ಬಹುಶಃ ಆಗ ಎಂಟು ಅಥವಾ ಹತ್ತು ಇದ್ದಿರಬೇಕು ನನಗೆ ವಯಸ್ಸು.ಚಂದನ ಟಿವಿಯೂ ಅಸ್ತಿತ್ವಕ್ಕೆ ಬಂದಿರದ ಕಾಲ.ಭಾನುವಾರದ ವಿಶೇಷ ಕಾರ್ಯಕ್ರಮಗಳ ಪೈಕಿ ಬೆಳಗಿನ ಒಂದು ಗಂಟೆಯನ್ನು ರಾಷ್ಟ್ರೀಯ ವಾಹಿನಿ ಕನ್ನಡದ ಕಾರ್ಯಕ್ರಮಗಳಿಗಾಗಿ ಮೀಸಲಿಡುತ್ತಿತ್ತು.ಆಗ ನೋಡಿದ್ದ ಧಾರಾವಾಹಿ ,'ಮುಖಮುಖಿ'ಟಿ ಎನ್ ಸೀತಾರಾಮ್‌ರ ಮೊದಲ ಧಾರಾವಾಹಿಯಂತೆ.ಅದರಲ್ಲೊಂದು ಕತೆಯಲ್ಲಿ ಕಥಾನಾಯಕನಿಗೆ ನಿಗೂಢ ನಾಣ್ಯವೊಂದು ಸಿಕ್ಕಿರುತ್ತದೆ.ಅದನ್ನು ನಿಧಾನಕ್ಕೆ ಗಾಳಿಯಲ್ಲಿ ಚಿಮ್ಮಿಸಿ ಅಂಗೈಯಲ್ಲಿ ಆಡಿಸುತ್ತ ಕಲ್ಪಿಸಿಕೊಳ್ಳುವ ಪ್ರತಿ ಘಟನೆಗಳೂ ಬದುಕಿನಲ್ಲಿ ಸತ್ಯವಾಗಿ ಪರಿವರ್ತನೆಯಾಗುತ್ತಿರುತ್ತವೆ.ಹಾಗೆ ಸಾಗುವ ಧಾರಾವಾಹಿಯ ಕೊನೆಯಲ್ಲಿ ನಾಯಕ ಕೊನೆಗೊಮ್ಮೆ ನಾಣ್ಯವನ್ನು ಕಲ್ಯಾಣಿಯೊಳಕ್ಕೆ ಬೀಳಿಸಿಕೊಳ್ಳುವ ಮೂಲಕ ಅದನ್ನು ಕಳೆದುಕೊಳ್ಳುತ್ತಾನೆ.ಅಲ್ಲಿಗೆ ಕತೆ ಮುಗಿಯುತ್ತದೆ.
ನನಗಿನ್ನೂ ಬಾಲ್ಯ.ತೀರ ಧಾರಾವಾಹಿಗಳು ಸತ್ಯವಲ್ಲ ಎನ್ನುವುದು ಗೊತ್ತಾಗಿದ್ದರೂ ,ಒಂದು ವೇಳೆ 'ಸತ್ಯವಾಗಿದ್ದರೇ..'? ಎನ್ನುವ ಅನುಮಾನವುಳಿಸುವ ವಯಸ್ಸದು.ಧಾರಾವಾಹಿ ನೋಡಿದವನಿಗೆ 'ಛೇ ಅಂಥದ್ದೊಂದು ನಾಣ್ಯ ನನಗೂ ಸಿಗಬಾರದಿತ್ತಾ' ಎನ್ನಿಸಿ ಹಳಹಳಿಸಿದ್ದೆ.ವಿಚಿತ್ರ ನೋಡಿ,ಧಾರಾವಾಹಿಯ ಕೊನೆಯ ಕಂತು ಮುಗಿದ ಕೆಲವೇ ದಿನಗಳಲ್ಲಿ ಮೈದಾನಕ್ಕೆ ಆಟಕ್ಕೆಂದು ಹೋದವನಿಗೆ ಅಲ್ಲಿ ದೇಗುಲದ ಪಕ್ಕದಲ್ಲಿ ಸಿಕ್ಕಿತ್ತು ಆ ತಾಮ್ರದ ಹಳೇಯ ನಾಣ್ಯ..!!
ಒಂದಷ್ಟು ಹುಡುಗರು ಸೇರಿ ಕ್ರಿಕೆಟ್ ಆಡುತ್ತಿದ್ದರೆ,ಫೀಲ್ಡಿಂಗ್ ಮಾಡುತ್ತಿದ್ದ ನಾನು ಚೆಂಡಿನ ಹಿಂದೆ ಮೈದಾನದ ಕೊನೆಗಿದ್ದ ದೇಗುಲದ ಹಿಂಬಾಗದತ್ತ ಓಡಿದ್ದೆ.ಚೆಂಡು ಸಿಕ್ಕಿತು.ಚೆಂಡಿನ ಪಕ್ಕಕ್ಕೆ ಬಿದ್ದಿತ್ತು ಆ ಹಳೆಯ ನಾಣ್ಯ. ಕೆಂಪಗಿದ್ದಿದ್ದರಿಂದ ತಾಮ್ರದ ನಾಣ್ಯವೇ ಇರಬೇಕು ಎಂದುಕೊಂಡೆ.ಒಂದು ಮುಖದ ಮೇಲೆ ಯಾವುದೋ ದೇವಿಯ ಚಿತ್ರವಿದ್ದರೆ,ಮತ್ತೊಂದು ಮುಖ ಮಸುಕುಮಸುಕು. ಅದನ್ನು ಕಂಡವನು ತಕ್ಷಣವೇ ಜೇಬಿಗಿಳಿಸಿದ್ದೆ. ಹಾಗೆ ಜೇಬಿಗಿಳಿಸಿ ಆಟದಲ್ಲಿ ಮಗ್ನನಾದರೂ ಮನಸ್ಸೆಲ್ಲ ನಾಣ್ಯದ ಬಗ್ಗೆಯೇ ಯೋಚಿಸುತ್ತಿತ್ತು.ಇದು ಅದೇ ತರಹದ ನಾಣ್ಯವಾಗಿರಬಹುದಾ..? ಮುಖಾಮುಖಿ ನಾಯಕನ ಬಳಿಯಿದ್ದದ್ದು ಎನ್ನುವ ಪ್ರಶ್ನೆ ಮನಸಿನಲ್ಲಿ.ಆದರೆ ಅದು ಕೊಳದಲ್ಲಿ ಬಿದ್ದು ಹೋಯ್ತಲ್ಲ ಎನ್ನುವ ಉತ್ತರದ ತರ್ಕ ತಕ್ಷಣಕ್ಕೆ.ಯಾರಿಗೆ ಗೊತ್ತು..? ಅದೇ ನಾಣ್ಯವಿರಲಿಕ್ಕೂ ಸಾಕು,ಅಲ್ಲಿ ಕೊಳದಲ್ಲಿ ಬಿದ್ದು ಇಲ್ಲಿ ಹೀಗೆ ದೇಗುಲದ ಹಿಂದೆ ಬಂದಿದ್ದರೆ ಎಂಬ ಹತ್ತು ಹಲವು ಗೊಂದಲಗಳು ಮನದಲ್ಲಿ.ಮೈದಾನದಲ್ಲಿ ನಿಂತಿದ್ದರೂ ಮನಸೆಲ್ಲ ನಾಣ್ಯದ ಮೇಲೆ ಕೇಂದ್ರಿತ.ಆಟ ಮುಗಿಸಿ ಮನೆಗೆ ಸೇರುವವರೆಗೂ ಸಮಾಧಾನವಿರಲಿಲ್ಲ.ಕೊನೆಗೂ ಪಶ್ಚಿಮದ ಸೂರ್ಯ ಪೂರ್ತಿ ಮುಳುಗಿದ,ಇನ್ನು ಆಡಿದರೆ ಚೆಂಡು ಕೊಂಚವೂ ಕಾಣದು ಎನ್ನುವುದು ಅರ್ಥವಾದಾಗ ಆಟ ನಿಲ್ಲಿಸಿ ನಮ್ಮ ನಮ್ಮ ಮನೆಗೆ ತೆರಳಿದ್ದೆವು.
ಹಾಗೆ ಮನೆಗೆ ತೆರಳಿದರೆ ಕಾಲು ತೊಳೆದವನು ನಡುಮನೆಯಲ್ಲಿ ನಿಂತು ನಿಧಾನಕ್ಕೆ ಚಲ್ಲಣದ ಜೇಬಿಗೆ ಕೈ ಹಾಕಿದ್ದೆ. ನಾಣ್ಯ ಕೆಂಪಗೆ ಮಿಂಚಲಾರಂಭಿಸಿತ್ತು.ನಿಜಕ್ಕೂ ವಿಶೇಷ ನಾಣ್ಯವೆಂದುಕೊಂಡಿರೇನೊ..? ಏನಿಲ್ಲ ನಡುಮನೆಯಲ್ಲಿ ಬೆಳಗುತ್ತಿದ್ದ ಸಣ್ಣ ಜೀರೊ ಬಲ್ಬ್‌ನ ಬೆಳಕು ನಾಣ್ಯದ ತುದಿಯ ಮೇಲೆ ಪ್ರತಿಫಲಿಸಿದ್ದ ಫಲವದು.ಆದರೆ ಆ ಹೊತ್ತಿಗೆ ಈ ತರ್ಕ ಅರ್ಥವಾಗದು.ಅರ್ಥವಾಗಿದ್ದರೂ ಪ್ರಯತ್ನಿಸಿ ನೋಡಿಯೇ ಬಿಡೊಣ ಎನ್ನುವ ಮನೋಭಾವ.ತಕ್ಷಣಕ್ಕೆ ಏನಾದರೂ ಕೇಳಿ ನೋಡಬೇಕೆನ್ನಿಸಿತ್ತು..
ನಾಲ್ಕು ಅಥವಾ ಐದನೇಯ ತರಗತಿಯ ಹುಡುಗನಿಗೇನಿರುತ್ತವೆ ಆಸೆಗಳು..? ದೇವರು ವರ ಕೊಟ್ಟರೆ ಭಿಕ್ಷೆ ಬೇಡಲು ಚಿನ್ನದ ತಟ್ಟೆ ಕೊಡು ಎಂದಿದ್ದನಂತೆ ಒಬ್ಬ ಭಿಕ್ಷುಕ.ನನ್ನದೂ ಅದೇ ಕತೆಯಾಗಿತ್ತು.ಕೈಲಿದ್ದ ನಾಣ್ಯವನ್ನು ಒಮ್ಮೆ ಗಾಳಿಗೆ ಎಗರಿಸಿ ,ಅಂಗೈಯಲ್ಲಿ ಹಿಡಿದು ಮುಚ್ಚಿ ,'ನಾಳೆಯಿಂದ ಹತ್ತು ದಿನ ಶಾಲೆಗೆ ರಜಾ ಸಿಗ್ಲಿ' ಎಂದಿದ್ದೆ.ಹಾಗಂದವನು ತಕ್ಷಣ ನಾಣ್ಯವನ್ನು ಕೋಣೆಯಲ್ಲಿದ್ದ ಮೇಜಿನ ತುದಿಯೊಂದರಲ್ಲಿ ಸಿಕ್ಕಿಸಿಟ್ಟುಬಿಟ್ಟೆ.ರಾತ್ರಿ ಊಟ ಮಾಡಿದವನಿಗೆ ಗಡದ್ದಾಗಿ ನಿದ್ರೆ.
ಮಾರನೇಯ ದಿನ ಎಂದಿನಂತೆ ಶಾಲೆಗೆ ಹೋಗಿದ್ದೆ.ಯಥಾಪ್ರಕಾರ ಶಾಲೆಯ ಗಂಟೆ ಹೊಡೆದು,ದಿನದ ಪ್ರಾರ್ಥನೆಗಳು ,ಗಾದೆಮಾತುಗಳು ಅಮರವಾಣಿಗಳು ಮುಗಿದವು.ಎಲ್ಲ ಮುಗಿದು ಮಕ್ಕಳೆಲ್ಲ ನಮ್ಮನಮ್ಮ ತರಗತಿಗೆ ಸೇರಿಕೊಂಡೆವು.ಆದರೆ ಆವತ್ತೇಕೋ ತರಗತಿ ಸೇರಿಕೊಂಡ ತುಂಬ ಸಮಯದವರೆಗೂ ಶಿಕ್ಷಕರು ತರಗತಿಗೆ ಬರಲಿಲ್ಲ.ನಮಗೇನೋ ಕುತೂಹಲ.ಸಾಮಾನ್ಯವಾಗಿ ಐದು ಹತ್ತು ನಿಮಿಷಗಳಿಗೆಲ್ಲ ತರಗತಿಗೆ ಹಾಜರಾಗುವ ಶಿಕ್ಷಕರು ಅದ್ಯಾಕೆ ಇನ್ನೂ ಬಂದಿಲ್ಲ ಎನ್ನುವ ಗೊಂದಲದಲ್ಲಿ ನಾವಿದ್ದರೇ ಮೂಲೆಯಲ್ಲೆಲ್ಲೋ ಕೂತಿದ್ದ ಹುಡುಗನೊಬ್ಬ,'ಸೂಟಿ ಅಂತ್ರಲೇ ,ಇವತ್ತಿಂದ ಸಾಲಿ' ಎಂದವನೇ ಸಂತಸದಲ್ಲಿ ತನ್ನ ಮೇಜಿನ ಮೇಲಿದ್ದ ಪುಸ್ತಕಗಳನ್ನು ಬ್ಯಾಗಿಗೆ ತುಂಬಲಾರಂಭಿಸಿದ್ದ.ನಮಗೆ ಏನೂ ಅರ್ಥವಾಗದ ಭಾವ.ಅಷ್ಟರಲ್ಲಿ ಶಿಕ್ಷಕರು ಬಂದರು.'ನಮssssಸ್ತೇ ಟೀssssಚರ್' ಎಂದು ನಾವುಗಳು ಬೊಬ್ಬೆ ಹೊಡೆದರೆ ಶಿಕ್ಷಕರಿಗೆ ಲಕ್ಷ್ಯವಿಲ್ಲ.ಕಪ್ಪುಹಲಗೆಯ ಪಕ್ಕದಲ್ಲಿದ್ದ ಚಾಕ್ ಪೀಸ್ ತೆಗೆದುಕೊಂಡು ಬೊರ್ಡಿನ ಮೇಲೆ 'ಇಂದಿನಿಂದ 23ನೇ ತಾರೀಖಿನವರೆಗೆ ರಜಾ' ಎಂದು ಬರೆದರು.ಅದರ ಕೆಳಗೆ 'ಮನೆ ಕೆಲಸ' ಎಂದು ಬರೆದರೆ ನನಗೆ ಮೈ ಸಣ್ಣಗೆ ಕಂಪನ.ರಜಾ ಅವಧಿ ಹತ್ತು ದಿನಗಳಿಗಿಂತ ಜಾಸ್ತಿಯಿತ್ತು.ಆದರೆ ನನಗೆ ಮಾತ್ರ ಖಚಿತವಾಗಿತ್ತು.ನನಗೆ ಸಿಕ್ಕಿರುವುದು ಮಾಯಾ ನಾಣ್ಯವೇ...!!
ಶಾಲೆಯ ಬೆಲ್ ಹೊಡೆದು ಮನೆಯತ್ತ ಹುಡುಗರೆಲ್ಲ ಓಡಿದರೆ ನಾನು ಎಲ್ಲರಿಗಿಂತ ವೇಗವಾಗಿ ಓಡಿದ್ದೆ.ಆವತ್ತಿಗೆ ನನಗಿದ್ದದ್ದು ರಜೆಯ ಖುಷಿಯಲ್ಲ ,ಅದು ಬೇರೆಯದ್ದೇ ಸಂತಸ.ಸ್ವತಃ ಅಲ್ಲಾವುದ್ದೀನನ ಅದ್ಭುತ ದೀಪ ನನ್ನ ಕೈಗೆ ಸಿಕ್ಕಂತಾಗಿತ್ತು.ಅಪ್ಪ ಮನೆಯಲ್ಲಿದ್ದರು.ಅಮ್ಮ ಎಂದಿನಂತೆ ಆಫಿಸು.ಅವಸರಕ್ಕೆ ಮನೆಗೆ ಬಂದ ನನ್ನತ್ತ ತಿರುಗಿದ ಅಪ್ಪ ,'ರಜೆ ಏನಲೇ..'? ಎಂದರು.ಹೌದು ಎಂದವನೇ ಪಾಟಿಚೀಲವನ್ನು ಕೋಣೆಯಲ್ಲಿಟ್ಟು ,ಕೈ ಕಾಲು ತೊಳೆದು ಮೇಜಿನ ಕೆಳಗೆ ಬಚ್ಚಿಟ್ಟಿದ್ದ ನಾಣ್ಯವನ್ನು ತೆಗೆದುಕೊಂಡು ಮೈದಾನದತ್ತ ನಡೆದಿದ್ದೆ.ಮೈದಾನದ ಒಂದು ಮೂಲೆಯಲ್ಲಿ ಕೂತವನ ಎರಡನೇ ಬೇಡಿಕೆ ,'ಅಪ್ಪ ಸಂಜೆ ಪೇಟೆಗೆ ಹೋದಾಗ ಹೊಸ ಬ್ಯಾಟು ತರಬೇಕು..'
ನಾಣ್ಯದೆದುರು ಹಾಗೊಂದು ಬೇಡಿಕೆ ಇಟ್ಟವನು ಅದನ್ನು ಪುನಃ ಜೇಬಿಗಿಳಿಸವಷ್ಟರಲ್ಲಿ ಮೈದಾನಕ್ಕೆ ಬೀದಿಯ ಸ್ನೇಹಿತರು ಬಂದಿದ್ದರು.ಮನಸಿಗೆ ಬಂದದ್ದೇನೋ ಆಟವಾಡಿದೆವು.ಸರಿಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಆಟವಾಡಿದರೂ ನಾಣ್ಯದ ರಹಸ್ಯವನ್ನು ಮಾತ್ರ ನಾನು ಯಾರೆದುರೂ ತೆರೆದಿಡಲಿಲ್ಲ.ಆಟ ಮುಗಿಯುವಷ್ಟರಲ್ಲಿ ಸಂಜೆಯಾಗಿತ್ತು.ಮನೆಗೆ ತೆರಳಿದರೆ ಅಪ್ಪ ತನ್ನ ಎಂದಿನ ಅಭ್ಯಾಸದಂತೆ ಪೇಟೆಗೆ ತೆರಳಿದ್ದ.ರಾತ್ರಿ ಬ್ಯಾಟು ಮನೆಗೆ ಬರುವುದು ಖಾತ್ರಿಯಾಗಿತ್ತು.ನನಗೆ ಕಾಯುವುದೊಂದೇ ಕೆಲಸ.
ಪೇಟೆಗೆ ಹೋದ ಅಪ್ಪನಿಗಾಗಿ ಕಾಯುತ್ತ ಮನೆಯ ಬಾಗಿಲ ಬಳಿ ಕಾಯತೊಡಗಿದರೆ ಬೀದಿಯ ತುದಿಯಲ್ಲಿ ಅಪ್ಪ ಬರುವುದು ಕಾಣಿಸಿತ್ತು.ಸೂಕ್ಷ್ಮವಾಗಿ ಗಮನಿಸಿದರೆ ಅಪ್ಪನ ಕೈಲಿ ಚೀಲ ಮತ್ತು ಚೀಲದ ತುದಿಯಲ್ಲಿ ಉದ್ದನೇಯ ಹಿಡಿಕೆ ಅಸ್ಪಷ್ಟವಾಗಿ ಗೋಚರಿಸಿತ್ತು.ಅಲ್ಲಿಗೆ ಅಪ್ಪ ಬ್ಯಾಟು ತಂದಿದ್ದಾನೆನನ್ನುವುದು ಸ್ಪಷ್ಟ.
ಅಪ್ಪನಿನ್ನೂ ಮನೆಗೆ ಸೇರುವ ಮೊದಲೇ ,'ಪಪ್ಪ,ಹೊಸ ಬ್ಯಾಟ್ ತಂದಿದ್ದಾರೆ,ಹೊಸ ಬ್ಯಾಟ್ ತಂದಿದ್ದಾರೆ' ಎನ್ನುತ್ತ ಅಮ್ಮನೆದುರು ಕುಣಿದರೆ,ಅಮ್ಮನಿಗೆ ಗೊಂದಲ.'ಬ್ಯಾಟು..'? ಎಂದು ಪ್ರಶ್ನೆ ಅಮ್ಮನ ಬಾಯಿಂದ ಹೊರಬೀಳುವಷ್ಟರಲ್ಲಿ ಅಪ್ಪ ಮನೆ ಬಾಗಿಲಿಗೆ ಬಂದರು.ಬಂದವರು ಬಾಗಿಲ ಪಕ್ಕ ಚಪ್ಪಲಿ ಕಳಚಿಟ್ಟು ಚೀಲವನ್ನು ಒಳಮನೆಗೆ ಒಯ್ದರೇ ನಾನು ಅವರ ಹಿಂದೆಯೇ ಓಡಿದ್ದೆ.ಅವರು ಚೀಲವನ್ನು ಕೆಳಗಿಟ್ಟರೇ ಸರಕ್ಕನೇ ಹಿಡಿಕೆಯಿಡಿದು ಎಳೆದುಬಿಟ್ಟೆ.ಆಗ ಗೊತ್ತಾಗಿತ್ತು ನನಗೆ.ಅದು ಬ್ಯಾಟ್ ಅಲ್ಲ ,ಪ್ಲಾಸ್ಟಿಕ್ ಹಿಡಿಕೆಯ ಪೊರಕೆ..!!
ಇದೇನು ಹೀಗೆ ಯಡವಟ್ಟಾಯ್ತಲ್ಲ ಎಂದುಕೊಳ್ಳುವಷ್ಟರಲ್ಲಿ ಅಪ್ಪ ತಲೆಯ ಮೇಲೆ ರಪ್ಪನೇ ಬಿಸಿದ್ದ.ಏನಾಯಿತೆಂದು ತಿರುಗಿ ನೋಡಿದರೆ ನಾನು ಪೊರಕೆ ಹಿಡಿದೆಳೆದ ರಭಸಕ್ಕೆ ಚೀಲದಲ್ಲಿದ್ದ ಐದಾರು ಟೊಮ್ಯಾಟೊ ಹಣ್ಣುಗಳು,ಒಂದಷ್ಟು ತರಕಾರಿಗಳು ಚೀಲದಿಂದ ಹೊರಜಿಗಿದು ನೆಲಕಚ್ಚಿದ್ದವು.ಪೆಕರನಂತೆ ಅಪ್ಪನತ್ತ ನೋಡಿದರೆ 'ಕಸಬರ್ಗೆ ಅದು.ಯಾಕಷ್ಟು ಜೋರು ಎಳಿಯುವುದು' ಎಂದು ಮುಖ ಸಿಂಡರಿಸಿದ್ದ ಅಪ್ಪ.
'ಹಾಗಿದ್ರೆ ಬ್ಯಾಟು..'? ಎಂದು ಕೇಳಿದ್ದೆ.ಅಪ್ಪನಿಗಲ್ಲ,ಮನಸಿನಲ್ಲಿಯೇ.ಅಪ್ಪನನ್ನು ಕೇಳುವ ಧೈರ್ಯವಾಗಿರಲಿಲ್ಲ.ಒಮ್ಮೆ ಹುಳ್ಳಗೆ ನಕ್ಕು ಪೊರಕೆಯನ್ನು ಪಕ್ಕದಲ್ಲಿಟ್ಟವನು ಕೋಣೆಗೆ ನಡೆದೆ.ಜೇಬಿನಲ್ಲಿದ್ದ ನಾಣ್ಯ ಹೊರತೆಗೆದರೆ ಮನಸು ಗೊಂದಲದ ಗೂಡು.ರಜೆ ಕೇಳಿದಾಗ ಕೊಟ್ಟ ನಾಣ್ಯ ಬ್ಯಾಟು ಕೊಡದಿರುವುದೇಕೆ ಎನ್ನುವ ರಹಸ್ಯ ಅರ್ಥವಾಗದಾಗಿತ್ತು.ಬಹುಶಃ ದಿನಕ್ಕೊಂದು ಬೇಡಿಕೆ ನಡೆಯಲಿಕ್ಕಿಲ್ಲ,ವಾರಕ್ಕೊಂದು ಇರಬಹುದೇನೋ ಎನ್ನುವ ಹೊಸ ಗಣಿತ ಮನದಲ್ಲಿ.ಏನೋ ಎಡವಟ್ಟಾಗಿದೆ ಎನ್ನಿಸಿತ್ತು.ಏನಾದರಾಗಲಿ ನಾಳೆ ಮತ್ತೆ ಪ್ರಯತ್ನಿಸೋಣ ಎನ್ನಿಸುವಷ್ಟರಲ್ಲಿ ಟಿವಿಯತ್ತ ದಿಟ್ಟಿಸಿದ್ದ ಅಪ್ಪ ಹೇಳಿದ್ದ,'ನಿಮ್ಮ ರಜೆ ಕ್ಯಾನ್ಸಲ್ ಆಗಿದೆ.ನಾಡಿದ್ದಿಂದ ಶಾಲೆ ಮತ್ತೆ ಶುರು'
ಎದೆ ಧಸಕ್ಕೆಂದಿತ್ತು.ಶಾಲೆ ನಾಡಿದ್ದಿನಿಂದ ಮತ್ತೆ ಶುರು..? ಅಯ್ಯೋ ಭಗವಂತಾ..!! ಇದೇನಾಗಿಹೊಯ್ತು ಎಂದುಕೊಂಡೆ.'ಅದ್ಯಾಕೆ ..'? ಎಂದು ಕೇಳಿದ್ದೆ.ಆ ಹೊತ್ತಿಗೆ ಅಪ್ಪ ಏನೂ ವಿವರಿಸಿದ್ದನಾದರೂ ನನಗೀಗ ಆ ವಿಷಯ ನೆನಪಾಗುತ್ತಿಲ್ಲ.ಆಗ ನನಗೆ ಅಸಲಿಯತ್ತು ಗೊತ್ತಾಗಿತ್ತು.ಶಾಲೆಗೆ ರಜೆಯ ವಿಷಯ ಪತ್ರಿಕೆಯಲ್ಲಿ ಅಪ್ಪ ಎರಡು ದಿನ ಮೊದಲೇ ಓದಿದ್ದ ಮತ್ತು ಶಾಲೆಯಲ್ಲಿಯೇ ಹೇಳುತ್ತಾರನ್ನುವ ಕಾರಣಕ್ಕೆ ಆ ವಿಷಯದೆಡೆಗೆ ಉದಾಸೀನ ತೋರಿದ್ದ..!!
ನನ್ನ ಬಳಿಯಿರುವುದು ವಿಶೇಷ ಶಕ್ತಿಯ ನಾಣ್ಯವೇನಲ್ಲ,ಯಕಶ್ಚಿತ್ ಒಂದು ತಾಮ್ರದ ನಾಣ್ಯ ಎಂದರಿವಾದಾಗ ಭಯಂಕರ ನಿರಾಸೆ ನನಗೆ. ವಿಷಯ ಗೊತ್ತಾದ ಆ ಹೊತ್ತಿಗೆ ಮನಸೆಲ್ಲ ಮಂಕುಮಂಕು.ಆ ಮಂಕು ಕವಿದ ವಾತಾವರಣದಲ್ಲಿಯೇ ಮರುದಿನದ ರಜೆ ಸಹ ಮುಗಿದು ಬೆಳಗೆದ್ದು ಶಾಲೆಯತ್ತ ನಡೆದಿದ್ದೆ.ಶಾಲೆಯ ಬೀದಿಯಲ್ಲಿದ ಕಾರ್ಪೊರೇಷನ್ನಿನ ಸೀಮೆಂಟು ಕಸದ ತೊಟ್ಟಿಯನ್ನು ನೋಡಿ ಕೋಪ ನೆತ್ತಿಗೇರಿತ್ತು.'ಹಾಳು ನಾಣ್ಯ ಮೋಸ ಮಾಡ್ತು ' ಎಂದವನೇ ಬಿಸಿ ತೊಟ್ಟಿಗೆ ಎಸೆದೆ.ತೊಟ್ಟಿಯೊಳಗೆ ಬೀಳದ ನಾಣ್ಯ ತೊಟ್ಟಿಯ ಗೋಡೆಗೆ ಬಡಿದು ಪುಟಿದು ಪಕ್ಕದಲ್ಲಿದ್ದ ನಾಯಿಯ ಹೊಟ್ಟೆಯ ಮೇಲೆ ಬಿದ್ದಿತ್ತು.ಗಾಢ ನಿದ್ರೆಯಲ್ಲಿದ್ದ ನಾಯಿ ,'ಕುಂಯಿ,ಕಯ್ಯೋಂ' ಎಂದರಚಿ ಎದ್ದು ಕೂತು ನನ್ನೆಡೆಗೆ ನೋಡಿತ್ತು.ಸಾಧು ಸ್ವಭಾವದ ನಾಯಿಯಲ್ಲವದು.ಒಮ್ಮೆಲೆ ಗುರ್ರೆನ್ನುತ್ತ ಮೈಮೆಲರಗಿ ಬಂದಿದ್ದರೆ ನಾನು ಓಡುತ್ತ ಶಾಲೆಯ ಆವರಣ ಸೇರುವಲ್ಲಿಗೆ ನನ್ನ ಮಾಯಾ ನಾಣ್ಯದ ಕತೆ ಮುಗಿದಿತ್ತು.
ನಿನ್ನೆ ಪೇಸ್ಬುಕ್ ಲೈವ್‌ನಲ್ಲಿ ಟಿ.ಎನ್ ಸೀತಾರಾಮ್ ಈ ಕತೆಯ ಕುರಿತು ಮಾತನಾಡಿದ ಹೊತ್ತಿಗೆ ನನಗೆ ಈ ಕತೆ ನೆನಪಾಯಿತು
#ಸವಿಸವಿನೆನಪುಸಾವಿರನೆನಪು
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.