ಪಕ್ಕಕ್ಕೇ ನಿಂತಿದ್ದರೂ ನನಗವರ ಗುರುತು ಸಿಕ್ಕಿರಲಿಲ್ಲ.....!!

ನೆನಪು

Originally published in kn
Reactions 0
414
Gururaj Kodkani
Gururaj Kodkani 02 Sep, 2020 | 1 min read

ಸುಮಾರು ವರ್ಷಗಳ ಹಿಂದಿನ ಮಾತು.ಬಹುಶಃ ಮೂವತ್ತು ವರ್ಷಗಳ ಹಿಂದಿನದ್ದಾ..? ಸರಿಯಾಗಿ ನೆನಪಿಲ್ಲ.ನಾನು ಅಮ್ಮನೊಟ್ಟಿಗೆ ಅವರಮ್ಮನ ಊರಾದ ಸಿದ್ಧಾಪುರಕ್ಕೆ ಹೋಗಿದ್ದೆ.ಆ ದಿನಗಳ ಆಟಪಾಠದ ನೆನಪು ಬಹಳ ಅಸ್ಪಷ್ಟವಾಗಿದ್ದರೂ ಅದೊಂದು ನೆನಪು ಮಾತ್ರ ಇವತ್ತಿಗೂ ಸ್ಪಷ್ಟವಾಗಿದೆ.


'ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಬರ್ತಿದ್ದಾರಂತೆ ಅವರು ನಾಳೆ' ಅಂದಿದ್ದರು ಅಜ್ಜಿ ಆ ದಿನ ಸಂಜೆ.ಅವರಿಗೆ ಪರಮೋತ್ಸಾಹ. ಊರಲ್ಲಿ ಹೆಚ್ಚು ಜನಕ್ಕೆ ಗೊತ್ತಿಲ್ಲದ ವಿಷಯವನ್ನು ನನ್ನಜ್ಜಿ ಹೇಗೋ ಮಠದಲ್ಲಿದ್ದ ಪರಿಚಿತ ಅರ್ಚಕರ ಬಳಿ ಕೇಳಿಕೊಂಡು ಬಂದಿದ್ದಳು.ನನ್ನ ಅಮ್ಮನಿಗೂ ಭಯಂಕರ ಉಮ್ಮೇದಿ.ಅವರೆಲ್ಲರ ಜೊತೆ ನನಗೂ ಉತ್ಸಾಹವೇ.ಎಲ್ಲರೂ ಸೇರಿ ಗುರುಗಳ ಮಠಕ್ಕೆ ಬೇಗನೆ ಹೋಗುವುದಾಗಿ ನಿರ್ಧರಿಸಿದ್ದೆವು.


ಮರುದಿನ ಬೇಗ ಸ್ನಾನ ತಿಂಡಿ ಮುಗಿಸಿ ಹೋಗಿ ನಿಂತರೆ ಅದಾಗಲೇ ಸಣ್ಣಗೆ ಜನ ಸೇರಲು ಶುರುವಾಗಿತ್ತು ಮಠದೆದುರು. ಕೆಲವರಿಗೆ ಮಾತ್ರ ಗೊತ್ತಿದ್ದ ಸುದ್ದಿ ಅದಾಗಲೇ ಊರ ತುಂಬ ಹರಡಿತ್ತು.ಜನಕ್ಕೆ ನೆಚ್ಚಿನ ನಾಯಕನನ್ನು ಕಾಣುವ ತವಕ. ನಮ್ಮ ಅದೃಷ್ಟಕ್ಕೆ ನಾವು ಕೊಂಚ ಬೇಗವೇ ಬಂದಿದ್ದರಿಂದ ಮಠದ ಆವರಣದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿತ್ತು.ಕೊಂಚ ಹೊತ್ತಿಗೆ ನಿಧಾನಕ್ಕೆ ಜನ ಜಮಾಯಿಸತೊಡಗಿದರೆ ಆವರಣ ಭರ್ತಿಯಾಗಲಾರಂಭಿಸಿತ್ತು.ಮಠದ ನಿರ್ವಾಹಕರು ನಡುವೆ ಕೊಂಚ ಜಾಗ ಬಿಟ್ಟು ಕೂರಲು ಹೇಳುತ್ತಿದ್ದಂತೆ ನನಗೆ ಆತಂಕ.ನನ್ನೆದರು ಎಲ್ಲ ಕೂತು ಜನ ಕವಿದು ಬಿಟ್ಟರೆ ನನಗೆ ಅವಕಾಶ ತಪ್ಪಿ ಹೋದೀತು ಎನ್ನುವ ಭಯ.ತಕ್ಷಣವೇ ಕೂತಲ್ಲಿಂದ ಎದ್ದವನು ಗರ್ಭಗುಡಿಯ ಆವರಣದ ಸಮೀಪವೇ ಹೋಗಿ ಕೂತೆ.ಹಾಗೆ ನಾನು ಹೋಗಿ ಕೂತ ಅರ್ಧಗಂಟೆಗೆಲ್ಲ ಮಠದ ಆವರಣ ತುಂಬಿ ಹೋಗಿತ್ತು.ಹೊರಾಂಗಣದ ತುಂಬ ಜನಸ್ತೋಮ. ಹಿಂದೆ ಮುಂದೆ ಎಲ್ಲಿ ಕಂಡರೂ ಜನಸಾಗರ.


ಒಂದರ್ಧ ಗಂಟೆ ಕಳೆದಿರಬೇಕು.ಜನರ ನಡುವೆ ನಿಧಾನಕ್ಕೆ ಶುರುವಾದ ಗುಸುಗುಸು ಸದ್ದು ಒಂದೆರಡು ಕ್ಷಣದಲ್ಲೇ ಜೋರಾಯಿತು.ಹೊರಗೆ ಕಾರು ನಿಂತ ಸದ್ದಿನ ಹಿಂದೆ ಒಂದಿಬ್ಬರು ಮಠದ ಅರ್ಚಕರು ಜನರನ್ನು ಸರಿಸುತ್ತ 'ದಾರಿ ಬಿಡಿ,ಚೂರು ದಾರಿ ಬಿಡಿ' ಎನ್ನುತ್ತ ವಿನಂತಿ ಮಾಡುತ್ತ ಗಡಿಬಿಡಿಯಲ್ಲಿ ನಡೆದರು.ನಾನು ಸರಕ್ಕನೇ ಮಠದ ಪ್ರವೇಶ ದ್ವಾರದತ್ತ ನೋಡಿದೆ.ಆಗ ಕಂಡಿದ್ದು ಅವರ ಮಕ್ಕಳು ಮತ್ತೊಬ್ಬ ಹಿರಿಯರು..!!


ನನಗೆ ಗೊಂದಲ. ಮತ್ತೊಮ್ಮೆ ಕೂತಲ್ಲಿಯೇ ಜಿರಾಫೆಯಂತೆ ಕತ್ತು ಎತ್ತರಿಸಿ ನೋಡಿದೆ.ಅವರು ಕಾಣರು.ಅಯ್ಯೊ..!! ಅವರು ಬಂದಿಲ್ಲವಾ ..? ಕೆಟ್ಟಿತಲ್ಲ ಕೆಲಸ,ಅವರಿಗೋಸ್ಕರವೇ ಬಂದಿದ್ದು ಎನ್ನಿಸುವಷ್ಟರಲ್ಲಿ ಅವರ ಮಕ್ಕಳು ಮತ್ತು ಬಿಳಿಯ ಅಂಗಿ ಪಂಜೆ ಧರಿಸಿದ್ದ ಹಿರಿಯರು ಗರ್ಭಗುಡಿಯ ಸಮೀಪ ತೆರಳಿದರು.ಐದತ್ತು ನಿಮಿಷಗಳ ಪೂಜೆ,ತೀರ್ಥ ಪ್ರಸಾದ ಸ್ವೀಕರಣೆಯಾಯಿತು.ನೆರೆದಿದ್ದ ಜನರೆಲ್ಲರೂ ಗೌಜಿ ಗದ್ದಲವಿಲ್ಲದ ಮನಸ್ಥಿತಿಯವರಿರಬೇಕು,ಪೂಜೆ ಮುಗಿಯುವವರೆಗೂ ಎಲ್ಲರಲ್ಲಿಯೂ ಸಣ್ಣ ಗುಸುಗುಸುವಿತ್ತೇ ಹೊರತು ಗಲಾಟೆಯಾಗಲಿ,ಈಗಿನಂತೆ ಜೈಕಾರವಾಗಲಿ ಇರಲಿಲ್ಲ.ಪೂಜೆ ಮುಗಿದು ಹೊರಡುವ ಮುನ್ನ ನನ್ನ ಸಹನೆ ಮುಗಿದಂತಾಗಿ ಸರಕ್ಕನೇ ಕೂತಲ್ಲಿಂದ ಎದ್ದು ನಿಂತು ಮತ್ತೆ ಬಾಗಿಲ ಬಳಿ ನೋಡುತ್ತ ನಿಂತೆ.ನನಗೆ 'ಅವರು' ಹೊರಗೆಲ್ಲಾದರೂ ಬಂದಿರಬಹುದಾ,ಕಾಣಬಹುದಾ ಎನ್ನುವ ನಿರೀಕ್ಷೆ.ಕಾಣದೇ ಹೋದಾಗ ಮತ್ತದೇ ನಿರಾಸೆ.ಸಪ್ಪೆ ಮೊಗದಲ್ಲಿ 'ಪ್ಚ್' ಎಂದೆ.ಅಷ್ಟರಲ್ಲಿ ಹಿಂದೆ ನಿಂತಿದ್ದ ಆ ಹಿರಿಯರು ನನ್ನನ್ನು ಗಮನಿಸಿದ್ದರಿರಬೇಕು.ತಲೆಯ ಮೇಲೆ ಮೃದುವಾಗಿ ತಟ್ಟಿದರು.ನಾನು ಹಿಂದೆ ನೋಡಿದೆ.ನನ್ನನ್ನು ನೋಡಿ ನಸು ನಕ್ಕರು.ಅಪರಿಚಿತ ಹಿರಿಯರನ್ನು ಕಂಡು ನಾನೂ ನಕ್ಕೆ.'ಏನೋ ಮರಿ ಹೆಸರು' ಎಂದರು.'ಗುರುರಾಜ' ಎಂದೆ.ಮತ್ತೆ ನಕ್ಕು ,'ಗುರುರಾಜ..? ಚಂದದ ಹೆಸರು,ನಿನ್ನಷ್ಟೇ ಮುದ್ದಾಗಿದೆ ' ಎಂದವರು ಕೆನ್ನೆಯನ್ನೊಮ್ಮೆ ಸವರಿ ಮುತ್ತಿಟ್ಟರು.ನಾನು ಮತ್ತೆ ನಕ್ಕೆ.ಆ ಹೊತ್ತಿಗೆ ನನಗೆ ಆ ಹಿರಿಯರ ಚರ್ಯೆಯ ಬಗ್ಗೆ ಗಮನವಿಲ್ಲ.ತಲೆಯಲ್ಲಿ ಇದ್ದ ಪ್ರಶ್ನೆಯೊಂದೇ.'ಅವರು' ಯಾಕೆ ಬಂದಿಲ್ಲ..?


ಅಷ್ಟರಲ್ಲಿ ಹಿರಿಯರು ತಮ್ಮಪಾಡಿಗೆನ್ನುವಂತೆ ತಾವು ಹೊರಟರು.ಅವರ ಹಿಂದೆಯೇ ಅಷ್ಟೂ ಜನಸಮೂಹ ಹೊರಟು ನಿಂತಿತ್ತು.ಅಲ್ಲಿಯೇ ಕೊನೆಯಲ್ಲುಳಿದಿದ್ದ ಒಂದಿಬ್ಬರು ಅಪರಿಚಿತ ಮಹಿಳೆಯರು ನನ್ನತ್ತ ನೋಡಿ ನಕ್ಕರು.ಏನೋ ಮೆಚ್ಚುಗೆಯ ಭಾವ ಅವರ ಮುಖದಲ್ಲಿ.ಅಷ್ಟರಲ್ಲಿ ಹಿಂದಿನಿಂದ ಬಂದ ಅಜ್ಜಿ ,'ಚಾನ್ಸ್ ಆತಲೋ ನಿಂದು ' ಎಂದು ನಕ್ಕರು.ನನಗೆ ಏನೂ ಅರ್ಥವಾಗದ ಭಾವ.' ಎಂತಕೆ ..'? ಎಂದೆ.'ಅವರನ್ನ ನೋಡಬೇಕು ಅಂತ ಬಂದ್ರೆ ಅವರೇ ತಲೆ ಮುಟ್ಟಿ ಕೆನ್ನೆ ಸವರಿ ಪಪ್ಪಿಕೊಟ್ಟು ಹೋದರಲ್ಲ ' ಎನ್ನಬೇಕೆ ಅಜ್ಜಿ..?!


ನನಗೆ ಒಂದೆರಡು ಕ್ಷಣ ಗೊಂದಲದ ಭಾವ.ಪ್ಯಾಂಟು ಶರ್ಟು ಧರಿಸಿ ಕಪ್ಪು ಕೂದಲುಗಳ ಸುರಸುಂದರಾಗ ಎಲ್ಲಿ,ಅರೆ ಖಾಲಿ ತಲೆಯ ಅಲ್ಲಲ್ಲಿ ಬಿಳಿ ಕೂದಲ ಆ ಹಿರಿಯನೆಲ್ಲಿ..? ಛೇ ಛೇ..ಅಜ್ಜಿ ಸುಳ್ಳು ಹೇಳ್ತಿದ್ದಾರೆನಿಸಿ ,'ಎಂತಕ್ ಸುಳ್ ಹೇಳ್ತೆ ಅಜ್ಜಿ..?ಅವರು ಪ್ಯಾಂಟು ಶರ್ಟು ಧರಿಸಿ ಬರ್ತಾರೆ.

 ತಲೆ ಮುಟ್ಟಿದ ಅಜ್ಜ ಯಾರೋ ಬೇರೆಯವರು.. ಆದರೆ ಅವರ್ಯಾಕೆ ಬರಲಿಲ್ಲ ..' ಎಂದು ಕೇಳಿದೆ ಮುಗ್ದನಂತೆ.


ಅಜ್ಜಿ ಒಮ್ಮೆ ಜೋರಾಗಿ ನಕ್ಕು,'ಅಯ್ಯೋ ಪೆದ್ದಾ..ಅದು ಸಿನಿಮಾದಲ್ಲಿ ಮಾತ್ರ ಹಾಗಿರ್ತಾರೆ .ಅವರು ಹೊರಗೆಲ್ಲ ಇರುದ ಹಿಂಗೆ.ನಿನ್ನ ತಲೆ ಮೇಲೆ ಮುಟ್ಟಿ ಹೋದವ್ರೇ ರಾಜಕುಮಾರ್' ಎಂದುಬಿಟ್ಟಿತ್ತು ನನ್ನಜ್ಜಿ..!!


'ಅಯ್ಯೋ ಹೌದಾ..ನಂಗೆ ಗೊತ್ತೇ ಆಗಲಿಲ್ಲ..' ಎಂದವನೇ ಪೆಚ್ಚು ನಗೆ ನಕ್ಕಿದ್ದೆ ನಾನು.ತಮಾಷೆಯೆಂದರೆ ಅವರ ಪಕ್ಕವೇ ನಿಂತಿದ್ದ ಶಿವರಾಜಕುಮಾರ್‌ರನ್ನು ನಾನು ಗುರುತಿಸಿದ್ದೆ.ರಾಘವೇಂದ್ರ ರಾಜಕುಮಾರರ ಗುರುತು ಸಿಕ್ಕಿರಲಿಲ್ಲ.ಜೊತೆಗಿದ್ದವರೇ ರಾಜಕುಮಾರ್ ಇರಬಹುದು ಎನ್ನುವ ತರ್ಕವೂ ನನ್ನ ಪೆದ್ದು ತಲೆಗೆ ಹೊಳೆಯಲಿಲ್ಲ.


ಇಂದಿಗೂ ತುಂಬ ಜನ ವರನಟ ರಾಜಕುಮಾರ್‌ರನ್ನು ನೋಡಬೇಕಿತ್ತು ಎಂದು ಹಳಹಳಿಸಿದ್ದು ನಾನು ಕೇಳಿದ್ದೇನೆ. ಅಂತದ್ದನ್ನು ಕೇಳಿದಾಗಲೆಲ್ಲ ನನಗೆ ತೀರ ನನ್ನ ಪಕ್ಕವೇ ಅವರು ನಿಂತು ಮಾತನಾಡಿಸಿ ಹೋಗಿದ್ದ ಈ ಘಟನೆ ನೆನಪಾಗುತ್ತದೆ..


0 likes

Published By

Gururaj Kodkani

gururajkodkani

Comments

Appreciate the author by telling what you feel about the post 💓

  • Deepak Shenoy · 4 years ago last edited 4 years ago

    ಉತ್ತಮವಾದ ಕಥೆ

Please Login or Create a free account to comment.