು. ಅಪರಚಿತ ದಾರಿಹೋಕ ಕೂಡ ಯಾವುದಾದರು ಸಹಾಯ ಕೇಳಿದಾಗ ನಮ್ಮಿಂದ ಸಹಾಯ ಮಾಡಲು ಸಾದ್ಯವಾಗುತ್ತದೆಯಾದ್ರೆ ಸಹಾಯ ಮಾಡಿ ಅವರ ಮುಖದಲ್ಲಿ ಸಮಾಧಾನದ ನಗು ತರಿಸಬೇಕು . ಮಕ್ಕಳೊಂದಿಗೆ ಮಕ್ಕಳಾಗಿ ಅವರ ನಗುವಿಗೆ ನಾವು ಕಾರಣರಾಗಬೇಕು. ಅವಾಗ ಮಾತ್ರ ನಮ್ಮ ಜೀವನಕ್ಕೆ ಒಂದು ಅರ್ಥ ಸಿಗುತ್ತದೆ
" ನಗು" ಮೂಡಿಸುವ ಜೀವನದ ಕೆಲವೂ ಸಣ್ಣ ಸಣ್ಣ ಘಟನೆಗಳನ್ನು ಮೆಲಕು ಹಾಕಿದಾಗ ನಮ್ಮ ಮೊಗ ಅರಳುತ್ತದೆ. ನಗುವಿಗೆ ಎಲ್ಲ ನೋವನ್ನು ಮರೆಸುವ ಒಂದು ಅದ್ಬುತ ಶಕ್ತಿ ಇದೆ. ಆದರೆ ನಾವು ನಕ್ಕರೆ ಸಾಲದು. ಇನ್ನೊಬ್ಬರ ನಗುವಿಗೆ ನಾವು ಕಾರಣರಾಗಬೇಕು. ಅವಾಗ ನಮ್ಮ ಜೀವನ ಸಾರ್ಥಕ ಎನಿಸುತ್ತದೆ.
ಮಗು ಮತ್ತು ಅಪ್ಪ
"ಮುಗ್ದ ನಗು" ಎಂದೊಡನೆ ನಮಗೆ ನೆನಪು ಬರುವುದು ಮಕ್ಕಳು. ಎಷ್ಟೊಂದು ಮುಗ್ದರು ಅವರು. ಮನೆಯಲ್ಲಿ ಒಂದು ಮಗು ಇದ್ರೆ ಆ ಮನೆ ಸ್ವರ್ಗಕ್ಕಿಂತ ದೊಡ್ಡದು. ಆ ಮಗುವಿನ ತುಂಟಾಟಗಳು, ನಿಮ್ಮ ಮೇಲೆ ಅದು ಇಟ್ಟಿರುವ ನಂಬಿಕೆ, ಪದಗಳಿಂದ ವರ್ಣಿಸಲು ಅಸಾಧ್ಯ . ನೀವೆಷ್ಟೇ ಕೋಪಿಷ್ಠರಾಗಿದ್ರು, ನಿಮ್ಮ ಕೋಪವನ್ನು ಮರೆಮಾಡುವ ಶಕ್ತಿ ಮಗುವಿನ ನಗುವಿನಲ್ಲಿದೆ. ನಿಮ್ಮ ಕಚೇರಿಯಲ್ಲಿ ಎಷ್ಟೇ ತೊಂದರೆ ಇರಲಿ, ದಿನ ವಿಡಿ ಕಚೇರಿ ಕೆಲಸದಲ್ಲಿ ಬೆಂಡಾಗಿ ಬಸವಳಿದು ಮನೆಗೆ ಬರುತ್ತಿರಿಯಾದ್ರು, ನಿಮ್ಮ ಮನೆಯಲ್ಲೂ ಒಂದು ಪುಟ್ಟ ಪಾಪು ಇದ್ರೆ ನಿಮ್ಮೆಲ್ಲ ನೋವನ್ನು ಒಂದೇ ಕ್ಷಣದಲ್ಲಿ ಆ ಪಾಪುವಿನ ನಗು ಮರೆಸಿಬಿಡುತ್ತದೆ. ಮಗುವಿನ ಮನಸು ನಿಷ್ಕಳಂಕವಾಗಿರುತ್ತದೆ . ಅಪ್ಪ ಯಾಕೆ ಇವತ್ತು ಸುಮ್ಮನೆ ಇದ್ದಾನೆ ! ಏನೋ ತುಂಬಾ ಕೋಪದಲ್ಲಿರುವ ಹಾಗೆ ಕಾಣಿಸುತಿದ್ದಾನೆ . ಏನಾಗಿದೆ . ನನ್ನ ಹತ್ತಿರ ಮಾತನಾಡಿಸಲು ಇಲ್ಲ ಇವತ್ತು ! ಯಾಕೆ ನಗ್ತಾ ಇಲ್ಲ! ಹಾಗಂತ ಯೋಚನೆ ಮಾಡುವ ಮಗು ತನ್ನ ತೊದಲು ನುಡಿಯಿಂದ ಅಪ್ಪ ಅಪ್ಪ ಅಂತ ಕರೆದು ಗಮನ ಸೆಳೆಯಲು ಪ್ರಯತ್ನ ಪಡುತ್ತಾಳೆ . ಅಪ್ಪ ತಿರುಗಿ ನೋಡಿದಾಗ ತನ್ನ ಬೊಚ್ಚು ಬಾಯನ್ನು ಅಗಲಿಸಿ ಒಂದು ಮುಗ್ದ ನಗುವನ್ನು ಹೊರ ಸೂಸುತ್ತಾಳೆ. ಅಪ್ಪ, ಮಗಳ ಮುಗ್ದ ನಗುವಿಗೆ ತನ್ನೆಲ್ಲ ಕೋಪ ತಾಪಗಳನ್ನು ಮರೆತು ಓಡಿ ಬಂದು ಮಗಳನ್ನು ಎತ್ತಿಕೊಂಡು ಮುದ್ದಾಡುತ್ತಾನೆ. ಅಪ್ಪನ ಮುಖದಲ್ಲಿ ನಗು ನೋಡಿ ಮಗಳು ತುಂಬಾನೇ ಸಂತೋಷ ಪಡುತ್ತಾಳೆ. ಅಂತೂ ಇಂತೂ ಅಪ್ಪನನ್ನು ನಗಿಸಿದೆ ಎಂದು ಸಮಾಧಾನ ಪಡುತ್ತಾಳೆ. ಒಂದು ಮುಗ್ದ ನಗು ಆತನ ಎಲ್ಲ ದುಃಖ್ಖ ಸಂಕಟಗಳನ್ನು ಮರೆತು ಬಿಡಿಸುತ್ತದೆ . ಎಷ್ಟೋ ಬಾರಿ ಕಚೇರಿಯ ಕೆಲಸ ಮುಗಿಸಿ ದಣಿದು ಬರುವ ಅಪ್ಪ ಅಮ್ಮ ತಮ್ಮ ಮಗುವಿನ ಮುಗ್ದ ನಗು, ತುಂಟತಗಳನ್ನು ನೋಡಿ ತಮ್ಮ ಎಲ್ಲ ನೋವನ್ನು ಮರೆತುಬಿಡುತ್ತಾರೆ .
ಹದಿಹರೆಯದ ಹುಡುಗ ಹುಡುಗ ಹುಡುಗಿ
ಹದಿಹರೆಯ ಎನ್ನುವುದು ಕನಸು ಕಾಣುವ ಹರೆಯ . ಹುಡುಗ , ಹುಡುಗಿಯ ಮುಖದಲ್ಲಿ ನಗು ನೋಡಲು ಪರದಾಡುವುದನ್ನು ನೋಡುವುದೇ ಒಂದು ಮೋಜು . ಅಮಲು ಗಣ್ಣಿನ ಹುಡುಗಿ, ಅವಳ ನೀಳ ಕೇಶ ರಾಶಿ , ಹಣೆಯ ಮೇಲಿನ ಚಿಕ್ಕ ಬಿಂದಿ , ಕುತ್ತಿಗೆಯ ಮೇಲಿನ ಸಣ್ಣ ಮಚ್ಚೆ ಎಲ್ಲವೂ ಆತನಿಗೆ ಚಿರಪರಿಚಿತ . ಅವಳ ಹೆಸರನ್ನು ಕೈಯ ಮೇಲೆ ಹಚ್ಚೆ ಹಾಕಿಸಿಕೊಳ್ಳಲು ಹೇಸದ ಹರೆಯ. ಇಂತ ಹುಡುಗ ಯಾವಾಗಲು ಆ ಹುಡುಗಿಯ ಮೊಗದಲ್ಲಿ ನಗು ನೋಡಲು ಸದಾ ಹಾತೊರೆಯುತ್ತಿರುತ್ತಾನೆ . ಮುಂದೆ ಕುಳಿತಿದ್ದರೆ ಪದೇ ಪದೇ ಹಿಂದಿರುಗಿ ಅವಳ ಕಡೆಗೆ ಓರೇ ನೋಟ ಬಿರುವುದು , ಅವಳು ತಿರುಗಿ ನೋಡಿ ನಕ್ಕಾಗ ಇವನು ತನ್ನನ್ನು ತಾನೇ ಮರೆತು ಬಿಡುತ್ತಾನೆ .ಅವಳ ನಗುವನ್ನು ತುಂಬಾನೇ ಇಷ್ಟಪಡುತ್ತಾನೆ ಮತ್ತು ಆ ನಗುವಿಗೆ ಕಾರಣ ತಾನಾಗುವುದನ್ನು ಪ್ರೀತಿಸುತ್ತಾನೆ .
ಅಮ್ಮ ಅಮ್ಮ ಮತ್ತು ಬೆಳೆದು ನಿಂತ ಮಕ್ಕಳು
ಪರ ಊರಿನ ಹಾಸ್ಟೆಲ್ ನಲ್ಲಿ ಓದುತ್ತಿರುವ ಮಗ / ಮಗಳು ರಜೆಯಲ್ಲಿ ಊರಿಗೆ ಬರುವಾಗ ಅಮ್ಮನ ಸಡಗರ ಹೇಳತೀರದು . ಮಗಳು ತುಂಬಾ ಇಷ್ಟ ಪಡುವ ಗೆಣಸಿನ ತಿಂಡಿ ಮಾಡಿ ಮಗಳಿಗೆ ಸಂಭ್ರಮದಿಂದ ಕಾಯುವ ಅಮ್ಮ, ಮನೆಗೆ ಬಂದ ಮಗಳು, ತನ್ನ ಅಚ್ಚು ಮೆಚ್ಚಿನ ತಿಂಡಿಯನ್ನು ನೋಡಿ, ಅದನ್ನು ತಿಂದು ಸಂತೋಷಪಟ್ಟಾಗ ಅಮ್ಮನ ಮುಖದ ಮೇಲೆ ನೆಮ್ಮದಿಯ ನಗೆ. ಮಗನ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣನಾದಾಗ ಅಪ್ಪನ ಮುಖದಲ್ಲಿ ಹೆಮ್ಮೆಯ ನಗೆ. ಅಪ್ಪನ ಮುಖದಲ್ಲಿನ ಸಂತೋಷ ಕಂಡು ಮಗನಲ್ಲಿ ಸಮಾಧಾನದ ನಗೆ. ಮಕ್ಕಳ ಸಾಧನೆಗೆ ಹೆಮ್ಮೆ ಪಡುವ ತಂದೆ ತಾಯಿಗಳು . ಅವರು ಹೆಮ್ಮೆ ಪಡುವಂಥ ಸಾಧನೆ ಮಾಡುವ ಮಕ್ಕಳು.
ಗಂಡ ಮತ್ತು ಹೆಂಡತಿ
ಕಚೇರಿಯ ಕೆಲಸ ಮುಗಿಸಿ, ಸುಸ್ತಾಗಿ ಮನೆಗೆ ಬರುವಾಗ ಬಿಸಿ ಬಿಸಿ ಕಾಫಿ ಮಾಡಿಕೊಟ್ಟು ಉಪಚರಿಸುವ ಪತ್ನಿಯ ಕಂಡು ಪ್ರೀತಿಯ ಹೂನಗೆ ಬೀರುವ ಪತಿ. ಪತಿಯ ಹೂನಗೆ ಕಂಡು ನಾಚಿಕೆಯ ನಗೆ ಸೂಸುವ ಪತ್ನಿಯ ಮನಸಿನಲ್ಲಿ ನೆಮ್ಮದಿಯಾ ನಿಟ್ಟುಸಿರು .ಸಂಜೆ ಕೆಲಸದಿಂದ ಬೇಗನೆ ಬರುವ ಪತ್ನಿ, ಪತ್ನಿ ಕೆಲಸದಿಂದ ಬರುವ ಮೊದಲು ಅಡುಗೆ ಮಾಡಿಟ್ಟು ಬಿಸಿ ಬಿಸಿ ಉಪ್ಪಿಟ್ಟು ಮತ್ತು ಕಾಫಿಯೊಂದಿಗೆ ಹೆಂಡತಿಯನ್ನು ಸ್ವಾಗತಿಸಿದರೆ ಎಷ್ಟೊಂದು ಸಂತೋಷದ ನಗೆ ಅವಳ ಮುಖದಲ್ಲಿ. ಹೆಂಡತಿಯನ್ನು ಸಂತೋಷ ಪಡಿಸಿದೆನೆಂಬ ಹೆಮ್ಮೆಯ ನಗೆ ಗಂಡನ ಮುಖದಲ್ಲಿ.
ಹೀಗೆ ಜೀವನದ ಪ್ರತಿಕ್ಷಣದಲ್ಲೂ, ನಮಗೆ ಇತರರನ್ನು ನಗಿಸಿ ನಮ್ಮ ಪ್ರಪಂಚವನ್ನು ಮತ್ತಷ್ಟು ಸುಂದರ ಮಾಡುವ ಅವಕಾಶವನ್ನು, ಬದುಕನ್ನು ಭಗವಂತ ಒದಗಿಸಿಕೊಟ್ಟಿದ್ದಾನೆ. ಇಂತಹ ಸುಂದರ ಅವಕಾಶವನ್ನು, ಹಾಳು ಮಾಡದೇ ಬಳಸಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ.
ಪ್ರಕಾಶ್ / ಮಲೆಬೆಟ್ಟು
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.