ಹಸಿವಿನ ಮುಂದೆ ಸಿರಿವಂತಿಕೆ ಮಂಡಿಯೂರಿತ್ತು...

ಸತ್ಯಕತೆ

Originally published in kn
Reactions 0
393
Gururaj Kodkani
Gururaj Kodkani 02 Oct, 2020 | 1 min read

ನಡು ಮಧ್ಯಾಹ್ನದ ಸಮಯವದು.ಊಟದ ಹೊತ್ತು.ಕೊರೊನಾ ಲಾಕ್‌ಡೌನ್‍ನ ಕಾಲ.ಹೆದ್ದಾರಿಯ ಪಕ್ಕದ ಅದೊಂದು ಹೊಟೆಲ್ಲಿನ ಬಾಗಿಲು ಅರ್ಧ ತೆರೆದಿತ್ತು. ಪಾರ್ಸಲ್‌ಗೂ ಅನುಮತಿಯಿಲ್ಲದ ಕಾಲವಾಗಿದ್ದರಿಂದ ಬಾಗಿಲು ತೆರೆದಿದ್ದರೂ ಹೊಟೆಲ್ಲಿನ ವ್ಯವಹಾರ ನಡೆಯುತ್ತಿರಲಿಲ್ಲ. ಒಳಗಿದ್ದ ಮಾಲೀಕ ತನ್ನದೇನೋ ಕೆಲಸ ಮುಗಿಸಿ ಗಲ್ಲಾಪೆಟ್ಟಿಗೆಗೆ ಬೀಗ ಹಾಕಿ ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಹೊರಗಡೆ ಕಾರೊಂದು ನಿಂತ ಸದ್ದಾಗಿತ್ತು.ಕಾರಿನ ಇಂಜಿನ್ ಸುಮ್ಮನಾದ ಎರಡು ನಿಮಿಷಕ್ಕೆ ನಿಧಾನಕ್ಕೆ ಹೊಟೆಲ್ಲಿನ ಅರೆ ತೆರೆದ ಬಾಗಿಲಲ್ಲಿ ಬಾಗಿ ಒಳಗೆ ಬಂದಿದ್ದ ಅವನು.ಹಾಗೆ ಬಂದವನು ಒಮ್ಮೆಲೇ ’ಊಟ ಏನಾದ್ರೂ ಇದೆಯಾ ಸರ್..’? ಎಂದು ಕೇಳಿದಾಗ ಹೊಟೆಲ್ಲಿನ ಮಾಲೀಕನಿಗೆ ಗಲಿಬಿಲಿ.ಅಸಲಿಗೆ ಅದು ವ್ಯಾಪಾರ ನಿರ್ಬಂಧಿತ ಕಾಲ.ತಾನು ಊಟ ಕೊಟ್ಟ ವಿಷಯ ಗೊತ್ತಾದರೆ ಪೋಲಿಸು,ಕೇಸು ಅಂತೆಲ್ಲ ಸಮಸ್ಯೆ.ಹಾಗೆಂದುಕೊಂಡವನು ಇಲ್ಲವೆಂದುಬಿಡಬೇಕೆಂದು ನಿರ್ಧರಿಸಿ ಒಮ್ಮೆ ಬಂದಿದ್ದವನತ್ತ ದಿಟ್ಟಿಸಿದ.ಬಂದವನ ಕತ್ತಿನಲ್ಲಿ ದಪ್ಪ ಚಿನ್ನದ ಚೈನು,ಕೈ ಬೆರಳುಗಳಲ್ಲಿ ಉಂಗುರಗಳು,ಯಾವುದೋ ದುಬಾರಿ ವಾಚು,ಮೈ ಮೇಲೆ ತುಟ್ಟಿ ದಿರಿಸು.ದೊಡ್ಡ ಸಿರಿವಂತನೇ ಇರಬೇಕು ಎನ್ನಿಸಿತ್ತು ಮಾಲೀಕನಿಗೆ.ಕೊಂಚ ಹೊತ್ತು ಯೋಚಿಸಿದವನು ’ಊಟ ಇದೆ.ಆದರೆ ಕೆಲಸದವರಿಗಾಗಿ ಮಾಡಿದ್ದು.ಪರವಾಗಿಲ್ಲವಾ..?’ಎಂದುಬಿಟ್ಟಿದ್ದ ಅವನು.ಒಂದರೇಕ್ಷಣವೂ ಹಿಂಜರಿಯದೆ,’ಅಯ್ಯೋ,ಏನೋ ಒಂದು ಕೊಡಿ ಸರ್’ಎನ್ನುತ್ತ ದೈನೇಸಿಯಾಗಿ ಅಲ್ಲಿಯೇ ಇದ್ದ ಮೇಜಿನ ಮೇಲೆ ಕೂತುಬಿಟ್ಟ ಸಿರಿವಂತ.ಹೊಟೆಲ್ಲಿನವನಿಗೆ ಗಾಬರಿಯಾಯ್ತು.ಕೆಲಸದವರ ಊಟವನ್ನು ಯಾವುದೇ ಕಾರಣಕ್ಕೂ ಶ್ರೀಮಂತ ಮಾಡಲಾರ ಎಂದುಕೊಂಡಿದ್ದವನ ಲೆಕ್ಕಾಚಾರ ತಲೆಕೆಳಗಾಗಿತ್ತು.ಊಟವಿದೆ ಎಂದೊಪ್ಪಿಕೊಂಡಿದ್ದ ತಪ್ಪಿಗೆ ಒಳಗಿದ್ದ ಕೆಲಸದವರತ್ತ ನೋಡಿದ್ದ ಮಾಲೀಕ.ಕೆಲಸದಾಳಿಗೆ ಅರ್ಥವಾಗಿತ್ತು.


ತಟ್ಟೆಯ ತುಂಬ ಅನ್ನ ,ಮೇಲೊಂದಿಷ್ಟು ಸಾರು ಸುರಿದುಕೊಂಡು, ತಮಗಾಗಿ ಮಾಡಿಕೊಂಡಿದ್ದ ಪಲ್ಯವನ್ನು ತಟ್ಟೆಗೆ ಹಾಕಿ ಸಿರಿವಂತನ ಎದುರಿಗಿಟ್ಟ ಕೆಲಸದವನು.ಅನ್ನ ಕಂಡ ಸಿರಿವಂತನ ಮುಖದಲ್ಲಿ ಸಂತಸದ ನಗೆ.ತಟ್ಟೆಗೆ ಕೈ ಹಾಕಿದವನು ಬದುಕಿನಲ್ಲಿ ಅನ್ನವೇ ಕಂಡಿಲ್ಲವೇನೋ ಎಂಬಂತೆ ಗಬಗಬನೇ ತಿನ್ನಲಾರಂಭಿಸಿದ್ದ ಸಿರಿವಂತ.ಹಣೆಯ ಮೇಲಿದ್ದ ಹಸಿವಿನ ಬೆವರುಗಳನ್ನು ಬರಿಗೈಯಲ್ಲಿಯೇ ಒರೆಸಿಕೊಳ್ಳುತ್ತ,ತುತ್ತನ್ನೆತ್ತಿ ಗಂಟಲಿಗಿಳಿಸಿ ಕೊಳ್ಳುತ್ತ,ಅವಸರಕ್ಕೆ ಮೈ ಮೇಲೆ ಚೆಲ್ಲಿಕೊಳ್ಳುತ್ತ ಉಣ್ಣುತ್ತಿದ್ದ ಅವನ ಪರಿಗೆ ಮಾಲೀಕನ ಕಣ್ಣಂಚು ಜಿನುಗಿತ್ತು. ಅದರ ಪರಿವೆಯಿಲ್ಲದೇ ಊಟ ಮುಗಿಸಿದ ಸಿರಿವಂತ,ಕೈ ತೊಳೆದು ’ನಿಮಗೆ ಪುಣ್ಯ ಬರ್ಲಿ ರಾಯರೇ,ಏನೋ ಕೆಲಸಕ್ಕೆ ಪರ್ಮಿಶನ್ ತಗೊಂಡು ಬೇರೆ ಊರಿಗೆ ಹೋಗಿದ್ದೆ.ನಿನ್ನೆ ರಾತ್ರಿ ತಿಂದವನಿಗೆ ರಸ್ತೆಯಲ್ಲೆಲ್ಲೂ ಬೆಳಿಗ್ಗೆ ತಿಂಡಿಯೂ ಸಿಕ್ಕಿಲ್ಲ,ಇವತ್ತು ಸತ್ತೇ ಹೋಗ್ತಿನಿ ಅಂದುಕೊಂಡಿದ್ದೆ, ನಿಮ್ಮಿಂದ ಬಹಳ ಉಪಕಾರವಾಯಿತು’ ಎಂದು ಕೈ ಎತ್ತಿ ಮುಗಿದು ನೂರರ ನೋಟೊಂದನ್ನು ಮೇಜಿನ ಮೇಲಿಟ್ಟು ಮರುಮಾತನಾಡದೇ ಹೊರಟುಹೋಗಿದ್ದ.


ಕೊರೊನಾ ಲಾಕ್‌ಡೌನ್ ಕಾಲಕ್ಕೆ ನಡೆದ ಸತ್ಯಘಟನೆಯಿದು. ’ಬೇರೆ ಸಮಯದಲ್ಲಾಗಿದ್ದರೆ ಆ ಮನುಷ್ಯ ಊಟವನ್ನಿರಲಿ, ಆ ತಟ್ಟೆಯನ್ನು ಸಹ ಕೈಯಿಂದ ಮುಟ್ಟುತ್ತಿರಲಿಲ್ಲ.ಆದರೆ ಇವತ್ತು ಒಂದಗುಳು ಸಹ ಬಿಡದೇ ತಟ್ಟೆಯನ್ನು ಸ್ವಚ್ಛಗೊಳಿಸಿದ್ದ. ಮೈಮೇಲೆ ದುಬಾರಿ ಬಟ್ಟೆ,ಕೈಯಲ್ಲಿ ಬ್ರಾಂಡೆಡ್ ವಾಚು,ಮೈ ತುಂಬ ಚಿನ್ನ,ಮರ್ಸಿಡಿಸ್ ಕಾರು ಎಲ್ಲವೂ ಇತ್ತು ಅವನ ಬಳಿ. ಆದರೆ ಹಸಿವಿಗೆ ಅನ್ನವಿರಲಿಲ್ಲ.ಅಷ್ಟು ದೊಡ್ಡ ಸಿರಿವಂತ ಯಕಶ್ಚಿತ್ ಅನ್ನ ತುಂಬಿದ್ದ ಒಂದು ತಟ್ಟೆಯೆದುರು ಭಿಕ್ಷುಕನಂತಾಗಿದ್ದ. ಅವನ ಗತ್ತು ಗೈರತ್ತು,ಶಿಸ್ತುಗಳೆಲ್ಲವೂ ಹಸಿವಿನೆದುರು ಸೋತು ಮಂಡಿಯೂರಿದ್ದವು.ಈ ಕೊರೊನಾ ಭಯವನ್ನಷ್ಟೇ ಕೊಟ್ಟಿಲ್ಲ,ನಮ್ಮ ಅಹಮಿಕೆ, ಸಿರಿವಂತಿಕೆ, ಮೇಲುಕೀಳುಗಳ ನಿರರ್ಥಕತೆಯ ಕುರಿತು ಅಧ್ಬುತ ಪಾಠಗಳನ್ನೂ ಸಹ ಕಲಿಸುತ್ತಿದೆ ನೋಡು’ಎಂದಿದ್ದರು ಹೊಟೆಲ್ಲಿನ ಮಾಲೀಕರು. ಕತೆ ಕೇಳಿದ ನನಗೇನೋ ಭಾವುಕತೆ.ಕೊರೊನಾ ಕಲಿಸಿದ ಪಾಠವನ್ನು ಓದುಗರಿಗಾಗಿ ಹೀಗೆ ಬರೆದಿಟ್ಟೆ.


ಗುರುರಾಜ ಕೊಡ್ಕಣಿ,ಯಲ್ಲಾಪುರ

0 likes

Published By

Gururaj Kodkani

gururajkodkani

Comments

Appreciate the author by telling what you feel about the post 💓

Please Login or Create a free account to comment.