ಎಸ್ಪಿಬಿ ಹೇಳಿದ ಕತೆ...

ಒಂದು ನೈಜ ಕತೆ

Originally published in kn
❤️ 0
💬 0
👁 537
Gururaj Kodkani
Gururaj Kodkani 26 Sep, 2020 | 1 min read

ಅವರು ಭಯಂಕರ ಗಂಭೀರವದನರು,ಮುಂಗೋಪಿಗಳೆಂದು ಎಂದು ಕೇಳಿದ್ದೆ.ಗಾಯನದ ಬಗ್ಗೆ ತುಂಬ ಅತಿಯೆನ್ನುವಷ್ಟು ಸಲಹೆ ಸೂಚನೆಗಳನ್ನು ಕೊಡಲು ಹೊರಟರೇ 'ಸುಮ್ಮನಿರಯ್ಯ ಕಂಡಿದ್ದೀನಿ' ಎಂದು ಅದೆಷ್ಟೂ ಸಂಗೀತ ನಿರ್ದೆಶಕರ ಬಾಯಿ ಮುಚ್ಚಿಸಿದ್ದರು ಅವರು ಎಂದು ಕೇಳಿದ ಮೇಲಂತೂ ನನಗೆ ಅವರ ಬಗ್ಗೆ ಭಯ ಹೆಚ್ಚಾಗಿತ್ತು


ಸಾಮಾನ್ಯವಾಗಿ ಅವರು ಹೊರಗೆಲ್ಲೋ ಹೊರಟಾಗ ಅವರೊಟ್ಟಿಗೆ ಅವರ ಪತ್ನಿ ಬರುತ್ತಿದ್ದರು.ಆದರೆ ಆ ಸಲ ಅವರೊಬ್ಬರೇ ಬಂದಿದ್ದರು.ಪ್ಯಾರಿಸ್‌ ‌ನಲ್ಲಿ ನಮ್ಮಿಬ್ಬರ ಗಾಯನದ ಕಾರ್ಯಕ್ರಮ ಮುಗಿಯುವಾಗ ಸಮಯ ರಾತ್ರಿಯ ಹನ್ನೊಂದೂವರೆಯಾಗಿತ್ತು.ನಾನು ನನ್ನ ಪಾಡಿಗೆ ನಾನೆಂಬಂತೆ ಕೋಣೆಗೆ ಬಂದುಬಿಟ್ಟೆ.ಅವರು ಅವರ ಕೋಣೆಗೆ ತೆರಳಿದರು.ಆಯೋಜಕರು ನನ್ನ ಕೋಣೆಗೆ ಊಟ ತಂದುಕೊಟ್ಟು ಹೋಗಿದ್ದರಾದರೂ ಅವರ ಕೋಣೆಗೆ ಊಟ ಹೋಗಿಲ್ಲವೆನ್ನುವುದು ನನ್ನ ಗಮನಕ್ಕೆ ಬಂದಿತ್ತು.ಬಹುಶ: ಕೊಂಚ ಸಮಯದ ನಂತರ ಹೋಗಬಹುದೇನೋ ಎಂದುಕೊಂಡು ನಾನು ಊಟ ಮುಗಿಸಿದೆ.ನನ್ನ ಊಟ ಮುಗಿದು ಹತ್ತು ನಿಮಿಷವಾದರೂ ಅವರ ಕೋಣೆಗೆ ಊಟ ಹೋಗಿರಲಿಲ್ಲ. ನನಗೆ ಆಯೋಜಕರ ನಿರ್ಲಕ್ಷ್ಯದ ಬಗ್ಗೆ ಕೊಂಚ ಬೇಸರವೆನ್ನಿಸಿತ್ತು.ತಕ್ಷಣವೇ ನಾನು ತಟ್ಟೆಯಲ್ಲೊಂದಿಷ್ಟು ಅನ್ನ ಸಾರು ಉಪ್ಪಿನಕಾಯಿ ಹಾಕಿಕೊಂಡು ಅವರ ಕೋಣೆಯತ್ತ ನಡೆದೆ.ಬಾಗಿಲು ತಟ್ಟಿದವನು ತಮಾಷೆಗೆನ್ನುವಂತೆ 'ರೂಮ್ ಸರ್ವಿಸ್ ' ಎಂದೆ.ಒಂದೆರಡು ನಿಮಿಷಗಳ ನಂತರ ಅವರು ಕೋಣೆಯ ಬಾಗಿಲು ತೆರೆದರು.ಗಾಢ ನಿದ್ರೆಯಲ್ಲಿದ್ದರೇನೋ,ಬಾಗಿಲು ತೆರೆದವರೇ ಕಣ್ಣುಜ್ಜಿಕೊಳ್ಳುತ್ತ ನನ್ನತ್ತ ನೋಡಿದವರು 'ಏನು ತಮ್ಮ,ಇಷ್ಟೊತ್ತಲ್ಲಿ ' ಎಂದರು.


'ಸರ್,ನಿಮ್ಮ ಕೋಣೆಗೆ ಯಾರೂ ಊಟ ತಂದುಕೊಂಡಂತಿಲ್ಲ,ಅದಕ್ಕೆ ನಾನು ಊಟ ತಂದೆ..' ಎನ್ನುತ್ತ ಅಳುಕುತ್ತಲೇ ನುಡಿದು ನಾನು ಸುಮ್ಮನಾದೆ.ನನ್ನ ಕೈಲಿದ್ದ ತಟ್ಟೆಯನ್ನೊಮ್ಮೆ ನೋಡಿದ ಅವರು ಒಂದು ಕ್ಷಣ ಸುಮ್ಮನೆ ನಿಂತರು.ಬಯ್ದುಬಿಡುತ್ತಾರೇನೋ ಎಂದುಕೊಂಡಿದ್ದೆ. ಆದರೆ ಅವರು 'ಹೌದು,ಆಯೋಜಕರಿಗೆ ಹೇಳಿದ್ದೆ,ಬಹುಶ: ಮರೆತರೇನೋ ಅವರು.ನನಗೂ ಪದೇ ಪದೇ ಕೇಳುವುದಕ್ಕೆ ಮುಜುಗರ' ಎಂದವರೇ ನನ್ನ ಕೈ ಹಿಡಿದು ಕೋಣೆಯ ಒಳಗೆ ಕರೆದೊಯ್ದರು.ತಟ್ಟೆಯನ್ನು ಮೇಜಿನ ಮೇಲಿಟ್ಟು ಊಟ ಮಾಡುತ್ತಿದ್ದವರಿಗೆ ಹಸಿವಾಗಿತ್ತೆನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.ಅವರ ಊಟವಾಗುವವರೆಗೂ ನಾನು ಸುಮ್ಮನೇ ಕೂತಿದ್ದೆ.ಊಟ ಮುಗಿಯುವಷ್ಟರಲ್ಲಿ ಅವರ ಕಣ್ಗಳಲ್ಲಿ ಧಾರಾಕಾರ ನೀರು.


'ಏನಾಯಿತು ಸರ್..'? ಎಂದು ಕೇಳಿದೆ ಗಾಬರಿಯಲ್ಲಿ.


'ನೀನು ತಂದಿದ್ದೆಯಲ್ಲ ಊಟ ಅದು ಬರೀ ಊಟವಲ್ಲ ಮರಿ,ಅದು ಮಹಾಪ್ರಸಾದ.ದೇವರು ಹಸಿದವನಿಗೆ ಊಟ ಅಂತ ಎಲ್ಲೆಲ್ಲಿ ಇಟ್ಟಿರ್ತಾನೋ ಯಾರಿಗೆ ಗೊತ್ತು.ನನಗೆ ಹಸಿವಾಗಿತ್ತು,ನಿನ್ನ ರೂಪದಲ್ಲಿ ಭಗವಂತ ಅನ್ನ ಕಳಿಸಿಕೊಟ್ಟ ನೋಡು.ಹಾಗಾಗಿ ಇದು ಬರೀ ಊಟವಲ್ಲ,ದೇವರ ಪ್ರಸಾದ ' ಎಂದಿದ್ದ ಅವರ ಕಣ್ಣಲ್ಲಿ ಮತ್ತೆ ಅಶ್ರುಧಾರೆ. ಅವರ ಕಣ್ಣೀರು ಕಂಡ ನನ್ನಲ್ಲೂ ಸಣ್ಣದ್ದೊಂದು ಭಾವುಕತೆ.


ಆ ಘಟನೆಯ ನಂತರ ನಾವು ಪರಮಾಪ್ತರಾಗಿ ಹೋದೆವು.ಆನಂತರ ಅದೆಷ್ಟು ಬಾರಿ ,ಮಾಧ್ಯಮಗಳೆದರು ಅವರು ,' ಎಸ್ಪಿಬಿ ನನ್ನ ತಮ್ಮ' ಎಂದಿದ್ದಾರೋ ಲೆಕ್ಕವೇ ಇಲ್ಲ...


ಹೀಗಿದ್ದಾರೆ ಜೇಸುದಾಸ್ ಎನ್ನುವ ಗಾಯ‌ನಋಷಿ..



0 likes

Support Gururaj Kodkani

Please login to support the author.

Published By

Gururaj Kodkani

gururajkodkani

Comments

Appreciate the author by telling what you feel about the post 💓

Please Login or Create a free account to comment.