ಮುಗಿದು ಹೋದ ಪ್ರೀತಿಯ ಕವಿಗೆ ಅಂತಿಮ ನಮನ...

ಒಂದು ವಿದಾಯ

Originally published in kn
Reactions 2
511
Gururaj Kodkani
Gururaj Kodkani 31 Aug, 2020 | 1 min read

ನಾನು ಮೊದಲು ರಾಹತ್ ಇಂದೋರಿಯನ್ನು ಕೇಳಿದ್ದು ಯಾವಾಗ ನೆನಪಿಲ್ಲ.ಆದರೆ ಕೇಳಿದ ಮೊದಲ ಸಾಲುಗಳಿನ್ನೂ ಸ್ಪಷ್ಟವಾಗಿ ನೆನಪಿವೆ.


'ಸಿರ್ಫ್ ಖಂಜರ್ ನಹೀ,ಆಂಖೋ ಮೇ ಪಾನಿ ಚಾಹಿಯೇ,

ಏ ಖುದಾ,ದುಷ್ಮನ್ ಭಿ ಮುಝೆ

ಖಾಂದಾನಿ ಚಾಹಿಯೇ...'


' ಬರೀ ಕತ್ತಿ ಮಾತ್ರವಲ್ಲ ,ಕಣ್ಣಲ್ಲಿ ಕಣ್ಣೀರೂ ಇರಬೇಕು

ಭಗವಂತಾ,ನನ್ನ ಶತ್ರುವೂ ಕೂಡ ಒಳ್ಳೆ ಮನೆತನದವನಾಗಿರಬೇಕು ..'


ಎನ್ನುವ ಗತ್ತಿನ ಸಾಲುಗಳನ್ನು ಓದಿದ್ದ ಕವಿ ಮೊದಲ ನೋಟದಲ್ಲಿಯೇ ಇಷ್ಟವಾಗಿದ್ದರು.ತಕ್ಷಣವೇ ಅಮೇಜಾನ್‌‌ನಿಂದ ಅವರ ಕವನ ಸಂಕಲನಗಳನ್ನು ತರಿಸಿಕೊಂಡಿದ್ದೆ. ಅದೇನು ಪುಣ್ಯವೋ ಗೊತ್ತಿಲ್ಲ,ಬಹುತೇಕ ಕರಾವಳಿಯವರಂತೆ ಹಿಂದಿಯ ಓದು ಮತ್ತು ಮಾತು ಎರಡೂ ನನಗೆ ಸಲೀಸು.ಪ್ರೌಢಶಾಲೆಯ ನಂತರ ಹಿಂದಿ ಓದು ತಪ್ಪಿ ಹೋಗಿತ್ತೆನ್ನುವ ಕಾರಣಕ್ಕೆ ಕೊಂಚ ನಿಧಾನವಾಯಿತಾದರೂ ನಂತರದ ಓದು ಸರಾಗ.


ಬಹಳ ಅಧ್ಬುತವಾಗಿ ಬರೆಯುತ್ತಾರೆ ರಾಹತ್.ತುಂಬ ಹಿಂದಿ ಶಾಯ್ರಿಗಳನ್ನು ಓದಿದ್ದೇನಾದರೂ ಗುಲ್ಜಾರದ ನಂತರ ನನ್ನನ್ನು ಹಿಡಿದಿಟ್ಟವರ ಪೈಕಿ ರಾಹತ್ ಸಹ ಅಗ್ರಗಣ್ಯರು. ಅಲ್ಲೊಂದು ನಾಲ್ಕು ಸಾಲಿನ ಕವಿತೆ,


'ಆಜ್ ಕಲ್ ಛುಟ್ಟಿ ಕೆ ದಿನ್ ಭೀ ಘರ್ ಪಡೆ ರಹತೆ ಹೈ ಹಮ್

ಶಾಮ್ ಸಾಹಿಲ್ ತುಮ್ ಸಮಂದರ್ ಸಬ್ ಪುರಾನೇ ಹೋ ಗಯೆ...'


ಎಂದು ಓದಿದಾಗ ಸಣ್ಣ ಮುಗುಳ್ನಗು ನನ್ನ ತುಟಿಯಂಚಲ್ಲಿ.ರಜಾದಿನವಾದರೆ ಸಾಕು,ಹಾಸಿಗೆಯಲ್ಲಿ ಅರೆ ಮಲಗಿದ ಭಂಗಿಯಲ್ಲಿ ಬಿದ್ದುಕೊಂಡು ಕೈಯಲ್ಲಿ ಪುಸ್ತಕವಿಡಿದು ಓದುವವನಿಗೆ ,


'ಇತ್ತೀಚೆಗೆ ರಜಾದಿನಗಳಲ್ಲಿಯೂ ಮನೆಯಲ್ಲಿಯೇ

ಬಿದ್ದಿರುತ್ತೇನೆ ನಾನು

ಸಂಜೆ,ತಂಗಾಳಿ,ನೀನು,ಸಾಗರ ಎಲ್ಲವೂ ಹಳೆದಾಯ್ತು

ನೋಡು...'


ಎನ್ನುತ್ತ ನಿರಾಸಕ್ತಿಯ ಸಾಲುಗಳನ್ನು ಬರೆದ ಕವಿ ಹೇಗೆ ತಾನೇ ಇಷ್ಟವಾಗಲಾರ..? ಇದೊಂದು ಬಗೆಯ ಭಾವವಾದರೆ ಉಳಿದ ಭಾವಗಳಲ್ಲಿಯೂ ರಾಹತ್ ಎತ್ತಿದ ಕೈ.ಜನರ ಮನಸ್ಥಿತಿಯ ಬಗ್ಗೆ ಬರೆಯುತ್ತ ,


'ದಿಲೋ ಮೇ ಆಗ್ ಲಬೊಂ ಪರ್ ಗುಲಾಬ್ ರಖತೆ ಹೈ

ಸಬ್ ಅಪ್ನೆ ಚೆಹರೋ ಪರ್ ದುಹ್ರಿ ನಕಾಬ್ ರಕ್ತೆ ಹೈ..'


ಎಂದು ಬರೆಯುತ್ತಾರೆ ಕವಿ.


'ಎದೆಯಲ್ಲಿ ಉರಿ,ಮಾತುಗಳಲ್ಲಿ ಗುಲಾಬಿಯನ್ನಿಟ್ಟುಕೊಳ್ಳುತ್ತಾರೆ

ಎಲ್ಲರೂ ತಮ್ಮತಮ್ಮ ಮುಖಗಳ

ಮೇಲೆ ಮತ್ತೊಂದು ಮುಖವಾಡವಿಟ್ಟುಕೊಳ್ಳುತ್ತಾರೆ...'


ಎನ್ನುವ ಸಾಲುಗಳನ್ನೊದುವಾಗ ಮನುಷ್ಯನ ಭಾವಗಳ ಢೋಂಗಿತನವನ್ನು ಎರಡೇ ಸಾಲಿನಲ್ಲಿ ವಿವರಿಸಿಟ್ಟ ಕವಿಯನ್ನು ಮೆಚ್ಚದಿರುವುದು ಸಾಧ್ಯವೇ ಇಲ್ಲ.ಹಾಗೆಂದು ಕೇವಲ ನೇತ್ಯಾತ್ಮಕ ಭಾವಗಳ ಬಗ್ಗೆ ಬರೆಯಲಿಲ್ಲ ರಾಹತ್.ಹರಡಿಬಿದ್ದ ಕನಸುಗಳನ್ನು ಒಗ್ಗೂಡಿಸುವ ಕುರಿತು ಬರೆಯುತ್ತ,


'ಅಬೀ ರಂಗೋ ಕೀ ಜಬಾ ಗುಂಗ್ ಪಡಿ ಹೈ ಲೇಕಿನ್

ಜಬ್ ಯೇ ತಸ್ವೀರ್ ಬನೇಗಿ ತೋ ಕಯಾಮತ್ ಹೋಗಿ...'


ಎಂದು ಆಶಾಭಾವದಲ್ಲಿ ನುಡಿದರು.


'ಸಧ್ಯಕ್ಕೆ ಮೂಕವಾಗಿ ಹೋಗಿರಬಹುದು

ಬಣ್ಣಗಳು

ಆದರೆ ಚಿತ್ರವಾಗುವ ಹೊತ್ತಿಗೆ

ಅದು ವರ್ಣಿಸಲಾಗದಷ್ಟು ಸುಂದರ..'


ಎನ್ನುವಾಗ ಅವರ ಪ್ರತಿಭೆಗೆ ತಲೆದೂಗದಿರುವುದು ಹೇಗೆ..?? ಅವರ ಕವನಗಳನ್ನು ಓದುತ್ತಲೇ ನಾಲ್ಕೈದು ಸಾಲುಗಳ ಕವನಗಳ ಬರವಣಿಗೆಯತ್ತ ಆಕರ್ಷಿತನಾದವನು ನಾನು.ಆರಂಭದಲ್ಲಿ ನಾನು ಅನುವಾದಿಸಿದ ಬಹುತೇಕ ಕವನಗಳು ರಾಹತ್ ಇಂದೋರಿಯವರದ್ದೇ.


' ರಾಹ್ ಮೇ ಖತರೇ ಭೀ ಹೈ ಮಗರ್ ಟಹರ್ತಾ ಕೌನ್ ಹೇ

ಮೌತ್ ಕಲ್ ಆತೀ ಹೈ ಆಜ್ ಆಜಾಯೇ ಡರ್ತಾ ಕೌನ್ ಹೈ...'


ಎಂದು ನುಡಿದ ಕವಿಶ್ರೇಷ್ಠನಿಗೆ ನನ್ನದೊಂದು ಅಂತಿಮ ವಿದಾಯ.

2 likes

Published By

Gururaj Kodkani

gururajkodkani

Comments

Appreciate the author by telling what you feel about the post 💓

Please Login or Create a free account to comment.