ಭಾರತ ಇನ್ನೇನು ಕೊರೋನಾ ಗೆದ್ದು ವಿಶ್ವನಾಯಕನಾಗೇಬಿಟ್ಟಿತು ಎಂದು ಮೈ ಮರೆತು ಬಿಟ್ಟದ್ದೇ ತುಂಬಾ ದುಬಾರಿಯಾಗಿಬಿಟ್ಟಿತು. ಒಮ್ಮೆಲೇ ಕೊರೋನಾವನ್ನು ನಿರ್ವಹಿಸುವಲ್ಲಿ ಎಡವಿ ಬಿಟ್ಟಿತು ನಮ್ಮ ದೇಶ. ಯಾಕೀಗೆ ಎಲ್ಲಿ ನಾವು ತಪ್ಪು ಮಾಡಿದ್ವಿ? ನಮ್ಮ ಅತಿಯಾದ ಆತ್ಮವಿಶ್ವಾಸವೇ ನಮಗೆ ಮುಳುವಾಗಿ ಬಿಟ್ಟಿತಾ? ಕರೋನಾದ ಎರಡನೇ ಆಲೆ, ಅನಿರೀಕ್ಷಿತವಾಗಿ ಬಂದು ಅಪ್ಪಳಿಸಿದ್ದು ಖಂಡಿತ ಅಲ್ಲ. ನೀವು ಪ್ರಪಂಚದ ಆಗು ಹೋಗುಗಳ ಬಗ್ಗೆ ಪ್ರತಿನಿತ್ಯ ಗಮನ ಹರಿಸುವರಾದ್ರೆ, ಕೇವಲ ಸುಳ್ಳನ್ನೇ ವಿಜ್ಜೃಂಬಿಸುವ ಮಾಧ್ಯಮಗಳನ್ನು ನಂಬದೆ ಇತರ ಮೂಲಗಳಿಂದ ಮಾಹಿತಿ ಕಲೆ ಹಾಕುವರಾಗಿದ್ದರೆ, ಖಂಡಿತ ನಿಮಗೆ ಗೊತ್ತಿರುತ್ತೆ, ಕೊರೋನಾ ಸುಲಭವಾಗಿ ಮನುಕುಲವನ್ನು ಬಿಟ್ಟು ಹೋಗೋದಿಲ್ಲ ಅಂತ. ಸಲ್ಪ ಕಡಿಮೆಯಾದ್ರೂ ಅದು ಬೂದಿ ಮುಚ್ಚಿದ ಕೆಂಡದಂತೆ, ಒಮ್ಮೆಲೇ ದಿಗ್ಗನೆ ಹೊತ್ತಿ ಹುರಿದು ಆಹುತಿ ತೆಗೆದುಕೊಳ್ಳುತ್ತದೆ. ನಮ್ಮಲ್ಲಿ ಮತ್ತೊಂದು ಭ್ರಮೆ ಇದೆ , ಲಸಿಕೆ ಹಾಕಿಸಿಕೊಂಡು ಬಿಟ್ಟರೆ ಕೊರೋನಾ ಬರಲ್ಲ ಅಂತ. ತಪ್ಪು ಸ್ವಾಮಿ ಪ್ರಪಂಚದಲ್ಲಿ ಕೊರೋನಾ ಗುಣಪಡಿಸುವ ಮತ್ತು 100% ಬರದಂತೆ ತಡೆಯುವ, ಲಸಿಕೆ ತಯಾರಾಗಿಲ್ಲ. ಈಗಿರುವ ಲಸಿಕೆಗಳು ಕೊರೋನಾ ನಮ್ಮ ಮೇಲೆ ಉಂಟುಮಾಡುವ ಪರಿಣಾಮವನ್ನು ತಗ್ಗಿಸಬಹುದೇ ವಿನಾ ಕರೋನಾ ನಮಗೆ ತಗುಲದಂತೆ ಖಂಡಿತ ಕಾಪಾಡಲ್ಲ. ಆದರೆ ಪ್ರಾಣಹಾನಿ ಆಗುವುದನ್ನು ತಪ್ಪಿಸಲು ಲಸಿಕೆ ನಾವು ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕು. ಯಾಕೆಂದ್ರೆ ಲಸಿಕೆಯು ದೇಹದ ಪ್ರತಿ ರಕ್ಷೆ ಸಾಮರ್ಥ್ಯವನ್ನು ಹೆಚ್ಚಿಸುತ್ತೆ.
ಈ ಕರೋನಾ ಸದ್ಯದ ಮಟ್ಟಿಗೆ ಮನುಕುಲ ತನ್ನ ಜೀವನ ಶೈಲಿಯನ್ನು ಬದಲಾಯಿಸುವಂತೆ ಮಾಡಿರುವುದು ಸುಳ್ಳಲ್ಲ. ಈ ಹೊಸ ಜೀವನ ಶೈಲಿ ಮುಂದೆ ಶಾಶ್ವತವಾದ್ರೂ ಅಚ್ಚರಿಯಿಲ್ಲ. ಇನ್ನು ಸಮಯ ಕಳೆದಂತೆ ಹೊಸ ರೂಪ ತಾಳುವ ಈ ರೂಪಾಂತರಿ ಕರೋನಾ ಮುಂದೆ ಮಾನವನ ಮೇಲೆ ಉಂಟು ಮಾಡುವ ಪರಿಣಾಮಗಳ ಬಗ್ಗೆ ಊಹೆ ಮಾಡಲು ಕೂಡ ಸಾಧ್ಯವಿಲ್ಲ. ನಿಜ ಬಹುತೇಕರು ಗುಣಮುಖರಾಗುತ್ತಾರೆ ಆದರೆ ಏನಾದರೂ ಅಡ್ಡ ಪರಿಣಾಮ ಇದ್ದೆ ಇರುತ್ತೆ. ಇದು ಕೊರೊನಕ್ಕೆ ತುತ್ತಾಗಿ ಪಾರಾಗಿ ಬಂದವರ ಮಾತು. ಬಹುಶ್ಯ ತುಂಬಾ ಸಮಯ ಬೇಕು ಎಲ್ಲ ಮೊದಲಿನಂತೆ ಆಗಲು.
ನಮ್ಮಲ್ಲಿ ಕರೋನಾ ಹೆಚ್ಚಾಗಲು ಕಾರಣಗಳು ಅನೇಕ. ಪ್ರಮುಖವಾಗಿ ದೂರದ್ರಷ್ಟಿಯಿಲ್ಲದ ನಾಯಕತ್ವ! ರಾಜಕಾರಣಿಗಳು ತಮ್ಮ ಹಿತ ಸಾಧನೆಗೆ ಮುಂದಾದರೆ ವಿನಾ ಕರೋನಾ ಎರಡನೇ ಆಲೆ ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳದೆ ಎಡವಿದರು. ತಜ್ಞರ ಎಚ್ಚರಿಕೆಯನ್ನು ಕಡೆಗಣಿಸಿದ್ದು ವಿನಾಶ ಕಲೆ ವಿಪರೀತ ಬುದ್ದಿ ಎನಿಸಿಬಿಟ್ಟಿತು. ಎರಡೆನೆಯದಾಗಿ ಜನರಲ್ಲಿ ಅರಿವಿನ, ತಿಳುವಳಿಕೆಯ ಕೊರತೆ. ಅವರಿಗೆ ಅರಿವು ಮೂಡಿಸುವ ಕಾರ್ಯ ಸಮರ್ಪಕವಾಗಿ ನಡೆಯಲೇ ಇಲ್ಲ. ಮೂರನೆಯದಾಗಿ ಜನರ ಮೂರ್ಖತನ. ಅತಿಯಾದ ಆತ್ಮವಿಶ್ವಾಸ , ಅಸಡ್ಡೆ ಇವತ್ತಿನ ಈ ಸ್ಥಿತಿಗೆ ಕಾರಣ. ಸದ್ಯದ ಮಟ್ಟಿಗೆ ಕರೋನಾ ತಾನು ಮಾನವನಿಗಿಂತ ಶಕ್ತಿ ಶಾಲಿ ಎಂದು ಸಾಬೀತು ಪಡಿಸಿದೆ. ಹಾಗಾಗಿ ಯಾವುದೇ ಸರ್ಕಾರದಿಂದ ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ.
ಕರೋನಾ ನಿಯಂತ್ರಣ ಹೇಗೆ ಸದ್ಯ ?
ಒಬ್ಬ ನಾಗರಿಕನಾಗಿ ನನ್ನ ಸಲಹೆ ಏನಂದ್ರೆ , ಸರ್ಕಾರ ಕರೋನಾ ಬಂದ ಮೇಲೆ ಏನು ಮಾಡಬೇಕು ಅದಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅನೇಕರು ಕರೋನಾ ವಾರಿಯರ್ಸ್ ಗಳಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಶ್ರಮಿಸುತ್ತಿದ್ದಾರೆ. ಆದರೆ ಇಲ್ಲಿ ಏಕೀಕೃತವಾದ ನಿರ್ಧಾರವನ್ನು ಇಡೀ ದೇಶದ ಮೇಲೆ ಇಲ್ಲ ರಾಜ್ಯದ ಮೇಲೆ ಹೊರೆಸಿದರೆ ನಾಯ ಪೈಸೆಯ ಪ್ರಯೋಜನ ಇಲ್ಲ. ನಮಗಿಲ್ಲಿ ಬೇಕಾಗಿರುವುದು ಕರೋನಾ ಬರುವ ಮೊದಲೇ ಅದನ್ನು ತಡೆ ಗಟ್ಟುವ ಸ್ವಯಂ ಸೇವಕ ಯೋಧರು. ಹೇಗೆ ಅಂತ ಹೇಳುತೇನೆ ಕೇಳಿ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಲಿನ ಶಾಸಕರ ನೇತೃತ್ವದಲ್ಲಿ ಒಂದು ತಂಡ ಕಟ್ಟಬೇಕು. ಆ ತಂಡದಲ್ಲಿ ಆಯಾ ಊರಿನ ಪ್ರಮುಖರು (ಯಾರ ಮಾತಿಗೆ ಜನ ಬೆಲೆ ಕೊಡುತ್ತಾರೆ ಅಂತವರು) ಸದಸ್ಯರಾಗಬೇಕು. ಉದಾಹರಣೆಗೆ ಆ ಕ್ಷೇತ್ರದ ಉನ್ನತ ಪೊಲೀಸ್ ಅಧಿಕಾರಿ, ವೈದ್ಯರು , ನ್ಯಾಯಾಧೀಶರು, ಊರಿನ ಗೌರವಾನ್ವಿತ ಗಣ್ಯ ವ್ಯಕ್ತಿಗಳು ಹೀಗೆ. ಆಮೇಲೆ ಇವರ ಕೆಳಗೆ ಸ್ವಯಂ ಸೇವಕರ ಒಂದು ದೊಡ್ಡ ತಂಡ ಬೇಕು. ಪ್ರತಿಯೊಬ್ಬ ಸ್ವಯಂ ಸೇವಕನು ದಿನದಲ್ಲಿ ಒಂದು ಗಂಟೆಯನ್ನು ಕರೋನಾ ಗೆಲ್ಲುವ ತಂಡಕ್ಕಾಗಿ ಮೀಸಲಿಡಬೇಕು.
ಮೊದಲಿಗೆ ಮಾಸ್ಕ್ ಹೇಗೆ ಧರಿಸಬೇಕು, ಸಾಮಾಜಿಕ ಅಂತರ ಹೇಗೆ ಕಾಪಾಡಬೇಕು, ಹೇಗೆ ಕೈ ತೊಳೆಯಬೇಕು, ಹೀಗೆ ಕರೋನಾ ತಡೆಗಟ್ಟುವಲ್ಲಿ ಬೇಕಾಗುವ ಎಲ್ಲ ಮೂಲಭೂತ ತಿಳುವಳಿಕೆಯನ್ನು ತರಬೇತಿಯ ಮೂಲಕ ಸ್ವಯಂ ಸೇವಕರಿಗೆ ಕೊಡಬೇಕು. ತರಬೇತಿ ವಾಟ್ಸಪ್ಪ್ , ಫೇಸ್ಬುಕ್ ವಿಡಿಯೋಗಳ ಮೂಲಕ ನಡೆಯಬೇಕು. ಆಮೇಲೆ ಆ ಸ್ವಯಂ ಸೇವಕರ ತಂಡ ಮನೆ ಮನೆಗೂ ಭೇಟಿ ಕೊಟ್ಟು ,ಹಾಗೆ ಪೇಟೆಯಲ್ಲಿ ಬರುವ ಪ್ರತಿಯೊಬ್ಬ ಜನರಿಗೆ ಕೊರೋನಾ ಸುರಕ್ಷತೆಯ ಬಗ್ಗೆ ಅರಿವನ್ನು ಮೂಡಿಸಬೇಕು. ಕೊರೊನನ ಕೆಟ್ಟ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಬೇಕು. ಹಾಗೆ ಅವರು ಖಾತರಿ ಪಡಿಸಿಕೊಳಬೇಕು ಎಲ್ಲರೂ ಶಿಸ್ತನ್ನು ಸರಿಯಾಗಿ ಪಾಲಿಸುತಿದ್ದರೆ ಎನ್ನುವುದನ್ನು. ಪ್ರತಿಯೊಬ್ಬ ಸ್ವಯಂ ಸೇವಕ ದಿನದಲ್ಲಿ ಒಂದು ಗಂಟೆ ಮೀಸಲಿಟ್ಟರೆ ಧಾರಾಳ ಸಾಕು. ಆದರೆ ಪ್ರತಿ ಗಂಟೆಯಲ್ಲೂ ಪೇಟೆಯ ಮೂಲೆ ಮೂಲೆ ಯಲ್ಲೂ ಸ್ವಯಂ ಸೇವಕರು ಇರುವ ಒಂದು ದೊಡ್ಡ ತಂಡದ ಅಗತ್ಯ ಇಲ್ಲಿದೆ. ಜನರಲ್ಲಿ ತಿಳುವಳಿಕೆ , ಅರಿವು ಹೆಚ್ಚಾದಂತೆ ಕರೋನಾ ನಮ್ಮಿಂದ ದೂರ ಸರಿಯಲಾರಂಭಿಸುತ್ತೆ. ಇವೆಲ್ಲದರ ಮೇಲುಸ್ತುವಾರಿಯನ್ನು ಶಾಸಕರ ನೇತೃತ್ವದ ತಂಡ ವಹಿಸಿಕೊಳ್ಳಬೇಕು. ಹಾಗು ಸರಕಾರ ಕರೋನಾ ನಿಯಂತ್ರಿಸುವಲ್ಲಿ ಆ ಕ್ಷೇತ್ರಕ್ಕೆ ಸೀಮಿತವಾಗಿ ಯಾವುದೇ ನಿರ್ಧಾರ ಕೈ ಗೊಳ್ಳಲು ಆ ಶಾಸಕರಿಗೆ ಅಧಿಕಾರ ಕೊಡಬೇಕು.
ಆಯಾ ಕ್ಷೇತ್ರದ ಗಣ್ಯ ವ್ಯಕ್ತಿಗಳು ಆ ಕ್ಷೇತ್ರದಲ್ಲಿರುವ ಕೇಬಲ್ ಜಾಲಗಳ ಮೂಲಕ, ಸಾಮಾಜಿಕ ಮಾಧ್ಯಮಗಳಾದ ವ್ಹಾಟ್ಸಪ್ಪ್ , ಫೇಸ್ಬುಕ್ ಮೂಲಕ ತಮ್ಮ ಸಂದೇಶಗಳನ್ನು ವಿಡಿಯೋದ ಮೂಲಕ ಹರಿಯ ಬಿಟ್ಟು , ಮಾಸ್ಕ್ ಆರಿಸುವ ಬಗ್ಗೆ , ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಬೇಕು. ಖಂಡಿತವಾಗಿ ಜನ ಅವರ ಮಾತು ಕೇಳುತ್ತಾರೆ. ಅಷ್ಟೇ ಅಲ್ಲ ಊರಿನ ಗಣ್ಯವ್ಯಕ್ತಿಗಳು ಪ್ರತಿ ನಿಮಿಷ ಕೂಡ ಕೊರೋನಾ ಸುರಕ್ಷಾ ನಿಯಮಗಳನ್ನು ಪಾಲಿಸುವ ಮೂಲಕ ಇತರರಿಗೆ ಮಾದರಿ ಆಗಬೇಕು.
ಸ್ವಯಂ ಸೇವಕರ ಮತ್ತೊಂದು ತಂಡ ಪ್ರತಿ ಊರಿನಲ್ಲೂ ಸರಕಾರದ ಸಹಾಯದಿಂದ ಲಸಿಕಾ ಶಿಬಿರ ನಡೆಸಿ ಲಸಿಕೆ ಹಾಕಿಸಿಕೊಳ್ಳುವಂತೆ ಜನರ ಮನವೊಲಿಸಬೇಕು. ತಾಲೂಕು ಕೇಂದ್ರಕ್ಕೆ ಜನ ಬರುವುದಕ್ಕಿಂತ ಹೆಚ್ಚಾಗಿ ಪ್ರತಿ ಹಳ್ಳಿ ಹಳ್ಳಿಯಲ್ಲೂ ಲಸಿಕಾ ಶಿಬಿರ ನಡೆಸಬೇಕು. ಲಸಿಕೆ ಮುಕ್ತವಾಗಿ ಸಿಗದಿದ್ದರೆ ಪರವಾಗಿಲ್ಲ, ಚಂದ ಎತ್ತಿ ಆದ್ರೂ ಸರಿ, ಆಯಾ ಊರಿನ ಪ್ರತಿಯೊಬ್ಬ ವ್ಯಕ್ತಿಯು ಲಸಿಕೆ ತೆಗೆದುಕೊಳ್ಳುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಪ್ರತಿ ಬಸ್ಸಿನಲ್ಲಿ , ರಿಕ್ಷಾಗಳಲ್ಲಿ , ಸಾರ್ವಜನಿಕ ವಾಹನಗಳಲ್ಲಿ ಸ್ಯಾನಿಟೈಸರ್ ಕಡ್ಡಾಯವಾಗಿ ಇರಲೇ ಬೇಕು. ಬಸ್ಸು ಹತ್ತಿ ಕುಳಿತುಕೊಳ್ಳುವ ಮೊದಲು ಸ್ಯಾನಿಟೈಸೇರಿನಿಂದ ಕೈ ಸ್ವಚ್ಛ ಗೊಳಿಸಬೇಕು. ಪ್ರತಿ ಅಂಗಡಿಯವರು ಸಾರ್ವಜನಿಕ ಉಪಯೋಗಕ್ಕಾಗಿ ಸ್ಯಾನಿಟೈಸರ್ ಮಾಡಾಗಲೇಬೇಕು. ಬಸ್ಸಿನಲ್ಲಿ ಇಬ್ಬರು ಕುಳಿತುಕೊಳ್ಳುವ ಸೀಟಿನಲ್ಲಿ ಒಬ್ಬರು ಮತ್ತು ಮೂರೂ ಜನ ಕುಳಿತುಕೊಳ್ಳುವ ಸೀಟಿನಲ್ಲೂ ಇಬ್ಬರು ಕುಳಿತುಕೊಳ್ಳುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರ ಮನಸಿನಲ್ಲೂ ನಮ್ಮ ಊರನ್ನು ಕೊರೋನಾ ಮುಕ್ತ ಮಾಡುತೇವೆ ಎನ್ನುವ ಹಠ ಛಲವನ್ನು ಮೂಡಿಸಬೇಕು ಸ್ವಯಂ ಸೇವಕರು. ಶಾಲಾ ಆರಂಭವಾದ್ರೆ ಸರಕಾರಿ ಹಾಗು ಖಾಸಗಿ ಬಸ್ಸಿನಲ್ಲಿ ಓಡಾಡುವ ಮಕ್ಕಳಿಗಾಗಲಿ ವಿಶೇಷ ಸರಕಾರಿ ಮತ್ತು ಖಾಸಗಿ ಬಸ್ಸುಗಳನ್ನು ಓಡಿಸಬೇಕು. ಅದರಲ್ಲಿ ಬೇರೆಯವರಿಗೆ ಪ್ರಯಾಣಕ್ಕೆ ಅವಕಾಶ ನೀಡಬಾರದು. ಕೊರೋನಾದಲ್ಲಿ ಸತ್ತವರ ಸಂಸ್ಕಾರಕ್ಕೆ , ಆಸ್ಪತ್ರೆ ಸಾಗಿಸಲಿಕ್ಕೆ ತಂಡ ಕಟ್ಟುವುದರ ಬದಲು , ಕೊರೋನಾ ಹತ್ತಿರ ಸುಳಿಯದಂತೆ ಹೇಗೆ ಎಚ್ಚರವಹಿಸಬೇಕು ಎನ್ನುವ ಅರಿವನ್ನು ಮೂಡಿಸುವ ತಂಡ ಕಟ್ಟಿದ್ರೆ, ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಯುವ ಜನರು ವಾಟ್ಸಪ್ಪ್ ಸ್ಟೇಟಸ್ ನಲ್ಲಿ ರಾಜಕೀಯದ ಬಗ್ಗೆ ಹಾಕುವುದನ್ನು ಸಲ್ಪ ದಿನದ ಮಟ್ಟಿಗೆ ನಿಲ್ಲಿಸಿ ಅರಿವು ಮೂಡಿಸುವ ಸ್ಟೇಟಸ್ ಹಾಕಿದ್ರೆ , ಒಂದು ಪ್ರಾಣ ಉಳಿಸಿದ ಪುಣ್ಯ ಬರಬಹುದು. ಮೊನ್ನೆ ಭಾರತದ ಘನತೆವೆತ್ತ ಪ್ರಧಾನಮಂತ್ರಿಗಳು ಹೇಳಿದ ಮಾತನ್ನು ಎಲ್ಲರು ಕೇಳಿರ್ತೀರಿ. ಕೊರೋನಾ ಗ್ರಾಮೀಣ ಪ್ರದೇಶಕ್ಕೆ ಕಾಲಿಡದಂತೆ ಎಚ್ಚರವಹಿಸಬೇಕೆಂದು. ನಾನು ಕಳೆದ ವರುಷ ಕರೋನಾದ ಭೀಕರತೆಯ ಬಗ್ಗೆ ನನ್ನ ಲೇಖನಗಳ್ಲಲಿ ವಿವರಿಸಿದ್ದೆ. ನಮ್ಮ ಪ್ರಧಾನಿಗಳು ಹೇಳಿದ್ದು ಅಲಕ್ಷ್ಯ ಮಾಡುವ ಮಾತಲ್ಲ. ನಾವು ಈಗಾಗಲೇ ಎಚ್ಚರವಹಿಸದಿದ್ದ್ರೆ ಗ್ರಾಮೀಣ ಪ್ರದೇಶಕ್ಕೆ ಅಪಾಯ ತಪ್ಪಿದಲ್ಲ. ಕರೋನ ಗೆಲ್ಲಲು ಇಡೀ ರಾಜ್ಯಕ್ಕೆ ಲಾಕ್ ಡೌನ್ ಹೇರೋದು ಪರಿಹಾರವಲ್ಲ. ಲಾಕ್ ಡೌನ್ ಆಯಾ ಪ್ರದೇಶಕ್ಕೆ ಸೀಮಿತಗೊಳಿಸಿ, ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಆಯಾ ಪ್ರದೇಶಕ್ಕೆ ಯಾವುದು ಸೂಕ್ತವೋ ಅದನ್ನು ಮಾಡಲು ಅವಕಾಶ ಕೊಡಬೇಕು. ಅವರಿಗೆ “೦”ಕೊರೋನಾ ಲಕ್ಷ್ಯ ಕೊಟ್ಟು ಅದನ್ನು ಸಾದಿಸಲು ಸರ್ಕಾರ ಸೂಕ್ತ ಬೆಂಬಲ ಕೊಡಬೇಕು.
ಇನ್ನು ಜನ ಸಾಮಾನ್ಯರಿಗೆ ಒಂದೆರಡು ಸಲಹೆಗಳು. ಈ ಸಲಹೆಗಳನ್ನು ಪಾಲಿಸಿದ್ರೆ ಕೊರೋನಾ ಬರಲ್ಲ ಅಂತ ನಾನು ಹೇಳಲ್ಲ. ಆದರೆ ಬರದೇ ಇರುವ ಸಂಭನೀಯತೆ ಅಧಿಕ.
ಮೊದಲಿಗೆ ಕೈಯನ್ನು ಬಾಯಿ ಮತ್ತು ಮೂಗಿನ ಹತ್ತಿರ ಕೊಂಡೋಗುವುದನ್ನು ಸಾದ್ಯವಾದಾಷ್ಟು ತಪ್ಪಿಸಿ. ಮಾಸ್ಕ್,ಮೂಗು ಮತ್ತು ಬಾಯನ್ನು ಮುಚ್ಚುವಂತೆ ಸರಿಯಾಗಿ ಧರಿಸಿರಿ. ಅದರಿಂದ ನಿಮಗೆ ದಮ್ಮು ಗಟ್ಟುವುದಿಲ್ಲ. ಅದೊಂದು ಭ್ರಮೆ ಅಷ್ಟೇ. ಮನೆಯಲ್ಲಿ ದೊಡ್ಡಪತ್ರೆ /ಸಂಬರಬಳ್ಳಿ ಗಿಡ ಇದ್ರೆ , ಅದು ಮತ್ತು ತುಳಸಿ ದಳವನ್ನು ಕುಸಿಯುವ ನೀರಿನಲ್ಲಿ ಹಾಕಿ ವಾರಕ್ಕೆ ಎರಡು ಮೂರೂ ಬಾರಿ ಸ್ಟೀಮ್ ತೆಗೆದುಕೊಳ್ಳಿ. ಇದನ್ನು ನಾವು ಕಳೆದೊಂದು ವರುಷದಿಂದ ನಿರಂತರವಾಗಿ ಮಾಡುತಿದ್ದಿವೆ. ಅದನ್ನು ಮಾಡಲು ಶುರುಮಾಡಿದ ಮೇಲೆ ಶೀತ ನಮ್ಮ ಹತ್ತಿರ ಕೂಡ ಸುಳಿದಿಲ್ಲ. ಪದೇ ಪದೇ ಕೈ ತೊಳೆಯಿರಿ. ನೀರಿಲ್ಲದಿದ್ದರೆ ಸ್ಯಾನಿಟೈಸರ್ ಉಪಯೋಗಿಸಿ. ಸಾಧ್ಯವಾದಷ್ಟು ಪ್ರಯಾಣ ಕಡಿಮೆ ಮಾಡಿ. ಬನ್ನಿ ಎಲ್ಲರೂ ಜೊತೆಗೂಡಿ ಕೊರೋನಾವನ್ನು ಗೆಲ್ಲುವ.
ಪ್ರಕಾಶ್ /ಮಲೆಬೆಟ್ಟು
Comments
Appreciate the author by telling what you feel about the post 💓
Informative post
Howdhu sir, we need the spirit to fight together
Please Login or Create a free account to comment.