ಹೊಗಳಿಕೆ ಸಮಸ್ಯೆಯಾದಾಗ !

ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳು. ಒಬ್ಬಳು ದೊಡ್ಡವಳು ಮತ್ತೊಬ್ಬಳು ಚಿಕ್ಕವಳು. ಒಮ್ಮೆ ದೊಡ್ಡವಳು ಒಂದು ಒಳ್ಳೆ ಹಾಡನ್ನು ಹಾಡುತಾಳೆ. ಅವಳ ಅಮ್ಮ ಹೇಳುತ್ತಾರೆ ಮಗಳೇ ತುಂಬಾ ಚೆನ್ನಾಗಿ ಹಾಡನ್ನು ಹಾಡಿದ್ದಿ . ನನಗೆ ತುಂಬಾ ಇಷ್ಟ ಆಯಿತು. ತಕ್ಷಣ ಚಿಕ್ಕವಳು ತನ್ನ ಮುಖ ಊದಿಸಿಕೊಂಡು ಅಳು ಮೊರೆ ಮಾಡಿಕೊಂಡು ಯಾಕೆ ಅಮ್ಮ ನನ್ನ ಹಾಡು ಇಷ್ಟ ಆಗಲ್ವ ನಿನಗೆ ? ಅವಳ ಹಾಡು ಮಾತ್ರ ಇಷ್ಟ ಆಯ್ತಾ ಅಂತ ಕೋಪಿಸಿಕೊಳ್ಳುತಾಳೆ.

Originally published in kn
Reactions 1
393
PAKASH DSOUZA
PAKASH DSOUZA 28 Apr, 2021 | 1 min read

ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳು. ಒಬ್ಬಳು ದೊಡ್ಡವಳು ಮತ್ತೊಬ್ಬಳು ಚಿಕ್ಕವಳು. ಒಮ್ಮೆ ದೊಡ್ಡವಳು ಒಂದು ಒಳ್ಳೆ ಹಾಡನ್ನು ಹಾಡುತಾಳೆ. ಅವಳ ಅಮ್ಮ ಹೇಳುತ್ತಾರೆ ಮಗಳೇ ತುಂಬಾ ಚೆನ್ನಾಗಿ ಹಾಡನ್ನು ಹಾಡಿದ್ದಿ . ನನಗೆ ತುಂಬಾ ಇಷ್ಟ ಆಯಿತು. ತಕ್ಷಣ ಚಿಕ್ಕವಳು ತನ್ನ ಮುಖ ಊದಿಸಿಕೊಂಡು ಅಳು ಮೊರೆ ಮಾಡಿಕೊಂಡು ಯಾಕೆ  ಅಮ್ಮ ನನ್ನ ಹಾಡು ಇಷ್ಟ ಆಗಲ್ವ ನಿನಗೆ ? ಅವಳ ಹಾಡು ಮಾತ್ರ ಇಷ್ಟ ಆಯ್ತಾ ಅಂತ ಕೋಪಿಸಿಕೊಳ್ಳುತಾಳೆ. ಇಲ್ಲಿ ಆ ತಾಯಿ ಪರಿಸ್ಥಿತಿಯನ್ನು ನಿಭಾಯಿಸೋದಾದ್ರೂ ಹೇಗೆ . ಇಲ್ಲ ಮಗಳೇ ನೀನು ಕೂಡ ತುಂಬಾ ಚೆನ್ನಾಗಿ ಹಾಡು ಹಾಡುತ್ತಿಯ. ನಾನು ಯಾವಾಗ ಹೇಳಿದೆ ನಿನ್ನ ಹಾಡು ಚೆನ್ನಾಗಿಲ್ಲ ಅಂತ ಎಂದು ಹೇಳಿ ಸಮಾಧಾನ ಪಡಿಸಲು ಪ್ರಯತ್ನ ಪಡುತ್ತಾರೆ. ಆ ಮಗಳಿಗೋ ಸಲ್ಪ ಹಠ ಜಾಸ್ತಿನೇ.ಕಡೆಗೂ ಪೆಟ್ಟು ತಿನ್ನುವ ತನಕ ಅವಳ ಹಠ ಬೆಳೆಯುತ್ತೆ. ಹಾಗೆ ಸಲ್ಪ ಮತ್ಸರ ಕೂಡ ಅಕ್ಕನ ಬಗ್ಗೆ. ಇಂತಹ ಪರಿಸ್ಥಿತಿ ಮಕ್ಕಳಿರುವ ಎಲ್ಲರ ಮನೆಯಲ್ಲೂ ಎದುರಾಗಿರುತ್ತೆ. ತಂಗಿಯನ್ನು ಹೊಗಳಿದರೆ ಅಕ್ಕನಿಗೆ ಬೇಸರವಾಗುತ್ತೆ. ತಮ್ಮನನ್ನು ಹೊಗಳಿದರೆ ಅಣ್ಣನಿಗೆ ಬೇಸರ . ಅಣ್ಣನನ್ನು ಹೊಗಳಿದರೆ ತಮ್ಮನಿಗೆ ಕೋಪ. ಹಾಗಂತ ಇದು ಮಕ್ಕಳಿಗೆ ಮಾತ್ರ ಸೀಮಿತವೇ .ಬದುಕಿನ ನಾನಾ ಘಟ್ಟಗಳಲ್ಲಿ ಇಂತಹ ಪರಿಸ್ಥಿತಿ ಎದುರಾಗುತ್ತೆ. ಕಚೇರಿಯಲ್ಲಿ ಮೇಲಧಿಕಾರಿ ಒಬ್ಬರನ್ನು ಹೊಗಳಿದರೆ ಮತೊಬ್ಬ ಸಹೋದ್ಯೋಗಿ ನಾನು ಕತ್ತೆಯಂತೆ ಕೆಲಸ ಮಾಡಿದರು ಹೊಗಳಿಕೆ ಮಾತ್ರ ಎಲ್ಲ ಅವನಿಗೆ ದಕ್ಕುತ್ತದೆ ಅಂತ ಹೊಟ್ಟೆ ಕಿಚ್ಚು ಪಡುತ್ತಾನೆ.

ಇದೆಲ್ಲ ಯಾಕೆ ನೆನಪಾಯಿತು ಅಂದ್ರೆ ಮೊನ್ನೆ ಒಬ್ಬ ರಾಜಕೀಯ ನಾಯಕರು ದಕ್ಷಿಣ ಭಾರತವನ್ನು ಹೊಗಳಿದರು. ಅವರ ವಿರೋಧಿಗಳು ಒಮ್ಮೆಲೇ ಅವರ ಮೇಲೆ ಮುಗಿಬಿದ್ದರು. ಉತ್ತರ ಭಾರತದಲ್ಲಿ ಇಷ್ಟು ವರ್ಷಗಳ ಕಾಲ ಇದ್ದು ಈಗ ಉತ್ತರ ಭಾರತದವರನ್ನು ತೆಗಳುತಿದ್ದಾರೆ.ಉಪಕಾರ ಸ್ಮರಣೆಯಿಲ್ಲದ ರಾಜಕಾರಣಿ ಅಂತ ಪ್ರಚಾರ ಮಾಡಿದರು  . ಒಮ್ಮೆ ನನಗೆ ನಗು ಬಂತು. ಆ ರಾಜಕಾರಣಿಯ ಮಾತಿನಿಂದ ಹಿಡಿದು ಮೇಲೆ ನಾನು ಹೇಳಿದ ಯಾವುದೇ ಉದಾಹರಣೆಯಲ್ಲೂ ಒಬ್ಬರನ್ನು ಹೊಗಳಿದ್ದು ಮಾತ್ರ . ಆ ಅಮ್ಮ ದೊಡ್ಡ ಮಗಳನ್ನು ಹೊಗಳಿದ್ದು ಅಲ್ಲದೆ ಚಿಕ್ಕ ಮಗಳನ್ನು ತೆಗಳಿರಲಿಲ್ಲ. ಇಲ್ಲ ನಿನ್ನ ಹಾಡು ಚೆನ್ನಾಗಿಲ್ಲ ಅಂತ ಹೇಳಿರಲಿಲ್ಲ. ಹಾಗೆ ಆ ಕಚೇರಿಯ ಮೇಲಧಿಕಾರಿ ಒಬ್ಬ ಸಹೋದ್ಯೋಗಿಯನ್ನು ಅವನ ಕೆಲಸಕ್ಕೆ ಹೊಗಳಿದ್ದು ನಿಜವಾದ್ರೂ ಅದರ ಅರ್ಥ ಬೇರೆ ಎಲ್ಲ ಕೆಲಸಗಾರರು ಮೈಗಳ್ಳರು ಅಂತ ಅಲ್ಲ ಅಲ್ವೇ ! ಆ ರಾಜಕೀಯ ನಾಯಕ ದಕ್ಷಿಣ ಭಾರತವನ್ನು ಹೊಗಳಿದ ಮಾತ್ರಕ್ಕೆ ಉತ್ತರ ಭಾರತವನ್ನು ತೆಗಳಿದ್ರು ಅಂತ ಅರ್ಥ ಅಲ್ಲ ! ಸರಿ ಬಿಡಿ ರಾಜಕೀಯ ನಾಯಕರುಗಳದ್ದು ಇದ್ದದ್ದೇ . ಒಂದು ಮಾತಿನಲ್ಲಿ ಹತ್ತು ಅರ್ಥ ಹುಡುಕುತ್ತಾರೆ. ಅದು ಅವರ ಬದುಕಿನ ಪ್ರಶ್ನೆ . ಆದರೆ ನಾವು ಜನಸಾಮಾನ್ಯರು ಯಾಕೀಗೆ ಮಾಡುತೇವೆ.

ಯೋಚಿಸಿದಾಗ ನನಗೆ ಹೊಳೆದದ್ದು ಇದಕ್ಕೆ ಮುಖ್ಯ ಕಾರಣ ನಮ್ಮನ್ನು ಕಾಡುವ ಅಭದ್ರತೆ ! ಮೊದಲ ಮಗುವನ್ನು ಪ್ರೀತಿಯ ಹೊಳೆಯಲ್ಲಿ ತೇಲಿಸಿಬಿಡುತ್ತೆವೆ. ಅಪ್ಪ ಅಮ್ಮನ ಹೆಚ್ಚಿನ ಪ್ರೀತಿಯ ಸವಿಯನ್ನು ಅನುಭವಿಸುವುದು ಆ ಮೊದಲ ಮಗುವಾದ್ರೂ ಇನ್ನೊಂದು ಮಾತು ಕೂಡ ಅಷ್ಟೇ ನಿಜ. ಅತಿ ಹೆಚ್ಚಿನ ಕಷ್ಟವನ್ನು ಅನುಭವಿಸುವುದು ಕೂಡ ಮೊದಲ ಮಗುವೇ. ತನಗೆ ಒಬ್ಬ ತಮ್ಮನೋ , ತಂಗಿಯೋ ಬಂದ ಮೇಲೆ ಸಹಜವಾಗಿಯೇ ಅವನ / ಅವಳ ಮನಸಿನಲ್ಲಿ ಅಭದ್ರತೆ ಕಾಡತೊಡಗುತ್ತದೆ. ಪೋಷಕರು ಕೂಡ ಅಷ್ಟೇ , ಚಿಕ್ಕ ಮಗು ಎನ್ನುವ ಕಾಳಜಿಯಿಂದಾಗಿ , ಯಾರೇ ತಪ್ಪು ಮಾಡಿದರು ಮೊದಲು ದೊಡ್ಡ ಮಗ /ಮಗಳನ್ನು ಬೈಯಲು ತೊಡಗುತ್ತಾರೆ. ಇನ್ನು ಚಿಕ್ಕ ಮಕ್ಕಳ ಕಥೆ ಏನೆಂದ್ರೆ ಒಂದು ಭಾವನೆಗಳನ್ನು  ಅರ್ಥ ಮಾಡಿಕೊಳ್ಳುವ ಪ್ರಾಯ ಅವರದಾಗಿರೋದಿಲ್ಲ. ಎರಡನೆಯದಾಗಿ ಅಪ್ಪ ಅಮ್ಮ ಎಲ್ಲದಕ್ಕೂ ನೀನು ಅಣ್ಣನಂತೆ ಆಗಬೇಕು , ಇಲ್ಲ ಅಕ್ಕನಂತೆ ಆಗಬೇಕು ಅಂತ ಹೇಳುವಾಗ ಸಹಜವಾಗಿಯೇ ಒಂದು ಅಭದ್ರತಾ ಭಾವ , ಮತ್ಸರ ಅವರ ಮನಸಿನೊಳಗೆ ಮೊಳಕೆ ಒಡೆಯಲಾರಂಭಿಸುತ್ತದೆ . ಹಾಗಾಗಿ ಹೊಗಳಿಕೆ ಎನ್ನುವುದು ಇಲ್ಲಿ ಸಮಸ್ಯೆಯ ರೂಪ ತಾಳತೊಡಗುತ್ತದೆ.

ಹಾಗಾದ್ರೆ ಈ ಸನ್ನಿವೇಶವನ್ನು ಹೇಗೆ ನಿಭಾಯಿಸಬಹುದು. ನೆನಪಿಡಿ ಮಕ್ಕಳ ಮನಸು ಒಂದು ಖಾಲಿಯಿರುವ ಹಾರ್ಡ್ ಡಿಸ್ಕ್ ತರ. ಒಂದು ಖಾಲಿ ಕಂಪ್ಯೂಟರ್ ತರ ಇಲ್ಲವೇ  ಒಂದು ಯಾವುದೇ ಆಪ್ ಗಳನ್ನೂ ಇನ್ನು ಇನ್ಸ್ಟಾಲ್ ಮಾಡಿರದ ಮೊಬೈಲ್ ನಂತೆ. ಅಲ್ಲಿ ನೀವು ಒಳ್ಳೇದನ್ನು ತುಂಬಬಹುದು ಹಾಗೆ ಕೆಟ್ಟದನ್ನು ಕೂಡ. ಮಕ್ಕಳಿರುವಾಗ ನೀವು ಅವರ ಮೆದುಳಿನಲ್ಲಿ , ಮನಸಿನಲ್ಲಿ ಏನನ್ನು ತುಂಬಿಸುತ್ತಿರೋ , ಅದು ಅವರು ಜೀವನ ಪರ್ಯಂತ ಹೇಗಿರುತ್ತಾರೆ ಎನ್ನುವುದಕ್ಕೆ ಒಂದು ಮುನ್ನುಡಿ ಎನ್ನುವುದನ್ನು ನಾವು ಮರೆಯಬಾರದು. ಚಿಕ್ಕವರಿರುವಾಗಲೇ ಸಹಿಷ್ಟುತ ಗುಣವನ್ನು ಅವರು ಮೈಗೂಡಿಸಿಕೊಳ್ಳುವಂತೆ ನಾವು ಮಾಡದಿದ್ದಲ್ಲಿ ಹೀಗೆ ಬೇರೆಯವರನ್ನು ಹೊಗಳುವುದನ್ನು ಸಹಿಸಲಾರದ ಗುಣ ಅವರಲ್ಲಿ ಬೆಳೆಯುತ್ತದೆ. ಆ ಪುಟ್ಟ ಮಕ್ಕಳಿಗೆ ನಾವು ತಾಳ್ಮೆಯಿಂದ ಅರ್ಥ ಮಾಡಿಸಬೇಕು. ಮೊದಲಿಗೆ ಅಕ್ಕನನ್ನು ಇಲ್ಲವೇ ಅಣ್ಣನನ್ನು ಹೊಗಳಿದ ಮಾತ್ರಕ್ಕೆ ನೀನು ಹೊಗಳಿಕೆಗೆ ಅನರ್ಹ ಅಂತ ಅರ್ಥ ಅಲ್ಲ ಅಂತ ಅವರಿಗೆ ಮನವರಿಕೆ ಮಾಡಿಕೊಡಬೇಕು. ಪ್ರತಿಯೊಬ್ಬರೂ ವಿಭಿನ್ನ ಗುಣದಲ್ಲಿ ! ಹಾಗಾಗಿ ಸುತರಾಂ ಮಕ್ಕಳ ನಡುವೆ ನಾವು ಹೋಲಿಕೆ ಮಾಡಬಾರದು. ತಮ್ಮನನ್ನು ನೋಡಿ ಕಲಿ ಇಲ್ಲ ಇಲ್ಲವೇ ಅಕ್ಕನನ್ನು ನೋಡಿ ಕಲಿ , ಅಣ್ಣನಂತೆ ಆಗಬೇಕು ಇಂತಹ ಪದಗಳನ್ನು ಬಳಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಅಣ್ಣನನ್ನು . ಅಕ್ಕನನ್ನು ಹಾಗೆ ತಮ್ಮನನ್ನು ಮತ್ತು ತಂಗಿಯನ್ನು ನೋಡಿ ಕಲಿಯಬೇಕಾದ್ರೆ ಮೊದಲಿಗೆ ಆ ಪುಟ್ಟ ಮಕ್ಕಳ ಮನಸಿನಲ್ಲಿ ಅಭದ್ರತಾ ಭಾವನೆಗಳು ತೊಲಗಿ ಅಲ್ಲಿ ಪ್ರೀತಿಯ ಭಾವನೆ ಮೂಡಬೇಕು. ಈ ಕಾರ್ಯದಲ್ಲಿ ಅಪ್ಪ ಅಮ್ಮ ಮಹತ್ವದ ಪಾತ್ರ ನಿರ್ವಹಿಸಬೇಕಾಗುತ್ತದೆ. ತಮ್ಮ ಮಕ್ಕಳು ಪರಸ್ಪರ ಗೌರವಿಸಿಕೊಂಡು ಪ್ರೀತಿಯಿಂದ ಬೆಳೆಯುವುದು ನಮ್ಮ ವರ್ತನೆಯ ಮೇಲೆ ಅವಲಂಬಿತವಾಗಿರುತ್ತೆ ಎನ್ನುವುದನ್ನು ಹೆತ್ತವರು ಮರೆಯಬಾರದು ಒಬ್ಬ ಮಗ ಕಲಿಯುವುದರಲ್ಲಿ ತುಂಬಾ ಚಾಣಾಕ್ಷನಿದ್ದು ಮತ್ತೊಬ್ಬ ಅಷ್ಟಕಷ್ಟೆ ಆದ್ರೆ ಚಿಂತೆ ಮಾಡಬೇಡಿ. ಪ್ರತಿಯೊಬ್ಬರೂ ವಿಭಿನ್ನ ಗುಣದೊಂದಿಗೆ ಹುಟ್ಟುತ್ತಾರೆ. ಕಲಿಯುವುದರಲ್ಲಿ ಬುದ್ದಿವಂತನಲ್ಲದ ಮಗನಿಗೆ ಬೇರೆ ವಿಚಾರದಲ್ಲಿ ಆಸಕ್ತಿ ಇರಬಹುದು. ಅದನ್ನು ಗುರುತಿಸುವ ಕೆಲಸ ನಮ್ಮಿಂದ ನಡೆಯಬೇಕು. ಇಲ್ಲ ನಿಜವಾಗ್ಲೂ ಓದು ತಲೆಗೆ ಹತ್ತುತ್ತ ಇಲ್ಲವಾದ್ರೆ ಅವನಿಗೆ ಸಹಾಯ ಮಾಡುವ ಎಲ್ಲ ಪ್ರಯತ್ನ ನಮ್ಮಿಂದ ನಡೆಯಬೇಕು. ಅದು ಬಿಟ್ಟು ಇನ್ನೊಬ್ಬ ಮಗನೊಂದಿಗೆ ಹೋಲಿಸಿ ಅವನು ಮಾತ್ರ ನನ್ನ ಮಗ ಚೆನ್ನಾಗಿ ಓದುತ್ತಾನೆ ನೀನು ನಿಷ್ಪ್ರಯೋಜಕ ಅಂದ್ರೆ ಈ ಹುಡುಗನ ಮನದಲ್ಲಿ ತನ್ನ ಅಣ್ಣನ ಬಗ್ಗೆ ಪ್ರೀತಿ ಮೊದಲು ಹೇಗೆ ಸದ್ಯ ? ಅಣ್ಣನನ್ನು ಹೊಗಳುವುದನ್ನು ನೋಡಿದಾಗ ಇವನ ಮುಖ ಬಾಡತೊಡಗುವುದು ಸಹಜ ಅಲ್ವೇ. ಆದರೆ ನಾವು ನೋಡಪ್ಪ ನಿನ್ನ ತಮ್ಮನಿಗೆ ಸಲ್ಪ ಹೇಳಿಕೊಟ್ಟು ಸಹಾಯ ಮಾಡು ಪಾಪ ಒಬ್ಬನೇ ಅಲ್ವ ನಿನಗೆ ತಮ್ಮ ಇರೋದು ಅಂತ, ಇಬ್ಬರು ಜಾಣ ಮಕ್ಕಳು ನೀವು ಚೆನ್ನಾಗಿ ಓದಿಕೊಳ್ಳಿ ಅಂತ ಹೇಳಿದ್ರೆ ಅವರು ಸಂತೋಷದಿಂದ ಜೊತೆಗೆ ಕುಳಿತುಕೊಂಡು ಓದಿಕೊಳ್ಳುತ್ತಾರೆ ಅಲ್ವೇ.

ಇನ್ನು ಪ್ರಮುಖವಾಗಿ ಒಬ್ಬರನ್ನು ಹೊಗಳುವುದರ ಅರ್ಥ ಇನ್ನೊಬ್ಬರು ಹೊಗಳಿಕೆ ಅರ್ಹ ಇಲ್ಲ ಅಂತ ಅರ್ಥ ಅಲ್ಲ ಎನ್ನುವುದನ್ನು ಅವರಿಕೆ ಬಾಲ್ಯದಲ್ಲಿಯೇ ಮನವರಿಕೆ ಮಾಡಿಕೊಡಬೇಕು. ಹೊಗಳಿಕೆಗೆ ಬೇಸರ ಮಾಡಿಕೊಳ್ಳದೆ ಚಿಂತನೆಯನ್ನು ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಲು ಅವರನ್ನು ಪ್ರೇರೇಪಿಸಬೇಕು. ಅಂದ್ರೆ ಅವನನ್ನು ಹೊಗಳಿದ್ದಾರೆ. ಆ ಹೊಗಳಿಕೆಗೆ ನಾನು ಕೂಡ ಅರ್ಹನಾಗಲು ಪ್ರಯತ್ನ ಮಾಡಬೇಕು. ನನ್ನಲ್ಲಿ ಯಾವ ಕೊರತೆ ಇದೆ ಅದನ್ನು ಸರಿಮಾಡಿಕೊಳ್ಳಲು ನಾನು ಪ್ರಯತ್ನ ಪಡಬೇಕು ಎನ್ನುವ ವಿಚಾರ ಮಕ್ಕಳ ಮನದಲ್ಲಿ ಬೆಳೆಯಲು ಮೊದಲು ನಾವು ಪ್ರೇರೇಪಿಸಬೇಕು. ಇನ್ನು ಬಾಲ್ಯದಲ್ಲಿ ಇನ್ನೊಬ್ಬರನ್ನು ಹೊಗಳುವ , ಒಪ್ಪಿಕೊಳ್ಳುವ ಗುಣವನ್ನು ಮಕ್ಕಳಲ್ಲಿ ಬೆಳೆಸಿದ್ದೆ ಆದಲ್ಲಿ ಮುಂದೆ ಜೀವನದ ಪ್ರತಿ ಕ್ಷಣಗಳಲ್ಲೂ ಎದುರಿಸುವಾಗ ಇದು ಕೆಲಸಕ್ಕೆ ಬರುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ.

 

ಪ್ರಕಾಶ್ /ಮಲೆಬೆಟ್ಟು

1 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.