“ಸಂಬಂಧಗಳು ಸ್ಫೂರ್ತಿ ತುಂಬುವಂತಿರಬೇಕು ಮತ್ತು ನಮ್ಮ ಆತ್ಮವಿಶ್ವಾಸ ಆ ಸಂಬಂಧಗಳಿಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿರಬೇಕು”!

“ಸಂಬಂಧಗಳು ಸ್ಫೂರ್ತಿ ತುಂಬುವಂತಿರಬೇಕು "

Originally published in kn
Reactions 0
314
PAKASH DSOUZA
PAKASH DSOUZA 18 Aug, 2021 | 1 min read

ಬದುಕಿನಲ್ಲಿ ಯಶಸ್ವಿಯಾದ ವ್ಯಕ್ತಿಯ ಬಳಿ ಒಂದು ಪ್ರಶ್ನೆ ಕೇಳಿ ನೋಡಿ ! ನಿಮ್ಮ ಯಶಸ್ವಿಗೆ ಯಾರು ಸ್ಫೂರ್ತಿ ಅಂತ. ಯಾರು ಇಲ್ಲ! ನನ್ನ ಯಶಸ್ವಿಗೆ ನಾನೆ ಕಾರಣ ಅನ್ನೋ ಉತ್ತರ ಸಾಮಾನ್ಯವಾಗಿ ಯಾರು ಕೊಡೋದಿಲ್ಲ ಅಲ್ವೇ. ಪ್ರತಿಯೊಬ್ಬರ ಜೀವನದ ಯಶೋಗಾಥೆಯ ಹಿಂದೆ ಸ್ಫೂರ್ತಿಯ ಚಿಲುಮೆಯಾಗಿ ಯಾರಾದರೂ ಇದ್ದೆ ಇರುತ್ತಾರೆ. ಇತ್ತೀಚಿಗೆ ತೂಫಾನ್ ಎನ್ನುವ ಒಂದು ಹಿಂದಿ ಚಲನಚಿತ್ರ ನೋಡಿದೆ. ಅಡ್ಡದಾರಿ ಹಿಡಿದಿದ್ದ ಕಥಾನಾಯಕನನ್ನು ತನ್ನ ಸ್ಫೂರ್ತಿಯುತ ಮಾತಿನಿಂದ ಒಬ್ಬ ಯಶಸ್ವಿ ಕ್ರೀಡಾಪಟುವಾಗಲು ಪ್ರೇರೇಪಿಸುತ್ತಾಳೆ ಕಥಾನಾಯಕಿ. ಇಲ್ಲಿ ಅವನ ಯಶಸ್ವಿಗೆ ಕಾರಣ ಕಠಿಣ ಪರಿಶ್ರಮ ಮತ್ತು ತರಬೇತುದಾರನ ಶ್ರಮ ನಮ್ಮ ಕಣ್ಣಿಗೆ ಕಾಣಿಸುತ್ತದೆಯಾದ್ರೂ, ಅದಕ್ಕೆ ಮುಖ್ಯ ಕಾರಣವಾಗಿರುತ್ತಾಳೆ ಅವನ ಪ್ರೇರಣೆ, ಅವನ ಸ್ಫೂರ್ತಿ ಕಥಾನಾಯಕಿ .

ಇದು ಸಿನಿಮಾ ನಿಜ ಆದರೆ ವಾಸ್ತವ ಜಗತ್ತಿಗೆ ತುಂಬಾ ಹತ್ತಿರವಾಗಿದೆ. ಕನಸು ಕಾಣದ ವ್ಯಕ್ತಿ ಯಾರಿದ್ದಾನೆ ಹೇಳಿ ? ಆದರೆ ಎಷ್ಟೋ ಸಲ ಕನಸುಗಳು ಸೂಕ್ತ ಬೆಂಬಲ ದೊರೆಯದೆ ಮುರುಟಿ ಹೋಗಿ ಬಿಡುತ್ತವೆ. ಒಂದು ಪುಟ್ಟ ಕಥೆ ನನಗಿಲ್ಲಿ ನೆನಪು ಬರುತ್ತಿದೆ. ಒಮ್ಮೆ ಒಬ್ಬ ದಾರಿಹೋಕ ರಸ್ತೆಯ ಬದಿಯಲ್ಲಿ ಒಂದು ಆನೆ ತರಬೇತಿ ಕೇಂದ್ರವನ್ನು ನೋಡುತ್ತಾನೆ. ಆನೆಗಳನ್ನು ನೋಡುವ ಕುತೂಹಲದಿಂದ ಆತ ಆ ಕೇಂದ್ರದ ಒಳಹೊಕ್ಕುತ್ತಾನೆ. ಅಲ್ಲಿ ಅನೇಕ ಆನೆಗಳಿದ್ದವು.ಪರಮಾಶ್ಚರ್ಯ ಏನಂದ್ರೆ ಆ ಆನೆಗಳ ಒಂದು ಕಾಲನ್ನು ಒಂದು ಚಿಕ್ಕ ಹಗ್ಗದಿಂದ ಕಟ್ಟಿ ಹಾಕಿದ್ದರು. ಆನೆಗಳ ಶಕ್ತಿಯ ಮುಂದೆ ಆ ಹಗ್ಗ ಏನೇನು ಅಲ್ಲ. ಆದ್ರೂ ಆನೆಗಳು ಆ ಹಗ್ಗವನ್ನು ಕಿತ್ತು ಹಾಕುವ ಪ್ರಯತ್ನ ಮಾಡದಿರುವುದನ್ನು ಕಂಡು ಕುತೂಹಲದಿಂದ ಆ ದಾರಿಹೋಕ ಆನೆಗಳ ತರಬೇತುದಾರನಲ್ಲಿ , ಯಾಕೆ ಅವು ಹಗ್ಗ ಕಿತ್ತು ಕೊಳ್ಳದೆ ಸುಮ್ಮನೆ ಇವೆ ಅಂತ ಪ್ರಶ್ನಿಸುತ್ತಾನೆ. ಆಗ ಆ ತರಬೇತುದಾರ ನಕ್ಕು ನುಡಿಯುತ್ತಾನೆ, ಆ ಆನೆಗಳು ಮೊತ್ತ ಮೊದಲು ಈ ತರಬೇತಿ ಕೇಂದ್ರಕ್ಕೆ ತಂದಾಗ ಅವು ಮರಿಗಳಾಗಿದ್ದವು. ಆಗ ನಾವು ಈ ಸಪುರ ಹಗ್ಗದಿಂದ ಅವುಗಳ ಒಂದು ಕಾಲನ್ನು ಕಟ್ಟುತ್ತಿದೆವು. ಆಗ ಅವುಗಳನ್ನು ತಡೆದಿಡಲು ಈ ಹಗ್ಗದ ಬಲ ಸಾಕಿತ್ತು. ಆಗ ಅದನ್ನು ಕಿತ್ತು ಹಾಕುವ ಪ್ರಯತ್ನ ಮಾಡುತಿದ್ದ ಮರಿಯಾನೆಗಳಿಗೆ ಅದನ್ನು ಕಿತ್ತು ಹಾಕಲು ಸಾಧ್ಯವಾಗುತ್ತಿರಲಿಲ್ಲ. ಈಗ ಅವು ಬೆಳೆದು ದೊಡ್ಡದಾಗಿದ್ರು ಈಗಲೂ ತಮಗಿಂತ ಈ ಹಗ್ಗ ಬಲಶಾಲಿ ಎನ್ನುವ ನಂಬಿಕೆಯಲ್ಲಿ ಇವೆ.

ಬದುಕಿನ ಪ್ರತಿಕ್ಷಣ ಸವಾಲಿನದಾಗಿರುವಾಗ ನಮ್ಮ ಸಂಬಂಧಗಳು ಪರಸ್ಪರ ಸ್ಫೂರ್ತಿ ತುಂಬಬೇಕೇ ವಿನಾ ನಿರಾಶೆಯ ಕೂಪಕ್ಕೆ ತಳ್ಳಬಾರದು"

ನಮ್ಮ ಬದುಕು ಕೂಡ ಹೀಗೆ ಅಲ್ವ. ಎಷ್ಟೋ ಬಾರಿ ಆ ಆನೆಯಷ್ಟೇ ಸಾಮರ್ಥ್ಯ ನಮ್ಮೊಳಗೇ ಇರುತ್ತೆ. ಆದರೆ ನಮ್ಮ ಸುತ್ತ ಮುತ್ತ ಇರುವ ನಮ್ಮ ಸಂಬಂಧಗಳು ಎನ್ನುವ ಒಂದು ಸಣ್ಣ ಹಗ್ಗ ನಮ್ಮನ್ನು ಕಟ್ಟಿಹಾಕಿ ಬಿಟ್ಟಿರುತ್ತೆ. ಆ ಹಗ್ಗಗಿಂತ ನಾವು ಶಕ್ತಿಶಾಲಿ ಎನ್ನುವ ಅರಿವು ಮೂಡಿಸುವ ಸ್ಫೂರ್ತಿ , ಪ್ರೇರಕ ಶಕ್ತಿ ನಮಗೆ ಲಭಿಸದಿದ್ದ್ರೆ ನಾವು ಬೆಳೆಯಲು ಸಾಧ್ಯವಾಗೋದಿಲ್ಲ. ಆದರೆ ಪ್ರತಿ ಸಂದರ್ಭದಲ್ಲೂ ಯಾರಾದ್ರೂ ಸ್ಫೂರ್ತಿಯಾಗಿ ನಮ್ಮ ಜೊತೆ ಇರುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ. ನಮ್ಮ ಜೀವನದಲ್ಲಿ ಬರುವ ಪ್ರತಿ ವ್ಯಕ್ತಿಯೂ ಕೂಡ ಆ ಸಣ್ಣ ಹಗ್ಗದಂತೆ ನಮ್ಮನ್ನು ಕಟ್ಟಿ ಹಾಕುವ ಸಂದರ್ಭ ಬರೋದಿಲ್ಲ ಅಂತ ಹೇಳಕಾಗೊಲ್ಲ. ಅಯ್ಯೋ ನಿನಗೆ ಆ ಅರ್ಹತೆ ಇಲ್ಲ. ನಮಗೆ ಯಾಕೆ ಬೇಕು ಇದೆಲ್ಲ. ಸಾಧ್ಯನೇ ಇಲ್ಲ ಬಿಡು ಹೀಗೆ ಮಾತನಾಡುವ ಜನರಿಗೆ ಯಾವ ಕೊರತೆನೂ ಇಲ್ಲ.

ನಮ್ಮ ಆತ್ಮವಿಶ್ವಾಸ ಸಂಬಂಧಗಳಿಗಿಂತಲೂ ಪ್ರಭಾವಶಾಲಿಯಾಗಿರಬೇಕು!

ಹಾಗಾಗಿಯೇ ನಮ್ಮ ಆತ್ಮವಿಶ್ವಾಸ ಸಂಬಂಧಗಳಿಗಿಂತಲೂ ಪ್ರಭಾವಶಾಲಿಯಾಗಿರಬೇಕು.ಕಾಲೆಯುವರು ತುಂಬಾ ಜನ ಇರುತ್ತಾರೆ. ಅವರ ಮಾತುಗಳಿಗೆ ಕೆಲವೊಮ್ಮೆ ನಾವು ಕಿವುಡರಾಗಬೇಕಾಗುತ್ತದೆ. ಒಮ್ಮೆ ಕಪ್ಪೆಗಳ ಹಿಂಡೊಂದು ಸವರಿ ಹೊರಟಿದ್ವು. ಅವುಗಳಲ್ಲಿ ಎರಡು ಕಪ್ಪೆಗಳು ಆಯತಪ್ಪಿ ಒಂದು ಗುಂಡಿಯೊಳಗೆ ಬಿದ್ದು ಬಿಡುತ್ತವೆ. ಗುಂಡಿ ತುಂಬಾ ಆಳವಾಗಿರುತ್ತೆ. ಉಳಿದ ಕಪ್ಪೆಗಳಿಗೆ ಅವು ಮೇಲೆ ಬರಲು ಸಾಧ್ಯವೇ ಇಲ್ಲ ಅನಿಸುತ್ತೆ. ಅಷ್ಟರಲ್ಲಿ ಕೆಳಗೆ ಬಿದ್ದ ಈ ಎರಡು ಕಪ್ಪೆಗಳು ಮೇಲಕ್ಕೆ ನೆಗೆಯುವ ಪ್ರಯತ್ನ ಸುರು ಮಾಡುತ್ತವೆ. ಉಳಿದ ಕಪ್ಪೆಗಳು ಜೋರಾಗಿ ಕೂಗಿ ಹೇಳುತ್ತವೆ , ಮೇಲಕ್ಕೆ ನೆಗೆದು ಸುಮ್ಮನೆ ಗಾಯಮಾಡಿಕೊಂಡು ಯಾಕೆ ಪ್ರಾಣ ಹಿಂಸೆ ಮಾಡಿಕೊಂಡು ಸಾಯುತಿರ? ನೀವು ಬದುಕಲು ಸಾಧ್ಯವೇ ಇಲ್ಲ. ಕೆಳಗೆ ಇದ್ದು ಬಿಡಿ. ಮೇಲೆ ನೆಗೆದು ಸುಮ್ಮನೆ ನಿಮ್ಮ ದೇಹಕ್ಕೆ ಹಿಂಸೆ ಮಾಡಿಕೊಂಡು ಯಾಕೆ ನೋವಿನಿಂದ ಸಾಯುತಿರ ಅಂತ ಕೂಗಿ ಹೇಳಲಾರಂಭಿಸುತ್ತವೆ. ಅವುಗಳ ಮಾತು ಕೇಳಿದ ಒಂದು ಕಪ್ಪೆ ತನ್ನ ಪ್ರಯತ್ನ ಬಿಟ್ಟು ಬಿಡುತ್ತದೆ.

ಆದರೆ ಮತ್ತೊಂದು ಕಪ್ಪೆ ಸುಮ್ಮನೆ ಕೈಚೆಲ್ಲಿ ಬಿಡೋದಿಲ್ಲ. ಕಡೆಗೂ ಪ್ರಯತ್ನ ಪಟ್ಟು ಮೇಲೆ ಬಂದು ತನ್ನ ಪ್ರಾಣ ಉಳಿಸಿಕೊಂಡು ಬಿಡುತ್ತೆ. ಆ ಕಪ್ಪೆಗೆ ಕಿವುಡು. ಹಾಗಾಗಿ ಉಳಿದವರು ಕೂಗಿ ಹೇಳಿದ್ದು ಅದಕ್ಕೆ ಕೇಳಿಸಿರೋದಿಲ್ಲ. ನಿಜ, ಜನರ ಮಾತುಗಳು ನಮ್ಮ ಜೀವನದ ಮೇಲೆ ತುಂಬಾ ಪರಿಣಾಮ ಬೀರುತ್ತೆ ! ಹಾಗಾಗಿ ನಾವು ಕೆಲವೊಮ್ಮೆ ನಿರಾಶೆಯ ಮಾತುಗಳಿಗೆ ಕಿವುಡರಾಗಬೇಕಾಗುತ್ತದೆ. ಅಷ್ಟೇ ಅಲ್ಲ ಮಾತನಾಡುವಾಗಲೂ ಕೂಡ ತುಂಬಾ ಯೋಚನೆ ಮಾಡಿ ಮಾತನಾಡಬೇಕು. ಯಾರಾದ್ರೂ ಸಲಹೆ ಕೇಳಿದಾಗ ಸುಮ್ಮನೆ ಬಾಯಿಗೆ ಬಂದ ಹಾಗೆ ಬಿಟ್ಟಿ ಸಲಹೆಗಳನ್ನು ಕೊಡಬಾರದು. ಕೆಲವೊಮ್ಮೆ ನಮ್ಮ ಸಲಹೆಗಳು ಬದುಕು ಮತ್ತು ಪ್ರಾಣದ ನಡುವಿನ ವ್ಯತ್ಯಾಸ ಮಾತ್ರ ಆಗಿರಬಹುದು. ನಾಲ್ಕು ದಿನದ ಬದುಕಿನಲ್ಲಿ ಪರಸ್ಪರ ಸ್ಫೂರ್ತಿ ತುಂಬುವ ಕಾರ್ಯ ನಮ್ಮ ನಡುವೆ ನಡೆಯಬೇಕು.

ಪ್ರಕಾಶ್ ಡಿಸೋಜಾ ಮಲೆಬೆಟ್ಟು

0 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.