ಶುಭ ಬೆಳಗು ಮತ್ತು ಕಾಫಿ!

ಶುಭ ಬೆಳಗು ಮತ್ತು ಕಾಫಿ!

Originally published in kn
Reactions 1
385
PAKASH DSOUZA
PAKASH DSOUZA 18 Aug, 2021 | 1 min read

ಕಾಫಿ ತೋಟ ಮತ್ತು ಮನಸು!

ಸುತ್ತ ಮುತ್ತ ಎತ್ತ ಕಣ್ಣಾಡಿಸಿದರು ಕಾಫಿ ತೋಟ. ತೋಟದ ನಡುವೆ ಒಂದು ಹಳೆಯ ಕಾಲದ ಸುಂದರ ಮನೆ. ಕೂಗಳತೆಯ ದೂರದಲ್ಲಿ ಬೇರಾವ ಮನೆಯೂ ಇಲ್ಲ. ಆದರೆ ಮನೆಯ ಹೊರಗೆ ನಿಂತು ಸುತ್ತಲೂ ಒಮ್ಮೆ ನೋಡಿದರೆ ಮನಸಿನ ಒತ್ತಡವೆಲ್ಲ ಮಾಯವಾಗಿ ಒಂದು ಆಹ್ಲಾದಕರವಾದ ಮನಸ್ಥಿತಿಗೆ ನೀವು ತಲುಪಿಬಿಡುತ್ತಿರಿ. ಆಹಾ ಎಂಥ ಸುಂದರವಾದ ವಾತಾವರಣ. ಕಾಫಿ ತೋಟ, ಅದರೊಳಗೆ ಬಗೆ ಬಗೆಯ ವೃಕ್ಷಗಳು, ಅದರ ಮೇಲೆ ಕುಳಿತಿರುವ ವಿವಿಧ ಬಗೆಯ ಹಕ್ಕಿಗಳು, ಹತ್ತಿರದಲ್ಲಿ ನೀರಿನ ಹರಿವಿನ ಜುಳು ಜುಳು ಶಬ್ದ. ದೊಡ್ಡ ಮರದ ಮೇಲೆ ಜೇನು ನೊಣಗಳ ನೂರಾರು ಗೂಡುಗಳು, ಮನೆಯ ಮುಂದಿನ ಸುಂದರ ಹೂದೋಟ. ಅದರಲ್ಲಿ ಬಗೆ ಬಗೆಯ ಹೂಗಳು, ಕಾಫಿ ಹೂವಿನ ಸುವಾಸನೆ, ಬೆಳ್ಳಂಬೆಳಗಿನ ಚಳಿ, ಮನೆಯ ಎದುರು ಒಂದು ಕುರ್ಚಿ ಹಾಕಿ, ಕೈಯಲ್ಲಿ ಬೆಚ್ಚನೆ ಹಬೆಯಾಡುವ ಕಾಪಿಯ ಲೋಟ ಹಿಡಿದು ಕುಳಿತರೆ, ಸ್ವರ್ಗ ಧರೆಗಿಳಿದು ಬಂದ ಅನುಭವ. ಮನಸಿನ ದುಗುಡ, ದುಮ್ಮಾನಗಳೆಲ್ಲ ಮರೆತು ಹೋಗಿ ಬಿಡುತ್ತದೆ. ಅನುಭವಿಸಿದವರಿಗೆ ಗೊತ್ತು ಅದರ ಸವಿ!

ಕಾಫಿ ಮತ್ತು ಶುಭೋದಯ

ಕಾಫಿಗೆ ಇರುವ ಶಕ್ತಿ ಒಂದು ಶುಭೋದಯಕ್ಕೂ ಕೂಡ ಇದೆ. ಹೇಗೆ ಅಂತ ನೀವು ತಲೆಕೆಡಿಸಿಕೊಳ್ಳುವ ಮೊದಲು ಹೇಳ್ತೇನೆ ಕೇಳಿ. ಬೆಳಗಿನ ಮನಸು ಆ ಕಾಫಿ ತೋಟದಂತೆ ಪ್ರಶಾಂತವಾಗಿರುತ್ತದೆ. ಮುಂಜಾನೆ ನಮ್ಮ ಮನಸು ಯಾವುದೇ ಕಲ್ಮಶವಿಲ್ಲದೆ, ಒಂದು ಪ್ರಶಾಂತವಾದ ನಿದ್ರೆ ಮುಗಿಸಿ ಆಗ ತಾನೇ ಎಚ್ಚರಗೊಳ್ಳುತ್ತಿರುತ್ತದೆ. ಕಣ್ಣು ಮುಚ್ಚಿ ಒಮ್ಮೆ ದೇವರ ಧ್ಯಾನ ಮಾಡಿ, ನಂತರ ನೀವು ಅತಿಯಾಗಿ ಇಷ್ಟಪಡುವವರು ಯಾರು ಅಂತ ಒಂದು ನಿಮಿಷ ಯೋಚನೆ ಮಾಡಿ. ಆಗ ಯಾರು ನಿಮ್ಮ ಮನಸಿಗೆ ಬರುತ್ತಾರೋ ಅವರನ್ನು ಪ್ರಪಂಚದಲ್ಲಿ ಅತಿಯಾಗಿ ಪ್ರೀತಿಸುವವರು ಯಾರಾದ್ರೂ ಇದ್ರೆ ಅದು ನೀವು ಮಾತ್ರ. ಅವರು ನಿಮ್ಮ ಅಪ್ಪ ಅಮ್ಮ ಆಗಿರಬಹುದು. ಇಲ್ಲ ಅಕ್ಕ ಅಣ್ಣ ತಮ್ಮ ತಂಗಿಯಾಗಿರಬಹುದು.ಪತಿ, ಪತ್ನಿ ಇರಬಹುದು, ಗೆಳೆಯ ಗೆಳತೀ, ಅದು ಯಾರೇ ಆಗಿರಬಹುದು, ದಿನ ಬೆಳಿಗ್ಗೆ ಒಂದು ಕರೆ ಅಥವಾ ಶುಭ ಹಾರೈಕೆಯ ಸಂದೇಶವನ್ನು ಕಳುಹಿಸಿ ನೋಡಿ. ಖಂಡಿತವಾಗಲೂ ಅದು ಅವರ ಪ್ರಶಾಂತವಾದ ಮನಸಿಗೆ ಮುದ ನೀಡುವ ಕಾಫಿ ಯಾಗಿರುತ್ತದೆ. ಹಾಗೆ ನಿಮಗೆ ಕೂಡ ಖಂಡಿತವಾಗಲೂ ಕಾಫಿ ಕುಡಿದ ಅನುಭವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ದೂರದಲ್ಲಿರುವ ಪಾಲಕರಿಗೆ ತನ್ನ ಮಗ, ಮಗಳು ಬೆಳಿಗ್ಗೆ ಕರೆ ಮಾಡಿ ಅಥವಾ ಸಂದೇಶ ಕಳುಹಿಸಿ ಶುಭ ಹಾರೈಸಿದಾಗ ಅದೆಂಥ ನೆಮ್ಮದಿ. ಮಗ ಅಥವಾ ಮಗಳು ಆರಾಮಾಗಿದ್ದಾರೆ ಎಂದು ಅವರಿಗೆ ಸಮಾಧಾನ ಹಾಗೆ ತಮ್ಮನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವ ಸಂತೋಷ. ನೀವು ಮುಂಜಾನೆಯ ಪ್ರಥಮ ನಿಮಿಷದಲ್ಲಿ ಅವರನ್ನು ನೆನಪು ಮಾಡಿಕೊಂಡ್ದಿದೀರಿ ಎನ್ನುವ ವಿಚಾರ ಅವರಿಗೆ ನೆಮ್ಮದಿ ತರುವುದು ಮಾತ್ರವಲ್ಲ ಇಡೀ ದಿನವನ್ನು ಉಲ್ಲಾಸದಾಯಕವಾಗಿ ಕಳೆಯುವಂತೆ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯ ವಿಲ್ಲ.

ಶುಭೋದಯ ಒಂದು ಶಕ್ತಿ!

ಎಷ್ಟೋ ಬರಿ ನಮ್ಮ ಮನೆಯಲ್ಲೇ ನಾವು ಯಾಂತ್ರಿಕ ಜೀವನ ನಡೆಸುತಿರುತ್ತೆವೆ. ಶುಭೋದಯ ಹೇಳೋದು ಇರಲಿ ಬೆಳೆಗೆದ್ದು ಒಂದು ಮುಗುಳುನಗೆ ಕೂಡ ನಾವು ಬಿರೋದಿಲ್ಲ . ಇದು ಬೆಳಗಿನ ಕಾಫಿ ಇಲ್ಲದ ಬದುಕಿನಂತೆ ನೀರಸ ಜೀವನ. ನಾಲ್ಕು ದಿನದ ಜೀವನದಲ್ಲಿ ಒಂದು ಮುಗುಳ್ನಗೆ ಕೂಡ ಬೀರಲು ನಮ್ಮಿಂದ ಸಾಧ್ಯವಿಲ್ಲದಿದ್ದ್ರೆ ಇದೆಂಥ ಜೀವನ ಅಲ್ವೇ! ಶುಭೋದಯಕ್ಕೆ ಇರುವ ಶಕ್ತಿ ಅಗಾಧವಾದದ್ದು. ಯಾರ ಮೇಲೆಯಾದ್ರೂ ತುಂಬಾ ಕೋಪವಿದ್ದು ಆಮೇಲೆ ಸಿಟ್ಟು ಕಡಿಮೆಯಾದರೂ ಮಾತನಾಡಲು ಮುಜುಗರ ಅನುಭವಿಸುತ್ತಿದ್ದಿರಾದ್ರೆ, ಬೆಳಿಗ್ಗೆ ಒಂದು ಶುಭೋದಯ ಕಳುಹಿಸಿ, ಕಾಫಿ ಒಟ್ಟಿಗೆ ಕುಡಿಯುವ ಅಂತ ಹೇಳಿ, ಎಲ್ಲ ಕೋಪ ಮರೆತು ಅವರು ನಿಮಗೆ ತಿರುಗಿ ಶುಭಹಾರೈಸದಿದ್ದರೆ ಕೇಳಿ! ಹಾಗೆ ಗಂಡ ಹೆಂಡತಿ, ಹಿಂದಿನ ದಿನ ಕೋಪ ಮಾಡಿ ಮಲಗಿದ್ರು ಬೆಳಿಗ್ಗೆ ಯಾರಾದ್ರೂ ಒಬ್ಬರು ಕಾಫಿ ಮಾಡಿಕೊಂಡು ಬಂದು ಇನ್ನೊಬ್ಬರನ್ನು ಎಬ್ಬಿಸಿ ಶುಭ ಬೆಳಗು ಹೇಳಿ ಕಾಫಿ ಕೈಯಲಿ ಇಟ್ಟ್ರೆ ಕೋಪವೆಲ್ಲ ಮಂಗಮಾಯ. ಸುಮ್ನೆ ಮೊಬೈಲ್ ನಲ್ಲಿ ಬೇಡದ ಸಂದೇಶಗಳು ತುಂಬಿ ಬಿಡುತ್ತೆ. ಯಾರಿಗೆ ಬೇಕು ಈ ಬೆಳಗಿನ ಶುಭೋದಯ ಸಂದೇಶಗಳು ಅಂದ್ಕೋಬೇಡಿ. ಸಂದೇಶಗಳನ್ನು ಅಳಿಸಿ ಬಿಡಬಹುದು. ಆದರೆ ಆ ಒಂದು ಸಂದೇಶ ನಿಮ್ಮಲಿ ಬೆಳೆಸುವ ಆಪ್ಯಾಯಮಾನತೆ ಇದೆ ಅಲ್ವ ಅದು ತುಂಬಾ ಮುಖ್ಯ .ಸಂಬಂಧಗಳು ಗಟ್ಟಿಯಾಗಲು ಸಣ್ಣ ಸಣ್ಣ ವಿಚಾರಗಳು ಕಾರಣವಾಗುತ್ತೆ. ಅದು ಪ್ರಾರಂಭವಾಗುತ್ತೆ ಬೆಳಗಿನ ಶುಭಾಶಯ ವಿನಿಮಯದಿಂದ. ಶುಭ ಹಾರೈಸಲು ಪರಿಚಯವಿರಬೇಕೇಂದು ಏನು ಇಲ್ಲ. ಎದುರಿಗೆ ಸಿಕ್ಕ ವ್ಯಕ್ತಿಗೆ ಶುಭ ಹಾರೈಸಿದ್ರು ಸಾಕು ಒಂದು ಹೊಸ ಗೆಳೆತನ ಸುರುವಾಗಿಬಿಡುತ್ತೆ. ಒಟ್ಟಿನಲ್ಲಿ ಮುಖ ಗಂಟಿಕ್ಕಿಕೊಂಡು ಓಡಾಡುವುದಕ್ಕಿಂತ ಒಂದು ಮುಗುಳುನಗೆ, ಒಂದು ಶುಭಾಶಯ ವಿನಿಮಯದಿಂದ ಖಂಡಿತವಾಗಲೂ ಲಾಭವೇ ಹೊರತು ನಷ್ಟವಂತೂ ಖಂಡಿತ ಇಲ್ಲ.

 ಪ್ರಕಾಶ್ ಮಲೆಬೆಟ್ಟು 

1 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.