*ಕಣ್ಣಿಗೆ ಕಾಣದ ದೇವರ ಹುಡುಕುತ*
ಕಣ್ಣಿಗೆ ಕಾಣದ ದೇವರ ಹುಡುಕುತ ಎಲ್ಲಿಗೋ ನಾನು ಹೊರಟಿರುವೆ |
ಕಣ್ಣಿಗೆ ಕಾಣುವ ಕಣ ಕಣದಲ್ಲೂ ಬೆರೆತಿಹ ನಿನ್ನನು ಮರೆತಿರುವೆ ||
ಮಣ್ಣನು ಬಗೆದು ಹೊನ್ನನು ಬೆಳೆಯುವ ರೈತನ ಬೆವರಲಿ ಅಡಗಿರುವೆ ;
ಬಣ್ಣ ಬಣ್ಣದ ಕನಸನು ಹೊತ್ತ ಮಗುವಿನ ಮೊಗದಲಿ ನಗುತಿರುವೆ |
ಕಣ್ಣ ನೀರಿನಲಿ ಕಲೆತಿರುವೆ, ಮಣ್ಣ ಧೂಳಿನಲಿ ಬೆಸೆದಿರುವೆ ;
ತಣ್ಣಗೆ ಬೀಸುವ ಗಾಳಿಯ ಒಳಗೂ ಪರಿಮಳವಾಗಿ ಪಸರಿಸುವೆ ||
ಗಗನದಿ ನಗುವ ಸೂರ್ಯ ಚಂದ್ರರ ಬೆಳಕ ಕಿರಣದಲಿ ಬೆಳಗಿರುವೆ ;
ಮುಗಿಲನು ತೊರೆದು ಧರೆಯನು ಸೇರುವ ವರ್ಷಧಾರೆಯಲಿ ತಣಿದಿರುವೆ |
ದೀನನ ಮೊರೆಯಲಿ ನೀನಿರುವೆ, ದಾನಿಯ ಮನದಲಿ ಪವಡಿಸುವೆ ;
ನಾನು ಎಂಬುದ ಬಿಟ್ಟ ಮನುಜನ ಹೃದಯದಿ ಅನುದಿನ ನೆಲೆಸಿರುವೆ ||
ಕಷ್ಟ ಸುಖಗಳ ಕಾನನದಲ್ಲಿ ಅಷ್ಟ ದಿಕ್ಕಿನಲೂ ನೀನಿರುವೆ ;
ನೋವು ನಲಿವುಗಳ ಚಾರಣದಲ್ಲಿ ದಾರಿಯುದ್ದಕೂ ಜೊತೆಗಿರುವೆ |
ಸೋಲಿನಲ್ಲಿ ನೀ ಕೈ ಹಿಡಿವೆ, ಗೆಲುವಿನೆಡೆಗೆ ನೀ ಜೊತೆ ನಡೆವೆ ;
ಒಲವಿನಿಂದ ಈ ಜಗವನು ನೋಡಲು ಹಲವು ರೂಪದಲಿ ಕಾಣಿಸುವೆ ||
- ಮಧು ಕೋಡನಾಡು.
Comments
Appreciate the author by telling what you feel about the post 💓
Uttamavada kavite
Please Login or Create a free account to comment.