ತೀರದ ನೆನಪು

..

Originally published in kn
Reactions 2
513
Madhu Kodanad
Madhu Kodanad 15 Sep, 2020 | 1 min read

#ಕಡಲ_ತೀರದ_ಮೋಹ #ಒಡಲ_ತೀರದ_ದಾಹ

ಬನ್ನಿ ಕಡಲ ತೀರಕ್ಕೊಮ್ಮೆ ಹೋಗಿ ಬರೋಣ |

ಮರಳಲ್ಲಿ ಮರಳಾದ ನೆನಪುಗಳನ್ನು ಹುಡುಕಿ ತರೋಣ ||


ಬಚ್ಚಿಟ್ಟಿದ್ದ ಎಷ್ಟೋ ನಿವೇದನೆಗಳು, ಮುಚ್ಚಿಟ್ಟಿದ್ದ ಆರದ ಗಾಯಗಳು, ಮರಳಲ್ಲಿ ಅರಳಿದ್ದನ್ನು ನೋಡಿರುವೆ |

ದಡಕ್ಕೆರಗಿ ಅಪ್ಪಳಿಸಿದ ದೂರದ ಅಲೆಗಳು ಗೀಚಿದ್ದ ಎಷ್ಟೊಂದು ನೆನಪುಗಳನ್ನು ಕಣ್ಣೆದುರೇ ಕೊಚ್ಚಿ ಬಿಟ್ಟಿವೆ ||


ಹೊರಟು ಹೋದ ದೈತ್ಯ ಅಲೆಗಳೇ, ನಿಮಗೇಕೆ ಹಿಂದಿರುಗಿ ಮತ್ತೆ ಮತ್ತೆ ದಡದೆಡೆಗೆ ಬರುವ ಚೇಷ್ಟೆ ?

ಎಲ್ಲವನ್ನೂ ಬಾಚಿ, ಶೂನ್ಯವನ್ನು ಗೀಚಿದ ಮೇಲೆ ಉಳಿದಿರುವುದು ಮುರಿದ ನೆನಪುಗಳ ಪಳೆಯುಳಿಕೆಗಳಷ್ಟೇ ||


ಸಾಗರದ ಅಲೆಗಳ ಮೇಲೆ ಹೊರಟ ನಾವೆಯೊಂದು ತೇಲುತ್ತಾ ತೇಲುತ್ತಾ ದೂರದ ನೀಲಿಯಲ್ಲಿ ಲೀನವಾಗುತ್ತಿದೆ |

ಮನದ ಕಡಲಲ್ಲಿ ನೆನಪುಗಳ ನೌಕೆಯೊಂದು ತೇಲಿ ಬಂದು ಕ್ಷಣಾರ್ಧದಲ್ಲಿ ಮತ್ತೆಲ್ಲೋ ಮರೆಯಾದಂತೆ ಅನಿಸುತ್ತಿದೆ ||


ಎಲ್ಲೆಲ್ಲೂ ನೀರು, ಆದರೂ ತೀರದ ದಾಹ, ಎಂದಿಗೂ ಮುಗಿಯದ ಪಯಣ, ದಡ ಸೇರಿದರೆ ಬರಿಯ ಮರಳು |

ನೆತ್ತಿ ಸುಡುವ ಬಿರು ಬಿಸಿಲಿನಲ್ಲಿ ರಾಶಿ ರಾಶಿ ಉಸುಕಿನೊಳಗೆ ಮುಸುಕಿರುವ ಮಾಸಿದ ನೆನಪುಗಳ ಟಿಸಿಲು ||


ಈ ಸುಟ್ಟು ಬೆಂದು ಕೆಟ್ಟು ಕರಕಲಾದ ಹಳೆಯ ನೆನಪುಗಳನ್ನು ಹೊತ್ತು ನಾನು ಈಗ ಎತ್ತ ನಡೆಯಲಿ ?

ಎಲ್ಲವನೂ ಕೈಬಿಟ್ಟು, ಇಲ್ಲಿಯೇ ಹೂತಿಟ್ಟು, ಮತ್ತೆ ವಾಸ್ತವಕ್ಕೆ ಬಂದು ಬಿಡುವೆ, ನೆನಪುಗಳು ಮತ್ತೆ ನೆನಪಾಗದಿರಲಿ ||


ವಾಸ್ತವದ ಬಣ್ಣಗಳು ಕಣ್ಣೆದುರು ಇರುವಾಗ, ಕಾಡುವ ನೆನಪುಗಳ ಮಣ್ಣನ್ನೇಕೆ ಅಗೆಯಲಿ ?

ನೆನ್ನೆ ನೆನ್ನೆಗೆ ಇರಲಿ, ಇಂದು ಇಂದಿಗೆ ಇರಲಿ, ಕೊರಗುವುದು ಮತ್ತೇಕೆ ಬಂದಿದ್ದು ಬರಲಿ ||

                     - ಮಧು ಕೋಡನಾಡು.

2 likes

Published By

Madhu Kodanad

madhukodanad

Comments

Appreciate the author by telling what you feel about the post 💓

Please Login or Create a free account to comment.