ಕರೆಗಂಟೆಯ ಶಬ್ದಕ್ಕೆ ಒಡನೆ ಎಚ್ಚರಗೊಂಡ ವಿನೋದ್ ಕಣ್ಣುಜ್ಜಿಕೊಳ್ಳುತ್ತ ಗಡಿಯಾರದತ್ತ ಕಣ್ಣು ಹಾಯಿಸುತ್ತಾನೆ . ಸಮಯ ಬೆಳಗಿನ 6 ಗಂಟೆ . ಯಾರಪ್ಪ ಇಷ್ಟು ಬೆಳಿಗ್ಗೆ ಮನೆ ಬಾಗಿಲಿಗೆ ಬಂದಿರೋದು ಎಂದು ಗೊಣಗಿಕೊಳ್ಳುತ್ತ ಪಕ್ಕದಲ್ಲೇ ಮಲಗಿದ್ದ ಸ್ನೇಹಿತ ವಿಜಯನನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಾನೆ . ಬೆಳಗಿನ ಸಿಹಿ ನಿದ್ರೆಯಲ್ಲಿ ಮುಳುಗಿಹೋಗಿದ್ದ ವಿಜಯ್ ಮುಸುಕು ಎಳೆದುಕೊಂಡು ಮಗ್ಗುಲು ಬದಲಾಯಿಸುತ್ತಾನೆಯೇ ವಿನಾ ಎಚ್ಚರಗೊಳ್ಳುವುದಿಲ್ಲ . ಗೊಣಗಿಕೊಂಡೆ ಎದ್ದ ವಿನೋದು ಬಾಗಿಲಿನ ಸಂದಿಯಿಂದ ಇಣುಕಿನೋಡುತಾನೆ, ಸ್ನೇಹ ನಿಂತಿದ್ದಾಳೆ . ಒಮ್ಮೆಲೇ ಗಾಬರಿಬಿದ್ದ ವಿನೋದ್ ಒಳಗೋಗಿ ವಿಜಯನನ್ನು ತಟ್ಟಿ ಎಬ್ಬಿಸುತ್ತಾನೆ . ಬೆಳಗಿನ ಸಿಹಿ ನಿದ್ರೆಯನ್ನು ಹಾಳುಮಾಡಿದ ವಿನೋದನನ್ನು ಬೈದುಕೊಂಡೆ ಎದ್ದ ವಿಜಯ ಏನಪ್ಪಾ ಸಮಾಚಾರ ಏನಾಯಿತು ಅಂತ ವಿನೋದನನ್ನು ವಿಚಾರಿಸುತ್ತಾನೆ . ಸ್ನೇಹ ಬಂದಿದಾಳೆ ಕಣೋ ಎಂದು ತಣ್ಣಗೆ ಹೇಳುತ್ತಾನೆ ವಿನೋದ್.ಪರಮ ಆಶರ್ಯಗೊಂಡ ವಿಜಯ್ ಹೋದೆನೋ ಪರವಾಗಿಲ್ವೇ ಕಳ್ಳ . ಎಲ್ಲಿದಳೋ ಎಂದು ವಿಚಾರಿಸುತ್ತಾನೆ . ಅಷ್ಟರಲ್ಲಿ ಮತೊಮ್ಮೆ ಕರೆಗಂಟೆ ಸದ್ದು ಮಾಡುತ್ತದೆ. ಗಾಬರಿಗೊಂಡ ವಿನೋದ್ ವಿಜಯನ ಬಳಿ ಹೇಳುತ್ತಾನೆ. ವಿಜಯ ದಯವಿಟ್ಟು ನನಗೊಂದು ಸಹಾಯಮಾಡು.ನಾನು ಊರಿನಲ್ಲಿ ಇಲ್ಲ ಎಂದು ಅವಳ ಬಳಿ ಹೇಳು . ಹಾಗೆ ಅವಳಿಗೆ ಒಂದು ಪತ್ರ ಬರೆದಿದ್ದೀನಿ. ದಯವಿಟ್ಟು ಅದನ್ನು ಕೊಟ್ಟು ಅವಳನ್ನು ಸಾಗಹಾಕು ಎಂದು ವಿನಂತಿಸಿಕೊಳ್ಳುತಾನೆ. ವಿನೋದನ ಮಾತು ಕೇಳಿದ ವಿಜಯ್ ಆಘಾತ ಗೊಳ್ಳುತ್ತಾನೆ. ಯಾರನ್ನು ಪ್ರತ್ಯಕ್ಷ ಕಾಣಬೇಕು ಎಂದು ತವಕಿಸುತ್ತಿದ್ದ ವಿನೋದ್ ಇಂದು ಅವಳೇ ಮನೆ ಬಾಗಿಲಿಗೆ ಬಂದು ನಿಂತಿರುವಾಗ ಅವಳನ್ನು ನೋಡದೆ , ಮಾತನಾಡಿಸದೆ ಹಾಗೆ ಯಾಕೆ ಸಾಗಹಾಕಲು ಬಯಸಿದ್ದಾನೆ ಏನು ವಿಜಯನಿಗೆ ಅರ್ಥವಾಗುವುದಿಲ್ಲ. ಆದರೂ ಸ್ನೇಹಿತನ ಮಾತಿಗೆ ಬೆಲೆಕೊಟ್ಟ ವಿಜಯ ಹೋಗಿ ಬಾಗಿಲು ತೆರೆಯುತ್ತಾನೆ. ಎದುರಿಗೆ ನೋಡಲು ಅಷ್ಟೇನು ಸುರಸಂದರಿಯಲ್ಲದ, ಸಾದಾರಣ ರೂಪಿನ ಹುಡುಗಿ , ದುಃಖ್ಖತಪ್ತಾ ಮುಖಭಾವದೊಂದಿಗೆ ಎದುರಿಗೆ ನಿಂತಿದ್ದಾಳೆ.ಅವಳೇ ಸ್ನೇಹ ಎಂದು ಗೆಳೆಯನಿಂದ ಗೊತ್ತಾದರೂ , ಏನು ಗೊತ್ತಿಲ್ಲದವರಂತೆ ಯಾರು ನೀವು, ಯಾರು ಬೇಕಿತ್ತು ಅಂತ ವಿಚಾರಿಸುತ್ತಾನೆ. ವಿನೋದ್ ಇಲ್ವಾ ಎಂದು ಆ ಯುವತಿ ಕೇಳುತ್ತಾಳೆ. ಅವನಿಲ್ಲ ಊರಿಗೆ ಹೋಗಿದ್ದಾನೆ ? ಯಾರು ನೀವು ಎಂದು ಮತೊಮ್ಮೆ ವಿಜಯ್ ವಿಚಾರಿಸುತ್ತಾನೆ.
ನನ್ನ ಹೆಸರು ಸ್ನೇಹ . ಮಂಗಳೂರಿನಿಂದ ಬಂದಿದ್ದೇನೆ. ವಿನೋದ್ ರವರನ್ನು ಅರ್ಜೆಂಟ್ ಆಗಿ ನೋಡಬೇಕಿತ್ತು ಅಂತ ಹೇಳುತ್ತಾಳೆ. ವಿನೋದ್ ಹಾಗು ಸ್ನೇಹಾಳ ಗೆಳೆತನದ ಅರಿವಿದ್ದರೂ ವಿಜಯ , ಯಾವ ಮುಖಭಾವವನ್ನು ತೋರ್ಪಡಿಸದೆ ವಿನೋದ್ ಬರೆದ ಪತ್ರ ಅವಳ ಕೈಗೆ ಕೊಡುತ್ತಾನೆ. ಪತ್ರ ಓದಿ ಕಣ್ಣೀರಾದ ಸ್ನೇಹ ವಿಜಯ ಎಷ್ಟು ಕರೆಯುತಿದ್ದರೂ ಕೇಳಿಸಿಕೊಳ್ಳದೆ ತನಗಾಗಿ ಕಾಯುತಿದ್ದ ಆಟೋವನ್ನು ಹತ್ತಿ ಹೊರಟು ಹೋಗುತ್ತಾಳೆ.
ವಿಜಯ ಹಾಗು ವಿನೋದ್ ಆತ್ಮೀಯ ಗೆಳೆಯರು. ಮಲೆನಾಡು ಅವರ ತವರೂರು. ಇಬ್ಬರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿ. ವಿಜಯ ಸಂಗೀತ ವಾದ್ಯಗಳನ್ನು ನುಡಿಸುವ ಅದ್ಬುತ ಪ್ರತಿಭೆಯ ಗಣಿ . ವಿನೋದ್ ಅದ್ಬುತ ಕಂಠದ ಗಾಯಕ . ಇಬ್ಬರು ಸ್ನೇಹಿತರು ಸಿನಿಮಾ ರಂಗದಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಲ್ಲಿ ಬೆಂಗಳೂರನ್ನು ಸೇರಿಕೊಳ್ಳುತ್ತಾರೆ. ಅಲ್ಲೇ ಒಂದು ಚಿಕ್ಕ ಕೋಣೆಯನ್ನು ಬಾಡಿಗೆಗೆ ಹಿಡಿದ ಸ್ನೇಹಿತರು ಅವಕಾಶಕ್ಕಾಗಿ ಅಲೆಯುತ್ತ ಹಾಗೆ ಸಣ್ಣ ಪುಟ್ಟ ಆರ್ಕೆಸ್ಟ್ರಾಗಳಲ್ಲಿ ಕೆಲಸ ಮಾಡುತ ಉತ್ತಮ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.
ಹೀಗಿರುವಾಗ ಒಮ್ಮೆ ಮಂಗಳೂರಿನಲ್ಲಿ ನಡೆಯುವ ಯಾವುದೊ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಅವರಿಗೆ ದೊರೆಯುತ್ತೆ. ತುಂಬಿದ ಸಭಾಂಗಣದಲ್ಲಿ ವಿನೋದ್ ಹಾಗು ವಿಜಯ್ ಸಭಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಅದೇ ಕಾರ್ಯಕ್ರಮದಲ್ಲಿ ಸ್ನೇಹ ಕೂಡ ಭಾಗಿಯಾಗಿರುತ್ತಾಳೆ. ಅವಳಿಗೆ ಕಲೆ ಸಂಗೀತದಲ್ಲಿ ತುಂಬಾ ಆಸಕ್ತಿ. ಬರವಣಿಗೆ ಅವಳ ಹವ್ಯಾಸ ಹಾಗು ಜೀವ. ಉತ್ತಮ ಕವಿ. ಅವಳು ಬರೆದ ಅನೇಕ ಕತೆ ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತೆ. ವಿನೋದನ ಕಂಠ ಸಿರಿಗೆ ಮಾರುಹೋದ ಅವಳು ಅವನಿಗೆ ಮನ ಸೋಲುತ್ತಾಳೆ. ವಿನೋದ್ ಸುರದ್ರೂಪಿ ತರುಣ .ಅವನ ಮುಂದೆ ಅವಳ ರೂಪ ಸಾದಾರಣ. ಹಾಗಾಗಿ ಅವನ ಬಳಿ ಹೋಗಿ ಮಾತನಾಡಲು ಹಿಂಜರಿಯುತ್ತಾಳೆ. ಆದರೆ ಸಾಮಾಜಿಕ ಮಾಧ್ಯಮವಾದ ಫೇಸ್ ಬುಕ್ ಮೂಲಕ ಅವನನ್ನು ಸಂಪರ್ಕಿಸುತ್ತಾಳೆ. ಹಾಗೆ ಫೇಸ್ ಬುಕ್ ಮೂಲಕ ಶುರುವಾದ ಸ್ನೇಹ ಮತ್ತಷ್ಟು ಗಟ್ಟಿಯಾಗುತ್ತೆ. ವಿನೋದ್ ಅವಳು ಬರೆದ ಕವನಗಳನ್ನೇ ಸಭೆಯಲ್ಲಿ ಹಾಡಲಾರಂಭಿಸುತ್ತಾನೆ.ಅವನ ಹಾಡಿನಷ್ಟೇ ಅದ್ಬುತ ಅವಳ ಕವಿತೆಗಳು. ಆ ಕವಿತೆಗಳಿಂದಾಗಿ ಅವನ ಹಾಡುಗಳು ಜನಪ್ರಿಯವಾಗುತ್ತೆ. ಇಷ್ಟಾದರೂ ಅವಳು ಫೇಸ್ಬುಕ್ ನಲ್ಲಿ ತನ್ನ ಒಂದೇ ಒಂದು ಚಿತ್ರ ಹಾಕಿರುವುದಿಲ್ಲ. ಅವಳಿಗೆ ಎಲ್ಲೇ ವಿನೋದ್ ತನ್ನ ಸ್ನೇಹವನ್ನು ತಿರಸ್ಕರಿಸಿ ಬಿಡುತ್ತಾನೋ ಎನ್ನುವ ಭಯ. ದಿನಗಳೆದಂತೆ ಅವರ ಸ್ನೇಹ ಎಂದು ಪ್ರೀತಿಗೆ ತಿರುಗಿತೋ ಇಬ್ಬರಿಗೂ ಗೊತ್ತಾಗುವುದೇ ಇಲ್ಲ.
ಸ್ನೇಹಾಳ ಮನದ ಭಾವನೆಗಳಿಗೆ ದನಿಯಾಗಿ ಬಾಳಿಗೆ ಬೆಳಕಾಗುತ್ತಾನೆ ವಿನೋದ್. ಪ್ರೀತಿ ದಿನಗಳೆದಂತೆ ಬೆಳೆದು ಹೆಮ್ಮರವಾಗುತ್ತೆ.ವಿನೋದ್ ಸ್ನೇಹಾಳ ಬಳಿ ಹೇಳುತ್ತಾನೆ, ನೋಡು ಚಿನ್ನ ಮುಂದಿನವಾರ ನಾನು ಮಂಗಳೂರಿಗೆ ನಿನ್ನ ಭೇಟಿಯಾಗಲು ಬರುತೇನೆ. ಅದಕ್ಕೂ ಮೊದಲು ನಿನ್ನ ಒಂದು ಫೋಟೋ ಕಳುಹಿಸಿಕೊಂಡು ಎಂದು ಕೇಳುತ್ತಾನೆ. ಅಲ್ಲ ವಿನು ನಾನು ನೋಡಲು ಅಷ್ಟೊಂದು ಚೆಂದವಿಲ್ಲ , ಎಲ್ಲಿ ನನ್ನನು ತಿರಸ್ಕರಿಸಿ ಬಿಡುತ್ತಿಯೋ ಎನ್ನುವ ಭಯ ಕಾಡುತ್ತೆ ಎಂದು ಹೇಳಿದಾಗ ವಿನೋದ್ ಹೇಳುತ್ತಾನೆ. ಇಲ್ಲ ಚಿನ್ನ ನೀನು ಹೇಗಿದ್ರು ನನ್ನ ಚಿನ್ನನೆ. ಇಷ್ಟೊಂದು ಒಳ್ಳೆ ಮನಸಿದೆ ನಿನಗೆ. ನೀನು ಹೇಗಿದ್ರು ನನ್ನವಳೇ ಅನ್ನುತ್ತಾನೆ. ಅವನ ಮಾತಿಗೆ ಮನಸೋತ ಅವಳು ತನ್ನ ಫೋಟೋ ಕಳುಹಿಸಿ ಕೊಡುತ್ತಾಳೆ. ಅದೇ ಕೊನೆ ಆ ನಂತ್ರ ಅವಳು ಎಷ್ಟು ಕರೆ ಮಾಡಿದರು ಅವನು ಕರೆ ಸ್ವೀಕರಿಸುವುದಿಲ್ಲ. ಸ್ನೇಹಾಳ ಮನ ತುಂಬಾ ದುಗುಡ , ಅಂತಕ. ಎರಡು ವಾರ ಕಳೆಯುತ್ತೆ. ವಿನೋದನದ ಯಾವ ಸುದ್ದಿನೂ ಇಲ್ಲ. ಸಂದೇಶ ಕಳುಹಿಸುತ್ತಾಳೆ, ನೋಡಿ ನನ್ನ ಫೋಟೋ ನೋಡಿದ ಮೇಲೆ, ನಿಮಗೆ ನಾನು ಬೇಡ ವೆನ್ನಿಸಿದಲ್ಲಿ ಪರವಾಗಿಲ್ಲ. ಆದರೆ ಒಮ್ಮೆ ಮಾತನಾಡಿಸಿ. ನನಗೆ ಆತಂಕವಾಗುತಿದೆ ಎಂದು ಸಂದೇಶ ಕಳುಹಿಸುತ್ತಾಳೆ. ಅವಳ ಸಂದೇಶ ಓದಿದ ಅವನು ಅವಳಿಗೆ ಒಂದು ಪತ್ರ ಬರೆದು ಅದನ್ನು ಅವಳಿಗೆ ಮೊಬೈಲ್ ಮೂಲಕ ನಾಳೆ ವಾಟ್ಸಪ್ಪ್ ಮಾಡುತೇನೆ ಎಂದು ಕೊಂಡು ಮಲಗುತ್ತಾನೆ. ಅಷ್ಟರಲ್ಲಿ ಬೆಳಿಗ್ಗೆ ಸ್ನೇಹ ಬಂದು ಮನೆಯ ಕರೆಗಂಟೆ ಬಾರಿಸುತ್ತಾಳೆ.
ವಿಜಯ ಕೊಟ್ಟ ವಿನೋದನ ಪತ್ತ್ರವನ್ನು ಓದಿ ಕಣ್ಣೀರಿಟ್ಟ ಸ್ನೇಹ ಪತ್ರವನ್ನು ಅಲ್ಲೇ ಎಸೆದು ಹೊರಟುಹೋಗುತ್ತಾಳೆ. ಕೆಳಗೆ ಬಿದ್ದ ಪತ್ರವನ್ನು ವಿಜಯ್ ಓದುತ್ತಾನೆ. ಸ್ನೇಹ ನನ್ನ ಮರೆತು ಬಿಡು . ಕಾರಣ ಕೇಳಬೇಡ ಎಂದು ಬರೆದಿರುತ್ತಾನೆ ವಿನೋದ್. ಅದನ್ನು ಓದಿ ಕೋಪಗೊಂಡ ವಿಜಯ್ ಒಳಗೆ ಹೋಗಿ ವಿನೋದನ ಬಳಿ ಕಾರಣ ಕೇಳುತ್ತಾನೆ. ಆಗ ವಿನೋದ್ , ನೋಡು ವಿಜಯ್ ನಾನು ಸ್ನೇಹಾಳ ಗೆಳೆತನ ಬೆಳೆಸಿದಾಗ ಅವಳ ಕವಿತೆಗಳಷ್ಟೇ ಅವಳು ಸುಂದರವಾಗಿದ್ದಾಳೆ ಅಂದುಕೊಂಡಿದ್ದೆ . ಆದರೆ ಅವಳ ಫೋಟೋ ನೋಡಿದ ಮೇಲೆ ನನಗೆ ವಾಸ್ತವದ ಅರಿವಾಯಿತು. ಅವಳು ನನಗೆ ಸರಿಯಾದ ಜೋಡಿಯಲ್ಲ. ಅವಳು ನನ್ನ ಆಶೆ ಪಟ್ಟದ್ದು ತಪ್ಪಲ್ಲ. ಆದರೆ ಮೊದಲು ಕನ್ನಡಿಯಲ್ಲಿ ಮುಖ ನೋಡಿಲೊಳ್ಳಬೇಕಿತ್ತು ಅವಳು. ಈ ಮಾತನ್ನು ಕೇಳಿದ ವಿಜಯ್ ಕೋಪಗೊಂಡು ವಿನೋದನ ಕೆನ್ನೆಗೆ
ರಪ್ಪನೆ ಬಾರಿಸುತ್ತಾನೆ.ನೀನು ಇಷ್ಟೊಂದು ನೀಚ ಬುದ್ದಿಯಾವನೆಂದು ನಂದುಕೊಂಡಿರಲಿಲ್ಲ ಎನ್ನುತ್ತಾನೆ . ಆಗ ವಿನೋದ್ , ನಿನಗೆಅಷ್ಟೊಂದು ಕನಿಕರ, ಪ್ರೀತಿ ಅವಳ ಮೇಲೆ ಉಕ್ಕಿ ಹರಿಯುತಿದ್ದರೆ ನೀನೇ ಅವಳನ್ನು ಮದುವೆಯಾಗು . ನನಗೆ ಬುದ್ದಿ ಹೇಳಲು ಬರಬೇಡ ಅನ್ನುತ್ತಾನೆ. ಅಗುತೇನೆ ಕಣೋ ನಿನ್ನ ಮುಂದೆಯೇ ಅವಳನ್ನು ಮದುವೆಯಾಗುತ್ತೆನೆ. ನೀನು ಬೇಡ ನಿನ್ನ ಸ್ನೇಹನು ಬೇಡ ಅಂತ ಹೇಳಿ ವಿಜಯ್ ಮನೆ ಬಿಟ್ಟು ಹೊರಟು ಹೋಗುತ್ತಾನೆ. ಅಲ್ಲಿಂದ ನೇರ ಮಂಗಳೂರಿಗೆ ಹೋದ ಅವನು , ಸ್ನೇಹಾಳ ಮನೆಯವರನ್ನು ಪರಿಚಯಮಾಡಿಕೊಂಡು , ಸ್ನೇಹಾಳಿಗೆ ಒಬ್ಬ ಉತ್ತಮ ಗೆಳೆಯನಾಗಿ , ಅವಳು ಕ್ರಮೇಣ ವಿನೋದನನ್ನು ಮರೆಯುವಂತೆ ಮಾಡುತ್ತಾನೆ. ವಿನೋದದ ಮೇಲಿನ ಪ್ರೀತಿ ಸಂಪೂರ್ಣವಾಗಿ ನಶಿಸಿ ಸ್ನೇಹ ವಿನೋದನನ್ನು ಮರೆತುಬಿಡುತ್ತಾಳೆ. ಹೀಗೆ ಎರಡು ವರ್ಷ ಕಳೆದುಹೋಗುತ್ತೆ. ಸ್ನೇಹ ಮತ್ತು ವಿಜಯ್ ಪರಸ್ಪರ ಮದುವೆಯಾಗಿ ವಿನೋದ್ ನನ್ನ ಸಂಪೂರ್ಣವಾಗಿ ಮರೆತುಬಿಡುತ್ತಾರೆ.
ಒಂದು ದಿನ ಬೆಂಗಳೂರಿನ ಒಂದು ಆಸ್ಪತ್ರೆಯಿಂದ ವಿಜಯನ ಮೊಬೈಲ್ ಗೆ ಒಂದು ಕರೆ ಬರುತ್ತೆ. ಗಾಬರಿಯಾದ ವಿಜಯ್ ತಡಬಡಿಸಿ ಬೆಂಗಳೂರಿಗೆ ಹೊರಟು ಹೋಗುತ್ತಾನೆ. ಅಲ್ಲಿ ವಿನೋದ್ ಮೃತ ಪಟ್ಟಿರುತಾನೆ. ವಿನೋದ್ ನ ತಂದೆ ತಾಯಿ ಅಳುತ್ತ ನಿಂತಿರುತ್ತಾರೆ. ಅಲ್ಲಿನ ನರ್ಸ್ ವಿಜಯನಿಗೆ , ವಿನೋದ್ ಬರೆದ ಪತ್ರ ಕೊಡುತ್ತಾನೆ.
ಪ್ರೀತಿಯ ಗೆಳೆಯ ,
ದಯವಿಟ್ಟು ನನ್ನ ಕ್ಷಮಿಸಿ ಬಿಡು. ನಿನಗೆ ನೆನಪಿದೆಯ, ಸ್ನೇಹ ತನ್ನ ಫೋಟೋವನ್ನು ನನಗೆ ಕಳುಹಿಸಿದ ರಾತ್ರಿ!. ಅವತ್ತು ನೀನು ಲೇಟಾಗಿ ರೂಮಿಗೆ ಬಂದಿದ್ದೆ. ನಾನು ಹೇಳಿದ್ದೆ ಸ್ನೇಹ ಫೋಟೋ ಕಳುಹಿಸಿದ್ದಾಳೆ. ನಾಳೆ ತೋರಿಸುತೇನೆ, ನಿನಗೆ. ಯಾಕೋ ನನಗೆ ಮೈ ಸರಿ ಇಲ್ಲ ಅಂತ. ಆ ರಾತ್ರಿ ತುಂಬಾ ಕೆಮ್ಮು. ರಾತ್ರಿ ನೀನು ನನಗೆ ಕಷಾಯಮಾಡಿ ಕೊಟ್ಟು ಬೆಳೀಗ್ಗೆ ಆಸ್ಪತ್ರೆಗೆ ಹೋಗು ಅಂತ ಹೇಳಿದ್ದೆ. ಅಂದು ಬೆಳಿಗ್ಗೆ ನಾನು ಆಸ್ಪತ್ರಗೆ ಹೋಗಿದ್ದೆ. ಡಾಕ್ಟರ್ ನನ್ನ ಪರೀಕ್ಷೆಗೆ ಒಳಪಡಿಸಿ , ನಾನು ಕ್ಯಾನ್ಸರ್ ನ ಕೊನೆ ಹಂತಕ್ಕೆ ತಲುಪಿದ್ದಿನೇ. ಹೆಚ್ಚೆಂದರೆ6 ತಿಂಗಳಿನಿಂದ 2 ವರ್ಷ ಬದುಕಬಹುದು ಅಂದು ಬಿಟ್ಟಿದ್ರು. ನನ್ನ ದುಖ್ಖವನ್ನು ನಿಮಗೆ ಕೊಟ್ಟು ನಿಮ್ಮನ್ನು ಕೂಡ ಯಾಕೆ ದುಃಖ್ಖಕ್ಕೆ ದೂಡಬೇಕು ಎಂದು ನಾನು ನಿಮಗೆ ಹೇಳಿರಲಿಲ್ಲ. ಆಮೇಲೆ ನೀನು ಸ್ನೇಹಾಳ ಫೋಟೋ ಎಷ್ಟು ಕೇಳಿದ್ರು ನಾನು ನಿನಗೆ ತೋರಿಸಿರಲಿಲ್ಲ. ಅವಳಿಗೆ ನನ್ನ ತಿರಸ್ಕಾರದ ಪತ್ರ ಕಳುಹಿಸಿದ ಮೇಲೆ ಅವಳು ನನ್ನ ಮರೆತು ಬಿಡಬಹುದು ಅಂದುಕೊಂಡಿದ್ದೆ. ಆದ್ರೆ ಅದಕ್ಕೂ ಮೊದಲು ಅವಳು ಸೀದಾ ಮನೆಗೆ ನನ್ನ ಹುಡುಕಿಕೊಂಡು ಬಂದು ಬಿಟ್ಟಳು.ಆದ್ರೆ ಎಲ್ಲ ವಿಧಿ ಲಿಖಿತ.
ಅವಳು ಹಾಗೆ ಬಂದುದರಿಂದ ಇಂದು ನಿನ್ನ ಮದುವೆಯಾಗಿ ಸುಖವಾಗಿದ್ದಾಳೆ. ನನಗೆ ತುಂಬಾ ಸಂತೋಷ . ಯಾಕೆ ಗೊತ್ತ . ಅವಳು ನನ್ನ ಬಂಗಾರದಂತ ಸ್ನೇಹಿತನ ಕೈ ಹಿಡಿದಿದ್ದಿದಾಳೆ.ಇನ್ನೇನು ಚಿಂತೆ ನನಗೆ. ಇಬ್ಬರು ನೂರ್ಕಾಲ ಸುಖವಾಗಿ ಬಾಳಿ. ನೀವು ನನ್ನಿದ ದೂರವಾಗಿದ್ರು ನಾನು ಪ್ರತಿಕ್ಷಣ ನಿಮ್ಮ ಬಗ್ಗೆ ಬೇರೆಯವರಿಂದ ಕೇಳಿ ತಿಳಿದುಕೊಳ್ಳುತಿದ್ದೆ. ಇನ್ನೇನು ಕೆಲವೇ ದಿನಗಳಲ್ಲಿ ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸುತಿದ್ದೀನಿ ಗೆಳೆಯ. ಆದರೆ ಇದೆಲ್ಲವನ್ನು ಸ್ನೇಹಾಳ ಬಳಿ ಹೇಳಬೇಡ. ಅವಳು ದುಃಖ್ಖ ಪಡುವುದು ಬೇಡ. ನಿನ್ನ ಸ್ನೇಹಕ್ಕೆ ಚಿರಋಣಿ ಗೆಳೆಯ.
ಪತ್ರ ಓದಿದ ವಿಜಯ್ ಕಣ್ಣೀರಿಡುತ್ತಾನೆ . ಆದರೆ ವಿಧಿ ಲಿಖಿತ ತಪ್ಪಿಸಲು ಸಾಧ್ಯವೇ!
ಪ್ರಕಾಶ್ / ಮಲೆಬೆಟ್ಟು
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.