ಸತ್ಯದ ಹಾದಿ ಕಷ್ಟಕರ ಆದರೆ ಒಳ್ಳೆ ಫಲ ನಿಶ್ಚಿತ
ಪುಣ್ಯಕೋಟಿಯ ಕಥೆ ಯಾರಿಗೆ ತಾನೇ ಗೊತ್ತಿಲ್ಲ ಅಲ್ವೇ ! ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಸರ್ವ ಬಳಗವು, ಸತ್ಯವಾಕ್ಯಕೆ ತಪ್ಪಿ ನಡೆದಾರೆ ಮೆಚ್ಚ ನಾ ಆ ಪರಮಾತ್ಮನು! ಬಾಲ್ಯದಲ್ಲಿ ಪಠ್ಯ ಪುಸ್ತಕದಲ್ಲಿ ಓದಿದ ಆ ಸತ್ಯಸಂಧ ಗೋವು ಮತ್ತು ಅರ್ಬುತನೆಂಬ ಹುಲಿಯಾ ಕಥೆ ಮನಸಿನ ಅದ್ಯಾವುದೋ ಒಂದು ಮೂಲೆಯಲ್ಲಿ ಭದ್ರವಾಗಿ ಉಳಿದುಕೊಂಡುಬಿಟ್ಟಿದೆ. ಸತ್ಯ ಎಷ್ಟೊಂದು ಪ್ರಬಲ ಅಲ್ವ. ಸತ್ಯ ಆ ಕ್ರೂರಿ ಹುಲಿಯ ಮನ ಪರಿವರ್ತನೆ ಮಾಡಿಬಿಟ್ಟಿತು. ನಿಜ ಬಾಲ್ಯದಿಂದಲೇ ನಾವು ಸತ್ಯದ ಪಾಠವನ್ನು ಕಲಿಯುತ್ತ ಬೆಳೆಯುತ್ತೆವೆ. ಸತ್ಯ ಹರಿಶ್ಚಂದ್ರ ರಾಜನ ಕಥೆಯನ್ನೇ ತೆಗೆದುಕೊಳ್ಳಿ. ಸತ್ಯಕೋಸ್ಕರ ತನ್ನ ಸಾಮ್ರಾಜ್ಯ, ಪ್ರೀತಿಯ ಮಡದಿಯನ್ನು ತ್ಯಾಗಮಾಡಬೇಕಾಗಿ ಬಂದ್ರು ಸತ್ಯ ಬಿಡಲ್ಲ ರಾಜ ಹರಿಶ್ಚಂದ್ರ. ಕಡೆಗೆ ಸತ್ಯಕ್ಕಾಗಿ , ಕರ್ತವ್ಯ ನಿಷ್ಠೆಗೋಸ್ಕರ ಸತ್ತು ಹೋದ ತನ್ನ ಮಗನ ಶವಸಂಸ್ಕಾರ ಕೂಡ ಮಾಡಲು ತನ್ನ ಮಡದಿಗೆ ಅವಕಾಶ ನೀಡೋದಿಲ್ಲ ಹರಿಶ್ಚಂದ್ರ. ಸತ್ಯ , ಪ್ರಾಮಾಣಿಕತೆಗಾಗಿ ತನ್ನ ಪ್ರಾಣವನ್ನೇ ಬಿಡಲು ಕೂಡ ಸಿದ್ಧನಾಗುತ್ತಾನೆ ರಾಜ ಹರಿಶ್ಚಂದ್ರ. ಕಡೆಗೆ ಏನಾಗುತ್ತೆ ? ಆತನ ಸತ್ಯ ನಿಷ್ಠೆ ಪ್ರಾಮಾಣಿಕತೆಯನ್ನು ಮೆಚ್ಚಿ ಆ ಬ್ರಹ್ಮದೇವರೇ ಪ್ರತ್ಯಕ್ಷರಾಗಿ ಅವನ ಮಗನನ್ನು ಬದುಕಿಸಿಕೊಡುತ್ತಾರೆ. ಇಲ್ಲೂ ಕೂಡ ಸತ್ಯ ಗೆಲ್ಲುತ್ತೆ . ಸತ್ಯಕ್ಕೆ ಎಂದೂ ಸೋಲಿಲ್ಲ ಎನ್ನುವುದು ಹಲವಾರು ಬರಿ ಸಾಬೀತಾಗಿದೆ. ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರ ಮಂತ್ರ ಏನಾಗಿತ್ತು ಗೊತ್ತ! "ಯುದ್ಧ ಮಾಡಿ ಗೆಲ್ಲಲು ಬೇಕಾಗಿರುವ ಪ್ರಮುಖ ಅಸ್ತ್ರ ಸತ್ಯ ಮತ್ತು ಅಹಿಂಸೆ" ಎನ್ನುವುದು ಅವರ ನಂಬಿಕೆ ಯಾಗಿತ್ತು. ಅದನ್ನು ಅವರು ಸಾಬೀತು ಪಡಿಸಿದ್ರು ಕೂಡ.ಪ್ರಾಚೀನ ಭಾರತೀಯ ಗ್ರಂಥ ಮುಂಡಕ ಉಪನಿಷತ್ತಿನಲ್ಲಿ ಒಂದು ಅದ್ಭುತವಾದ ಮಂತ್ರ ಇದೆ. ಸತ್ಯಮೇವ ಜಯತೆ ನಾನೃತಂ,ಸತ್ಯೇನ ಪಂಥಾ ವಿತತೋ ದೇವಯಾನಃ, ಯೇನಾಕ್ರಮಂತಿ ಋಷಯೋ ಹ್ಯಾಪ್ತಕಾಮಾ, ಯತ್ರ ತತ್ ಸತ್ಯಸ್ಯ ಪರಮಂ ನಿಧಾನಂ. ಅಂದ್ರೆ ಸತ್ಯ ಮಾತ್ರ ಗೆಲ್ಲುವುದು ಸುಳ್ಳುತನ ಅಲ್ಲ ಯಾವುದರ ಮೂಲಕ ಆಸೆಗಳನ್ನು ಸಂಪೂರ್ಣವಾಗಿ ಗೆದ್ದ ಋಷಿಗಳು ನಡೆದು ಸತ್ಯದ ಪರಮ ನಿಧಿಯನ್ನು ಹೊಂದುವರೋ ಆ ದೈವಿಕ ಪಥವು ಸತ್ಯದ ಮೂಲಕವೇ ಸಾಗುವುದು ಸತ್ಯದಲ್ಲಿ ಪರಮಾತ್ಮನ ನಿಧಿ ವಾಸಿಸುತ್ತದೆ. ಹೌದಲ್ವಾ ಬಾಲ್ಯದಲ್ಲೇ, ನಾವು ಆಸ್ತಿಕರಾಗಿದ್ದರೆ ನಮಗೆ ಖಂಡಿತವಾಗಿಯೂ ಹೇಳಿಕೊಟ್ಟಿರುತ್ತಾರೆ ಮೋಕ್ಷದ ದಾರಿ " ಸತ್ಯದ ದಾರಿ" ಎಂದು ಹೌದು ತಾನೇ!! ಮನುಕುಲದ ಅಸ್ತಿತ್ವ ನಿಂತಿರೋದೇ ಪರಸ್ಪರ ವಿಶ್ವಾಸದ ಮೇಲೆ. ಎಷ್ಟೆಷ್ಟೋ ದೊಡ್ಡ ದೂಡ ವ್ಯವಹಾರಗಳು , ಕಂಪನಿಗಳ ನಡುವೆ , ದೇಶ ವಿದೇಶಗಳ ನಡುವೆ ನಡೆಯುತ್ತೆ ಒಂದು ವಿಶ್ವಾಸದ ಮೇಲೆ .ಸತ್ಯ ಹಾಗು ವಿಶ್ವಾಸ ಒಂದೇ ನಾಣ್ಯದ ಎರಡು ಮುಖಗಳು. ಒಬ್ಬ ಮನುಷ್ಯ ಸತ್ಯ ಹೇಳುತ್ತಿದ್ದಾನೆ ಎನ್ನುವ ವಿಶ್ವಾಸದಲ್ಲೇ ನಾವು ಅವನೊಂದಿಗೆ ವ್ಯವಹರಿಸುತ್ತೆವೆ. ಸಂಬಂಧಗಳು ಸತ್ಯ ವಿಶ್ವಾಸದ ತಳಹದಿಯ ಮೇಲೆ ಬೆಸೆದುಕೊಳ್ಳುತ್ತವೆ.
ಸುಳ್ಳಿನ ಚಟ - ಸಂಬಂಧಗಳಿಗೆ ದಕ್ಕೆ
ಮಾನವರು "ಸರ್ವ ಗುಣ ಸಂಪನ್ನ" ಅಲ್ವೇ . ಹಾಗೆ ದುರ್ಗುಣದ ಅಸುರ ಕೂಡ ಮನುಜನೇ. ಸುಳ್ಳಿನ ಪ್ರಪಂಚದ ಮೇಲೇನೆ ತಮ್ಮ ಕನಸಿನ ಮಹಲನ್ನು ಕಟ್ಟಲು ಪ್ರಯತ್ನಿಸುತ್ತಾರೆ ಹಾಗು ಅದರಲ್ಲಿ ಯಶ ಗಳಿಸುತ್ತಾರೆ ಕೂಡ. ಹೌದು ಕಪಟತನಕ್ಕೆ ಹೃದಯ ಗೆಲ್ಲುವ ಸಾಮರ್ಥ್ಯವಿರುವಾಗ ಒಳ್ಳೆತನ ಮುಸುಕಾಗಿ ಮಲಗುವುದಲ್ಲದೆ ಇನ್ನೇನು ತಾನೇ ಮಾಡಲು ಸದ್ಯ? ಆದರೆ ನೆನಪಿದೆಯಲ್ವಾ ಹಿರಿಯರ ಮಾತು . ಕೊನೆಗೆ ಗೆಲ್ಲೋದು ಸತ್ಯನೇ. ಇತ್ತೀಚಿಗೆ ತನ್ನನು ಒಬ್ಬ ಯಶಸ್ವಿ ಯುವ ವಿಜ್ಞಾನಿ ಎಂದು ಗುರುತಿಸಿಕೊಂಡಿದ್ದ ವ್ಯಕ್ತಿ ತನ್ನ ಸುಳ್ಳಿನ ಪರದೆ ಕಳಚಿಕೊಂಡು ಪ್ರಪಂಚದ ಮುಂದೆ ಬೆತ್ತಲಾದದ್ದು ನಮ್ಮ ಕಣ್ಣ ಮುಂದಿದೆ. ಎಷ್ಟು ಜನ ಅವನನ್ನು ನಂಬಿ ಹಣಕಾಸಿನ ಸಹಾಯ ಒದಗಿಸಿ ಅವನಿಗೆ ಪ್ರೋತ್ಸಹ ಕೊಟ್ಟಿದ್ರು . ಆದರೆ ಕಡೆಗೆ ನಡೆದದ್ದು ನಂಬಿಕೆ ದ್ರೋಹ. ಹೌದು ನಮ್ಮ ನಮ್ಮ ಮನೆಗಳಲ್ಲೇ , ನಮ್ಮ ಸುತ್ತ ಮುತ್ತ ಕೆಲವೊಮ್ಮೆ ನಾವು ಸುಳ್ಳಿನ ಕೋಟೆ ಕಟ್ಟಿಕೊಂಡು ಬಿಡುತೇವೆ. ಆದರೆ ಒಂದಲ್ಲ ಒಂದು ದಿನ ನಮ್ಮ ಸುಳ್ಳಿನ ಕೋಟೆ ಕುಸಿದಾಗ ನಂಬಿದವರಿಗೆ ಆಗುವ ದುಃಖ್ಖವನ್ನು ಅರಿಯುವಲ್ಲಿ ವಿಫಲರಾಗುತ್ತೆವೆ. ನಮ್ಮವರ ವಿಶ್ವಾಸ, ನಂಬಿಕೆಯನ್ನೇ ನಾವು ಕಳೆದುಕೊಂಡು ಬಿಡುತ್ತೆವೆ. ಆದ್ರೆ ಸುಳ್ಳೇ ಚಟವಾಗಿಬಿಟ್ಟಾಗ ಪರಿಹಾರ ಸುಲಭವಾಗಿ ದಕ್ಕಲ್ಲ. ಹುಲಿ ಬಂತು ಹುಲಿ ಕಥೆ ನಮಗೆಲ್ಲ ಗೊತ್ತಿದೆ. ಒಬ್ಬ ಹುಡುಗ ಕಾಡಿಗೆ ಹೋಗಿ ಸುಮ್ಮನೆ ಹುಲಿ ಬಂತು ಕಾಪಾಡಿ ಅಂತ ಅಂತ ಬೊಬ್ಬೆ ಹೊಡೆಯುತ್ತಾನೆ. ಎರಡು ಬಾರಿ ಅವನು ಕಿರುಚಿಕೊಂಡಾಗ ಊರಿನವರು ಓಡೋಡಿ ಬರುತ್ತಾರೆ. ಆದರೆ 3 ನೇ ಬರಿ ನಿಜವಾಗ್ಲೂ ಹುಲಿ ಬಂದಿರುತ್ತೆ. ಆದರೆ ಅವನು ಎಷ್ಟು ಅರಚಾಡಿದರೂ ಸುಳ್ಳು ಹೇಳುತ್ತಿದ್ದಾನೆ ಅಂದುಕೊಂಡು ಅವನನ್ನು ಕಾಪಾಡಲು ಯಾರು ಕೂಡ ಓಡಿ ಬರೋದಿಲ್ಲ. ಹಾಗಾಗಿ ಬಿಡುತ್ತೆ ನಮ್ಮ ಕಥೆ ಕೂಡ. ಎಷ್ಟೋ ಜನ ಮಕ್ಕಳು ತಂದೆ ತಾಯಿಯಾ ಬಳಿ , ಗುರು ಹಿರಿಯರ ಬಳಿ , ಕೆಲಸಗಾರರು ಮಾಲೀಕರ ಹತ್ತಿರ , ಮಾಲೀಕರು ಕೆಲಸಗಾರರ ಹತ್ತಿರ , ನೆರೆಹೊರೆಯವರ ಬಳಿ , ಕಡೆಗೆ ಅಪರಿಚಿತರ ಬಳಿ ಸುಳ್ಳು ಹೇಳಿ ನಂಬಿಕೆ ದ್ರೋಹ ಬಗೆಯುತ್ತಾರೆ. ಆದ್ರೂ ಅವರು ಪಶ್ಚತ್ತಾಪ ಪಡಲ್ಲ. ಕೇಳಿದ್ರ್ರು ನೀನೇನು ಸತ್ಯ ಹರಿಶಂದ್ರನ ಮೊಮ್ಮಗನ ಎಂದು ಪ್ರಶ್ನೆ ಕೆಳೆದವರನ್ನೇ ದಬಾಯಿಸಿಬಿಡುತ್ತಾರೆ. ಒಂದು ಉದಾಹರಣೆ ಕೊಡೋದಾದ್ರೆ ಒಬ್ಬರು ದೂರದೂರಿನಲ್ಲಿದ್ದ ತನ್ನ ಮಗನ ಬಳಿ ಸುಳ್ಳನ್ನೇ ಹೇಳಿಕೊಂಡು ಜೀವನ ಸಾಗಿಸುತಿದ್ರು. ಮಗನಿಗೋ ಅಪ್ಪನೆಂದ್ರೆ ಪಂಚಪ್ರಾಣ . ಹಾಗಾಗಿ ಸುಳ್ಳುಗಳಿಗೆ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಪರಿಸ್ಥಿತಿ ಎಲ್ಲಿಗೆ ಬಂತು ಅಂದ್ರೆ ಮಗನ ಸ್ನೇಹಿತರ ಬಳಿ ಕೂಡ ಮಗನ ಬಗ್ಗೆ ಸುಳ್ಳು ಹೇಳಲು ಆರಂಬಿಸಿಬಿಟ್ಟರು.ಅವರಿಗೊಂದು ಭ್ರಮೆ. ಮಗನ ಮೂಲಕ ಪರಿಚಯವಾದವರು ಕೂಡ ಮಗನಿಗಿಂತ ನನ್ನನ್ನೇ ಹೆಚ್ಚು ನಂಬುತ್ತಾರೆ ಅಂತ . ಆದರೆ ಅವರಿಗೆ ಒಂದಂತೂ ಅರ್ಥವಾಗುತ್ತಲೇ ಇರ್ಲಿಲ್ಲ . ಮಗನ ಬಗ್ಗೆ ಇಲ್ಲವೇ ಯಾವುದೇ ವಿಷಯದ ಬಗ್ಗೆ ಸುಳ್ಳು ಮಾತನಾಡಿದರೆ ತಾನೇ ನಗೆಪಾಟಲಿಗೆ ಈಡಾಗುತಿದ್ದೀನಿ ಎನ್ನುವ ಅರಿವು ಅವರಲ್ಲಿ ಇರ್ಲಿಲ್ಲ. . ನಮ್ಮ ಮನೆಯ ಹೆಸರನ್ನು ನಾನೆ ಕೆಡೆಸುತಿದ್ದೀನಿ. ಇತರರ ಎದುರಿಗೆ ನನ್ನ ನಾಲಗೆ ಹಗುರವಾಗಿಸಿಕೊಂಡು ತಾನು ಮರ್ಯಾದೆ ಕಳೆದುಕೊಳ್ಳುವುದು ಮಾತ್ರವಲ್ಲ , ಮಗನ ಮರ್ಯಾದೆ ಕೂಡ ಅವನ ಸ್ನೇಹಿತರ ಮುಂದೆ , ಸಂಬಂದಿಕರ ಮುಂದೆ , ನೆರೆಹೊರೆಯವರ ಮುಂದೆ ಕಳೆಯುತಿದ್ದಿನೇ ಎನ್ನುವುದು ಅವರ ಬುದ್ದಿ ಶಕ್ತಿಗೆ ಹೊಳೆಯುತಿರಲಿಲ್ಲ. ಅಷ್ಟೇ ಅಲ್ಲ ನನಗೆ ಅವರ ಪರಿಚಯವಾದದ್ದು ನನ್ನ ಮಗನಿಂದ. ಅವರಿಗೆಲ್ಲ ನನಗಿಂತ ನನ್ನ ಮಗ ಮುಖ್ಯ. ಅವನಿಗಾಗಿ ನನ್ನನ್ನು ಸಹಿಸಿಕೊಂಡಿದ್ದಾರೆ ಎನ್ನುವುದು ಅವರಿಗೆ ಅರ್ಥವಾಗುತ್ತಿರಲಿಲ್ಲ. ನಾನು ಏನು ಮಾತನಾಡಿದರು ಹೇಳಬೇಡಿ ಅಂದ್ರು ಅದು ಮಗನ ಕಿವಿಗೆ ಬಿದ್ದೆ ಬೀಳುತ್ತೆ, ಅವನಿಗೆ ದುಃಖ್ಖವಾಗುತ್ತೆ, ಇತರರ ಮುಂದೆ ಅವನು ತಲೆಯೆತ್ತಿ ಮಾತನಾಡಲು ಸಾಧ್ಯವಾಗುವುದಿಲ್ಲ ಎನ್ನುವುದೇ ಅವರ ತಲೆಗೆ ಹೊಳೆಯುತ್ತಿಲ್ಲ. ಇದು ಎಷ್ಟರಮಟ್ಟಿಗೆ ಅಂದ್ರೆ ಮಗನ ಗೆಳೆಯರು ಅಲ್ಲ ಮಾರಾಯ ನಿನ್ನ ಅಪ್ಪನ ಕಂಡ್ರೆ ಸಾಕು ನಾವು ದೂರ ಓಡಿ ಹೋಗಿಬಿಡುತೇವೆ ಎನ್ನುವ ಮಟ್ಟಕ್ಕೆ ತಲುಪಿತು. ಅಷ್ಟೇ ಅಲ್ಲ ಮತೊಬ್ಬ ಪರಿಚಯಸ್ತರು ಹೇಳ್ತಾರೆ ಅವನಿಗೆ ಅಲ್ಲ ಮಾರಾಯ ನಾನು ನನ್ನ ಮನೆಯಲ್ಲೇ ಸುಳ್ಳು ಹೇಳಲ್ಲ. ತುಂಬಾ ನೇರವಾದ ಮನುಷ್ಯ. ಆದ್ರೆ ನಿನ್ನ ಅಪ್ಪ ನಿನ್ನಲ್ಲಿ ಸುಳ್ಳು ಹೇಳಲು ನನ್ನಲ್ಲಿ ಹೇಳುತ್ತಾರೆ . ಅವರಿಗೆ ಬೇಕಾದ್ರೆ ಎಷ್ಟಾದ್ರೂ ಸುಳ್ಳು ಹೇಳಲಿ . ನಾನ್ಯಾಕೆ ಸುಳ್ಳು ಹೇಳಬೇಕು ಎಂದು ಪ್ರಶ್ನಿಸುತ್ತಾರೆ. ಮಗ ನಾಚಿಕೆಯಿಂದ ತಲೆತಗ್ಗಿಸಿ ಕ್ಷಮೆ ಕೇಳಬೇಕಾಗುತ್ತದೆ. ಇನ್ನೊಮ್ಮೆ ಮಗನ ಗೆಳೆಯನ ಬಳಿ ಯಾವುದೊ ಸಹಾಯ ಕೇಳಿ ಅದನ್ನು ಮಗನಿಗೆ ಹೇಳಬೇಡ ಅನ್ನುತ್ತಾರೆ. ಆ ಸ್ನೇಹಿತ ನೇರವಾಗಿ ಅವರಿಗೆ ಹೇಳುತ್ತಾನೆ ನಾನು ನಿಮ್ಮ ಮಗನಿಗೆ ಅರಿವಾಗದಂತೆ ಯಾವುದೇ ಕೆಲಸ ಮಾಡಿ ಅವನ ಸ್ನೇಹಕ್ಕೆ ದ್ರೋಹ ಬಗೆಯಲ್ಲ ಅಂತ. ಎಂದು ! ಅವನಿಗೆ ಅವರ ಸ್ವಭಾವ ಗೊತ್ತು . ಗೊತ್ತಿಲ್ಲ್ಲದವ್ರು ಎಂದಂದುಕೊಳ್ಳುತ್ತಾರೆ. ಅಪ್ಪ ಮತ್ತು ಮಗನ ಸಂಬಂಧ ಚೆನ್ನಾಗಿಲ್ಲವೆಂದು ತಾನೇ. ಇದು ಕೇವಲ ಒಂದು ಉದಾಹರಣೆ ಮಾತ್ರ . ಆದ್ರೆ ನಮ್ಮ ಸುತ್ತ ಮುತ್ತ ಇಂತಹ ಘಟನೆಗಳು ಬಹಳಷ್ಟು ನಡೆಯುತ್ತವೆ. ನಾವು ಯೋಚಿಸುತ್ತೆವೆ ಕೆಲವೊಮ್ಮೆ, ಎಂಥ ಮಕ್ಕಳು ಇವರು! ಅಪ್ಪ ಅಮ್ಮನನ್ನು ನೋಡಿಕೊಳ್ಳಲ್ಲ ಅಂತ. ಹಾಗೆ ಕೆಲವು ಘಟನೆಗಳನ್ನು ಓದಿದಾಗ ಅಬ್ಬಾ ಎಂಥ ಅಪ್ಪ ಅಮ್ಮ!! ಮಕ್ಕಳಿಗೆ ಹಾಗೆ ಯಾರಾದ್ರೂ ಮಾಡುತ್ತಾರಾ ? ಇಲ್ಲವೇ ಎಂಥ ಅಣ್ಣ ತಮ್ಮ ಹಾಗೆ ಕಿತ್ತಾಡಿಕೊಳ್ಳುತ್ತಾರೆ ಅಂತ . ಆದ್ರೆ ಪ್ರತಿ ಘಟನೆಗಳಿಗೂ ಎರಡು ಮುಖ ಇರುತ್ತೆ ಎನ್ನುವುದನ್ನು ಮರೆತು ಬಿಡುತ್ತೆವೆ.
ಮೇಲಿನ ಉದಾಹರಣೇನೇ ತೆಗೆದುಕೊಳ್ಳಿ , ಆ ಅಪ್ಪನಿಗೆ ಗೊತ್ತು ಮಗನಿಗೆ ತನ್ನ ಸುಳ್ಳು ಗೊತ್ತಾಗುತ್ತೆ ಅಂತ . ಆದ್ರೆ ಸುಳ್ಳು ಚಟವಾಗಿಬಿಟ್ಟಿದೆ. ಆ ಚಟವನ್ನು ಯಾವುದೇ ಕಾರಣಕ್ಕೂ ಬಿಡಲು ಸಾಧ್ಯವಾಗದಂತೆ ಮನಸ್ಸನ್ನು ಅವರಿಸಿಕೊಂಡುಬಿಟ್ಟಿದೆ. ಮಗನಿಗೆ ಗೊತ್ತಾಗಿ ಅವನು ವಿಚಾರಿಸಿದಾಗ ಕಣ್ಣೀರು ಸುರಿಸಿ , ಮಾತು ಬಿಟ್ಟು ಹೇಗೋ ಸಂಭಾಳಿಸಿಬಿಡಬಹುದು ಎನ್ನುವ ಭ್ರಮೆ. ಆದರೆ ಬೇರೆ ದಿಕ್ಕಿನಲ್ಲಿ ಯೋಚನೆ ಮಾಡೋದೇ ಇಲ್ಲ. ಮಗನಿಗೆ ಎಲ್ಲ ಅರಿವಿದೆ . ಆದ್ರೂ ಮನ ನೋಯಿಸಬಾರದು ಎನ್ನುವ ಕಾರಣಕ್ಕೆ ಸಹಿಸಿಕೊಂಡಿದ್ದಾನೆ ಎಂದು ಹೊಳೆಯೋದೇ ಇಲ್ಲ. ಅವನು ತಾಳ್ಮೆ ತಪ್ಪಿದ್ರೂ ಇವರು ಹೆಣೆಯುವ ಸುಳ್ಳುಗಳ ಬಲೆಗೆ ಹೆದರಿ ಅವನು ಸುಮ್ಮನಿದ್ದಾನೆ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳೋದೇ ಇಲ್ಲ. ಪರಿಸ್ಥಿತಿ ಹೀಗೆ ಮುಂದುವರೆದಾಗ ಏನಾಗುತ್ತೆ ? ಪ್ರೀತಿ ಕಡಿಮೆಯಾಗುತ್ತ ಸಾಗಿ ಕರ್ತವ್ಯ ಪ್ರಜ್ಞೆ ಮಾತ್ರ ಉಳಿದುಬಿಡುತ್ತೆ . ಕ್ರಮೇಣ ಮನಸು ಕಠಿಣವಾಗುತ್ತ ಕರ್ತವ್ಯ ಪ್ರಜ್ಞೆ ಕೂಡ ಮರೆಯಾಗಿ ಬಿಡುತ್ತೆ. ಕೇವರು ಹೇಳುತ್ತಾರೆ ಸೊಸೆ ಬಂದಾಗ ಮಗ ತಂದೆ ತಾಯಿಗಳನ್ನು ಮರೆತು ಬಿಡುತ್ತಾನೆ ಅಂತ . ಎಷ್ಟೋ ಸಂದರ್ಭದಲ್ಲಿ ಇದು ನಿಜ ಕೂಡ. ಆದ್ರೆ ತಂದೆ ತಾಯಿ ಮಕ್ಕಳ ಸಂಬಂಧ ಪರಸ್ಪರ ಪ್ರೀತಿ, ವಿಶ್ವಾಸ , ತ್ಯಾಗ , ತಿಳುವಳಿಕೆಯಿಂದ ತುಂಬಿದ್ದರೆ ಮನೆಗ ಬರುವ ಹುಡುಗಿಯನ್ನು ಮಗಳಾಗಿ ಸ್ವೀಕರಿಸುತ್ತಾರೆ ವಿನಾ ಸೊಸೆಯಾಗಿ ಅಲ್ಲ.ಅಂತಹ ಮದುರ ಬಾಂದವ್ಯ ಇರುವ ಕುಟುಂಬಕ್ಕೆ ಕಾಲಿಡುವ ಹುಡುಗಿ ಕೂಡ ತಾನು ಈ ಮನೆಯ ಸೊಸೆಯಲ್ಲ ಮಗಳು ಎನ್ನುವುದನ್ನು ಬಹು ಬೇಗನೆ ಅರ್ಥಮಾಡಿಕೊಳ್ಳುತಾಳೆ ಎನ್ನುವುದು ಕೂಡ ನಿಜ .
ಸುಳ್ಳನ್ನು ಪ್ರೀತಿಸುವವನು ಮನುಷ್ಯ ಸಂಬಂಧಗಳಿಗೆ ಬೆಲೆ ಕೊಡುವುದಿಲ್ಲ.
ನಿಜ ಸುಳ್ಳಿನ ಪ್ರಪಂಚದಲ್ಲೇ ಜೀವಿಸುವವರಿಗೆ ಸಂಬಂಧಗಳು ಬೇಕಾಗಿರುವುದು ಕೇವಲ ತಮ್ಮ ಅಗತ್ಯಕ್ಕೆ ಮಾತ್ರ . ಅವರು ಸಂಬಂಧಗಳಿಗೆ ಯಾವ ಬೆಲೆನೂ ಕೊಡೋದಿಲ್ಲ.ಆ ತಂದೆಗೆ ತನ್ನ ಮಗನ ಮೇಲೆ ನಿಜವಾದ ಮಮಕಾರ ಇದ್ದಿದ್ದ್ರೆ ಸುಳ್ಳಿನ ಪ್ರಪಂಚವನ್ನು ಅವನ ಸುತ್ತ ಸ್ರಷ್ಟಿಸುತ್ತಿರಲಿಲ್ಲ. ಕೆಲವ್ರು ತಮ್ಮ ಸುಳ್ಳನ್ನು ಸಮರ್ಥಿಸಿಕೊಳ್ಳುವುದು ನನಗೆ ಭಯವಾಯಿತು ಹಾಗಾಗಿ ಸುಳ್ಳು ಹೇಳಿದೆ ಎಂದು. ಆದರೆ ಒಂದು ನೆನಪಿಡಬೇಕು. ತಪ್ಪು ಮಾಡಿದಾಗ ಭಯಕ್ಕಿಂತ ಜಾಸ್ತಿ ನಾವು ಪಶ್ಚಾತಾಪ ಪಡಬೇಕು. ಆ ಕ್ಷಣಕ್ಕೆ ನಾವು ಸುಳ್ಳು ಹೇಳಿ ಭಯದಿಂದ ತಾತ್ಕಾಲಿಕ ಮುಕ್ತಿ ಪಡೆಯಬಹುದು . ಆದರೆ ಮುಂದೊಮ್ಮೆ ಆ ಸುಳ್ಳು ಬಟಾ ಬಯಲಾದಾಗ ಮುಖ ಮುಚ್ಚಿಕೊಡು ಓಡಾಡಬೇಕಾಗುತ್ತದೆ. ಅಷ್ಟೇ ಅಲ್ಲ ಸತ್ಯ ಹೇಳಿದ ತಕ್ಷಣ ಆ ಭಯ ಅಲ್ಲಿಗೆ ಕಳಚಿಕೊಳ್ಳುತ್ತೆ. ಭಯಪಟ್ಟು ಹೇಳಿದ ಸುಳ್ಳು , ಆ ಭಯವನ್ನು ನಮ್ಮ ಮನಸಿನಿಂದ ಖಂಡಿತವಾಗಿಯೂ ದೂರ ಮಾಡಲ್ಲ. ಸಿಕ್ಕಿ ಬೀಳುವ ಭಯ ನಮ್ಮನ್ನು ಕಾಡುತ್ತಲೇ ಇರುತ್ತದೆ . ನಿಜ ಗೊತ್ತಾದಾಗ ನಮ್ಮ ಬಾಂಧವ್ಯವನ್ನು ಹಾಳುಗೆಡವುತ್ತದೆ.
ಹಾಗಾಗಿ ಗೆಳೆಯರೇ ಸುಳ್ಳಿನ ಚಟ ನಮ್ಮಲಿದ್ದರೆ ಮೊದಲು ಆ ಸುಳಿಯಿಂದ ಹೊರಬರುವ ಪ್ರಯತ್ನ ಪಡುವ. ಸತ್ಯದ ಪರಿಣಾಮ ಏನೆ ಇರಲಿ ಆದರೆ ಆ ಸತ್ಯ ಹೇಳಿದ ದಿನ ನೆಮ್ಮದಿಯ ನಿದ್ದೆ ಮಾತ್ರ ಖಂಡಿತವಾಗಿಯೂ ಬರುತ್ತೆ .
ಪ್ರಕಾಶ್ /ಮಲೆಬೆಟ್ಟು
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.